ಚಾಂದ್ರಮಾನ ಯುಗಾದಿಯ ಶುಭಾಶಯಗಳೊಂದಿಗೆ…

ಈ ಪ್ರಪಂಚವೊಂದು ಧರ್ಮ-ಕರ್ಮಗಳು,ಸಂಸ್ಕೃತಿ-ಸಂಪ್ರದಾಯಗಳಿಂದ ಕೂಡಿದ ಆಡೊಂಬಲವಾಗಿದೆ.ನಮ್ಮ ಭಾರತದೇಶವನ್ನು 'ಸಂಸ್ಕೃತಿಯ ತೊಟ್ಟಿಲು'ಎಂದೇ ಕರೆಯುವುದಿದೆ.ಹಬ್ಬಗಳೆಂದರೆ ವಿಶೇಷವೇ.ಮನೆಯ ಹೆಂಗಳೆಯರಿಗೆ ಸಂಭ್ರಮವೇ ಸಂಭ್ರಮ.ಚಾಂದ್ರಮಾನ ಯುಗಾದಿಯ ವೈಭವವೇ ವಿಶೇಷವಾದುದಾಗಿದೆ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹಿರಿಯ ಸಾಹಿತಿವರೇಣ್ಯರ ಕವನವೊಂದರ ಸಾಲುಗಳು ಎಷ್ಟೊಂದು ವಾಸ್ತವವಲ್ಲವೇ? 'ಆನಂದಮಯ ಈ ಜಗಹೃದಯ' ಕವಿವಾಣಿಯಂತೆ ಸಡಗರ,ಸಂಭ್ರಮದ ಈ ಹೊತ್ತು ವಿಶೇಷವಾದ್ದು. ಯುಗದ ಆದಿ, ಯುಗಾದಿ. 'ಯುಗ' ಎಂದರೆ 'ನೂತನ ವರ್ಷ'.'ಆದಿ' ಎಂದರೆ 'ಆರಂಭ'. 'ಋತೂನಾಂ ಕುಸುಮಾಕರ:' ಎನುವ ಗೀತಾಚಾರ್ಯರ ಮಾತಿನಂತೆ, ಋತುರಾಜ ವಸಂತನ ಆಗಮನ, ಎಲ್ಲವೂ ಶುಭವಾಗಲಿದೆ ಎನ್ನುವ ನಂಬಿಕೆ.
ಹಸಿರು ಚಿಗುರಿನ ಪ್ರಕೃತಿ ಮದುವಣಗಿತ್ತಿಯಂತೆ ಕಂಗೊಳಿಸುತ್ತಾಳೆ. ಕೋಗಿಲೆಗಳ ಕುಹೂ ಕುಹೂ ಗಾನ ಕರ್ಣಾನಂದ. ಮಾವಿನ ಚಿಗುರಿನ ತೋರಣ ಮನೆಯ ಮುಂಬಾಗಿಲಿಗೆ ಸ್ವಾಗತ ಕಮಾನು, ರಂಗಾದ ರಂಗವಲ್ಲಿ ಮನೆಯ ಮುಂಭಾಗದ ಅಂಗಳದಲ್ಲಿ ಕಣ್ಮನ ಸೆಳೆಯುತ್ತದೆ. ಕ್ರೋಧಿ ದೂರವಾಯಿತು,ವಿಶ್ವಾವಸು ಸಂವತ್ಸರದ ಆಗಮನ.
ಚೈತ್ರಮಾಸಿ ಜಗದ್ ಬ್ರಹ್ಮಾ ಸಸರ್ಜ ಪ್ರಥಮೇಹನಿ/
ಶುಕ್ಲಪಕ್ಷೇ ಸಮಗ್ರಂತು,ತದಾ ಸೂರ್ಯೋದಯೇ ಸತಿ//
ಇಂದು ಪ್ರಪಂಚ ಬ್ರಹ್ಮದೇವನಿಂದ ಸೃಷ್ಟಿಯಾದ ದಿನವೆಂದೂ ,ಚೈತ್ರ ಶುದ್ಧಪ್ರತಿಪದೆಯಂದು ಸೂರ್ಯೋದಯ ಸಮಯಕ್ಕೆ ಕಾಲಕ್ಕೆ ಸೃಷ್ಟಿಸಿದನೆಂದೂ ಪ್ರತೀತಿ. ಅದೇ ದಿನ ಗ್ರಹ, ನಕ್ಷತ್ರ, ಮಾಸ, ತಿಂಗಳು, ವರ್ಷ, ಕಾಲಗಳು, ಋತುಗಳನ್ನೂ ಸೃಷ್ಟಿಸಿ, ಕಾಲಗಣನೆಗೆ ಚಾಲನೆ ನೀಡಿದನೆಂದು ಬ್ರಹ್ಮಪುರಾಣದ ಉಲ್ಲೇಖ. ಹಿಂದೂಗಳೆಲ್ಲರಿಗೂ ಯುಗದ ಆದಿಯೇ ಯುಗಾದಿ. ವಸಂತ ಋತುವಿನ ಆಗಮನ. ಅನಿಷ್ಟ ನಿವಾರಣೆಯ, ದೇವತೋಪಾಸನೆಯ ತಿಂಗಳೀಗ. ಉಷಾ ಕಾಲದಲ್ಲಿ ಎದ್ದು ಅಭ್ಯಂಜನ ಸ್ನಾನವನ್ನು ಮಾಡುವರು. ನವವಸ್ತ್ರ ಧರಿಸುವುದು, ದೇವಸ್ಥಾನ ಭೇಟಿ, ಪಂಚಾಂಗ ಶ್ರವಣ, ರಾಶಿ ಭವಿಷ್ಯ ತಿಳಿಯುವುದು, ಬೇವು-ಬೆಲ್ಲ ಹಂಚಿ ತಿನ್ನುವುದು, ಇಷ್ಟದೇವರ ಪೂಜೆ, ಹೋಳಿಗೆ, ಗೋಡಂಬಿ ಪಾಯಸ ನೈವೇದ್ಯ ಇದೆಲ್ಲ ಯುಗಾದಿಯ ವಿಶೇಷಗಳು.
ವೈಜ್ಞಾನಿಕವಾಗಿ ನೋಡಿದರೆ ಚಂದ್ರನ ಚಲನೆಯನ್ನು ಆಧರಿಸಿ ಅಮಾವಾಸ್ಯೆ ಹುಣ್ಣಿಮೆಯ ಮೇಲೆ ಮಾಸ-ಗಣನೆ ಮಾಡಿ ಮಾಡುವ ಪದ್ಧತಿಯೇ ಚಾಂದ್ರಮಾನ ಯುಗಾದಿ. ವಿಷುವಿಗೆ ಸೌರಮಾನ ಯುಗಾದಿ. ಔಷಧೀಯ ಮನೋಭಾವದಿಂದ ನೋಡಿದರೆ ಬೇವು ಕ್ರಿಮಿಹಾರಕ, ನಂಜು ನಿರೋಧಕ.
ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯಚ/
ಸರ್ವಾರಿಷ್ಟ ವಿನಾಶಾಯ ನಿಂಬಸ್ಯ ದಳ ಭಕ್ಷಣಂ//
ಬೇವು, ಬೆಲ್ಲ, ಜೀರಿಗೆ ಮಿಶ್ರಣ ರೋಗನಿರೋಧಕ, ರೋಗಹರವಂತೆ.ಆಯುಷ್ಯ, ಸಕಲ ಸಂಪತ್ತು ನೀಡಿ, ಅನಿಷ್ಟಗಳ ದೂರ ಮಾಡುವುದಂತೆ. ದೇಹಕ್ಕೆ ತಂಪು ಬೇವಿನೆಲೆಗಳ ಸೇವನೆ. 'ಜೀವನವೆಲ್ಲ ಬೇವು ಬೆಲ್ಲ 'ಅಲ್ಲವೇ? ಕಷ್ಟ-ಸುಖಗಳ ಮಿಶ್ರಣ ಈ ಬದುಕಿನ ಹಾದಿ. ಎದುರಿಸುವ ಶಕ್ತಿ ಕೊಡಲಿ. ಪ್ರೀತಿ-ದ್ವೇಷ, ಸುಖ-ದು:ಖ, ಹಗಲು-ರಾತ್ರಿ, ನೋವು-ನಲಿವು ಸಂಕೇತವೇ ಬೇವು-ಬೆಲ್ಲ. "ಮೆಲ್ಲೋಣ ಒಳ್ಳೊಳ್ಳೆಯ ಮಾತನಾಡೋಣ" ಗುರು ಹಿರಿಯರಿಗೆ ನಮಿಸೋಣ. ಭೂತಕಾಲದ ಕಹಿ ವರ್ತಮಾನದ ಸಿಹಿಯಾಗಲಿ. ಹೊಸಮನೆ ಕೊಳ್ಳುವುದು, ಮೂಗಿಗೆ ನತ್ತು ಹಾಕುವುದು, ಜಾಗ ಖರೀದಿ, ಯಾವುದೇ ಒಳ್ಳೆಯ ಕೆಲಸದ ಆರಂಭ ಯುಗಾದಿಯಂದು ಕೈಗೊಂಡರೆ ಒಳ್ಳೆಯದಂತೆ.ಮನೆಯವರು, ಕುಟುಂಬ ಸದಸ್ಯರು ಒಟ್ಟಾಗಿ ಉಣ್ಣುವುದೇ ಸಂತಸ. ಪರಸ್ಪರ ಶುಭಾಶಯಗಳ ವಿನಿಮಯವೂ ಮಾಡುವರು. ಭಗವದ್ಗೀತೆಯಲ್ಲಿ ಹೇಳಿದಂತೆ "ಸುಖೇ ದು:ಖೇ ಸಮೇ ಕೃತ್ವಾ ಲಾಭಾಲಾಭೌ,ಜಯಾಜಯೌ" ಸುಖ-ದು:ಖಗಳ ಸಮರಸವೇ ಈ ಜೀವನ.ಅರಿಷಡ್ವರ್ಗಗಳ ಮೆಟ್ಟಿ ಪ್ರೀತಿ, ಮಮಕಾರ, ಸಹಕಾರ ಮನೋಭಾವ ಬರಲೆಂದು ಆಶಿಸೋಣ. ಭಗವಾನ್ ಶ್ರೀರಾಮಚಂದ್ರ ಎಲ್ಲರಿಗೂ ಸನ್ಮಂಗಲವನ್ನುಂಟು ಮಾಡಲಿ. ಕತ್ತಲೆಯಿಂದ ಬೆಳಕಿನತ್ತ ನಮ್ಮೆಲ್ಲರ ಬದುಕು ಸಾಗಲಿ.ಸಮಾಜದ ಜನರಲ್ಲಿ ಒಗ್ಗಟ್ಟು ಮೂಡಲಿ .ಸೃಷ್ಟಿಕರ್ತನಾದ ಬ್ರಹ್ಮದೇವನಿಗೆ ನಮೋ ನಮ:.ಕಾಲಪುರುಷನ, ವರ್ಷಾಧಿಪತಿಯ ಆರಾಧನೆ ಮಾಡೋಣ. ನೆರೆಹೊರೆಯವರಲ್ಲಿ ಉತ್ತಮ ಬಾಂಧವ್ಯವಿರಲಿ. ಚಾಂದ್ರಮಾನ ಯುಗಾದಿ ಚಂದಿರನ ಬೆಳದಿಂಗಳ ಬೆಳಕಿನಲಿ ಮಿಂದೇಳಲಿ, ಎಲ್ಲರಿಗೂ ಶುಭವಾಗಲಿ.
-ರತ್ನಾ ಕೆ ಭಟ್, ತಲಂಜೇರಿ ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ