ಗೋವು, ಮಹಿಷಿ ಮತ್ತು ಮಹಾವೃಕ್ಷ -ಕಥೆಗಳು

ಗೋವು, ಮಹಿಷಿ ಮತ್ತು ಮಹಾವೃಕ್ಷ -ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಸೂರ್ಯ ನಾರಾಯಣ ಹಿಳ್ಳೆಮನೆ
ಪ್ರಕಾಶಕರು
ನಿಮ್ಮ ಪುಸ್ತಕ ಪಬ್ಲಿಕೇಶನ್ಸ್, ಮಲ್ಲೇಶಪಾಳ್ಯ, ಬೆಂಗಳೂರು, ದೂ: ೯೯೦೦೩೨೦೮೬೯
ಪುಸ್ತಕದ ಬೆಲೆ
ರೂ.೧೨೦.೦೦, ಮುದ್ರಣ: ೨೦೨೨

ಮೂಲತಃ ಗಡಿನಾಡು ಕಾಸರಗೋಡಿನ ಕುಂಬಳೆಯವರಾದ ಸೂರ್ಯ ನಾರಾಯಣ ಹಿಳ್ಳೆಮನೆಯವರ ಮೊದಲ ಪ್ರಯತ್ನವೇ ‘ಗೋವು, ಮಹಿಷಿ ಮತ್ತು ಮಹಾವೃಕ್ಷ' ಎಂಬ ಕಥಾ ಸಂಕಲನ. ಅವರೇ ತಮ್ಮ ಸಂಕಲನದ ಮುನ್ನುಡಿಯಲ್ಲಿ ಬರೆದಂತೆ “ ಈ ಸಂಕಲನದಲ್ಲಿ ಇರುವ ಹೆಚ್ಚಿನ ಬರಹಗಳ ಕಾಲಘಟ್ಟ ೧೯೮೦-೯೦ರ ದಶಕಗಳು. ಶುದ್ಧ ಗ್ರಾಮೀಣ ಪರಿಸರ, ಹಿತ ಮಿತ ಅರಿತು ಬದುಕುವ ಸಣ್ಣ ಹಿಡುವಳಿದಾರ ಕುಟುಂಬಗಳು. ಅವರ ಜನಜೀವನ ಇತ್ಯಾದಿ ಈ ಬರಹಗಳ ಕಥಾ ವಸ್ತು. ಸನಾತನ ಸಂಸ್ಕೃತಿಯಲ್ಲಿ, ಪ್ರಕೃತಿಯನ್ನೂ ಪ್ರಾಣಿಗಳನ್ನೂ ಒಂದು ರೀತಿಯ ಆದರದಿಂದ ಕಾಣುವ ಪರಿಪಾಠವಿದೆ. ಎಲ್ಲದಕ್ಕೂ ಅದರದ್ದೇ ಆದ ಮಹತ್ವವಿದೆ; ಎಲ್ಲವೂ ದೈವಸೃಷ್ಟಿಯೇ! ಮನುಷ್ಯ ಸಾಕು ಪ್ರಾಣಿಗಳ ನಡುವಿನ ಸಂಬಂಧ ಹಾಗೂ ಮನುಷ್ಯನ ಪ್ರಕೃತಿ, ಮರಗಳ ನಡುವಿನ ಜೀವನದ ವಿವಿಧ ಚಿತ್ರಣ, ಈ ಸಂಕಲನದ ಎಲ್ಲ ಕಥೆಗಳಲ್ಲೂ ಮೂಡಿ ಬಂದಿರುತ್ತದೆ. ಈ ಕಥೆ ಮತ್ತು ಲಘು ಬರಹಗಳು ಎಲ್ಲಾ ವಯೋವರ್ಗದವರಿಗೂ ಇಷ್ಟವಾಗಬಹುದೆಂದು ಭಾವಿಸುತ್ತೇನೆ" ಎಂದಿದ್ದಾರೆ. 

ಪರಿವಿಡಿಯಲ್ಲಿ ಗೋವು, ಮಹಿಷಿ ಮತ್ತು ಮಹಾವೃಕ್ಷ ಎಂಬ ಪ್ರಮುಖ ಶೀರ್ಷಿಕೆಗಳಿವೆ. ಅವುಗಳ ಒಳಗೆ ಒಂದಷ್ಟು ಕಥೆಗಳಿವೆ. ಅದರ ಜೊತೆಗೆ ಇನ್ನಷ್ಟು ಕಥೆಗಳೂ ಇವೆ. ಗೋವು ಎಂಬ ಕಥೆಯಲ್ಲಿರುವ ‘ಸೋಮಕ್ಕ' ಎಂಬ ಹಸುವಿನ ಕಥೆಯನ್ನು ಓದಿದಾಗ ಇದು ಪ್ರತಿಯೊಬ್ಬ ದನ ಸಾಕುವವನ ಮನೆಯ ಕಥೆಯೇ ಎನ್ನುವಂತಿದೆ. ಸೋಮಕ್ಕ ಎಂಬ ಹೆಸರು ಮಾತ್ರ ಗಂಗೆ, ಸೀತೆ, ರಾಧ, ಕಪಿಲಾ, ಪುಟ್ಟಿ... ಹೀಗೆ ಬದಲಾಗಬಹುದೇನೋ? ನಮ್ಮ ಭಾವನೆಗಳು ನಾವು ಸಾಕುವ ಪ್ರಾಣಿಗಳಿಗೂ ಅರ್ಥವಾಗುತ್ತದೆ ಎಂಬುವುದರಲ್ಲಿ ಸಂಶಯವಿಲ್ಲ. ನಾಯಿಗಳು, ದನಗಳು, ಕುದುರೆಗಳು ಬಹುಬೇಗನೇ ನಮ್ಮ ಭಾವನೆಗಳನ್ನು ಅರ್ಥೈಸಿಕೊಳ್ಳುತ್ತವೆಯಂತೆ. ಗೋವು ಕಥೆ ಕಪ್ಪು ದನ ‘ಸೋಮಕ್ಕ' ನ ಸುತ್ತಲೇ ತಿರುಗುತ್ತದೆ. ಸೋಮವಾರ ಹುಟ್ಟಿದ ಕರುವಿಗೆ ಸೋಮಕ್ಕ ಎಂದು ಹೆಸರಿಟ್ಟದ್ದು, ನುಣುಪು ಮೈ, ಮನೆಯವರ ಗುಣ ಲಕ್ಷಣಗಳನ್ನು ಅರ್ಥೈಸಿಕೊಳ್ಳುವ ಗುಣವೆಲ್ಲಾ ಇದಕ್ಕಿತ್ತು.  

ಮುಂದಿನ ಅಧ್ಯಾಯ ಮಹಿಷಿ. ಇದರಲ್ಲಿ ‘ಪಾರುಳು' ಬಗ್ಗೆ ಬಹಳ ಸೊಗಸಾದ ಮಾಹಿತಿ ನೀಡಲಾಗಿದೆ. ಪಾರುಳು ಎಂದರೆ ೧ ವರ್ಷದಷ್ಟು ಪ್ರಾಯ ಕಳೆದ ಮೇಲೆ, ಹೆಚ್ಚು ಕಡಿಮೆ ೩ ವರ್ಷದ ಪ್ರಾಯವಾಗಿ ಗಬ್ಬ ಧರಿಸುವವರೆಗಿನ ಎಮ್ಮೆ ಕರುಗಳನ್ನು ‘ಪಾರುಳು’ ಎನ್ನುತ್ತಾರೆ. ಲೇಖಕರ ಪಾರುಳು ಜೊತೆಗಿನ ಅನುಭವಗಳನ್ನು ಓದಲು ಬಹಳ ಆನಂದ ಕೊಡುತ್ತವೆ. ಈಗ ಕರಾವಳಿಯಲ್ಲಿ ಎಮ್ಮೆಗಳನ್ನು ಸಾಕುವುದು ಕಡಿಮೆ. ಪಾರುಳು ಬಗ್ಗೆ ನಾಲ್ಕು ಅಧ್ಯಾಯಗಳಿವೆ. ಪಾರುಳು ಮೇಲಿನ ಸವಾರಿಯ ಮಜಾ, ಪಳ್ಳದಲ್ಲಿ ಕಂಡ ಕರಿ ಬಂಡೆಗಳು, ದುಗ್ಗಪ್ಪನ ಗರ್ವ ಭಂಗ ಹಾಗೂ ಎಳೆಗರುವು ಎಮ್ಮೆಯಾಯಿತು. ಇದರಲ್ಲಿ ಕೊನೆಯ ಅಧ್ಯಾಯವನ್ನು ಓದುವಾಗ ನಮಗರಿವಿಲ್ಲದಂತೆಯೇ ನಮ್ಮ ಕಣ್ಣಿನಿಂದ ನೀರು ಬಂದೇ ಬರುತ್ತದೆ. ಎಮ್ಮೆಯ ಎಳೆ ಕರು ಪಾರುಳು ಪ್ರಾಯಕ್ಕೆ (ಬೆದೆಗೆ) ಬಂದಾಗ ಅದನ್ನು ಜೋಡಿಯಾಗಿಸಲು ಹೆಬ್ಬಾರರ ಬೀಜದ ಕೋಣದ ಬಳಿಗೆ ತೆಗೆದುಕೊಂಡು ಹೋದ ಘಟನೆ ಬಹಳ ಸ್ವಾರಸ್ಯಕರವಾಗಿದೆ. ಹೀಗೆ ಜೋಡಿಯಾದ ಪಾರುಳು ಎಮ್ಮೆಯಾಗಿ ಮುದ್ದಾದ ಕರುವಿಗೆ ಜನ್ಮ ನೀಡಿ ನಂತರದ ದಿನಗಳಲ್ಲಿ ಎಮ್ಮೆ ಮತ್ತು ಕರುವನ್ನು ಸಾಕುವುದು ಕಷ್ಟಕರವಾಗಿ ಅನಿವಾರ್ಯವಾಗಿ ಅದನ್ನು ಮಾರಲೇ ಬೇಕಾದಾಗ ಲೇಖಕರು ಮತ್ತು ಮನೆಯವರು ಅನುಭವಿಸಿದ ನೋವು ಹೇಳ ತೀರದು. ಗಂಡಸರು ಅಳಬಾರದು ಎಂಬ ಅಲಿಖಿತ ನಿಯಮವನ್ನು ಮುರಿದು ಲೇಖಕರ ತಂದೆಯೂ ಒಂದು ನಿಮಿಷ ಅತ್ತದ್ದು ಬಹಳ ನೋವಿನ ಸಂಗತಿಯಾಗಿತ್ತು. ಏಕೆಂದರೆ ಅಂದಿನ ಕಾಲದಲ್ಲಿ ಮನೆಯ ಜಾನುವಾರುಗಳು ಮನೆಯ ಸದಸ್ಯನಂತೆಯೇ ಆಗಿಹೋಗುತ್ತಿದ್ದವು. ಈ ಸಂಗತಿಯನ್ನು ಕಥೆಗಾರರು ಬಹಳ ಹೃದಯಸ್ಪರ್ಶಿಯಾಗಿ ವರ್ಣಿಸಿದ್ದಾರೆ.

ನಂತರದ ಅಧ್ಯಾಯ ಮಹಾವೃಕ್ಷ. ಇದು ಮಾವಿನ ಮಿಡಿ ನೀಡುವ ಮರದ ಕಥೆ. ಇದು ಅಂತಿಂಥಾ ಮರವಲ್ಲ, ಉಪ್ಪಿನಕಾಯಿಗೆ ಫೇಮಸ್ ಆದ ‘ಅಪ್ಪೆ ಮಿಡಿ' ಎಂಬ ತಳಿಯ ಮರದಂತೇ ಇರುವ ‘ಪುತ್ಥಳಿ ಶಂಭಟ್ಟ' ಎಂಬ ಮರ. ಈ ಮರಕ್ಕೆ ಯಾಕಾಗಿ ಈ ಹೆಸರು ಬಂತು, ಅದರ ಸ್ವಾರಸ್ಯಗಳೇನು? ಮಿಡಿಯನ್ನು ಕುಟುಂಬದ ಸದಸ್ಯರಲ್ಲಿ ಹಂಚುವಿಕೆ ಹೇಗೆ ನಡೆಯುತ್ತಿತ್ತು? ಇವೆಲ್ಲವನ್ನೂ ಓದಿಯೇ ಅನುಭವಿಸಬೇಕು.

ಈ ಮೂರು ಅಧ್ಯಾಯಗಳ ಬಳಿಕ ಬಿಡಿ ಕಥೆಗಳಿವೆ. ಈ ಕಥೆಗಳಲ್ಲಿ ‘ಭಯಂಕರ ಕಚ್ಚುವ ನಾಯಿ ಇದೆ' ಎಂಬ ಕಥೆ ಸಣ್ಣವರಿರುವಾಗ ನಾಯಿ ಸಾಕಲು ಹೊರಟ ನಮ್ಮ ನಿಮ್ಮೆಲ್ಲರ ಕಥೆಯೂ ಆಗಿರಬಹುದು ಎಂದು ಓದುತ್ತಾ ಓದುತ್ತಾ ಅನುಭವಕ್ಕೆ ಬರುತ್ತದೆ. ಕಥೆಗಾರರು ಮತ್ತು ಅವರ ಅಣ್ಣನ ಜೊತೆಗೆ ಸೇರಿ ನಾಯಿ ಮರಿಯೊಂದನ್ನು ತಂದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ನಾಯಿ ಮರಿ ಮನೆಗೆ ಬರುವ ಮೊದಲೇ ಅದನ್ನು ಕಟ್ಟಲು ಜಾಗ, ಸರಪಳಿ, ‘ನಾಯಿ ಇದೆ ಎಚ್ಚರಿಕೆ’ ಎಂಬ ಬೋರ್ಡ್ ಇವೆಲ್ಲಾ ಓದಲು ಬಹಳ ಮಜಾ ಕೊಡುತ್ತದೆ. 

‘ನಾಯಿ ಮರಿಗಳ ನಾಮಕರಣ' ಕತೆಯಲ್ಲಿ ನಾಯಿ ಮರಿಗಳಿಗೆ ಹೆಸರಿಡಲು ಪೇಚಾಟ ಮಾಡಿದ್ದು ಓದಲು ಬಹಳ ಖುಷಿ ಕೊಡುತ್ತದೆ. ಅದರಲ್ಲೂ “ನಾಯಿ ಮರಿಯ ಹೆಸರುಗಳು ಅವುಗಳ ಬಣ್ಣದ ಮೇಲೆಯೂ ಅವಲಂಬಿತವಾಗುತ್ತಿದ್ದವು. ನಮ್ಮ ಅಜ್ಜಿ ಮನೆಯಲ್ಲಿ ಯಾವಾಗಲೂ ೨ ಗಂಡು ನಾಯಿಗಳು ಇರುತ್ತಿದ್ದವು. ಅದರಲ್ಲಿ ಕಪ್ಪು ಬಣ್ಣದ್ದಕ್ಕೆ ‘ಕಾಳು' ಎಂಬ ಬಿರುದು ಯಾವಾಗಲೂ, ಬೇರೆ ಬಣ್ಣದ್ದಕ್ಕೆ ‘ಬೊಳ್ಳು' ಎಂಬ ಬಿರುದು. (ಊರ ತಳಿಗಳಲ್ಲಿ ಕಪ್ಪು ಅಲ್ಲದಿದ್ದರೆ ಬಿಳಿ, ಕಂದು ಅಥವಾ ಕಪ್ಪು ಬಿಳಿ ಮಿಶ್ರಿತ ಬಣ್ಣ ಹೀಗೆ ೪ ವಿಧದ ಬಣ್ಣ ಮಾತ್ರ ಲಭ್ಯ ಎಂದು ನನ್ನ ಅರಿವು) ಈ ಹೆಸರುಗಳೂ ತಲೆಮಾರುಗಳಿಂದ, ಮುಂದುವರಿಯುತ್ತಿತ್ತು. ಏನಿದ್ದರೂ, ನಾವು ತಂದುದು ಎರಡೂ ಕಪ್ಪು ಮರಿಗಳಾದರಿಂದ ಈ ಜೋಡಿ ಹೆಸರುಗಳು ಸೂಕ್ತವಲ್ಲ. ಬಣ್ಣದ ಉಸಾಬರಿಯೂ ಬೇಡವೆಂಬ ಕೆಲವು ಹಳ್ಳಿಗರು, ಸರಳವಾಗಿ ‘ಬೊಗ್ಗ' ಎಂದು ಗಂಡು ನಾಯಿಯನ್ನೂ, ‘ಬೊಗ್ಗಿ' ಎಂದು ಹೆಣ್ಣು ನಾಯಿಯನ್ನೂ ಕರೆದು ನಾಮಕರಣ ಮಾಡುತ್ತಿದ್ದರು. ನಾನೇನೋ ಫಕ್ಕನೆ ಈ ಹೆಸರುಗಳನ್ನು ಬಾಯಿಗೆ ಬಂದುದರಿಂದ ಸೂಚಿಸಿದೆ. ‘ಎಂತಾ ಪೊಟ್ಟು ಹೆಸರು ಅದು...!!?’ ಎಂದು ಕೂಡಲೇ ತಿರಸ್ಕೃತವಾಯಿತು" ಹೀಗೆ ನಾಮ ಪುರಾಣ ಓದಲು ಬಹಳ ರಸವತ್ತಾಗಿದೆ.

ಉಳಿದಂತೆ ಸಾ...ಒಂದಕ್ಕೆ ಬಿಡುವುದು ಎಷ್ಟೊತ್ತಿಗೆ?, ಗುಡ್ಡ ಮತ್ತು ತೋಟಗಳ ನಡುವೆ, ಅರಣ್ಯ ಲೋಕ ಮೊದಲಾದ ಕಥೆಗಳು ಓದಿಸಿಕೊಂಡು ಹೋಗುತ್ತವೆ. ಇದು ಲೇಖಕರ ಮೊದಲ ಕೃತಿಯಾದರೂ, ಅವರು ಬಳಕೆ ಮಾಡಿದ ಸರಳ ಗ್ರಾಮ್ಯ ಭಾಷೆಯ ಕಾರಣದಿಂದ ಪುಸ್ತಕ ಸೊಗಸಾಗಿ ಓದಿಸಿಕೊಂಡು ಹೋಗುತ್ತದೆ. ೧೨೫ ಪುಟಗಳ ಪುಸ್ತಕವನ್ನು ಲೇಖಕರು ತಮ್ಮ ಅಮ್ಮ ಮತ್ತು ಅಪ್ಪನಿಗೆ ಹಾಗೂ ಪ್ರೀತಿಯ ಕುಟುಂಬಿಕರಿಗೆ, ಊರ ದೇವರಾದ ಕಾನ ಶ್ರೀ ಶಂಕರ ನಾರಾಯಣ ಮತ್ತು ಧೂಮಾವತಿ, ಹುಟ್ಟಿ ಬೆಳೆದ ಊರು ನಾರಾಯಣ ಮಂಗಲಕ್ಕೆ ಅರ್ಪಿಸಿದ್ದಾರೆ.