ಚಾರಣದಲ್ಲಿ ಕಂಡ ಕರಿ ಪಿಕಳಾರ ಹಕ್ಕಿ

ಚಾರಣದಲ್ಲಿ ಕಂಡ ಕರಿ ಪಿಕಳಾರ ಹಕ್ಕಿ

ಬೇಸಗೆ ರಜೆಯಲ್ಲೊಂದು ದಿನ ಚಾರಣ ಹೋಗುವ ಮನಸ್ಸಾಯಿತು. ಗೆಳೆಯ ರಾಧಾಕೃಷ್ಣರ ಜೊತೆ ಮಾತನಾಡಿಕೊಂಡೆ. ಇಬ್ಬರೂ ಯೋಚಿಸಿದಂತೆ ಕುಮಾರಪರ್ವತ ಚಾರಣ ಹೋಗೋಣ ಎಂದು ತೀರ್ಮಾನಿಸಿದೆವು. ಮಧ್ಯಾಹ್ನದ ಹೊತ್ತಿಗೆ ಸುಬ್ರಹ್ಮಣ್ಯ ತಲುಪಿ ಊಟ ಮುಗಿಸಿದೆವು. ನಮ್ಮ ವಾಹನವನ್ನು ಪರಿಚಿತರೊಬ್ಬರ ಮನೆಯಲ್ಲಿ ನಿಲ್ಲಿಸಿ, ನಮ್ಮ ಬ್ಯಾಗುಗಳನ್ನು ತೆಗೆದುಕೊಂಡು ಚಾರಣ ಪ್ರಾರಂಭ ಮಾಡಿದೆವು. ಬೇಸಗೆಯ ಬಿಸಿಲು ಸ್ವಲ್ಪವೂ ನೆಲಕ್ಕೆ ತಾಗದಂತಹ ದಟ್ಟ ಕಾಡು. ಏರುತ್ತಲೇ ಹೋಗುವ ದಾರಿ. ಸುಸ್ತಾದಾಗ ದಣಿವಾರಿಸಿಕೊಂಡು ಮತ್ತೆ ನಡಿಗೆ ಪ್ರಾರಂಭ. ನಡುವೆ ಒಂದು ಕಡೆ ನಮ್ಮ ನೀರಿನ ಬಾಟಲಿಗಳನ್ನು ಮತ್ತೆ ತುಂಬಿಸಿಕೊಂಡು ಮುಂದುವರಿದೆವು. ಸಂಜೆ ಸೂರ್ಯನ ಬಿಸಿಲು ಇಳಿಯಲಾರಂಭಿಸಿದಾಗ ಕಾಡು ಮುಗಿದು, ದಟ್ಟ ಹುಲ್ಲುಗಾವಲು ತೆರೆದುಕೊಂಡಿತು. ಕೆಳಗೆ ಸುಂದರವಾದ ಕಣಿವೆಯಲ್ಲಿ ಸೂರ್ಯ ಪಶ್ಚಿಮದತ್ತ ವಾಲುತ್ತಿದ್ದ. ಗಿರಿಗದ್ದೆ ಎಂಬ ಚಂದದ ಜಾಗ ತಲುಪಿದೆವು. ಅಲ್ಲಿನ ಭಟ್ಟರ ಮನೆಯಲ್ಲಿ ಇಂದು ಉಳಿಯುವುದು, ನಾಳೆ ನಮ್ಮ ಪ್ರಯಾಣ ಮುಂದುವರೆಸುವುದು ಎಂದು ತೀರ್ಮಾನಿಸಿದೆವು. ಭಟ್ಟರ ಮನೆಯಲ್ಲಿ ಚಹಾ ಕುಡಿಯುವಾಗ ಅಲ್ಲಿಂದ ಮುಂದೆ ಕುಮಾರ ಪರ್ವತ ಅಥವಾ ಪುಷ್ಪಗಿರಿಗೆ ಹೋಗಲು ಅರಣ್ಯ ಇಲಾಖೆ ಈಗ ಅನುಮತಿ ನೀಡುತ್ತಿಲ್ಲ. ಬೇಸಗೆಯಲ್ಲಿ ಹುಲ್ಲು ಒಣಗಿರುವುದರಿಂದ ಕಾಡಿನ ಬೆಂಕಿ ಉಂಟಾಗುವ ಸಾಧ್ಯತೆ ಬಹಳ ಜಾಸ್ತಿ ಇದೆ. ಆದ್ದರಿಂದ ಮಳೆ ಬರುವ ವರೆಗೂ ಮುಂದೆ ಹೋಗಲು ಅನುಮತಿ ಇಲ್ಲ ಎಂಬ ಮಾಹಿತಿ ತಿಳಿಯಿತು. 

ಇಂದು ರಾತ್ರಿ ಗಿರಿಗದ್ದೆಯಲ್ಲೇ ಉಳಿದು ನಾಳೆ ಹಿಂದೆ ಹೋಗೋಣ ಎಂದು ತೀರ್ಮಾನಿಸಿದೆವು. ನಾನು ನನ್ನ ಕ್ಯಾಮರಾ ಹಿಡಿದುಕೊಂಡು ಕತ್ತಲಾಗುವವರೆಗೂ ಅಲ್ಲೇ ಸುತ್ತಾಡಿದೆ. ಇನ್ನೂ ಬೆಳಕು ಚೆನ್ನಾಗಿ ಇದ್ದುದರಿಂದ ಹುಲ್ಲುಗಾವಲಿನ ಪಕ್ಕ ಇಳಿಜಾರಿನಲ್ಲಿ ಸುಂದರವಾದ ಶೋಲಾ ಕಾಡುಗಳು ಸೊಗಸಾಗಿ ಕಾಣುತ್ತಿದ್ದವು. ಕೆಲವು ಮರಗಳಲ್ಲಿ ಹಣ್ಣುಗಳು ಬಿಟ್ಟಿದ್ದವು. ಮರದ ತುದಿಗಳಲ್ಲಿ ಯಾವುದೋ ಕಪ್ಪು ಬಣ್ಣದ ಹಕ್ಕಿ ಆಟವಾಡುತ್ತಾ ಹಾರುತ್ತಾ ಹಣ್ಣು ತಿನ್ನುವುದು ಕಾಣಿಸಿತು. 

ಕ್ಯಾಮರಾ ಜೂಮ್‌ ಮಾಡಿ ನೋಡಿದಾಗ ಕಪ್ಪು ಬಣ್ಣದ ಹಕ್ಕಿಯ ಕೊಕ್ಕು ಚಂದದ ಕೆಂಪು ಬಣ್ಣ ಇತ್ತು. ಕಾಲುಗಳು ಸಹಾ ಅದೇ ಕೆಂಪು ಬಣ್ಣ. ಉಳಿದ ದೇಹದ ಭಾಗಗಳೆಲ್ಲಾ ಚಂದದ ಕಪ್ಪು ಬಣ್ಣ. ಕಾಗೆ, ಅಥವಾ ಕಾಜಾಣದಂತೆ ಆ ಕಪ್ಪು ಬಣ್ಣ ಹೊಳೆಯುತ್ತಿರಲಿಲ್ಲ. ಕೊಕ್ಕು ಮತ್ತು ಕಾಲಿನ ಕೆಂಪು ಬಣ್ಣ, ದೇಹದ ಕಪ್ಪು ಬಣ್ಣದ ಜೊತೆ ಸುಂದರವಾಗಿ ಕಾಣುತ್ತಿತ್ತು. ಗಾತ್ರದಲ್ಲಿ ಬುಲ್ ಬುಲ್‌ ಹಕ್ಕಿಯಷ್ಟು ಇದ್ದು ಹಾರುವ ರೀತಿ ಮತ್ತು ಆಕಾರದಲ್ಲೂ ಅದನ್ನೇ ಹೋಲುತ್ತಿತ್ತು. ಜೊತೆಗೆ ಸುಂದರವಾಗಿ ಕೂಗುತ್ತಾ ಮರದಿಂದ ಮರಕ್ಕೆ ಹಾರಿ ಹಣ್ಣು ತಿನ್ನುತ್ತಿತ್ತು. ಗುರುತು ಹಿಡಿಯಲು ಇರಲಿ ಎಂದು ಒಂದೆರಡು ಫೋಟೋ ತೆಗೆದುಕೊಂಡೆ. ಮನೆಗೆ ಮರಳಿದ ಮೇಲೆ ಹಕ್ಕಿ ಯಾವುದೆಂದು ಹುಡುಕಿದಾಗಲೇ ತಿಳಿದದ್ದು ಇದು ಒಂದು ಜಾತಿಯ ಪಿಕಳಾರ ಹಕ್ಕಿ ಎಂದು. 

ಭಾರತದ ಪಶ್ಚಿಮ ಘಟ್ಟಪ್ರದೇಶದ ದಟ್ಟ ಕಾಡುಗಳಲ್ಲಿ ಮಾತ್ರ ಕಾಣಸಿಗುವ ಈ ಕಪ್ಪು ಪಿಕಳಾರ ಹಕ್ಕಿಯ ಮುಖ್ಯ ಆಹಾರ ಹಣ್ಣುಗಳು, ಹೂವಿನ ಮಕರಂದ ಮತ್ತು ಕೀಟಗಳು. ಮೇ ತಿಂಗಳಿನಿಂದ ಜುಲೈ ತಿಂಗಳ ನಡುವೆ ಇದರ ಸಂತಾನಾಭಿವೃದ್ಧಿ ಕಾಲ. ಕುದುರೆಮುಖ ಮತ್ತು ಆಗುಂಬೆಯ ಕಾಡುಗಳಲ್ಲಿಯೂ ಮೈನಾ ಮತ್ತು ಎಲೆಹಕ್ಕಿಗಳ ಜೊತೆಗೆ ಇವುಗಳು ಹಲವು ಬಾರಿ ನೋಡಲು ಸಿಕ್ಕಿವೆ. ದಟ್ಟ ಕಾಡಿನ ನಡುವೆ ಬದುಕುವ ಪುಟ್ಟ ಹಕ್ಕಿಯನ್ನು ನೋಡಿಯೇ ಸಂತೋಷ ಪಡಬೇಕು. 

ಕನ್ನಡ ಹೆಸರು: ಕರಿ ಪಿಕಳಾರ

ಇಂಗ್ಲೀಷ್‌ ಹೆಸರು: Black Bulbul / Square-tailed Bulbul

ವೈಜ್ಞಾನಿಕ ಹೆಸರು: Hypsipetes (leucocephalus) ganeesa

ಚಿತ್ರ ಮತ್ತು ಬರಹ : ಅರವಿಂದ ಕುಡ್ಲ, ಬಂಟ್ವಾಳ