ಗ್ಯಾರಂಟಿ ಭರವಸೆಗಳ ಈಡೇರಿಕೆಯೊಂದೇ ಆದ್ಯತೆ ಅಲ್ಲ

ಗ್ಯಾರಂಟಿ ಭರವಸೆಗಳ ಈಡೇರಿಕೆಯೊಂದೇ ಆದ್ಯತೆ ಅಲ್ಲ

ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ಬಹುಮತ ಗಳಿಸಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ಆರು ತಿಂಗಳು ತುಂಬಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನು ಪೂರೈಸುವುದಕ್ಕೇ ಸರ್ಕಾರ ಈ ಅವಧಿಯಲ್ಲಿ ಹೆಚ್ಚು ಸಮಯ ವ್ಯಯಿಸಿರುವುದು ಸ್ಪಷ್ಟ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ತಿಂಗಳಿಗೆ ೨ ಸಾವಿರ ರೂ. ನೆರವು, ನಿರ್ದಿಷ್ಟ ಪ್ರಮಾಣದ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಬಡವರಿಗೆ ೧೦ ಕೆಜಿ ಉಚಿತ ಅಕ್ಕಿ,... ಹೀಗೆ ಗ್ಯಾರಂಟಿಗಳ ಪೂರೈಕೆಯಾಗುತ್ತಲೇ ಇತ್ತು ಸರ್ಕಾರದ ಗಮನ. ಗ್ಯಾರಂಟಿಗಳಿಂದ ಉಂಟಾಗಿರುವ ಆರ್ಥಿಕ ಒತ್ತಡದಿಂದಾಗಿ ರಾಜ್ಯದ ವಿವಿಧ ವಲಯ, ಭಾಗಗಳಲ್ಲಿ ಬೇಕಿರುವ ಅಗತ್ಯ ಯೋಜನೆಗಳಿಗೆ ಹಣಕಾಸು ಪೂರೈಸುವುದು ಕಷ್ಟವಾಗಿರುವುದಂತೂ ಸತ್ಯ. ರಸ್ತೆ ಸೌಲಭ್ಯ ಮತ್ತಿತರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳತ್ತ ದೃಷ್ಟಿ ಹಾಯಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಇದನ್ನು ಕೆಲವು ಶಾಸಕರೇ ಆಂತರಿಕ ಮಾತುಕತೆ ವೇಳೆ ಒಪ್ಪಿಕೊಳ್ಳುತ್ತಾರೆ. ಈ ನಡುವೆ, ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಲ್ಲಿನ ಬರದ ಛಾಯೆ ಭವಿಷ್ಯದ ದಿನಗಳ ಬಗ್ಗೆ ಆತಂಕ ಮೂಡಿಸಿದೆ. ಮುಂದಿನ ಜನವರಿ ಆರಂಭಗೊಳ್ಳುತ್ತಿದ್ದಂತೆ ರಾಜ್ಯ ಕತ್ತಲಲ್ಲಿ ಮುಳುಗಲಿದೆಯೇನೋ ಎಂಬ ಭಯವೂ ಕಾಡಿದೆ. ಈ ನಡುವೆ, ಬರಪೀಡಿತ ತಾಲೂಕುಗಳ ಘೋಷಣೆ, ೪೦ ಸಾವಿರ ಕೃಷಿ ಹೊಂಡಗಳ ನಿರ್ಮಾಣ, ೧೦ಲಕ್ಷ ರೈತರಿಗೆ ಬೆಳೆ ವಿಮೆ ಘೋಷಣೆ ಸರ್ಕಾರದ ಹಲವು ಜನಸ್ನೇಹಿ ಯೋಜನೆಗಳು ಕೂಡಾ ಗಮನಸೆಳೆದಿವೆ.

ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವ ಕೆಲ ರಾಜ್ಯಗಳಲ್ಲಿ ಮಾಡಿದಂತೆ, ರಾಜ್ಯದಲ್ಲೂ ನೂತನ ಪಿಂಚಣಿ ಯೋಜನೆ ರದ್ದು ಪಡಿಸಿ, ಹಳೆ ಪಿಂಚಣಿ ಯೋಜನೆ ಮರು ಜಾರಿ ಮಾಡುವ ಲೆಕ್ಕಾಚಾರದಲ್ಲಿ ರಾಜ್ಯ ಸರಕಾರ ಇದೆ. ಸರ್ಕಾರ ಅಥವಾ ಬೆಂಬಲಿಗರು ಹಳೆ ಪಿಂಚಣಿಯೇ ಬೇಕು ಎಂದು ಪ್ರತಿಪಾದಿಸಬಹುದು. ಆದರೆ, ಇದರ ಸಾಧಕ-ಬಾಧಕಗಳ ಬಗ್ಗೆ ಹಣಕಾಸು ತಜ್ಞರೂ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ರಾಜ್ಯವ್ಯಾಪಿ ಚರ್ಚೆಯಾಗದೆ ಸರ್ಕಾರ ನಿಧಾರ ಕೈಗೊಳ್ಳುವುದು ಸೂಕ್ತವೆನಿಸದು. ಅದೇ ರೀತಿ, ಕೇಂದ್ರ ಸರ್ಕಾರದ ಹೊಸ ನೀತಿ (ಎನ್ ಇ ಪಿ) ರದ್ದುಗೊಳಿಸಬೇಕೆಂದು ಉದ್ಡೇಶ ಸರ್ಕಾರದಲ್ಲಿದೆ. ಇದು ರಾಜಕೀಯ ಪ್ರೇರಿತ ನಿರ್ಧಾರ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟ.

ಒಂದು ಸರ್ಕಾರದ ಕಾರ್ಯನಿರ್ವಹಣೆಯನ್ನು ಬರೀ ಆರು ತಿಂಗಳಲ್ಲಿ ಅಳೆಯಲು ಸಾಧ್ಯವಿಲ್ಲದಿದ್ದರೂ, ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಇಷ್ಟು ಅವಧಿಯಲ್ಲಿ ಅರ್ಥ ಮಾಡಿಕೊಳ್ಳಬಹುದು. ಗ್ಯಾರಂಟಿಗಳ ಜಾರಿಯ ಅನಿವಾರ್ಯತೆಯು ಇತರ ಅಭಿವೃದ್ಧಿ ಕಾರ್ಯಗಳಿಗೆ ಹಾನಿ ಮಾಡದಿರಲಿ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೧-೧೧-೨೦೨೩  

ಚಿತ್ರ ಕೃಪೆ: ಅಂತರ್ಜಾಲ ತಾಣ