ಘಟ್ಟಗಳ ನಡುವೆ ಘಾಟಿ ಸುಬ್ರಮಣ್ಯ ದೇವಸ್ಥಾನ

ಘಟ್ಟಗಳ ನಡುವೆ ಘಾಟಿ ಸುಬ್ರಮಣ್ಯ ದೇವಸ್ಥಾನ

ಘಟ್ಟಗಳ ಮಧ್ಯೆ ಇರುವ ಯಾತ್ರಾ ಸ್ಥಳಕ್ಕೆ ಘಾಟಿ ಸುಬ್ರಮಣ್ಯ ಎಂದು ಹೆಸರು ಬಂದಿದೆ. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬಳ್ಳಾಪುರದ ಬಳಿ ಇರುವ ಪ್ರಸಿದ್ಧ ಪವಿತ್ರ ಯಾತ್ರಾಸ್ಥಳ. ಇಲ್ಲಿರುವ ಸುಬ್ರಮಣ್ಯ ದೇವಾಲಯವು ಭವ್ಯ ಬೆಟ್ಟಗಳ ನಡುವಿನ ಹೆಸರಾಂತ ಪುಣ್ಯ ಸ್ಥಳ. ವರ್ಷಕ್ಕೊಮ್ಮೆ ಇಲ್ಲಿ ಜರುಗುವ ದನಗಳ ಜಾತ್ರೆ ಕರ್ನಾಟಕ ಮಾತ್ರವಲ್ಲ ಆಂಧ್ರಪ್ರದೇಶ, ತಮಿಳುನಾಡುಗಳಿಂದ ರೈತರನ್ನು ಸೆಳೆಯುತ್ತದೆ. ಸಂಡೂರಿನ ಅರಸ ಯಶವಂತರಾಯ ಘೋರ್ಪಡೆ ಕಟ್ಟಿಸಿದರೆಂದು ಹೇಳಲಾದ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಸುಬ್ರಮಣ್ಯ, ಲಕ್ಷ್ಮೀ ನರಸಿಂಹಸ್ವಾಮಿ ಶಿಲಾ ರೂಪಗಳಿವೆ. ಪ್ರಾಕೃತಿಕವಾಗಿರುವ ಸರ್ಪಾಕಾರದ ಕಲ್ಲುಗಳ ಜತೆಗೆ ಭಕ್ತರು ನಾಗರ ಕಲ್ಲುಗಳನ್ನು ಪ್ರತಿಷ್ಟಾಪಿಸಿರುವುದು ಘಾಟಿಯ ವಿಶೇಷ. ಇದರ ಜೊತೆಗೆ ಸರ್ಪ ಉದ್ಯಾನವೂ ಇದೆ.

ಹಚ್ಚ ಹಸುರಿನ ಬೆಟ್ಟದ ತಪ್ಪಲಿನಲ್ಲಿ ಕಂಗೊಳಿಸುವ ಹಸಿರು ಸೀಮೆಯ ಸುಂದರ ಪ್ರವಾಸಿ ಸ್ಥಳ ಶ್ರೀ ಘಾಟಿ ಸುಬ್ರಹ್ಮಣ್ಯ. ಜೊತೆಗೆ ಐತಿಹಾಸಿಕ ಹಿನ್ನಲೆಯುಳ್ಳ ಪುರಾಣ ಪ್ರಸಿದ್ಧ ಸ್ಥಳವೂ ಆಗಿದೆ. ದಟ್ಟವಾದ ಬೆಟ್ಟಗುಡ್ಡಗಳ ನಡುವೆ ಮೈದಳೆದು ನಿಂತಿರುವುದರಿಂದಲೇ ಈ ಪ್ರದೇಶಕ್ಕೆ 'ಘಟ್ಟ ಪ್ರದೇಶ ' ಅಥವಾ 'ಘಾಟಿ' ಎಂಬ ಹೆಸರು ಅನ್ವರ್ಥವಾಗಿದೆ. ಇದು ಬಯಲು ಸೀಮೆಯಾದರೂ ಇದು ಘಟ್ಟ ಪ್ರದೇಶವೇ ಆಗಿದೆ.. ದೊಡ್ಡಬಳ್ಳಾಪುರ, ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ತಾಲೂಕುಗಳನ್ನು ಆವರಿಸಿರುವ 'ಉಜ್ಜನಿ' ಬೆಟ್ಟದ ಸಾಲಿನ ತಪ್ಪಲು ಪ್ರದೇಶವಾದ ಮಾಕಳಿದುರ್ಗಕ್ಕೆ ಸಮೀಪವಿರುವ ಈ ಸ್ಥಳ ಪ್ರಾಕೃತಿಕ ಸೊಬಗಿನಿಂದಲೂ ದೇಶ- ವಿದೇಶಿ ಪ್ರವಾಸಿಗರ ಆಕರ್ಷಣೀಯ ಸುಂದರ ಸ್ಥಳವಾಗಿದೆ.

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಚಾರಿತ್ರಿಕ ದೇವಾಲಯ 'ಕುಮಾರಧಾರಾ' ಉದ್ಯಾನವನ, ಸಹಸ್ರಾರು ನಾಗರ ಮೂರ್ತಿಗಳಿರುವ ಬೃಹತ್‌ ಅಶ್ವತ್ಥಕಟ್ಟೆ, ಅವಳಿ ಕಲ್ಯಾಣಿಗಳು, ಪಕ್ಕದಲ್ಲಿಯೆ ಹರಿಯುವ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು. ವರ್ಷಕ್ಕೊಮ್ಮೆ ನಡೆಯುವ ದನಗಳ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಇಲ್ಲಿನ ಮುಖ್ಯ ಆಕರ್ಷಣೆಗಳು. ಸ್ವಾಮಿಯು ಶಿಲಾರೂಪದಲ್ಲಿದ್ದು ಮುಂಭಾಗದಲ್ಲಿ ಏಳು ಹೆಡೆಗಳಿಂದ ರಾರಾಜಿಸುವ ಪೂರ್ವಾಭಿಮುಖವಾಗಿ ಸುಬ್ರಹ್ಮಣ್ಯಸ್ವಾಮಿ, ಪಶ್ಚಿಮಾಭಿಮುಖವಾಗಿ ಲಕ್ಷ್ಮೀ ಸಮೇತನಾದ ನರಸಿಂಹಸ್ವಾಮಿಯನ್ನು ಒಂದೇ ಶಿಲೆಯಲ್ಲಿ ವೈಭವೀಕರಿಸಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಇಲ್ಲಿ ನರಸಿಂಹಸ್ವಾಮಿಯ ವಿಗ್ರಹರೂಪವನ್ನು ಕನ್ನಡಿಯಲ್ಲಿ ಮಾತ್ರ ನೋಡಬಹುದಾಗಿದೆ. ಈ ದೇವಾಲಯದ ಚಾರಿತ್ರ್ಯ ಸುಮಾರು 600 ವರ್ಷಗಳ ಹಿಂದಿನದ್ದಾಗಿದ್ದು, ವಿಜಯನಗರದ ವಾಸ್ತು ಶೈಲಿಯಲ್ಲಿದೆ. ಈ ದೇವಾಲಯವನ್ನು ಬಳ್ಳಾರಿ ಜಿಲ್ಲೆಯ ಸಂಡೂರು ಪ್ರಾಂತದ ದೊರೆಗಳು ಕಟ್ಟಿಸಿದರೆಂಬ ಉಲ್ಲೇಖ ಕೇಳಸಿಗುತ್ತದೆ.

ಈ ಪುಣ್ಯಕ್ಷೇತ್ರವನ್ನು ಕುರಿತು ಅನೇಕ ಪೌರಾಣಿಕ ಕಥೆಗಳಿವೆ. ಈ ಸ್ವಾಮಿಯು ಇಲ್ಲಿ 'ಘಟಿಕಾಸುರ' ನೆಂಬ ರಾಕ್ಷಸನನ್ನು ಕೊಂದದ್ದರಿಂದ ಈ ಪ್ರದೇಶ ಘಾಟಿ ಸುಬ್ರಹ್ಮಣ್ಯವಾಗಿ ಖ್ಯಾತವಾಯಿತೆಂದು, ಒಬ್ಬ ವೀಳ್ಯದೆಲೆ ವ್ಯಾಪಾರಿಗೆ ದೇವರು ದರ್ಶನ ನೀಡಿ ತನ್ಮೂಲಕ ದೇಗುಲ ನಿರ್ಮಿಸಿಕೊಂಡರೆಂದೂ ಹೇಳುತ್ತಾರೆ. ಆದರೆ ಇದಕ್ಕೆಲ್ಲಾ ಕಥೆಯಷ್ಟೇ ಆಧಾರ. ಯಾವುದೇ ದಾಖಲೆಗಳಿಲ್ಲ. ದೇವಾಲಯದ ಬಲಭಾಗಕ್ಕೆ ಎರಡು ಬೃಹತ್ ಕಲ್ಯಾಣಿಗಳಿವೆ. ಈ ಕಲ್ಯಾಣಿಗಳ ರಚನೆ ಮತ್ತು ವಿನ್ಯಾಸದಲ್ಲಿ ವಿಶಿಷ್ಟವಾಗಿದ್ದು, ಈ ಕಲ್ಯಾಣಿಗಳಲ್ಲಿ ಜಾತ್ರೆ ಸಂದರ್ಭದಲ್ಲಿ ತೇಲುವ ದೇವಾಲಯದ 'ತೆಪ್ಪೋತ್ಸವ' ಕಾರ್ಯಕ್ರಮ ನಡೆಯುತ್ತದೆ.

'ಕುಮಾರಧಾರಾ' ಉದ್ಯಾನ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇದು ದೇವಾಲಯದ ಹಿಂಭಾಗದಲ್ಲಿ ದೇವಾಲಯಕ್ಕೆ ಅಂಟಿಕೊಂಡಿದ್ದು, ಇಲ್ಲಿ ವಿವಿಧ ಜಾತಿಯ ಗಿಡಮರಗಳ ಜೊತೆಗೆ ನವಗ್ರಹ ಮಂದಿರ, ಗಣಪತಿ ಮಂದಿರ, ನಾಗದೇವತಾ ಮಂದಿರಗಳು ಹಾಗೂ ಹುತ್ತಗಳು ನೋಡುಗರಿಗೆ ಅತ್ಯಾನಂದ ತರುವಂತಿದೆ. 

ಉದ್ಯಾನವನದ ಮತ್ತೊಂದು ವೈಶಿಷ್ಟ್ಯವೆಂದರೆ ಸಹಸ್ರಾರು ನಾಗರ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಬೃಹತ್ ಅಶ್ವತ್ಥ ಕಟ್ಟೆ ರಾಜ್ಯದ ದೊಡ್ಡ ಅಶ್ವತ್ಥಕಟ್ಟೆಯಾಗಿದೆ. ಇಲ್ಲಿ ಸುಮಾರು 10 ರಿಂದ 11 ಸಾವಿರ ನಾಗರ ಮೂರ್ತಿಗಳು ಆಕರ್ಷಣೀಯವಾಗಿವೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಪ್ರತಿಷ್ಠಾಪಿಸಿರುವ ಉದ್ದೇಶವೇನು? ಇದು ಸಾಮಾನ್ಯ ಪ್ರಶ್ನೆಯೇ, ಅಂದ ಹಾಗೆ ಇವೆಲ್ಲಾ ದೇವಾಲಯ ಕಟ್ಟುವಾಗಲೇ ಪ್ರತಿಷ್ಠಾಪಿತವಾದದಲ್ಲ. ಹರಕೆ ಹೊತ್ತ ಭಕ್ತರು ಪ್ರತಿಷ್ಠಾಪಿಸಿರುವುದು. ಇಲ್ಲಿ ನಾಗರ ಪ್ರತಿಷ್ಠಾಪನೆ ಮಾಡಿಸುವ ಹರಕೆ ಹೊತ್ತರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಭಕ್ತಕೋಟಿಯದು. ಈಗಲೂ ಈ ಪ್ರತಿಷ್ಠಾಪನೆ ಕಾರ್ಯ ಮುಂದುವರಿಯುತ್ತಲೇ ಇರುವುದು ವೈಶಿಷ್ಟ್ಯ. ದೇವಾಲಯದ ಹಿಂಭಾಗದಲ್ಲಿರುವ ಮಾಕಳಿ ದುರ್ಗ ರಸ್ತೆಯಲ್ಲಿ ಒಂದು ಪುಟ್ಟ ಅಣೆಕಟ್ಟು ಇದೆ. ಇದು ಮಳೆಗಾಲದಲ್ಲಿ ತುಂಬಿ ಹರಿದು ಸಾಮಾನ್ಯವಾಗಿ ಬೇಸಿಗೆಯಲ್ಲಿ ಬತ್ತಿಯೇ ಇರುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಸೇರಿರುವ ಈ ಯಾತ್ರಾಸ್ಥಳ ಪ್ರತಿವರ್ಷದ ಡಿಸೆಂಬರ್ ಜನವರಿಯಲ್ಲಿ ನಡೆಯುವ ದನಗಳ ಜಾತ್ರೆಗಾಗಿ ಇಡೀ ರಾಜ್ಯದಲ್ಲೇ ಖ್ಯಾತಿಗಳಿಸಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ದನಗಳು ಈ ಜಾತ್ರೆಯಲ್ಲಿ ಸೇರಲಿದ್ದು, ಬೃಹತ್‌ ಪ್ರಮಾಣದ ವ್ಯಾಪಾರ - ವ್ಯವಹಾರ ನಡೆಯಲಿದೆ. ಉತ್ತಮ ತಳಿಯ ದನಗಳ ಜೋಡಿಗಳನ್ನು ಕೊಳ್ಳಲು-ಮಾರಲು ಇದು ಉತ್ತಮ ಸುಸಂದರ್ಭವಾಗಿದೆ.

ಇಲ್ಲಿಗೆ ನೆರೆರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡುಗಳಿಂದಲೂ ರೈತರು, ವ್ಯಾಪಾರಿಗಳು ಬಂದು ದನಗಳ ಖರೀದಿಯಲ್ಲಿ ಪಾಲ್ಗೊಳ್ಳುತ್ತಾರೆ. ದೇವಾಲಯದ ಸಮೀಪದ ವಿಶಾಲವಾದ ಬಯಲು ಪ್ರದೇಶದಲ್ಲಿ ಬ್ರಹ್ಮ ರಥೋತ್ಸವಕ್ಕೆ ಹತ್ತು - ಇಪ್ಪತ್ತು ದಿನಗಳ ಮುಂಚಿತವಾಗಿಯೇ ಈ ದನಗಳ ಜಾತ್ರೆ ಪ್ರಾರಂಭವಾಗುತ್ತದೆ. ಉತ್ತಮ ಜೋಡೆತ್ತುಗಳಿಗೆ ಇಲ್ಲಿನ ಮುಜರಾಯಿ ಇಲಾಖೆ ವತಿಯಿಂದ ಬಹುಮಾನ ವಿತರಣೆಯ ಏರ್ಪಾಡು ಇರುವುದು ಜಾತ್ರೆಯ ಘನತೆಯನ್ನು ಹೆಚ್ಚಿಸುತ್ತದೆ ಹಾಗೂ ಇಲ್ಲಿ ವ್ಯಾಪಾರಿಗಳಿಗೆ ಉತ್ತಮವಾದ ಮಲಗುವ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆಯೂ ಇದೆ. ಅಂದಹಾಗೆ ಪ್ರತಿ ವರ್ಷವೂ ಜಾತ್ರಾ ವಿಶೇಷವಾಗಿ ಬೆಂಗಳೂರು, ಗೌರಿಬಿದನೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಮೈಸೂರು ಸ್ಥಳಗಳಿಂದ ವಿಶೇಷ ನೇರ ಬಸ್ ಸೌಕರ್ಯವನ್ನು ಕಲ್ಪಿಸಲಾಗುತ್ತದೆ.

ಬೆಂಗಳೂರಿಗೆ 52 ಕಿ.ಮೀ. ದೂರದಲ್ಲಿದೆ ಘಾಟಿ ಸುಬ್ರಮಣ್ಯ. ದೊಡ್ಡಬಳ್ಳಾಪುರದಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಈ ಪುಣ್ಯಕ್ಷೇತ್ರ ಪ್ರಕೃತಿ ಪ್ರಿಯರ ಪಾಲಿಗೆ ಒಂದು ಸುಂದರ ರಸಾನುಭವ. ಭಕ್ತ ಜನರಿಗೆ ಇಷ್ಟಾರ್ಥಗಳನ್ನು ಪೂರೈಸುವ ದಿವ್ಯ ಸನ್ನಿಧಿ ಅಲ್ಲದೆ ಈ ಕ್ಷೇತ್ರದ ದರ್ಶನ ಪಡೆಯಲು ಇಚ್ಛಿಸುವ ಯಾತ್ರಿಕರಿಗೆ ತಂಗಲು ಛತ್ರಗಳು ಸಾಕಷ್ಟಿವೆ. "ಹಚ್ಚ ಹಸುರಿನ ಬೆಟ್ಟದ ತಪ್ಪಲಿನಲ್ಲಿ ಕಂಗೊಳಿಸುವ ಹಸಿರು ಸೀಮೆಯ ಸುಂದರ ಪ್ರವಾಸಿ ಸ್ಥಳ ಶ್ರೀ ಘಾಟಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು" ಪುನೀತರಾಗೋಣ ಬನ್ನಿ... 

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು