ಗ್ರಿಡ್ ಕುಸಿತ ಮತ್ತು ವಿದ್ಯುತ್ತಿಗೆ ಬರ
ಗ್ರಿಡ್ ಕುಸಿತ ಮತ್ತು ವಿದ್ಯುತ್ತಿಗೆ ಬರ
ಒಂದೆಡೆ ಮಳೆ ಕೈಕೊಟ್ಟು ಬರದತ್ತ ದೇಶವು ಭರದಿಂದ ನುಗ್ಗುತ್ತಿರುವಾಗ,ವಿದ್ಯುತ್ತಿಗೆ ಬೇಡಿಕೆ ಹೆಚ್ಚುವುದು ಸಹಜವಾಗಿದೆ.ಮಳೆಯಿಲ್ಲದೆ,ಬೆಳೆಗೆ ನೀರಾವರಿ ವ್ಯವಸ್ಥೆಯಿದ್ದವರು ಕೃಷಿ ಪಂಪ್ ಸೆಟ್ ಹೆಚ್ಚೆಚ್ಚು ಬಳಸುತ್ತಾರೆ.ಅದರ ಜತೆ ನಮ್ಮ ಈಗಿನ ಜೀವನಶೈಲಿ ಹೆಚ್ಚೆಚ್ಚು ವಿದ್ಯುಚ್ಛಕ್ತಿ ಕೇಂದ್ರಿತವಾಗಿದೆ.ವಿದ್ಯುತ್ ಯೋಜನೆಗಳನ್ನು ಹಮ್ಮಿಕೊಂಡು ಸತತವಾಗಿ,ವಿದ್ಯುತ್ ಮೂಲಸೌಕರ್ಯವನ್ನು ಉತ್ತಮ ಪಡಿಸಿಕೊಳ್ಳಬೇಕಾದ ರಾಜ್ಯ ಸರಕಾರಗಳು,ಜನರ ಅಸಹಕಾರ,ಬಂಡವಾಳ ಕೊರತೆ ಮುಂತಾದ ಕಾರಣಗಳಿಂದ ಹೊಸ ಯೋಜನೆಗಳನ್ನು ಕೈಗೊಳ್ಳದೆ,ವಿದ್ಯುತ್ ಕಡಿತದಂತಹ ತಾತ್ಕಾಲಿಕ ಕ್ರಮಗಳಿಗೆ ಶರಣಾಗಬೇಕಾಗುತ್ತದೆ.ಅದು ಮಿತಿಮೀರಿ ಹೋದಾಗ ಜನರು ವಿರೋಧಿಸುತ್ತಾರೆ.ಗತ್ಯಂತರವಿಲ್ಲದೆ ರಾಜ್ಯದ ವಿದ್ಯುತ್ ಮಂಡಳಿಗಳು ವಿದ್ಯುತ್ ಗ್ರಿಡ್‌ಗಳಿಂದ ಅಕ್ರಮವಾಗಿ,ಹೆಚ್ಚೆಚ್ಚು ವಿದ್ಯುಚ್ಛಕ್ತಿಯನ್ನು ಸೆಳೆದುಕೊಳ್ಳುವ ಸುಲಭೋಪಾಯ ಹಿಡಿಯುತ್ತವೆ.ಹೀಗೆ ಹಲವಾರು ರಾಜ್ಯಗಳು ಮಾಡಿ ಉತ್ತರ ಭಾರತ ಮತ್ತು ಈಶಾನ್ಯ ಭಾರತದಲ್ಲಿ ಗ್ರಿಡ್ ಕುಸಿತ ಸಂಭವಿಸಿ,ಮೆಟ್ರೊ ರೈಲುಗಳೂ ಸೇರಿ,ಹಲವಾರು ಮುಖ್ಯ ರೈಲುಗಳೂ ಸ್ಥಗಿತವಾಗಿ,ಗಂಟೆಗಟ್ಟಲೆ ಜನರು ತ್ರಾಸ ಪಟ್ಟರು.ನೀರು ಪೂರೈಕೆ,ಸಂಚಾರ,ವೈದ್ಯಕೀಯ ಸೇವೆ ಹೀಗೆ ಪೂರ್ತಿ ಜನಜೀವನ ಬಾಧಿತವಾಯಿತು.ನೀರಿನ ಕೊರತೆಯಿಂದ ಉಷ್ಣವಿದ್ಯುತ್ ಸ್ಥಾವರ ಮತ್ತು ಜಲವಿದ್ಯುತ್ ಸ್ಥಾವರಗಳ ಕಾರ್ಯದಲ್ಲಿ ಏರುಪೇರಾಗುವುದು ಒಂದೆಡೆಯಾದರೆ,ಕಲ್ಲಿದ್ದಲ ಕೊರತೆ ಸಮಸ್ಯೆಯು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.ರಾಜ್ಯ ವಿದ್ಯುತ್ ಮಂಡಳಿಗಳ ಬಗ್ಗೆ ಗ್ರಿಡ್ ಅನ್ನು ನಿಭಾಯಿಸುವ ಪವರ್ ಗ್ರಿಡ್ ಪದೇ ಪದೇ ಆಕ್ಷೇಪ ಎತ್ತುತ್ತಿದ್ದರೂ,ರಾಜಕೀಯ ಕಾರಣಗಳಿಂದಾಗಿ,ಅವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುತ್ತಿಲ್ಲ.ಇದಕ್ಕೆ ಪರಿಹಾರವೆಂದರೆ,ಹೆಚ್ಚೆಚ್ಚು ವಿದ್ಯುಚ್ಛಕ್ತಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದೇ ಆಗಿದೆ.ಬಂಡವಾಳ ಕೊರತೆಯಿದ್ದರೆ,ಖಾಸಗಿ ಕಂಪೆನಿಗಳಿಗೆ ವಿದ್ಯುತ್ ಯೋಜನೆಗಳನ್ನು ಹಮ್ಮಿಕೊಳ್ಳಲು ಪ್ರೋತ್ಸಾಹ ನೀಡಬೇಕು.ಗ್ಯಾಸ್ ಆಧಾರಿತ ಯೋಜನೆಗಳನ್ನು ತ್ವರಿತವಾಗಿ ಮುಗಿಸಲು ಸಾಧ್ಯ,ಹಾಗಾಗಿ,ಅವಕ್ಕೆ ಪ್ರಾಶಸ್ತ್ಯ ಕೊಡಬೇಕು.ಇನ್ನು ಸೌರಶಕ್ತಿ,ಗಾಳಿಯನ್ನು ಆಧರಿಸಿದ ವಿದ್ಯುತ್ ಯೋಜನೆಗಳ ಕಡೆಗೂ ಗಮನಕೋಡಬೇಕಿದೆ.
---------------------------------------------
ಟೂಜಿ:ಆಗಸ್ಟ್ ಅಂತ್ಯಕ್ಕೆ ಹರಾಜು ಮುಗಿಸಲು ಸಾಧ್ಯವೇ?
ನೂರಕ್ಕೂ ಹೆಚ್ಚು ಟೆಲಿಕಾಂ ಕಂಪೆನಿಗಳ ಲೈಸೆನ್ಸ್ ಅನ್ನು ರದ್ದು ಮಾಡಿದ ನ್ಯಾಯಾಲಯದ ಕ್ರಮದಿಂದಾಗಿ,ಟೂಜಿ ಸ್ಪೆಕ್ಟ್ರಮನ್ನು ಹರಾಜು ಪ್ರಕ್ರಿಯೆ ಮೂಲಕ ಪೂರ್ಣಗೊಳಿಸಲು ಆಗಸ್ಟ್ ಮೂವತ್ತೊಂದರೊಳಗಷ್ಟೇ ಸಮಯಾವಕಾಶ ಲಭ್ಯವಿದೆ.ಈಗಿನ್ನೂ ಸರಕಾರವು ಸ್ಪೆಕ್ಟ್ರಮ್‌ನ ಮೂಲಬೆಲೆಯನ್ನಷ್ಟೇ ನಿಗದಿ ಮಾಡಿದೆ.ಐದು ಮೆಗಾಹರ್ಟ್ಸ್ ಸ್ಪೆಕ್ಟ್ರಮ್ಮಿಗೆ ಹದಿನಾಲ್ಕು ಸಾವಿರ ಕೋಟಿ ಬೆಲೆ ನಿಗದಿಪಡಿಸಲಾಗಿದೆ.ಟ್ರಾಯ್ ಪ್ರಾಧಿಕಾರ ಇದನ್ನು ಹದಿನೆಂಟು ಸಾವಿರ ಕೋಟಿ ಎಂದು ಶಿಫಾರಸು ಮಾಡಿತ್ತಾದರೂ,ಸರಕಾರ,ಟೆಲಿಕಾಂ ಕಂಪೆನಿಗಳ ಲಾಬಿಗೆ ಮಣಿದು ಬೆಲೆ ಇಳಿಸಿರುವ ಹಾಗಿದೆ.1.25 ಮೆಗಾಹರ್ಟ್ಸಿನ ಗುಣಕಗಳಲ್ಲಿ,ಮೂರೂವರೆ ಸಾವಿರ ಕೋಟಿ ರೂಪಾಯಿ ಮೂಲಬೆಲೆಗೆ ಹರಾಜು ನಡೆಯಲಿದೆ.ಹೀಗಾಗಿ,ಲೈಸೆನ್ಸ್ ರದ್ದಾದ ಕಂಪೆನಿಗಳಾದ ಯುನಿನೋರ್,ಟೆಲ್ನೋರ್ ಮುಂತಾದ ಕಂಪೆನಿಗಳು ಹರಾಜಿನಲ್ಲಿ ಭಾಗವಹಿಸುವುದು ಅನಿವಾರ್ಯವಾಗಿದೆ.ಆದರೆ ಲೈಸೆನ್ಸ್ ರದ್ದಾಗದೆ,ಈಗಾಗಲೇ ಇರುವ ಸ್ಪೆಕ್ಟ್ರಮನ್ನು ಉಳಿಸಿಕೊಂಡಿರುವ ಕಂಪೆನಿಗಳು ಹೆಚ್ಚು ಸ್ಪೆಕ್ಟ್ರಮ್ ಅಗತ್ಯವಿದ್ದರಷ್ಟೇ ಹರಾಜಿನಲ್ಲಿ ಭಾಗವಹಿಸಬಹುದು.ಒಟ್ಟಿನಲ್ಲಿ ಹಾರಾಜಿನಿಂದ ಹದಿನೆಂಟು ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ಬ್ಯಾಂಕುಗಳ ಸಾಲ ಮತ್ತಿತರ ಮೂಲಗಳಿಂದ ಸಂಗ್ರಹಿಸಬೇಕಾದ ಪರಿಸ್ಥಿತಿ ಇದೆ.ಕರೆದರಗಳು ಶೇಕಡಾ ಹತ್ತಿಪ್ಪತ್ತು ಶೇಕಡಾ ಏರುವುದೂ ಅನಿವಾರ್ಯವಾಗಲಿದೆ.ಇನ್ನೂ ಹರಾಜು ನಡೆಸುವವರು ಯಾರು ಎನ್ನುವುದು ನಿಗದಿಯಾಗಿಲ್ಲ.ಅದಾಗಿ,ಹರಾಜು ಪ್ರಕ್ರಿಯೆಗೆ ತಂತ್ರಾಂಶ ಸಿದ್ಧವಾಗಿ ಪ್ರಕ್ರಿಯೆ ಪೂರ್ಣವಾಗಲು ಆಗಸ್ಟ್ ಮೂವತ್ತೊಂದು ಗಡುವಿನೊಳಗೆ ಮಾಡಲು ಸಾಧ್ಯವಾದರೆ ಅದು ಅಚ್ಚರಿಯೇ ಸರಿ.
---------------------------------------------
ಮುಟ್ಟಿದ್ದೆಲ್ಲಾ ಸ್ಪರ್ಶತೆರೆ
ಯುಬಿ ಎನ್ನುವ ಕಂಪೆನಿಯು ಯಾವುದೇ ಮೇಲ್ಮೈಯನ್ನು ಸ್ಪರ್ಶತೆರೆಯಾಗಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ.ಉದಾಹರಣೆಗೆ ಕಂಪ್ಯೂಟರ್ ತೆರೆಯಲ್ಲಿದ್ದದ್ದನ್ನು ಗೋಡೆ ಮೇಲೆ ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸುತ್ತಿರುವಾಗ,ಗೋಡೆಯನ್ನೇ ಸ್ಪರ್ಶತೆರೆಯಾಗಿಸಬಹುದಾಗಿದೆ.ಇದಕ್ಕೆ ಒಂದುನೂರೈವತ್ತು ಡಾಲರು ಖರ್ಚು ಬರುತ್ತದೆ.ಸ್ಪರ್ಶತೆರೆಗಳು ಲಭ್ಯವಾದರೂ,ಅವು ಭಾರೀ ದುಬಾರಿ.ಅವಕ್ಕೆ ಹೋಲಿಸಿದರೆ,ನೂರೈವತ್ತು ಡಾಲರಿನ ಯುಬಿ ತಂತ್ರಾಂಶ ಪಡೆಯುವುದೇ ಲಾಭಕರವೆನಿಸಬಹುದು.ಇನ್ನು ಬರಲಿರುವ ವಿಂಡೋಸ್ ಎಂಟು ಆಪರೇಟಿಂಗ್ ವ್ಯವಸ್ಥೆಯು ಸ್ಪರ್ಶತೆರೆಗೆ ಹೇಳಿಮಾಡಿಸಿದ ಹಾಗಿದೆ.ಹಾಗಾಗಿ,ಯುಬಿ ತಂತ್ರಜ್ಞಾನವು ವಿಂಡೋಸ್ ಎಂಟಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.
---------------------------
ವೆಬ್ ಪುಟವನ್ನು ಪಿಡಿಎಫ್ ಆಗಿಸಿ
ಯಾವುದಾದರೂ ವೆಬ್ ಪುಟವನ್ನು ಪಿಡಿಎಫ್ ಆಗಿ ಉಳಿಸಿಕೊಳ್ಳಬೇಕೆನಿಸಿದೆಯೇ? ಹಾಗಾದರೆ,http://www.web2pdfconvert.com/ವೆಂಬ ಇಂಟರ್ನೆಟ್ ತಾಣವನ್ನು ಬಳಸಿಕೊಳ್ಳಿ.ಇಲ್ಲಿ,ಪಿಡಿಎಫ್ ಆಗಿ ಉಳಿಸಬೇಕಾದ,ಪುಟದ ವಿಳಾಸವನ್ನು ಟೈಪಿಸಿದರೆ,ಪುಟವು ಪಿಡಿಎಫ್ ಆಗಿ,ಡೌನ್‌ಲೋಡ್ ಮಾಡಲು ಸಿಗುತ್ತದೆ.
--------------------------------------
ಶೇರು ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿದ ತಂತ್ರಾಂಶ
ಅಮೆರಿಕಾದ ಶೇರು ಮಾರುಕಟ್ಟೆಯ ಸುಮಾರು ಹತ್ತು ಶೇಕಡಾ ಭಾಗದಷ್ಟು ವಹಿವಾಟು ನಡೆಸುವ ನೈಟ್ ಕ್ಯಾಪಿಟಲ್ ಎನ್ನುವ ಕಂಪೆನಿಯು ಕಳೆದವಾರದಿಂದ ತನ್ನ ಖರೀದಿ-ಮಾರಾಟ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಲು ಹೊಸ ತಂತ್ರಾಂಶವನ್ನು ಬಳಸತೊಡಗಿತು.ಈ ತಂತ್ರಾಂಶವನ್ನು ಗಡಿಬಿಡಿಯಿಂದ ತಯಾರಿಸಿ,ಸರಿಯಾಗಿ ಪರೀಕ್ಷಿಸದೆ,ಬಳಸಲು ತೊಡಗಿದ ಕಾರಣ,ಇದು ಅಡ್ಡಾದಿಡ್ಡಿಯಾಗಿ ವರ್ತಿಸಿ,ಇಡೀ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿತು.ಕಂಪೆನಿಯು ತನ್ನ ವ್ಯವಹಾರದಲ್ಲಿ ಸುಮಾರು ಅರ್ಧ ಬಿಲಿಯನ್ ಡಾಲರು ನಷ್ಟವನ್ನೂ ಅನುಭವಿಸಿದ್ದೇ ಅಲ್ಲದೆ,ಮಾರುಕಟ್ಟೆಯಲ್ಲಿ ಕಂಪೆನಿಯ ವ್ಯವಹಾರದ ಪಾಲು ಇಳಿಮುಖವಾಗುವುದು ನಿಶ್ಚಿತ.ಜತೆಗೆ ಸ್ಟಾಕ್ ಎಕ್ಷ್‌ಚೇಂಜ್ ಕಂಪೆನಿಯ ವಿರುದ್ಧ ಕ್ರಮವನ್ನೂ ಕೈಗೊಳ್ಳಬಹುದು.
--------------------------------------------------
ಔಟ್‌ಲುಕ್:ಹೊಸ ಮಿಂಚಂಚೆ
ಮೈಕ್ರೋಸಾಫ್ಟ್ ಕಂಪೆನಿಯು ಹಾಟ್‌ಮೇಲ್ ಎನ್ನುವ ಮಿಂಚಂಚೆಸೇವೆಯನ್ನು ಜನರಿಗೆ ಒದಗಿಸುತ್ತಿತ್ತು.ಈಗದು ಔಟ್‌ಲುಕ್ ಎಂಬ ಹೊಸ ಹೆಸರನ್ನು ಬಳಸಿ ಹೊಸ ಗಿರಾಕಿಗಳ ಮನಗೆಲ್ಲಲು ಪ್ರಯತ್ನಿಸಲಿದೆ.ಜಿಮೇಲ್ ಅಂತಹ ಗೂಗಲ್ ಮಿಂಚಂಚೆಯ ಜನಪ್ರಿಯತೆಗೆ ಕಡಿವಾಣ ಹಾಕಲು ಔಟ್‌ಲುಕ್‌ಗೆ ಸಾಧ್ಯವಾಗಬಹುದೇ ಎನ್ನುವುದು ಕುತೂಹಲದ ವಿಷಯವಾಗಿದೆ.ಮೊದಲ ಗಂಟೆಯಲ್ಲಿಯೇ ಸುಮಾರು ದಶಲಕ್ಷ ಜನ ಔಟ್‌ಲುಕ್ ಸೇವೆಗೆ ನೋಂದಾಯಿಸಿಕೊಂಡು,ಬೆನ್ನು ತಟ್ಟಿರುವುದು ವಿಶೇಷವಾಗಿದೆ.ಕಂಪೆನಿಯ ಸಿಇಓ ಆದ ಬಾಮರ್ ಅವರ ಹೆಸರಿನ ಮಿಂಚಂಚೆಯನ್ನು ಯಾರೋ ಈಗಾಗಲೇ ನೋಂದಾಯಿಸಿಕೊಂಡಿರುವ ಘಟನೆಯೂ ಕುತೂಹಲ ಮೂಡಿಸಿದೆ.
------------------------------------------------
ಟ್ವಿಂಡೆಕ್ಸ್ ಎನ್ನುವ ಟ್ವಿಟರ್ ರಾಜಕೀಯ ಸೂಚ್ಯಂಕ
ಟ್ವಿಟರಿನಲ್ಲಿ ಜನರು ವಿವಿಧ ವಿಷಯಗಳ ಬಗ್ಗೆ ತಮ್ಮ ಅನಿಸಿಕೆಯನ್ನು ಇತರರ ಜತೆ ಹಂಚಿಕೊಳ್ಳಲು ಬಳಸಿಕೊಳ್ಳುತ್ತಾರೆ.ಸುಮಾರು ಹದಿನಾಲ್ಕು ಕೋಟಿ ಬಳಕೆದಾರರು ಸಕ್ರಿಯವಾಗಿದ್ದಾರೆ.ಇಲ್ಲಿ ಅಮೆರಿಕಾದ ಚುನಾವಣೆಯ ಬಗ್ಗೆ ಜನರಿಂದ ವ್ಯಕ್ತವಾಗುವ ಅಭಿಪ್ರಾಯವನ್ನು ಗ್ರಹಿಸಿ,ನೈಜ ಸಮಯದಲ್ಲಿ,ಯಾವ ಅಭ್ಯರ್ಥಿಯ ಕಡೆ ಜನರ ಒಲವು ವಾಲುತ್ತಿದೆ ಎನ್ನುವುದನ್ನು ಟ್ವಿಂಡೆಕ್ಸ್ ತೋರಿಸಲಿದೆ.ಒಬಾಮಾ ಮತ್ತು ರೋಮ್ನಿ ಅವರ ಕಡೆ ಜನರ ಒಲವು ಕ್ಷಣ-ಕ್ಷಣ ಹೇಗೆ ಬದಲಾಗುತ್ತಿದೆ ಎನ್ನುವುದು ಜನರಿಗೆ ಗೊತ್ತಾಗುತ್ತದೆ.ಟ್ವಿಟರ್,ಟಾಪ್ಸಿ ಮತ್ತು ಚುನಾವಣಾ ಸಮೀಕ್ಷಾ ಕಂಪೆನಿಗಳು ಜತೆಯಾಗಿ,ಟ್ವಿಂಡೆಕ್ಸನ್ನು ಹುಟ್ಟುಹಾಕಿವೆ.ಟ್ವಿಂಡೆಕ್ಸ್ ಸ್ಕೋರು ಧನಾತ್ಮಕವಾಗಿದ್ದರೆ,ಅದು ವ್ಯಕ್ತಿಯ ಜನಪ್ರಿಯತೆಯ ಸಂಕೇತ.ಋಣಾತ್ಮಕವಾಗಿದ್ದರೆ,ಆತನ ಬೆಂಬಲ ಇಳಿಮುಖವಾಗುತ್ತಿದೆ ಎನ್ನುವುದರ ಸಂಕೇತವಾಗಿದೆ.
ಈ ಅಂಕಣ ಬರಹಗಳು http::/ashok567.blogspot.comನಲ್ಲೂ ಲಭ್ಯವಿವೆ.
Udayavani pdf
UDAYAVANI
*ಅಶೋಕ್‌ಕುಮಾರ್ ಎ
Comments
ಉ: ಗ್ರಿಡ್ ಕುಸಿತ ಮತ್ತು ವಿದ್ಯುತ್ತಿಗೆ ಬರ