ಗ್ನು/ಲಿನಕ್ಸ್ ಹಬ್ಬ-೩ ನಿಟ್ಟೆ - ಸಂಭ್ರಮ ಸಡಗರದ ನಡುವೆ

ಗ್ನು/ಲಿನಕ್ಸ್ ಹಬ್ಬ-೩ ನಿಟ್ಟೆ - ಸಂಭ್ರಮ ಸಡಗರದ ನಡುವೆ

ಬರಹ

ನನಗೆ ಮತ್ತೆ  ಕಾಲೇಜಿಗೆ  ಸೇರಿಕೊಂಡ ಅನುಭವ. ಹರಿ ಮತ್ತು ನಾನು ಇಬ್ಬರೂ ಒಂದು ದಿನ ಮುಂಚಿತವಾಗೇ ಕಾರ್ಕಳಕ್ಕೆ ಬಂದು ಅಲ್ಲಿಂದ ನಿಟ್ಟೆ ಕಾಲೇಜಿನ ಸುತ್ತ ಸುತ್ತೊಡೆದು, ಅಶೋಕ್ ಕುಮಾರ್, ಅವರ ಸ್ಟೂಡೆಂಟ್ ವಾಲಂಟಿಯರ್ಸ್ ಗಳನ್ನು ಭೇಟಿ ಮಾಡಿ ಹಬ್ಬದ ವಿಚಾರವಾಗಿ ಧಾರಾಳವಾಗಿ ವಿಚಾರವಿನಿಮಯ ಮಾಡಿಕೊಂಡೆವು. ಹಬ್ಬದ ದಿನ ಏನಾಗತ್ತೆ, ನಾವುಗಳು ಯಾವ ಯಾವ ಕೆಲಸಗಳನ್ನ ವಹಿಸಿಕೊಳ್ಳಬೇಕು ಅಂತ ತಿಳಿದುಕೊಂಡು,ಕೆಲ ಟೆಕ್ನಿಕಲ್ ವಿಚಾರಗಳನ್ನ ವಿನಿಮಯ ಮಾಡಿಕೊಂಡಾದ ನಂತರ ಎಲ್ಲರನ್ನೂ ಬೀಳ್ಕೊಟ್ಟು ವಾಸು ಮತ್ತು ಇತರರೊಡನೆ ಜೊತೆ ಬಸ್ ಹತ್ತಿ ಹೋಟೇಲಿಗೆ ಬಂದು ಕುಳಿತದ್ದಾಯಿತು. ಮತ್ತೆ ರಾತ್ರಿಯವರೆಗೆ  ಹಬ್ಬದ ವಿಚಾರವಾಗೇ ಮಾತಾಡ್ತಾ ಏರ್ಟೆಲ್ ಜಿ.ಪಿ.ಆರ್.ಎಸ್  ಕನೆಕ್ಷನ್ ಜೊತೆ ಗುದ್ದಾಟ. ನಾನು ಯಾವಾಗ ನಿದ್ರಾ ದೇವಿಯ ತೆಕ್ಕೆಗೆ ತೆರಳಿದ್ದು ಎಂದು ಬೆಳಗ್ಗೆ ಹರಿ ಹೇಳಿದಾಗಲೇ ತಿಳಿದದ್ದು. ಬೆಳಗ್ಗೆ ಒಂದೆರಡು ಬಾರಿ ಎಚ್ಚರವಾದರೂ ಹಾಸಿಗೆಯ ಮೇಲಿಂದ ಏಳುವಷ್ಟರಲ್ಲಿ ಕೊಂಚ ತಡವಾಗಿತ್ತು. ರವಿ, ನಿಧಿ, ರಾಘವ, ಮಂಜು ಎಲ್ಲ ಬಂದು ನಮ್ಮನ್ನು ಸೇರಿದ್ದಾಗಿತ್ತು. ಎಲ್ಲರೊಡನೆ ಮಾತಾಡ್ತಾ, ರೆಡಿಯಾಗಿ ರವಿ ಯವರನ್ನು "ಡೆಬಿಯನ್ ಚಿಗುರು" ಪೊಟ್ಟಣ  ತೆರೆದು ಅದರ ಮೊದಲ ಪ್ರತಿಯೊಡನೆ ಫೋಟೋ ತೆಗೆದು "ರಿಲೀಸ್" ಶಾಸ್ತ್ರ ಮಾಡಿದ್ದಾಯಿತು. ಅಷ್ಟರಲ್ಲಿ ಕಾರು ನಮ್ಮನ್ನು ಕಾಲೇಜಿಗೆ ಕೊಂಡೊಯ್ಯಲು ಬಂದದ್ದು ಗೊತ್ತಾಯಿತು. ಅಲ್ಲಿಂದ ಶುರುವಾಯಿತು ನಮ್ಮ ದಿನದ ಓಟ. ತಿಂಡಿ ತಿಂದು ಕಾಲೇಜು ಸೇರುವಷ್ಟರಲ್ಲಿ ರೆಜಿಸ್ಟ್ರೇಷನ್ ಕೌಂಟರ್ ನ ಬಳಿಯಲ್ಲೇ ಅಶೋಕ್ ಮತ್ತು ಇತರರು ನಮ್ಮನ್ನು ಕಂಡು ಬರಮಾಡಿಕೊಂಡರು. ಅಷ್ಟರಲ್ಲಿ ೧೫೦ಕ್ಕೂ ಹೆಚ್ಚು ಜನ ತಮ್ಮ ಹೆಸರನ್ನು ನೊಂದಾಯಿಸಿ ಕೊಂಡು "ಸಂಭ್ರಮ" ಸಭಾಂಗಣದಲ್ಲಿ ಕುಳಿತಿದ್ದರು.

 

ಎನ್.ಎಮ್.ಎ.ಎಮ್.ಐ.ಟಿ, ನಿಟ್ಟೆ
ತಂಡದ ಸದಸ್ಯರು ಮತ್ತು  ಹಾಜರಿದ್ದ ವಿದ್ಯಾರ್ಥಿ ಸಮೂಹ

ಇದು ಸಂಪದ ತಂಡದ ಮೂರನೇ ಹಬ್ಬದ ಆಚರಣೆ. ಮೊದಲು ಬೆಂಗಳೂರಿನ ಐ.ಐ.ಎಸ್.ಸಿ, ನಂತರ ಮೈಸೂರಿನ ವಿಶ್ವವಿಧ್ಯಾಲಯ ಎರಡೂ ಕಡೆಗಳಲ್ಲಿ ಗ್ನು/ಲಿನಕ್ಸ್ ಬಗ್ಗೆ ಆಸ್ತೆಯುಳ್ಳ ಜನರಿಗೆ ಅದರ ಸವಿಯನ್ನ ಬಡಿಸಿದ ತಂಡಕ್ಕೆ , ನಿಟ್ಟೆಯಲ್ಲೂ ಅದನ್ನ ಮತ್ತೆ ಸಾಧ್ಯವಾಗಿಸುವ ಆತುರ ಮತ್ತು ಕಾತುರ. ಕಾರ್ಯಕ್ರಮ ವಿಧ್ಯುಕ್ತವಾಗಿ ನಿಹಾಳ  ಕಾರ್ಯಕ್ರಮ ನಿರೂಪಣೆಯೊಂದಿಗೆ ಶುರುವಾಯಿತು. ಉಪಪ್ರಾಂಶುಪಾಲರಾದ ಡಾ ನಿರಂಜನ್ ಚಿಪ್ಳೂಣ್‌ಕರ್  ಅವರು ಹಿತವಚನ ಗಳನ್ನ ಹೇಳಿ ಹಬ್ಬ ಶುರುವಾದದ್ದನ್ನು ಸಾರಿದರು,ಐ ಎಸ್ ವಿಭಾಗದ ಮುಖ್ಯಸ್ಥ ಪ್ರೊ.ಯುವರಾಜು ಬಿ ಎನ್  ರು ಎಲ್ಲರನ್ನೂ ಕಾರ್ಯಕ್ರಮಕ್ಕೆ  ಸ್ವಾಗತಿಸುವುದರೊಂದಿಗೆ ಮೊದಲ ಹಂತದ ಮುಕ್ತಾಯ.ಇದರ ನಂತರ, ಕಾರ್ಯಕ್ರಮ  ಅನೌಪಚಾರಿಕವಾಗಿರುತ್ತದೆ, ಇದಕ್ಕೆ ತಂಡದ ವಿಧಿವಿಧಾನಗಳು ಬೇಕಿಲ್ಲ, ಎಲ್ಲರೂ ನಮ್ಮೊಡನೆ ಬೆರೆತು, ಮಾತನಾಡಿ ವಿಷಯಗಳನ್ನ ಹಂಚಿಕೊಳ್ಳಲಿ , ಅದು ಗ್ನು/ಲಿನಕ್ಸ್ ಹಬ್ಬದ ನಿಜವಾದ ಸವಿಯನ್ನ ಉಣಿಸ್ಲಿಕ್ಕೆ ನಮಗೆ ಸಹಾಯಮಾಡುತ್ತದೆ ಎಂದು ಪ್ರಾಂಶುಪಾಲರು ಮತ್ತು ಇತರರಿಗೆ ವಿವರಿಸಿದ ಹರಿ, ತಂಡದ ಎಲ್ಲರನ್ನೂ  ಪರಿಚಯಿಸಿದರು. ಹಬ್ಬದ ಶುರುವಾದ ಬಗ್ಗೆ  ಕೆಲಮಾಹಿತಿಗಳನ್ನ ಹಂಚಿಕೊಳ್ಳಬಹುದು ಅಂತದು ಕೊಂಡಿದ್ದ ನನಗೆ, ಇದ್ದಕ್ಕಿದ್ದಂತೆ ಅದನ್ನು ಹರಿ ಮರೆತದ್ದು ನೆನಪಾಯಿತು. ಅಷ್ಟರಲ್ಲಿ  ಮುಂದಿನ ಕಾರ್ಯಕ್ರಮಕ್ಕೆ, ರವಿ, ರಾಫವ ಮತ್ತು ನಾನು ಅಣಿಯಾಗುತ್ತಿದೆವು. ಇನ್ಸ್ಟಾಲೇಷನ್ ಬಗ್ಗೆ ಎಲ್ಲರಿಗೂ ಹೇಳಲಿಕ್ಕೆ ಶುರುಮಾಡುವ ಮುಂಚೆ  ಸ್ವತಂತ್ರ ತಂತ್ರಾಂಶದ ಬಗ್ಗೆ ಎಲ್ಲರಿಗೂ ತಿಳಿಸಬೇಕು, ಅದರ ತತ್ವಜ್ಞಾನದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಮಾಡಿಕೊಂಡಿದ್ದ ತಯಾರಿಯಂತೆ ಮೊದಲು ಗ್ನು ನ ಹುಟ್ಟುಹಬ್ಬಕ್ಕೆ  gnu.org ಸಂಪಾದಿಸಿದ "ಸ್ಟೀಫನ್ ಫ್ರೈ" ಅವರ "ಫ್ರೀಡಂ ಫ್ರೈ" ದೃಶ್ಯಾವಳಿಯನ್ನ  ಮೊದಲು ತೋರಿಸಲಾಯಿತು. ಎಲ್ಲರೂ ೨೫ನೇ ಗ್ನು ಹುಟ್ಟು  ಹಬ್ಬದ ವಿಷಯ ತಿಳಿದು  ಚಪ್ಪಾಳೆ ತಟ್ಟಿದ್ದೂ ಕೇಳಿಬಂತು.

 

 

ಸ್ಟೀಫನ್ ಫ್ರೈ.
ಸೂಚನೆ: ವಿಡಿಯೋ ಈ ಕೊಂಡಿಯಲ್ಲಿ ಲಭ್ಯವಿದೆ (೩೩Mb).  ಇದರ ಕನ್ನಡ ಶೀರ್ಷಿಕೆಗಳು ಇಲ್ಲಿವೆ.ಎರಡನ್ನೂ ಡೌನ್ಲೋಡ್ ಮಾಡಿಕೊಂಡು ವಿ.ಎಲ್.ಸಿ ಅಥವ ಇತರೆ ಮಿಡಿಯಾ ಪ್ಲೇಯರ್ ಗಳಲ್ಲಿ ನೋಡಿ.

 

೨೫-೩೦ ಜನ ಲ್ಯಾಪ್ ಟಾಪ್ ಗಳನ್ನ ತಂದಿದ್ದರು ಇನ್ಸ್ಟಾಲೇಶನ್  ಕಾರ್ಯಕ್ರಮ ಶುರುಮಾಡುವುದಕ್ಕೆ ಮೊದಲು ಇದನ್ನು ತಿಳಿದುಕೊಂಡ ನಾವು, ಅವರಿಗೆ ಹೇಗೆ ತಮ್ಮ ಲ್ಯಾಪ್ಟಾಪ್ ಅನ್ನು ಅಣಿಮಾಡಿಕೊಳ್ಳೋದು ಅಂತ ತಿಳಿಸಿದ್ವಿ. ಅದರ ಜೊತೆಗೆ ಅದನ್ನ ತಕ್ಷಣವೇ ಇನ್ಸ್ಟಾಲ್ ಮಾಡಿ ನೊಡಲಿಕ್ಕೆ ಹಿಂಜರಿದ ಕೆಲವರಿಗೆ "ವರ್ಚುಯಲ್ ಬಾಕ್ಸ್(virtualbox)" ಬಗ್ಗೆ ತಿಳಿಸಿದೆ. ಅದರ ಬಗ್ಗೆ ಎಲ್ಲರಿಗೂ ವಿವರಿಸಿ, ಅದರ ಒಂದು ಪ್ರತಿಯನ್ನ ಕೆಲವರೊಂದಿಗೆ ಹಂಚಿಕೊಂಡದ್ದೂ ಆಯಿತು. ಇದನ್ನರಿತ ಹಲವರು ಸಮಾಧಾನವಾಗಿ ನಿಟ್ಟುಸಿರು ಬಿಟ್ಟು ಇನ್ಸ್ಟಾಲ್ ಮಾಡ್ಲಿಕ್ಕೆ ಅಣಿಯಾದದ್ದು ಕಂಡುಬಂತು.

ರವಿಯವರು, ಡೆಬಿಯನ್ ಚಿಗುರಿನ ಬಗ್ಗೆ ವಿವರಿಸುತ್ತ, ಅದರಲ್ಲಿನ ಲೈವ್ ಸಿ.ಡಿಯನ್ನೊಮ್ಮೆ ತೋರಿಸಿ, ಎಲ್ಲರಿಗೂ ಅದರಲ್ಲಿ ಕನ್ನಡ ಸುಲಭವಾಗಿ ಬಳಸಲು  ಅನುಸ್ಥಾಪಿಸಿರುವ ತಂತ್ರಾಂಶಗಳನ್ನು ತೋರಿಸುತ್ತ, ಕನ್ನಡದಲ್ಲಿ ಟೈಪಿಸಿ ತೋರಿಸಿದರು. ಅವರೊಡನೆ ಕೈ ಜೋಡಿಸಿದ್ದು ರಾಘವ. ಮಿಕ್ಕಿದವರೆಲ್ಲ, ಲ್ಯಾಪ್ಟಾಪ್ ಇಟ್ಟವರಿಗೆ ಸಲಹೆ ಸೂಚನೆಗಳನ್ನ ನೀಡುತ್ತ, ಅದರಲ್ಲಿ ಸಿ.ಡಿ ಬೂಟ್ (boot) ಮಾಡುವುದನ್ನೂ, ಲೈವ್ ಸಿ.ಡಿ, ವರ್ಚುಯಲ್ ಬಾಕ್ಸ್ ಇತರೆ ಉಪಯೋಗಿಸುವುದನ್ನೂ ತಿಳಿಸಿಕೊಟ್ಟೆವು. ಇದರೊಡನೆ ಇನ್ಸ್ಟಾಲೇಶನ್ ಹಂತಕ್ಕೆ ಇಡೀ ಸಭಾಂಗಣ ಕಾಲಿಟ್ಟಿತು. ಇನ್ಸ್ಟಾಲೇಶನ್ ಮಧ್ಯದಲ್ಲೇ ರವಿಯವರು ಗ್ನು/ಲಿನಕ್ಸ್ ನ ಬಗ್ಗೆ, ತಂತ್ರಾಂಶಗಳ ಬಗೆ ಮಾಹಿತಿಗಳನ್ನ ಹಂಚಿಕೊಂಡರು. 

 

ಇನ್ಸ್ಟಾಲೇಶನ್ ಹಂತ

 


ಅನೇಕ ಪ್ರಶ್ನೆಗಳನ್ನ ಎಲ್ಲರ ಮುಂದರಡಿ, ಅದಕ್ಕೆ ಉತ್ತರ ನೀಡುತ್ತ, ಮತ್ತೆ ಕೆಲವು ಪ್ರಶ್ನೆಗಳನ್ನ ಸಭಿಕರಿಂದಲೇ ಬರುವಂತ ಮಾಡುವುದು ಅನೌಪಚಾರಿಕ ಹಬ್ಬದ ಆಚರಣೆಯ ಗುರಿಯಾಗಿತ್ತು. ಇದು ಪ್ರಶ್ನೆ ಕೇಳಲಿಕ್ಕೆ ಯಾರೂ ಹಿಂಜರಿಯಬಾರದು ಎಂಬ ಉದ್ದೇಶದಿಂದ, ಮಂಜು ಪ್ರಶ್ನೆಗಳ ಲೋಕಕ್ಕೆ ಸರಿದು, ಇತರರನ್ನೂ ಅಲ್ಲಿಗೆ ಸೆಳೆಯಲಿಕ್ಕೆ ಶುರುಮಾಡಿದರು.  ಮಧ್ಯೆ ಒಂದು ಸಣ್ಣ ಟೀ ಬ್ರೇಕ್. 

ಟೀ ಬ್ರೇಕ್ ನ ನಂತರ ಮುಗಿದ ಇನ್ಸ್ಟಾಲೇಶನ್, ರಾಘವನ ಕೈಗೆ ಮಂತ್ರದಂಡ ಕೊಟ್ಟಿತು. ಸ್ವತಂತ್ರ ತಂತ್ರಾಂಶಗಳಿಂದಲೇ ತಯಾರಿಸಿದ ಆನಿಮೇಶನ್ ಮೂವಿ ತೋರಿಸಿ, ನೆರೆದವರನ್ನ ಮಂತ್ರ ಮುಗ್ದರನ್ನಾಗಿ ಮಾಡಿದ್ದು ಸಹ ಇದರಿಂದಾಗಿಯೇ. ಬಿಗ್ ಬಕ್ ಬನ್ನಿ ಮೂವಿ ಎಲ್ಲರನ್ನು ನಕ್ಕು ನಲಿಸಿತು. ಆದ್ರೆ, ಇದೆಲ್ಲ ಸ್ವತಂತ್ರ ತಂತ್ರಾಂಶದಿಂದಲೇ ಮಾಡಿದ್ದಾ? ಅನ್ನೋ ಸಂಶಯ ಕೂಡ ಮನದಲ್ಲಿ ಚಿಗುರೊಡೆಯುವಂತೆ ಮಾಡಿತು. ಅದಕ್ಕೆ, ಹಬ್ಬದ ತಂಡ ನೀಡಿದ ಡೆಬಿಯನ್ ಚಿಗುರಿನಲ್ಲೇ  ಉತ್ತರವಿದೆ ಊಟ ಮಾಡಿ ಬನ್ನಿ, ತಿಳಿದು ಕೊಳ್ಳುವ ಅನ್ನೋ ಅಷ್ಟರಲ್ಲಿ ಹೊಟ್ಟೆ ಚಿರುಗುಟ್ಟುತ್ತಿದ್ದದ್ದು ಗಮನಕ್ಕೆ ಬಂತು. 

 

ಬಿಗ್ ಬಕ್ ಬನ್ನಿ (bigbuckbunny.org)

ನಾವೂ ಸಹ ಊಟ ಮಾಡಿ ಮತ್ತೆ ಹಿಂತಿರುಗಿದೆವು. ಶನಿವಾರ ಆಗಿದ್ರಿಂದ ಮಧ್ಯಾನ್ಹ ಕೆಲವರು ವಾಪಸ್ ಬರದೆ ಮನೆಗೆ ಹೋಗಬಹುದು ಅಂತ ಅಂದು ಕೊಂಡಿದ್ದು ಸುಳ್ಳಾಗಿತ್ತು. ೧೫೦ಕ್ಕೂ ಹೆಚ್ಚು ಜನ ಉತ್ಸಾಹದಿಂದ ನಮ್ಮ ಜೊತೆಗೂಡಿದ್ದರು. 

ಗ್ನು/ಲಿನಕ್ಸ್ ನಲ್ಲಿ ತಂತ್ರಾಂಶ ಅಭಿವೃದ್ದಿಗೆ ಬೇಕಿರುವ ಸಲಕರಣೆಗಳು, ಆನಿಮೇಶನ್, ದೃಶ್ಯ, ಶ್ರಾವ್ಯ, ದಿನಚರಿಯಲ್ಲಿ ನಾವು ಅದರೊಡನೆ ಎದುರಿಸುವ ಸವಾಲುಗಳು, ನಮ್ಮ ಮುಂದಿರುವ ಅಡ್ಡಿ ಆತಂಕಗಳನ್ನ ನಿವಾರಿಸುವ ಬಗ, ವರ್ಚುಅಲೈಸೇಶನ್, ಪ್ರಾಜಕ್ಟ್ ಗಳು, ನಮ್ಮನ್ನು ನಾವು ಗ್ನು/ಲಿನಕ್ಸ್ ಕಮ್ಯೂನಿಟಿಗಳೊಂದಿಗೆ ಬೆರೆಸಿಕೊಳ್ಳುವ ಬಗೆ,  ಇಂಟರ್ನೆಟ್ ನಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದು ಕೊಳ್ಳಲಿಕ್ಕೆ ಇರುವ ದಾರಿಗಳು (IRC, ಮೈಲಿಂಗ್ ಲಿಸ್ಟುಗಳು, Forum ಗಳು ಇತ್ಯಾದಿ), ಹೀಗೆ ಹತ್ತು ಹಲವು ವಿಷಯಗಳನ್ನ ರವಿ,ವಿಜಯ ರಾಘವನ್,ಶ್ರೀನಿಧಿ,ಅರವಿಂದ, ನಾನು ಮತ್ತು ಹರಿ ಮೊದಲೇ ನಿರ್ಧರಿಸಿದಂತೆ ಹಂಚಿಕೊಂಡೆವು. ಅನೇಕ ವಿಷಯಗಳನ್ನ ನಮ್ಮ ಅನುಭವದ ಆಳದಿಂದ ಹೆಕ್ಕಿ ತೆಗೆದ ತಂಡ ಆದಷ್ಟೂ ಉಪಯುಕ್ತ ಮಾಹಿತಿಗಳನ್ನ ಎಲ್ಲರೊಡನೆ ಹಂಚಿಕೊಂಡಿರು. 

ಇದರೆಲ್ಲರ ನಡುವೆ ಕಾಲೇಜಿನಲ್ಲೇ ಗ್ನು/ಲಿನಕ್ಸ್ ಬಳಕೆ, ಅಭಿವೃದ್ದಿ ಕಾರ್ಯಗಳಿಗೆ ಸಹಾಯವಾಗುವಂತೆ ೨೬ ಜಿ.ಬಿ (Gb)ಯ ಡೆಬಿಯನ್ ರೆಪಾಸಿಟರಿಯನ್ನ ಕಾಲೇಜಿನ ಸರ್ವರ್ ಒಂದರಲ್ಲಿ ರವಿಇನ್ಸ್ಟಾಲ್ ಮಾಡಿದ್ದರು. ಈಗ ಅದು ಎಲ್ಲರಿಗೆ ಲಭ್ಯವಿದ್ದು ೧೮ ಸಾವಿರಕ್ಕೂ ಹೆಚ್ಚು ತಂತ್ರಾಂಶಗಳನ್ನ ವಿಧ್ಯಾರ್ಥಿಗಳಿಗೆ ನೀಡಿದೆ. ಇದರ ಉಪಯೋಗದ ಬಗ್ಗೆ ನಾನು ಮತ್ತು ರವಿ ಎಲ್ಲರಿಗೆ ತಿಳಿಸಿದೆವು.

ಇಷ್ಟರಲ್ಲಾಗಲೇ ಸಂಜೆಯಾಗಿದ್ದು, ಎಲ್ಲರಿಗೂ ಮತ್ತೊಂದು ದೃಶ್ಯಾವಳಿಯನ್ನ ತೋರಿಸ್ಲಿಕ್ಕೆ ನಾವೂ ತಯಾರಾಗಿದ್ದೆವು. ಸ್ವತಂತ್ರ ತಂತ್ರಾಂಶ ಉಪಯೋಗಿಸಿಕೊಂಡು ತೆಗೆದ ಮೊದಲ ವಿಡಿಯೋ "ಏಲಿಫನ್ಟ್ಸ್ ಡ್ರೀಮ್" (Elephants Dream)  ಅನ್ನು ತೋರಿಸಲಾಯಿತು.

 

Elephants Dream: www.elephantsdream.org

 

ಇಷ್ಟರಲ್ಲಾಗಲೇ ಪ್ರೊಪ್ರೈಟರಿ ಮತ್ತುಸ್ವತಂತ್ರ ತಂತ್ರಾಂಶಗಳ ಬಗ್ಗೆ ಅನೇಕ ವಿಷಯಗಳನ್ನರಿತ ಸಭಿಕರಿಗೆ ಈ ಚಿತ್ರ, ಕೂಪಮಂಡೂಕನಾಗದೆ ಹೊರಬಂದು ಮನುಷ್ಯ ಏನೆಲ್ಲ ಹೊಸ ವಿಷಯಗಳನ್ನ, ಹೊಸ ಮಾರ್ಗಗಳನ್ನ ಕಂಡು ಕೊಳ್ಳಬಹುದು ಎಂಬ ಸಂದೇಶ ಸಾರಿತು.

ಇದರ ನಂತರವೂ ಗ್ನು/ಲಿನಕ್ಸ್ ಬಗ್ಗೆ, ಹಾರ್ಡ್ವೇರ್ ಕಂಪ್ಯಾಟಿಬಿಲಿಟಿ, ಇತ್ಯಾದಿ ವಿಷಯಗಳ ಬಗ್ಗೆ ಎದ್ದ ಪ್ರಶ್ನೆಗಳಿಗೆ ಉತ್ತರಗಳನ್ನೂ ನೀಡಲಾಯಿತು. ಧ್ವನಿ ತಂತ್ರಾಂಶದ ಬಗ್ಗೆ ತಿಳಿಸಿದ ರಾಘವ, ಹೇಗೆ ವಿಧ್ಯಾರ್ಥಿಗಳೂ ಇಂತಹ ಪ್ರಾಜೆಕ್ಟ್ ಗಳಲ್ಲಿ ತಮ್ಮ ಕಾಣಿಕೆ ನೀಡ ಬಹುದೆಂದು ತಿಳಿಸಿದ. ಅವನ ಡೆಸ್ಕ್ಟಾಪ್ ನ ೩ಡಿ ಎಫೆಕ್ಟ್ಸ್ ಎಲ್ಲರನ್ನೂ ಅಚ್ಚರಿಗೊಳಿಸಿದ್ದಂತೂ ನಿಜ. ಅಲ್ಲಿಗೆ ಹಾರ್ಡ್ವೇರ್ ಗಳ ಬಗ್ಗೆ ಇದ್ದ ಸಂದೇಹಗಳೂ ಮಾಯವಾಗಿದ್ದವು. ಹರಿ, ಇನ್ನಷ್ಟು ವಿಷಯಗಳನ್ನ ತಿಳಿಸಿ, ಎಲ್ಲರು ತಂಡದೊಡನೆ ನಂಟನ್ನು ಇಟ್ಟಿಕೊಂಡಿರಲು ಬೇಕಾದ ಈ-ಮೈಲ್ ಐ.ಡಿ, ವೆಬ್ಸೈಟ್ ವಿಳಾಸ ತಿಳಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ವಂದಿಸಿದ. 

ನಂತರ ವಂದನಾರ್ಪಣೆಯ ಸರದಿ, ಈ ಎಲ್ಲ ಕಾರ್ಯಕ್ರಮಗಳಿಗೆ ಕಾರಣೀಭೂತರಾದ ಅಶೋಕ್ ಕುಮಾರ್ ರವರದ್ದು.  ತಂಡಕ್ಕೆ, ವಿಧ್ಯಾರ್ಥಿಗಳಿಗೆ ಎಲ್ಲರಿಗೂ ಅವರು ಹಾರೈಸಿದರು. ಇಲ್ಲಿಗೆ ಗ್ನು/ಲಿನಕ್ಸ್ ಹಬ್ಬದ ಮೂರನೇ ಅಧ್ಯಾಯ ಸುಖಾಂತ್ಯ ಕಂಡಿತ್ತು. ತಂಡದ ಮತ್ತು NMAMIT ಕಾಲೇಜಿನ ವಾಲಂಟಿಯರ್ಸ್ ಗಳ ಶ್ರಮ ಸಾರ್ಥಕವಾಗಿತ್ತು.

 

ಗ್ನು/ಲಿನಕ್ಸ್ ಹಬ್ಬ-೩ರ ತಂಡ.

ಇನ್ನೂ ಅನೇಕ ವಿಷಯಗಳನ್ನ ನಾನು ಇಲ್ಲಿ ಹೇಳಲಿಕ್ಕಾಗುತ್ತಿಲ್ಲ.  ಸಮಯ ಸಿಕ್ಕಾಗ ಇದನ್ನ ಅಪ್ಡೇಟ್ ಮಾಡ್ತೇನೆ :). ಹಬ್ಬದ ವಿಚಾರವಾಗಿ http://habba.in ನೋಡ್ಲಿಕ್ಕೆ ಮರೀಬೇಡಿ. 

ಫೋಟೋಗಳು: ಹರಿ, ಮಂಜು, ಶ್ರೀನಿಧಿ ಮತ್ತು ನಾನು ತೆಗೆದಂತಹವು. ಹೆಚ್ಚಿನವಕ್ಕೆ ಹಬ್ಬ.ಇನ್ ನೋಡಿ.