ಗೋಕಾಕ್ ಮತ್ತು ಅವರ ಆಧ್ಯಾತ್ಮಿಕ ಪ್ರಯೋಗಗಳು (ಭಾಗ 1)

ಗೋಕಾಕ್ ಮತ್ತು ಅವರ ಆಧ್ಯಾತ್ಮಿಕ ಪ್ರಯೋಗಗಳು (ಭಾಗ 1)

ಸಾಮಾನ್ಯವಾಗಿ ನವೋದಯದ ನಮ್ಮೆಲ್ಲ ಹಿರಿಯ ಸಾಹಿತಿಗಳು ಅಧ್ಯಾತ್ಮವನ್ನು ಒಂದು ಮೌಲ್ಯವಾಗಿ ಭಾವಿಸಿದವರು. ಅವರಿಗೆ ಆಂತರ್ಯದ ಉನ್ನತಿ ಬದುಕಿನ ಶ್ರೇಷ್ಠ ಉದ್ದೇಶವಾಗಿತ್ತು. ಸಾಮಾಜಿಕ ಸುಧಾರಣೆ, ಮಾನವೀಯತೆಯನ್ನು ಎಷ್ಟೇ ಮುನ್ನೆಲೆಯಲ್ಲಿಟ್ಟು ಕೊಂಡಿದ್ದರೂ ಅಧ್ಯಾತ್ಮಿಕತೆಯನ್ನು ಅವರು ಬಿಟ್ಟಿರಲಿಲ್ಲ. ಸಾಮಾಜಿಕ ಸ್ವಾಸ್ಥ್ಯದ ಬಗೆಗೆ ಪ್ರಖರವಾಗಿಯೇ ಮಾತನಾಡಿದ, ತಮ್ಮ ಕೃತಿಗಳಲ್ಲಿ ತೋರಿಸಿದ ಕುವೆಂಪು ಕೂಡ ಅಧ್ಯಾತ್ಮವನ್ನು ತಮ್ಮ ಎದೆಯೊಳಗೆ ಒಪ್ಪವಾಗಿ ಇಟ್ಟುಕೊಂಡವರೇ. ಬೇಂದ್ರೆಯವರು ಅಧ್ಯಾತ್ಮವನ್ನು ಬಿಟ್ಟಿರಲೇ ಇಲ್ಲ. ಡಿ ವಿ ಜಿ, ಪುತಿನ, ರಾಜರತ್ನಂ, ಮಧುರಚೆನ್ನ ಒಟ್ಟು ಆ ನವೋದಯ ಸಮಯದ ಎಲ್ಲರೂ ಅಧ್ಯಾತ್ಮವನ್ನ ಮನುಷ್ಯನ ಜೀವಿತದ ಅತ್ಯುನ್ನತ ಸಾಧನೆಯೆಂದೇ ಬಗೆದಿದ್ದರು.

ಗೋಕಾಕರು ನವೋದಯದ ಸಮಯದಲ್ಲಿಯೇ ತಮ್ಮ ಸಾಹಿತ್ಯದ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಅವರು ನವ್ಯದ ಹರಿಕಾರರು ಎಂದುಕೊಂಡರೂ ಅಡಿಗರಂತೆ ತೀರ ವಿಭಿನ್ನವಾದ ದಾರಿ ತುಳಿದವರಲ್ಲ, ನವೋದಯದ ಎಲ್ಲ ಮೌಲ್ಯಗಳನ್ನು ಗೌರವಿಸಿದವರು, ತಮ್ಮ ಸೃಜನಶೀಲತೆಯನ್ನು ಆ ದಿಸೆಯಲ್ಲಿಯೇ ಹುರಿಮಾಡಿಕೊಂಡವರು. ಧಾರವಾಡದ ಪರಿಸರದಲ್ಲಿದ್ದು ಬೇಂದ್ರೆಯವರ ಗೆಳೆಯರ ಗುಂಪಿನ ಒಡನಾಟದದಲ್ಲಿಯೇ ತಮ್ಮನ್ನ ಸಿದ್ಧಗೊಳಿಸಿಕೊಂಡವರು. ಹಾಗಾಗಿ ಅವರನ್ನು ಯಥೇಚ್ಛವಾಗಿ ನವೋದಯದ ವ್ಯಕ್ತಿತ್ವವುಳ್ಳವರೇ ಎನ್ನಬೇಕು, ಇಲ್ಲಾ ನವೋದಯದ ಅಂಚಿನವರು ಎಂದುಕೊಂಡರೂ ಆದೀತು.

ನವೋದಯದ ಸಮಯದ ಈ ಸಾಹಿತಿಗಳಲ್ಲಿ ಕೆಲವರು ಅಧ್ಯಾತ್ಮದ ಸಾಧನೆಯ ದಾರಿಯನ್ನೂ ಬರವಣಿಗೆಯ ಜೊತೆಜೊತೆಗೆ ಮೈಗೂಡಿಸಿಕೊಂಡಿದ್ದರು. ಕುವೆಂಪು ಅವರೇ ಧ್ಯಾನದ ಒಂದಿಷ್ಟೆಲ್ಲ ಕಠಿಣದ ಸಮಯದ ಕಳೆದುದು ತಿಳಿಯುತ್ತದೆ, ರಾಮಕೃಷ್ಣರ, ವಿವೇಕಾನಂದರ ಪ್ರಭಾವ ಅವರ ಮೇಲೆ ದಟ್ಟವಾಗಿತ್ತು. ಬೇಂದ್ರೆ ಅವರು ತಮ್ಮ ಮನೆಯ ಪರಿಸರ, ಉತ್ತರ ಕರ್ನಾಟಕದ ಪರಿಸರದ ಅಧ್ಯಾತ್ಮದ ಸಾರವನ್ನು ಅಧ್ಯಯನದ ಮೂಲಕ ದೊಡ್ಡದಾಗಿಯೇ ಮೈಗೂಡಿಸಿಕೊಂಡಿದ್ದವರು. ಉಪನಿಷತ್ತಿನ ಪರಂಪರೆಯ ಹಾಗೆ ವಚನಕಾರರು, ದಾಸರು, ತತ್ವಪದಕಾರರು ಎಲ್ಲರೂ ಪ್ರಭಾವ ಬೀರಿದ್ದರು ಅವರ ಮೇಲೆ. ಜಿಡ್ಡು ಕೃಷ್ಣಮೂರ್ತಿಯವರವರೆಗೂ ಈ ವಿಸ್ತಾರ. ಅರವಿಂದರ ಪ್ರಭಾವ ಮಾತ್ರ ಮುನ್ನೆಲೆಯಲ್ಲಿ ನಿಂತು ಅವರನ್ನು ನಡೆಸಿತು. ಅದೇ ಅವರ ಸಖ್ಯದಲ್ಲಿದ್ದ ಮಧುರಚೆನ್ನರು ಅಧ್ಯಾತ್ಮದ ಸಾಧನೆಯಲ್ಲಿಯೇ ಜೀವಿತದ ಬಹುಭಾಗವನ್ನು ಕಳೆದವರು.

ವಿನಾಯಕ ಕೃಷ್ಣ ಗೋಕಾಕರ ಅಧ್ಯಾತ್ಮಿಕ ನಿಲುವುಗಳನ್ನು ಅಭ್ಯಾಸದ ದೃಷ್ಟಿಯಿಂದ ಮೂರು ಬಗೆಯಲ್ಲಿ ವಿಂಗಡಿಸಿಕೊಳ್ಳಬಹುದು. ಬಾಲ್ಯದಲ್ಲಿ, ಸವಣೂರಿನ ತಮ್ಮ ಸುತ್ತಲಿನ ಪರಿಸರದಲ್ಲಿ ಅವರು ಸಹಜವಾಗಿಯೇ ಅನುಸರಿಸಿದುದು ಮೊದಲನೆಯದು, ಎರಡನೆಯದು ಅವರ ಕಾವ್ಯದ ಹಂಬಲವಾಗಿ ಆ ಮೂಲಕವಾಗಿಯೇ ತೋರಿಕೊಂಡ ಆಂತರ್ಯದ ಅಭಿಲಾಷೆ. ಮೂರನೆಯದು ವೈಯಕ್ತಿಕ ಆಚರಣೆಯ ಹೆಜ್ಜೆಗಳದು.

ಸವಣೂರಿನಲ್ಲಿ ಮನೆಯ ವಾತಾವರಣ, ಗ್ರಾಮದ ಸುತ್ತಲಿನ ಪರಿಸರ ಅವರನ್ನು ಸಹಜವಾಗಿಯೇ ಧಾರ್ಮಿಕ ಭಾವದವರನ್ನಾಗಿಸಿತ್ತು. ಅದು ಸಾಮಾನ್ಯವಾಗಿ ನಮ್ಮೆಲ್ಲರ ಬಾಲ್ಯದ ಹಾಗೆಯೇ ಅಂದರೂ ಆದೀತು, ಸವಣೂರಿನ ಸತ್ಯಬೋಧಮಠ, ಊರಿನ ದುರ್ಗಾದೇವಿಯ ಗುಡಿ, ಹಬ್ಬ ಹರಿದಿನಗಳು ಇವೆಲ್ಲ ಅವರನ್ನ ಕೈಮಾಡಿ ಕರೆದಿದ್ದವು. ಬೆಳಗಾವಿಯ ಕಡೆಯ ಸಂತರಾದ ಪಂತ ಮಹಾರಾಜ ಬಾಳೆಕುಂದ್ರಿ ಅವರ ಪ್ರಭಾವವೂ ಅವರ ಅಜ್ಜನ ಕಡೆಯಿಂದ ಆಗಿದ್ದುದಾಗಿಯೂ ತಿಳಿಯುತ್ತದೆ.

ಅವರು ಕಾಲೇಜು ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದುದು, ಪುಣೆಗೆ ಹೋದುದು ನಡೆದಾಗ, ಮುಂದೆಲ್ಲ ಅವರ ಕಾವ್ಯ ಪ್ರಕ್ರಿಯೆಯ ಜೀವನ ದೊಡ್ಡದಾಗಿ ತರೆದುಕೊಂಡಂತೆ ಅರವಿಂದರ ವಿಚಾರಧಾರೆಯ ಪ್ರಭಾವ ವಿಶೇಷವಾಗಿಯೇ ಆಯಿತು. ಇದನ್ನೆಲ್ಲ ಅವರ ಕಾವ್ಯದ ಮೂಲಕವೇ ಅರಿತುಕೊಳ್ಳಬೇಕಾಗುತ್ತದೆ. ಅರವಿಂದರ ದರ್ಶನವನ್ನು ಒಂದೇ ಒಂದು ಸಲ (1950 ಎಪ್ರೀಲ್ 24) ಅವರು ಪಡೆದುದು. ಅರವಿಂದರನ್ನು ಅನುಸರಿಸಿಕೊಂಡು ಶ್ರೀಮಾತೆಯ ಪ್ರಭಾವವೂ ಎಲ್ಲರ ಮೇಲೆ ಆಗಿತ್ತು. ಅರವಿಂದರು ಗತಿಸಿದ ನಂತರ ಮಾತೆಯವರೇ ಎಲ್ಲರಿಗೂ ಸ್ಫೂರ್ತಿಯ ಚೇತನವಾಗಿದ್ದರು. ಗೋಕಾಕರ ಮೇಲೂ ಅವರ ಪ್ರಭಾವವಾದದ್ದಿದೆ. ಇದೊಂದು ಬಗೆಯ ಬದುಕಿನುದ್ದಕ್ಕೂ ಹಾಸಿಕೊಂಡ ಪಯಣವಾದರೆ, ತೀರ ವೈಯಕ್ತಿಕ ಬದುಕಿನಲ್ಲಿ ಅವರನ್ನು ಪ್ರಭಾವಗೊಳಿಸಿದ ಕೆಲವರಿದ್ದಾರೆ. ಬಿಯಾಸ್‌ದ ಸರದಾರ ಸವಾನ ಸಿಂಗರ ದರ್ಶನ ಕೂಡ ಅವರ ಮೇಲೆ ಒಳ್ಳೆಯ ಪ್ರಭಾವವನ್ನ ಬೀರಿದುದು ಕಾಣುತ್ತದೆ (ಬಾಳದೇಗುಲ ಸಂಕಲನ ಅವರಿಗೇ ಅರ್ಪಿತವಾಗಿದೆ ಅಂದಮೇಲೆ ಈ ಪ್ರಭಾವ ಎಂಥದು ಎನ್ನುವುದು ತಿಳಿಯುತ್ತದೆ). ಜೆ. ಕೃಷ್ಣಮೂರ್ತಿ ಅವರ ಪ್ರಭಾವವನ್ನೂ ಅವರು ಹೇಳಿಕೊಂಡಿದ್ದಾರೆ. ಪುಟಪರ್ತಿಯ ಸಾಯಿಬಾಬಾ ಅವರ ಪ್ರಭಾವ ಅವರ ಮೇಲೆ ಎದ್ದುಕಾಣುವ ಹಾಗೆ ಸಾಕಷ್ಟು ಆಯಿತು. ಮಾತ್ರವಲ್ಲ ಅಧ್ಯಾತ್ಮದ ಆಚರಣೆಯ ಗುರುವಾಗಿ ಅವರು ಸಾಯಿಬಾಬಾರನ್ನು ಆರಿಸಿಕೊಂಡರು ಎಂದು ಕಾಣುತ್ತದೆ. ಆ ಸಮಯದಲ್ಲಿ ನಾ. ಕಸ್ತೂರಿ ಮೊದಲಾದ ಹಲವರು ಸಾಯಿಬಾಬಾರ ಕಡೆಗೆ ವಾಲಿದ್ದುದು ಇತ್ತು. ಸಾಯಿಬಾಬಾರ ಕುರಿತು ಗುರುವೆಂದೇ ಸಂಬೋಧಿಸುತ್ತ ಅವರು ಕವಿತೆಗಳನ್ನು ರಚಿಸಿದ್ದಾರೆ. ‘ಬಾಳದೇಗುಲ’ದಲ್ಲಿ ‘ಮುಕ್ತ ಜೀವಿಗಳು’ ಎನ್ನುವ ರಚನೆಯಲ್ಲಿ ಪ್ರಾಚೀನ ಅರ್ವಾಚೀನ ಸಂತರನ್ನೆಲ್ಲ ಅವರು ಸ್ಮರಿಸಿರುವುದಿದೆ. ಹೀಗೆ ವಿನಾಯಕ ಕೃಷ್ಣ ಗೋಕಾಕರ ಅಧ್ಯಾತ್ಮದ ಒಲವು, ಬದುಕಿನುದ್ದದ ಆಲಂಬನವನ್ನ ಗ್ರಹಿಸುವಾಗ ಹಲವೆಲ್ಲ ಮಗ್ಗಲುಗಳನ್ನು ನಾವು ಗುರುತಿಸಬಹುದು.

ಬಾಲ್ಯದಿಂದಲೇ ಅವರು ಒಂದಿಷ್ಟೆಲ್ಲ ವೈಚಾರಿಕವಾಗಿ ತೆರೆದುಕೊಂಡುದು ಕಾಣುತ್ತದೆ. ಅವರು ಮೇಲಿಂದ ಮೇಲೆ ಹೋಗುತ್ತಿದ್ದ ದುರ್ಗಾದೇವಿಯ ಗುಡಿಯಲ್ಲಿನ ಕಲ್ಲು, ಹೊರಗಿನ ಸಾಮಾನ್ಯದ ಕಲ್ಲು ಬೇರೆ ಹೇಗೆ ಎನ್ನುವ ಜಿಜ್ಞಾಸೆ ಅವರನ್ನು ಬಹುವಾಗಿ ಕಾಡಿತ್ತು ಆಗ. ಅವರು ತಮ್ಮೊಳಗೇ ದೇವಿಯನ್ನು ಒಂದು ಶಕ್ತಿಯ ರೂಪವಾಗಿ ಗ್ರಹಿಸಿದುದು, ಗುಡಿಯೊಳಗಿನ ಕಲ್ಲು ಅದನ್ನು ಮೂರ್ತೀಕರಿಸಿಕೊಂಡುದು ಎನ್ನುವ ಸಮಾಧಾನಕ್ಕೆ ಬಂದರು. ಅಂದರೆ ಅವರಲ್ಲಿ ದೈವೀಭಾವ ವೈಚಾರಿಕವಾಗಿ ಪುಟಿಗೊಂಡಿತೇ ವಿನಃ ಸಂಶಯವಾಗಿ ಕಾಡಲಿಲ್ಲ.

ಧಾರವಾಡಕ್ಕೆ ಬಂದು ಬೇಂದ್ರೆಯವರ ಗೆಳೆಯರ ಗುಂಪಿನ ಸಂಪರ್ಕದಲ್ಲಿ ಅವರು ಮತ್ತಷ್ಟು ಅಧ್ಯಾತ್ಮದ ಕಡೆಗೆ ವಾಲಿದರು. 1925ರಿಂದ 1937 (ಅವರು ಹೊರದೇಶಕ್ಕೆ ಅಧ್ಯಯನಕ್ಕಾಗಿ ಹೋದುದು)ರವರೆಗಿನ ಅವಧಿಯಲ್ಲಿ ಅರವಿಂದರು ವಿವೇಕಾನಂದ, ರಾಮತೀರ್ಥರು, ಟ್ಯಾಗೋರ್, ಖಲೀಲ್ ಗಿಬ್ರಾನ್ ಇವರೆಲ್ಲರ ಪ್ರಭಾವಗಳು ಓದಿನ ಮೂಲಕ, ಮಾತುಕತೆ, ಚರ್ಚೆಗಳ ಮೂಲಕ ಅವರ ಮೇಲೆ ಆದುದನ್ನು ಕಾಣಬಹುದು. ಅವರು ‘ಸಂಪೂರ್ಣವಾದ ಸಂಕೀರ್ಣತೆಯೇ ನನ್ನ ಪರಮ ಗಮ್ಯ’ಎಂದು ಹೇಳಿಕೊಂಡಿದ್ದಾರೆ. ಇದು ಅವರ ಕಾವ್ಯ ಜೀವನಕ್ಕೆ ಹೇಗೆ ಅನ್ವಯಿಸುವುದೋ, ಅವರ ವೈಯಕ್ತಿಕ ಅಧ್ಯಾತ್ಮದ ಪಯಣಕ್ಕೂ ಅನ್ವಯಿಸುವುದು.

(ಇನ್ನೂ ಇದೆ)

- ಆನಂದ ಪಾಟೀಲ, ಧಾರವಾಡ

ಚಿತ್ರ ಕೃಪೆ: ಇಂಟರ್ನೆಟ್ ತಾಣ