ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೨೧)

ಯಕ್ಷಗಾನ ಬಯಲಾಟ, ತಾಳಮದ್ದಳೆ
ನನ್ನೂರಿನ ನೆನಪುಗಳನ್ನು ಮಾಡುತ್ತಲೇ ನಮಗಿದ್ದ ಮನರಂಜನೆಯ ವಿಷಯಗಳು ಯಾವುವು? ಎಂದು ಯೋಚಿಸಿದಾಗ ಮೊದಲು ಹೊಳೆದದ್ದು ಯಕ್ಷಗಾನ ಬಯಲಾಟ, ಯಕ್ಷಗಾನ ತಾಳಮದ್ದಲೆ, ಹರಿಕತೆ, ಪುರಾಣವಾಚನ, ಆ ಬಳಿಕ ನಾಟಕ ಅದರಲ್ಲೂ ತುಳು ನಾಟಕ. ನಾನು ಮನರಂಜನೆ ಅಂದೆ. ಹೌದು ಆ ದಿನಗಳಲ್ಲಿ ಈ ಕಾರ್ಯಕ್ರಮಗಳಿಗೆ ಹೋಗುವುದು ಅಥವಾ ಹೋಗಲು ಅನುಮತಿ ನೀಡುವುದು ಅಥವಾ ಜತೆಗೆ ಕರೆದೊಯ್ಯವುದು ಇವೆಲ್ಲ ಅಷ್ಟು ಸುಲಭವಾಗಿರಲಿಲ್ಲ. ಜತೆಗೆ ಈ ಕಾರ್ಯಕ್ರಮಗಳಿಗೆ ಮನರಂಜನೆಯಲ್ಲದೆ ಬೇರೆ ಉದ್ದೇಶಗಳೂ ಇವೆ. ಅವು ಕಲಾ ಪ್ರಕಾರಗಳು, ಧಾರ್ಮಿಕ, ಸಾಮಾಜಿಕ ಚಿಂತನೆಗಳನ್ನು, ನೀತಿಗಳನ್ನು ಭೋದಿಸುತ್ತವೆ ಎಂಬೆಲ್ಲ ವಿಷಯಗಳು ಮಕ್ಕಳಾದ ನಮಗೆಲ್ಲಿ ಗೊತ್ತು. ಹಾಗೆಂದು ಅವುಗಳನ್ನು ಗುರುತಿಸಿ ಹೇಳಿದವರೂ ಇಲ್ಲ. ಅವುಗಳೆಲ್ಲ ನಮ್ಮ ಪಾಲಿಗೆ ಮನರಂಜನೆಯ ಸಂದರ್ಭಗಳೇ.
ಆಗ ಯಕ್ಷಗಾನ ಬಯಲಾಟಗಳು ನನ್ನ ಬಿಜೈ ಊರಲ್ಲಿ ಆಗುತ್ತಿದ್ದ ಸ್ಥಳಗಳೆಂದರೆ ಒಂದು ಈಗಿನ ಪಾಯಸ್ ಹಿಲ್ ರಸ್ತೆಯ ಪ್ರಾರಂಭದಲ್ಲಿದ್ದ ಖಾಲಿ ಜಾಗ. ಇನ್ನೊಂದು ಕೆಎಸ್ಸಾರ್ಟಿಸಿ ಎದುರುಗಡೆ ಇಂದು ಪಂಚಮಿ ಹೋಟೇಲ್ ಮತ್ತು ಅದರ ಪಕ್ಕದಲ್ಲಿರುವ ಅಂಗಡಿಗಳಿರುವ ಜಾಗ. ಹಾಗೆಯೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಆವರಣದೊಳಗಿರುವ ಡಿಪೋ ಇರುವ ಅಂದು ಗದ್ದೆಯಿದ್ದ ಜಾಗ. ಆಗ ಯಕ್ಷಗಾನ ಬಯಲಾಟ ಎಂದರೆ ಸಂಜೆ 7ರಿಂದ ಬೆಳಿಗ್ಗೆ 5 ಗಂಟೆಯವರೆಗೆ. ಯಕ್ಷಗಾನ ಬಯಲಾಟದ ವೇದಿಕೆ ಎಂದರೆ ನಾಲ್ಕು ಕಂಬಗಳು ನಾಲ್ಕು ದಿಕ್ಕಿನಲ್ಲಿ. ಕಂಬಗಳಿಗೆ ಬಣ್ಣದ ಕಾಗದಗಳನ್ನು ಸುತ್ತಿದರೆ ಅಲಂಕಾರ ಮುಗಿಯಿತು.
ವೇದಿಕೆಯ ಹಿಂದೆ ತೆಂಗಿನ ಮಡಲುಗಳನ್ನು ಜೋಡಿಸಿ ಮಾಡಿದ ಕೋಣೆ. ಅದುವೇ ಕಲಾವಿದರು ಬಣ್ಣ ಹಚ್ಚುವ ವೇಷದ ಉಡುಗೆ ತೊಡುಗೆ ತೊಡುವ ಚೌಕಿ. ಬೆಳಕಿನ ವೇದಿಕೆಯಲ್ಲಿ ತೂಗು ಹಾಕಿದ ಇಲ್ಲವೆ ಬದಿಯಲ್ಲಿ ಎತ್ತರದಲ್ಲಿಟ್ಟ ಗ್ಯಾಸ್ ಲೈಟುಗಳು. ಮೈಕುಗಳಿಲ್ಲ. ವೇದಿಕೆಗೆ, ಚೌಕಿಗೆ ಮೇಲು ಹೊದಿಕೆ ಇಲ್ಲ. ಆಕಾಶವೇ ಹೊದಿಕೆ ಭಾಗವತರ ತಲೆಯಲ್ಲಿ ಭರ್ಜರಿ ಮುಂಡಾಸು. ಬಹುಶಃ ತಲೆಗೆ ಇಬ್ಬನಿ ಬೀಳದಂತೆ ಹಾಗೂ ಅವರ ಕಂಠಕ್ಕೆ ಶೀತ ನೆಗೆಡಿ ಆಗದಂತೆ ಇರಬಹುದು. ಚೆಂಡೆ, ಮದ್ದಳೆ, ಶ್ರುತಿಯವರಿಗೆ ಮುಂಡಾಸು ಇರುತ್ತಿರಲಿಲ್ಲವಲ್ಲ ಅದರಿಂದಾಗಿ ನನಗೆ ಈ ಯೋಚನೆ ಬಂದಿರಬಹುದು.
ಯಾವ ಯಾವ ಮೇಳಗಳು ಎಂದರೆ ಕಟೀಲು ಮೇಳ, ಕೊರಗಪ್ಪ ಶೆಟ್ರ ಮೇಳ, ದೋಗ್ರ ಪೂಜಾರಿಯವರ ಮೇಳ, ಕುಂಡಾವು ಮೇಳ ಎಂಬ ನೆನಪಿನೊಂದಿಗೆ, ಭಾಗವತರುಗಳಾಗಿ ಹಿರಿಯ ಬಲಿಪ ಭಾಗವತರು, ದಾಮೋದರ ಮಂಡೆಚ್ಚರು, ಅಗರಿ ಭಾಗವತರು, ಇನ್ನೊಬ್ಬರನ್ನು ಕುಂಡೆಚ್ಚರು ಎಂದು ಹೇಳುತ್ತಿದ್ದುದನ್ನು ಕೇಳಿದ್ದೇನೆ ಅವರಿಗೆ ಅದು ಅಡ್ಡ ಹೆಸರಾಗಿ ಇದ್ದಿರಬೇಕೆಂದು ನೆನಪು. ಕೆಂಪು ಮುಂಡಾಸಿನ ಗಿಡ್ಡವ್ಯಕ್ತಿ. ಇವರೆಲ್ಲರ ಮುಖ ನೆನಪಿನೊಂದಿಗೆ ಇವರೆಲ್ಲರ ಹಾಡಿನ ಬೇರೆಬೇರೆ ಶೈಲಿಗಳು ನನಗೆ ಖುಷಿ ಕೊಟ್ಟವುಗಳೇ. ಇನ್ನು ಯಕ್ಷಗಾನದ ಪ್ರಸಂಗಗಳು ಸಾಮಾನ್ಯವಾಗಿ ದೇವಿಮಹಾತ್ಮೆ; ರಾಮಾಯಣ, ಮಹಾಭಾರತದ ಪ್ರಸಂಗಗಳು. ಅಲ್ಲದೆ ಕೋಟಿ ಚೆನ್ನಯ ಎನ್ನುವ ತುಳುನಾಡಿನ ವೀರರ ಚರಿತ್ರೆ. ಇದು ಕನ್ನಡದಲ್ಲೇ ಪ್ರದರ್ಶನ ಗೊಳ್ಳುತ್ತಿತ್ತು ಎಂಬ ನೆನಪು. ತುಳು ಯಕ್ಷಗಾನ ಪ್ರಸಂಗಗಳ ಪ್ರದರ್ಶನ ಇದ್ದ ನೆನಪು ಇಲ್ಲ.
ಯಕ್ಷಗಾನ ಇದೆ ಎನ್ನುವುದು ಬಾಯಿಂದ ಬಾಯಿಗೆ ತಿಳಿಯುತ್ತಿತ್ತು. ಜೊತೆಗೆ ಊರಿನ ಹತ್ತು ಸಮಸ್ತರು ಸೇರಿ ಆಡಿಸುವ ಆಟ, ನನ್ನ ಅಪ್ಪನಿಗೆ ವಿಷಯ ತಿಳಿಯುತ್ತಿತ್ತು. ಸಂಜೆ ಕತ್ತಲೆಯಾಗುತ್ತಲೇ ‘ಕೇಳಿ’ ಹೊಡೆಯುವ ಕ್ರಮ. ಅಂದರೆ ಚೆಂಡೆ ಬಾರಿಸುವುದು. ಆಟ ಇದೆ ಎನ್ನುವುದನ್ನು ನೆನಪಿಸಲು ಈ ಕ್ರಮ ಬಂದಿರಬೇಕು. ಇದನ್ನು ಕೇಳಿದ ಆಸುಪಾಸಿನ ಊರಿನ ಜನರಿಗೆ ಆಟಕ್ಕೆ ಬರಲು ಆಹ್ವಾನವೆಂದರೂ ಸರಿಯೇ. ‘ಕೇಳಿ’ಯನ್ನು ಕೇಳಿದ ಮಕ್ಕಳ ಕಾಲು ಕುಣಿಯಲು ಶುರು. ರಾತ್ರಿಯ ಊಟ ಬೇಗಬೇಗ ಮುಗಿಸಿ ಚಾಪೆ ಹಿಡಕೊಂಡು ಹೋಗಿ ಬಯಲಾಟದ ಬಯಲಲ್ಲಿ ಹಾಸಿಕೊಂಡು ತಮ್ಮ ಮನೆಯವರಿಗಾಗಿ ಜಾಗ ಕಾದಿರಿಸುವುದು ಮೊದಲ ಕೆಲಸ. ಅದಾಗಲೇ ಬಯಲಾಟದ ಜಾಗದ ಸುತ್ತ ಜನರು ಕುಳಿತು ಕೊಳ್ಳುವಷ್ಟು ಜಾಗಕ್ಕೆ ಹಗ್ಗದ ಬೇಲಿ ಕಟ್ಟಿರುತ್ತಾರೆ. ಆ ಬೇಲಿಯ ಹೊರಗೆ ಸಂತೆ ಬಂದಿರುತ್ತದೆ. ಸಂತೆಯಲ್ಲಿ ನೆಲಗಡಲೆ, ಹುರಿಗಡಲೆ, ಬಟಾಣಿ ಕಡಲೆಗಳದ್ದೇ ಮೇಲುಗೈ. ಜತೆಗೆ ಐಸ್‍ಕ್ಯಾಂಡಿಯ ಡಬ್ಬಗಳು ಸೈಕಲ್ ಮೇಲೆ. ಇನ್ನೊಂದು ಸಕ್ಕರೆ ಮಿಠಾಯಿಯನ್ನು ಹೊತ್ತು ಕೊಂಡಿರುವ ಕೋಲುಗಳು. ಜತೆಗೆ ಚುರುಮುರಿ ಮಾಡುವವನ ಅಂಗಡಿ. ರಾತ್ರಿಯಿಡೀ ನಿದ್ದೆಬಿಟ್ಟು ಯಕ್ಷಗಾನ ನೋಡಲು ಈ ತಿಂಡಿಗಳ ಸಹಾಯ ಬೇಕೇ ಬೇಕು ಚಿಕ್ಕವರಿಗೂ ದೊಡ್ಡವರಿಗೂ. ಆದುದರಿಂದಲೇ ಮಕ್ಕಳ ಕೈಗೆ ಒಂದಿಷ್ಟು ಪುಡಿ ಚಿಲ್ಲರೆ ನಾಣ್ಯಗಳು ಸಿಗುತ್ತಿತ್ತು. ಹೀಗೆ ಸುಮಾರಾಗಿ ಮಕ್ಕಳ ಸಭೆ ಸೇರಿದ ಕೂಡಲೇ ಕಟ್ಟವೇಷ (ಕಟ್ಟಿಯೇಸ) ಅಂದರೆ ಬಾಲ ವೇಷಗಳು, ಸ್ತ್ರೀವೇಷಗಳು ಬಂದು ಕುಣಿಯುತ್ತಿದ್ದುವು.
ಭಾಗವತರು, ಚೆಂಡೆ, ಮದ್ದಳೆಯವರೂ ಇರುತ್ತಿದ್ದರು. ಆದರೆ ಅವರ ಕುಣಿತ, ಹಾಡುಗಳು ಪೀಠಿಕೆಗಳಂತೆ ಇದ್ದರೂ ಮುಂದೆ ನಡೆಯುವ ಮುಖ್ಯ ಪ್ರಸಂಗಕ್ಕೆ ಅವು ಸೇರಿದವುಗಳಾಗಿರುವುದಿಲ್ಲ. ನಮ್ಮ ಪಾಲಿಗೆ ಅವು ಯಕ್ಷಗಾನ ಬಯಲಾಟವೇ. ಯಾಕೆಂದರೆ ನಿಜವಾದ ಪ್ರಸಂಗ ಶುರುವಾಗುವಾಗ ಮಕ್ಕಳಿಗೆಲ್ಲಾ ನಿದ್ದೆ ಬಂದಿರುತ್ತಿತ್ತು. ಮುಂದೆ ಯಕ್ಷಗಾನದ ಬಗೆಗಿನ ತಿಳುವಳಿಕೆ ಹೆಚ್ಚಿದಾಗ ಈ ಬಾಲ ವೇಷಗಳು, ಭಾಗವತರು, ಚೆಂಡೆ ಮದ್ದಳೆಯವರೆಲ್ಲ ಯಕ್ಷಗಾನ ಕಲಿಕೆಯ ಹಂತದವರು. ಅದು ಅವರ ಪಾಲಿಗೆ ವೇದಿಕೆಯ ಅಭ್ಯಾಸಗಳು ಎಂದು ತಿಳಿಯಿತು. ಸುಮಾರು ಒಂಭತ್ತು ಗಂಟೆಯ ವೇಳೆಗೆ ಮುಖ್ಯ ಭಾಗವತರು, ಹಿರಿಯ ಚೆಂಡೆ, ಮದ್ದಳೆ ವಾದಕರು ಬಂದು ಸೇರಿ ನಿಜವಾದ ಪ್ರಸಂಗ ಶುರುವಾಗುತ್ತಿತ್ತು. ಇಷ್ಟರಲ್ಲಿ ಸೇರಿದ ಮಕ್ಕಳ ಮನೆಯ ಹೆಂಗಸರು, ಗಂಡಸರು ಬಂದು ಕಾದಿರಿಸಿದ ಜಾಗದಲ್ಲಿ ಕುಳಿತ್ತಿರುತ್ತಿದ್ದರು. ಯಕ್ಷಗಾನದ ಕಥೆ ಮುಂದುವರಿಯುತ್ತಿದ್ದಂತೆಯೇ ತಡರಾತ್ರಿಯಲ್ಲಿ ಮಕ್ಕಳು ನಿದ್ದೆಯಿಂದ ಎದ್ದು ಬೆಚ್ಚಿ ಬೀಳುವಂಥಹ ಆರ್ಭಟ. ಆಗ ಹಿರಿಯರು ಮಕ್ಕಳನ್ನು ಎಬ್ಬಿಸಿ ಗಟ್ಟಿಯಾಗಿ ಹಿಡಿದುಕೊಂಡು ಭಯವಾಗದಂತೆ ನೋಡಿಕೊಳ್ಳುತ್ತಿದ್ದರು. ಈ ಆರ್ಭಟ ರಕ್ಕಸ ಪಾತ್ರದ್ದು. ಪ್ರತಿಯೊಂದು ಯಕ್ಷಗಾನದಲ್ಲೂ ಒಂದು ರಾಕ್ಷಸ ಪಾತ್ರ ಇರಲೇಬೇಕು. ಆ ಪಾತ್ರ ಸಭೆಯ ನಡುವಿನ ದಾರಿಯಲ್ಲಿ ಬರುವಾಗ ಅದರ ಎಡಬಲದಲ್ಲಿ ದೀವಟಿಗೆ ಅಥವಾ ಪಂಜು ಹಿಡಿದ ಇಬ್ಬರು ಅವರ ಇನ್ನೊಂದು ಕೈಯಲ್ಲಿ ಧೂಪದ ಬಟ್ಟಲು. ಅದರಿಂದ ಧೂಪವನ್ನು ತೆಗೆದು ತೆಗೆದು ದೀವಟಿಗೆಗೆ ರಾಕ್ಷಸನು ಹಾಕುತ್ತಿದ್ದರೆ ಒಮ್ಮೆಗೆ ಬೆಂಕಿ ಹೆಚ್ಚುವುದು. ಜೊತೆಗೆ ಅವನ ಆರ್ಭಟ. ಈ ದೃಶ್ಯವನ್ನು ನೋಡಿದ ಮಕ್ಕಳಿಗೆ ಮುಂದೆ ಭಯದ ಸಂಕೇತವಾಗಿ ಕಾಣುವುದೆಂದರೆ ರಕ್ಕಸನ ಪಾತ್ರವೇ. ಪ್ರಸಂಗಕ್ಕೆ ಸರಿಯಾಗಿ ಮಹಿಷಾಸುರ, ಶೂರ್ಪನಖಿ, ಕುಂಭಕರ್ಣ, ಕಂಸ, ಕೀಚಕ, ಮೊದಲಾದ ರಾಕ್ಷಸ ಪಾತ್ರಗಳು. ನಾವು ಮಕ್ಕಳು ಒಂದು ಯಕ್ಷಗಾನ ಬಯಲಾಟವನ್ನು ಒಂದೇ ಬಾರಿ ಪೂರ್ಣ ನೋಡಿರಲಾರೆವು. ಅದೇ ಅದೇ ಪ್ರಸಂಗವನ್ನು ಮತ್ತೆ ಮತ್ತೆ ನೋಡಿಯೇ ಇಡೀ ಕತೆ ತಿಳಿಯುತ್ತಿತ್ತು. ಈ ಯಕ್ಷಗಾನ ಬಯಲಾಟಗಳು ಸಾಮಾನ್ಯವಾಗಿ ಶನಿವಾರದ ರಾತ್ರಿ ನಡೆಯುತ್ತಿತ್ತು. ಅಪರೂಪದಲ್ಲಿ ದೇವಿಮಹಾತ್ಮೆಯನ್ನು ಶುಕ್ರವಾರ ಆಡಿಸುವುದೂ ಇತ್ತು. ದೇವಿ ಮಹಾತ್ಮೆಯ ಸುಂದರವಾದ ದೃಶ್ಯ ಎಂದರೆ ದೇವಿ ಉಯ್ಯಾಲೆಯಲ್ಲಿ ಕುಳಿತುಕೊಂಡು ತೂಗುವುದು. ಈ ದೃಶ್ಯ ಬಂದಾಗಲೂ ತಾಯಂದಿರು ಮಕ್ಕಳನ್ನು ಎಬ್ಬಿಸಿ ದೇವಿಯನ್ನು ನೋಡುವಂತೆ ಹೇಳುತ್ತಿದ್ದರು. ಮುಂದೆ ಯಕ್ಷಗಾನ ಬಯಲಾಟಗಳಿಗೆ ಅದ್ಭುತವಾಗಿ ಅಲಂಕೃತಗೊಂಡ, ವಿದ್ಯುದ್ದೀಪಗಳಿಂದ ಬೆಳಗುವ ವೇದಿಕೆಗಳು ಸಿದ್ಧವಾಗತೊಡಗಿದವು. ಹಾಗೆಯೇ ಯಕ್ಷಗಾನ ಇದೆ ಎಂದು ಹೇಳುವ ಪ್ರಚಾರ ಕಾರ್ಯಗಳು ಅಂದರೆ ಕಹಳೆ ಊದಿಕೊಂಡು ಹೇಳುವ ವಾಹನಗಳಲ್ಲಿ ಮೆಗಾ ಫೋನ್ ಹಿಡಿದುಕೊಂಡು ಹೇಳುವ ಮತ್ತು ಯಕ್ಷಗಾನದ ಪ್ರಸಂಗ, ಹಿಮ್ಮೇಳ, ಮುಮ್ಮೇಳದ ಕಲಾವಿದರ ಹೆಸರುಗಳುಳ್ಳ ಕರಪತ್ರಗಳನ್ನು ಬಿಸಾಡಿಕೊಂಡು ಹೋಗುವ ಕಾಲವೂ ಬಂತು. ನಾವು ಮಕ್ಕಳು ಅದನ್ನು ಹೆಕ್ಕುವುದಕ್ಕೆ ವಾಹನದ ಹಿಂದೆ ಓಡುತ್ತಿದ್ದುದೂ ಉಂಟು.
ಹೀಗೆ ವರ್ಷಗಳು ಸಾಗಿದ ಹಾಗೆಯೇ ಈ ಮೇಲಿನ ಬಯಲಾಟದ ಸ್ಥಳ ಮಾರ್ಪಾಡುಗೊಂಡವು. ಅಲ್ಲಿ ಮನೆಗಳು, ಅಂಗಡಿಗಳು ನಿರ್ಮಾಣವಾದವು. ಆಗ ನನ್ನೂರಿನ ಜನರು ಯಕ್ಷಗಾನ ಬಯಲಾಟ ನೋಡಲು ಉರ್ವಾಸ್ಟೋರ್ಸ್ ಮೈದಾನ (ಪಂಡ್‍ದಂಗಡಿ) ಉರ್ವಾಮಾರ್ಕೆಟ್ ಮೈದಾನ ಮತ್ತು ನೆಹರೂ ಮೈದಾನಿಗೆ ಹೋಗ ಬೇಕಾಗುತ್ತಿತ್ತು. ಉಚಿತವಾಗಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳು ಸಂಘಸಂಸ್ಥೆಗಳ ಆರ್ಥಿಕ ಲಾಭಕ್ಕೆ, ಟಿಕೆಟ್ ಕೊಂಡು ನೋಡುವ ಕ್ರಮ ಬೆಳೆಯಿತು. ಹೀಗಿದ್ದರೂ ಜನ ಟಿಕೆಟ್ ಕೊಂಡು ಆಟ ನೋಡುತ್ತಿದ್ದರು. ಇಂದು ಮೈದಾನಗಳಿಂದ ಕಟ್ಟಡದೊಳಗೆ, ಹಾಲ್‍ನೊಳಗೆ ಆಟ ನಡೆದರೂ, ಏಳೆಂಟು ತಾಸಿನ ಬಯಲಾಟ ಮೂರು ಗಂಟೆಗೆ ಇಳಿದರೂ ಯಕ್ಷಗಾನ ನೋಡುವ ಆಸಕ್ತರು ಇದ್ದಾರೆ ಎನ್ನುವುದೇ ಈ ಕಲೆಯ ವಿಶೇಷತೆ. ಹೀಗೆ ನನ್ನೂರಿನಲ್ಲಿ ನಡೆದ ಯಕ್ಷಗಾನಗಳಲ್ಲಿದ್ದ ಕಲಾವಿದರನ್ನು ಅವರ ಪಾತ್ರಗಳ ಮೂಲಕ ನೆನಪಿಸಿಕೊಳ್ಳಲು ಸಾಧ್ಯವಾಗುವುದು ಕೆಲವರನ್ನು ಮಾತ್ರ. ರಾಮದಾಸ್ ಸಾಮಗರು, ದೊಡ್ಡ ಸಾಮಗರು, ಕೋಳ್ಯೂರು ರಾಮಚಂದ್ರ ರಾವ್ ಹಾಗೆಯೇ ಮಿಜಾರ್ ಅಣ್ಣಪ್ಪರ ಹಾಸ್ಯ ಪಾತ್ರ. ಮತ್ತು ಬೇರೆಬೇರೆ ಮೇಳದ ದೇವಿ ಮಹಾತ್ಮೆಯ ದೇವಿ ಪಾತ್ರಗಳು ಹಾಗೂ ರಾಕ್ಷಸ ವೇಷಗಳು ಕಣ್ಮುಂದೆ ಬರುತ್ತವೆ. ಆದರೆ ಆ ಪಾತ್ರಗಳ ಮಾತುಗಾರಿಕೆ, ಕುಣಿತ, ಅಭಿನಯಗಳು ಯಾವುವೂ ಬಾಲ್ಯದ ಆ ದಿನಗಳಲ್ಲಿ ಅರ್ಥವಾಗಿರಲಿಲ್ಲ. ಹೀಗಿದ್ದರೂ ಯಕ್ಷಗಾನದ ಆಸಕ್ತಿಯನ್ನು ನಿರಂತರವಾಗಿಸಿ ಮುಂದೆ ಯಕ್ಷಗಾನ ಪಾತ್ರಗಳ ಗಾಂಭೀರ್ಯ, ಮಾತುಗಾರಿಕೆ ಅಭಿನಯ, ಕುಣಿತ ಎಲ್ಲವೂ ಸೇರಿ ಯಕ್ಷಗಾನ ಒಂದು ಪರಿಪೂರ್ಣವಾದ ಮನರಂಜನೆಯ ಕಲೆ ಎನ್ನುವುದು ಅರಿವಾಯಿತು. ಇಂತಹ ಯಕ್ಷಗಾನ ವನ್ನು ಕೇವಲ ಹಿಂದೂ ಜನಗಳೇ ನೋಡುತ್ತಿದ್ದರು ಎನ್ನುವ ಕಾಲವಲ್ಲ ಅದು. ನೋಡಿದರೆ ನೋಡಿದವರ ಧರ್ಮ ಹಾಳಾಯ್ತು ಎನ್ನುವ ಕಾಲವೂ ಆಗಿರಲಿಲ್ಲ. ಆದ್ದರಿಂದಲೇ ಕ್ರಿಶ್ಚಿಯನ್ ಸಮುದಾಯದವರು, ಮುಸ್ಲಿಮ್ ಸಮುದಾಯದವರೂ ಸೇರುತ್ತಿದ್ದರಾದರೂ ಅವರ ಹೆಂಗಸರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅವಕಾಶವಿರಲಿಲ್ಲ ಎಂದರೂ ಸರಿಯೇ. ಹಾಗೆಯೇ ಬ್ರಾಹ್ಮಣರ ಮನೆಯ ಹೆಂಗಸರೂ ಬರುತ್ತಿರಲಿಲ್ಲ ಎನ್ನುವುದೂ ನಿಜವೇ.
ಯಕ್ಷಗಾನ ತಾಳಮದ್ದಳೆಗಳಿಗೆ ಬಯಲಾಟದ ಪ್ರಸಂಗವೇ ಇದ್ದರೂ ಇದು ಇಡೀ ರಾತ್ರಿ ಇರುತ್ತಿರಲಿಲ್ಲ. ಪುರಾಣದ ಸಣ್ಣಸಣ್ಣ ಪ್ರಸಂಗಗಳನ್ನು ಆಧಾರಿಸಿ ನಡೆಯುತ್ತಿತ್ತು. ಇಲ್ಲಿಯೂ ಹಿಮ್ಮೇಳದಲ್ಲಿ ಭಾಗವತರು, ಮದ್ದಳೆಯವರು ಇರುತ್ತಿದ್ದರು. ವೇದಿಕೆಯಲ್ಲಿ ಪಾತ್ರಗಳು ತಮ್ಮ ನಿಜ ವೇಷದಲ್ಲಿ ಅಂದರೆ ಯಾವುದೇ ವೇಷಭೂಷಣ, ಮುಖಕ್ಕೆ ಅಲಂಕಾರಗಳಿಲ್ಲದೆ ಕುಳಿತು ತಮ್ಮ ಮಾತುಗಳನ್ನು ಸಂಭಾಷಣೆಯಲ್ಲಿ ಆಡುತ್ತಿದ್ದರು. ತಾಳಮದ್ದಳೆಗೆ ಯಕ್ಷಗಾನ ಬಯಲಾಟದ ಭಾಗವತರಲ್ಲದೆ ಬೇರೆಯವರೂ ಭಾಗವತರಾದುದು ಇದೆ. ಹಾಗೆಯೇ ಇಲ್ಲಿ ಪಾತ್ರ ವಹಿಸಿ ಮಾತನಾಡುವವರನ್ನು ಅರ್ಥಧಾರಿಗಳು ಎನ್ನುತ್ತಾರೆ. ಯಕ್ಷಗಾನ ಬಯಲಾಟದಲ್ಲಿ ವೇಷ ಹಾಕುವ ಎಲ್ಲರೂ ತಾಳಮದ್ದಳೆಯಲ್ಲಿ ಭಾಗವಹಿಸುತ್ತಿರಲಿಲ್ಲ. ತಾಳಮದ್ದಳೆಗೆ ವಿಶೇಷವಾಗಿ ಭಾಗವತರಾಗಿ ಬರುತ್ತಿದ್ದವರು ಮಂದಾರ ಕೇಶವ ಭಟ್ಟರು. ಹಾಗೆಯೇ ಮದ್ದಳೆಗಾರರಾಗಿದ್ದವರು ಡಿ. ಶಿವರಾವ್ ಎನ್ನುವವರು. ನನ್ನೂರಿನಲ್ಲಿ ತಾಳಮದ್ದಳೆ ನಡೆಯುತ್ತಿದ್ದ ಸ್ಥಳಗಳೆಂದರೆ ಕಾಪಿಕಾಡ್ ಶಾಲೆಯ ಆವರಣ, ಸೈಕಲ್ ಶಾಪ್ ಕೃಷ್ಣಪ್ಪಣ್ಣನವರ ಮನೆಯ ಎದುರುಗಡೆಯ ಜಾಗ. ಹಾಗೆಯೇ ಬಾಳಿಗಾ ಸ್ಟೋರ್ಸ್ ಮತ್ತು ಅಂದಿನ ಮುನ್ಸಿಪಲ್ ಆಸ್ಪತ್ರೆಯ ನಡುವಿನ ಉದ್ದನೆಯ ವಿಶಾಲವಾದ ಜಾಗ. ಇಂತಹ ತಾಳಮದ್ದಳೆ ಸಂಘಟಿಸುವಲ್ಲಿ ಸ್ವತಹ ಯಕ್ಷಗಾನ ಅರ್ಥದಾರಿಯಾಗಿದ್ದ ನನ್ನ ತಂದೆ ಕೊಂಡಾಣ ವಾಮನರು ಸಹಕರಿಸುತ್ತಿದ್ದರು. ಹೀಗೆ ನಡೆದ ಯಕ್ಷಗಾನಗಳಲ್ಲಿ ಹಿರಿಯರಾದ ಪೊಳಲಿ ಶಂಕರ ನಾರಾಯಣ ಶಾಸ್ತ್ರಿಗಳು, ಎಫ್.ಎಚ್. ಒಡೆಯರ್, ಶೆಡ್ಡೆ ಕೃಷ್ಣಮಲ್ಲಿ, ದೇರಾಜೆ ಸೀತಾರಾಮಯ್ಯ, ತಂದೆಯವರ ಸಹಪಾಠಿ ಕಾಂತ ರೈ, ಗೆಳೆಯರಾದ ಗುರುವಪ್ಪ ಮಾಸ್ತರ್, ಮಾಧವ ಆಚಾರ್ಯ, ಅಪ್ಪನಿಗಿಂತ ಕಿರಿಯರಾದ ಕುಂಬ್ಳೆ ಸುಂದರ್ ರಾವ್, ಬೋಳೂರು ಮುಂಡಪ್ಪ ಮಾಸ್ಟ್ರು, ಎಂ. ಪ್ರಭಾಕರ ಜೋಶಿ ಇವರನ್ನೆಲ್ಲಾ ನನ್ನೂರಿನಲ್ಲಿ ಕೇಳಿದ್ದೇನೆ, ನೋಡಿದ್ದೇನೆ. ನನ್ನೂರ ಜನರಿಗೂ ಇವೆರಲ್ಲ ಪರಿಚಿತರು. ಅವರಲ್ಲಿ ದೂರದ ಊರಿನ ಕಲಾವಿದರು ತಡರಾತ್ರಿ ತಾಳಮದ್ದಳೆ ಮುಗಿದ ಮೇಲೆ ನಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಆಗ ಬಸ್ಸು, ಹಾಗೂ ಇತರ ವಾಹನಗಳ ವ್ಯವಸ್ಥೆ ಸುಲಭವಾಗಿರಲಿಲ್ಲ. ನಡೆದು ಹೋಗಲು ಸಾಧ್ಯವಿರುವವರು ಮಾತ್ರ ಜತೆ ಸೇರಿಕೊಂಡು ಹೋಗುತ್ತಿದ್ದರು. ಮನೆಗೆ ಬಂದ ಕಲಾವಿದರು ನಿದ್ದೆ ಮಾಡದೆ ಮತ್ತೆ ನಮ್ಮ ಚಾವಡಿಯಲ್ಲಿ ಸಾಂದರ್ಭಿಕ ಚರ್ಚೆ ನಡೆಸುತ್ತಿದ್ದರು. ಪುರಾಣ ಪಾತ್ರಗಳ ಬಗೆಗಿನ ವಿಶ್ಲೇಷಣೆ, ಆಡಿದ ಮಾತುಗಳ ಬಗೆಗಿನ ಚರ್ಚೆಗಳು ನನಗೆ ಪುರಾಣಗಳ ಬಗೆಗೆ, ಪುರಾಣ ಪಾತ್ರಗಳ ಬಗೆಗೆ ಕಣ್ಮುಚ್ಚಿ, ಕಿವಿಮುಚ್ಚಿ ನಂಬಲೇ ಬೇಕಾದ ಅನಿವಾರ್ಯತೆ ಇಲ್ಲ ಎನ್ನುವುದನ್ನು ಮನದಟ್ಟು ಮಾಡಿದೆ ಎಂದರೆ ಸುಳ್ಳಲ್ಲ. ಈ ಕಾರಣದಿಂದಲೇ ನನಗೆ ಯಕ್ಷಗಾನ ಬಯಲಾಟಕ್ಕಿಂತ ಬುದ್ಧಿಗೆ ಆಹಾರ ಕೊಡುವ ತಾಳ ಮದ್ದಳೆ ಹೆಚ್ಚು ಮೆಚ್ಚುಗೆಯಾದುದು ಸತ್ಯ.
(ನನ್ನೂರು-ನನ್ನ ಜನ ಕೃತಿಯಿಂದ ಆಯ್ದ ಭಾಗ)