ಚಂದಮಾಮನಿಗೆ ಅರವತ್ತು......

ಚಂದಮಾಮನಿಗೆ ಅರವತ್ತು......

ಬರಹ

ಬಹುತೇಕ ಮಂದಿ ಚಂದಮಾಮದಲ್ಲಿನ ವಿಕ್ರಮ ಮತ್ತು ಬೇತಾಳ, ನೀತಿ ಕಥೆಗಳನ್ನು ಓದಿಯೇ ಆಡುಗೂಲಜ್ಜಿಯ ಕಥೆಯೆಡೆಗೊಂದು ಮೋಹ ಬೆಳೆಸಿಕೊಂಡಿರುವುದು. ಆ ಕಾಲಕ್ಕೆ ನಮಗೆ ಚಂದಮಾಮ, ಬಾಲಮಿತ್ರ ನಮ್ಮ ಬಾಲ್ಯದ ಸಂಗಾತಿಯಾಗಿದ್ದವು. ನಾವೆಲ್ಲ ಓದುತ್ತಾ, ಓದುತ್ತಾ ಬೆಳೆದ ಚಂದಮಾಮನಿಗೆ ಈಗ 60ರ ಸಂಭ್ರಮ.. ಅಬ್ಬಾ ಚಂದಮಾಮಕ್ಕೆ ಅರವತ್ತು ವರ್ಷಗಳು ತುಂಬಿತೆಂದರೆ, ನಮ್ಮ ಕಣ್ಣುಗಳೇ ಇಷ್ಟಗಲ ತೆರೆದುಕೊಳ್ಳುತ್ತದೆ.

ಇತ್ತೀಚೆಗಷ್ಟೇ ಮುಂಬೈಯಲ್ಲಿ ಚಂದಮಾಮದ 60ನೇ (61ವರ್ಷ) ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ, ನಾನು ಚಿಕ್ಕವನಿದ್ದಾಗ ಪಾಶ್ಚಾತ್ಯ ಕಾಮಿಕ್ಸ್‌‌ನೆಡೆಗೆ ಮೋಹಿತನಾಗಿದ್ದೆ. ಆದರೆ ನನ್ನ ಪೋಷಕರು ನನಗೆ ಚಂದಮಾಮದ ರುಚಿ ಹತ್ತಿಸಿದ ಮೇಲೆ ನನಗೆ ಬಾಲ್ಯದಲ್ಲಿ ಅದೇ ನನ್ನ ಸಂಗಾತಿಯಾಗಿತ್ತು. ಆದರೆ ಈಗ ನನಗೆ ಸಮಯದ ಒತ್ತಡ ಇರುವುದರಿಂದ ಓದಲಾಗುತ್ತಿಲ್ಲ, ಆದರೂ ಚಂದಮಾಮವನ್ನ ನನ್ನ ಮೊಮ್ಮಕ್ಕಳಿಗೆ ಪರಿಚಯಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದರು.

ಹೌದು ಈಗ ಚಂದಮಾಮನ ನೆನಪು-ನೇವರಿಕೆ ನಮ್ಮಿಂದ ನಿಧಾನಕ್ಕೆ ತೆರೆ-ಮರೆಗೆ ಸರಿಯತೊಡಗಿದೆ. ಆ ಜಾಗದಲ್ಲಿ ಹ್ಯಾರಿ ಪಾಟರ್ ಬಂದು ಕುಳಿತಿದ್ದಾನೆ. ಯಾರು ಎಷ್ಟೇ ಬಾಯಿ ಬಡಿದಕೊಂಡರೂ ಚಂದಮಾಮ, ಬಾಲಮಿತ್ರ, ಈಸೋಪನ ಕಥೆಗಳು, ಅಕ್ಬರ್-ಬೀರ್‌‌ಬಲ್‌ ಕಥೆಗಳ ಮುಂದೆ ಹ್ಯಾರಿ ಪಾಟರ್ ಅನ್ನು ನಿವಾಳಿಸಿ ಒಗೆಯಬೇಕು.

1947ರ ಜುಲೈ ತಿಂಗಳಿನಲ್ಲಿ ನಾಗಿ ರೆಡ್ಡಿ ಮತ್ತು ಅವರ ಆಪ್ತಮಿತ್ರ ಚಕ್ರಪಾಣಿಯವರು ಜತೆಗೂಡಿ ಚಂದಮಾಮನನ್ನು ಹುಟ್ಟು ಹಾಕಿದ್ದರು. ಚಂದಮಾಮ ಎರಡು ಬಣ್ಣಗಳಲ್ಲಿ ಪ್ರಪ್ರಥಮವಾಗಿ ಹೊರಬಿದ್ದ 64ಪುಟಗಳ ಸಂಚಿಕೆಯ ಬೆಲೆ 6ಅನ್ನಾ (ಅಂದರೆ 37 ಪೈಸೆ), 1947ರ ಜುಲೈಯಲ್ಲಿ 6 ಸಾವಿರ ಪ್ರತಿಯನ್ನು ಅಚ್ಚು ಹಾಕಿಸಲಾಗಿತ್ತಂತೆ. ಅದನ್ನು ಅಂಚೆ ಕಚೇರಿ ಮೂಲಕ ಕಳುಹಿಸುವ ಏರ್ಪಾಟು ಮಾಡಲಾಗಿತ್ತು. ಹೀಗೆ ನಿರಂತರವಾಗಿ ಮಾಸಿಕ ಪ್ರಕಟಣೆ ಕಂಡ ಚಂದಮಾಮ 1998ರಲ್ಲಿ ನೌಕರರ ವಿವಾದದಿಂದಾಗಿ ಪ್ರಕಟಣೆ ನಿಂತುಹೋಗಿತ್ತು.ನಂತರ ಮತ್ತೆ ಪ್ರಕಟಣೆಯನ್ನು ಆರಂಭಿಸಲಾಗಿತ್ತು,

ಪ್ರಥಮವಾಗಿ ಚಂದಮಾಮ ಚೆನ್ನೈಯಲ್ಲಿ ಆರಂಭಗೊಂಡಿದ್ದು, ತೆಲುಗು ಮತ್ತು ತಮಿಳು ಭಾಷೆಯಲ್ಲಿ, ನಂತರ ನಾಲ್ಕು ವರ್ಷಗಳ ಬಳಿಕ ಆರು ಭಾಷೆಗಳಲ್ಲಿ ಪ್ರಕಟಣೆ ಕಾಣಲು ಆರಂಭಿಸಿದ ಚಂದಮಾಮ ನಂತರ ಏಕಕಾಲದಲ್ಲಿ ಇಂಗ್ಲೀಷ್,ಕನ್ನಡ ಸೇರಿದಂತೆ 12ಭಾಷೆಗಳಲ್ಲಿ ಅದರಲ್ಲೂ ಚಂದಮಾಮದ ಹೆಗ್ಗಳಿಕೆ ಯಾವುದೆಂದರೆ ಪ್ರಪ್ರಥಮವಾಗಿ ಸಿಂಧಿ, ಗುರುಮುಖಿ, ಸಿಂಹಳ ವಿದೇಶ ಭಾಷೆಗಳಲ್ಲಿಯೂ ಪ್ರಕಟವಾಗತೊಡಗಿತು. 1978ರಲ್ಲಿ ಸಂಸ್ಕೃತ ಭಾಷೆಯಲ್ಲಿಯೂ ಚಂದಮಾಮವನ್ನು ಆರಂಭಿಸಲಾಗಿತ್ತು. 2004ರಲ್ಲಿ ಮಕ್ಕಳಿಗಾಗಿ ಬುಡಕಟ್ಟು ಭಾಷೆಯಲ್ಲಿ ಪ್ರಕಟಣೆ ಆರಂಭಿಸಿದ ಕೀರ್ತಿಗೆ ಭಾಜನವಾದದ್ದೂ ಚಂದಮಾಮ.

1981ರಲ್ಲಿ ಅಂಧರಿಗಾಗಿ ಬ್ರೈಲ್ ಎಡಿಷನ್ ಅನ್ನು ಹೊರ ತರಲು ಆರಂಭಿಸಿತ್ತು. ಆ ಮಟ್ಟದಲ್ಲಿ ಬೆಳೆದ ಹೆಮ್ಮೆ ಚಂದಮಾಮ ಕಾಮಿಕ್ಸ್‌‌ನದ್ದು. ಹೀಗೆ ಚಂದಮಾಮ ತನ್ನ ಅರವತ್ತು ಸಂವತ್ಸರಗಳ ಯಶೋಗಾಥೆಯಲ್ಲಿ ಏರಿದ ಎತ್ತರ ಮಾತ್ರ ಆಗಾದವಾದದ್ದು, 2003ರಲ್ಲಿ ಸಿಂಗಾಪುರದಲ್ಲಿ ಇಂಗ್ಲಿಷ್-ತಮಿಳ್ (ಸಿಂಗಾಪುರದಲ್ಲಿ ಅಂಬುಲಿಮಾಮಾ ಎಂಬ ಹೆಸರಿನಲ್ಲಿ ಪ್ರಕಟಣೆ ಕಾಣುತ್ತಿದ್ದು, ಇದನ್ನು ಅಲ್ಲಿನ ತಮಿಳು ಟಿಚರ್ಸ್ ಯೂನಿಯನ್ ಪುಸ್ತಕ ಹೊರತರುವ ಜವಾಬ್ದಾರಿ ವಹಿಸಿಕೊಂಡಿದೆ). ಭಾಷೆಯಲ್ಲಿ, ಉತ್ತರ ಅಮೆರಿಕದಲ್ಲಿ ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ಗುಜರಾತಿ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ.

ಸುಮಾರು 3 ಲಕ್ಷಕ್ಕೂ ಅಧಿಕ ಓದುಗರನ್ನು ಪಡೆದಿರುವ ಚಂದಮಾಮ, ಅಂದಾಜು ಏಳು ಲಕ್ಷ ಪ್ರಸಾರ ಸಂಖ್ಯೆಯನ್ನು ಹೊಂದಿದೆ. ಅಲ್ಲದೇ ಚಂದಮಾಮ ದೀರ್ಘಕಾಲ ಪ್ರಕಟಣೆ ಕಂಡ ಮಕ್ಕಳ ಮ್ಯಾಗಜೀನ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಲ್ಲದೆ, 2002ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲೂ ದಾಖಲೆ ಬರೆದಿದೆ. ಆದರೂ ನಮ್ಮನ್ನೆಲ್ಲ ಸಾಹಿತ್ಯದೆಡೆಗೆ ದೂಡಿದ, ಅರವತ್ತು ವರ್ಷಗಳನ್ನು ಪೂರೈಸಿದ ಚಂದಮಾಮಕ್ಕೊಂದು ಶುಭ ಹಾರೈಕೆ......