ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ - ಮುಂದುವರೆದ ಲೇಖನ

ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ - ಮುಂದುವರೆದ ಲೇಖನ

ಬರಹ

ಆಂಜನೇಯ ಅವರ ಸಾಹಿತ್ಯ ಸೇವೆ:
ಬೆಂಗಾಳೂರ ಭಾಗ್ಯಲಕ್ಷ್ಮಿ ನಾಟಕ ಪ್ರಕಟಣೆಗೊಂಡಿದೆ. ಬೆಂಗಳೂರು ನಿರ್ಮಾಪಕ ರಾಜಾ ಕೆಂಪೇಗೌಡ, ಸಾಮ್ರಾಟ್ ಶ್ರೀಪುರುಷ (ಐತಿಹಾಸಿಕ) ಯಮಬಂಧು (ಹಾಸ್ಯಭರಿತ ನೀತಿಪ್ರಧಾನ), ಬೆಂಗಳೂರಿನಿಂದ ದೆಹಲಿಗೆ (ಪ್ರವಾಸ ಕಥನ) ಇದಲ್ಲದೆ ಸುಮಾರು ೩೦ಕ್ಕೂ ಹೆಚ್ಚು ಕವನಗಳು ಹಲವಾರು ಸಂಚಿಕೆಗಳಲ್ಲಿ ಪ್ರಕಟವಾಗಿವೆ. ನಾಟ್ಯರಾಗ ಎಂಬ ಹೆಸರಿನ ಇತಿಹಾಸಕ್ಕೆ ಸಂಬಂಧಿಸಿದ ಕವನಗಳನ್ನು ಸ್ವತಃ ರಚಿಸಿ, ಧ್ವನಿ ಸುರುಳಿಯಾಗಿ ಹೊರತಂದಿದ್ದಾರೆ. ಇವಲ್ಲದೆ ಹಲವಾರು ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಿಗೆ ಗೀತೆಗಳನ್ನೂ ರಚಿಸಿಕೊಟ್ಟಿದ್ದಾರೆ. ಇಮ್ಮಡಿ ಕೆಂಪೇಗೌಡ, ವಿಜಯನಗರ ಸಾಮ್ರಾಜ್ಯ ಸಂಬಂಧಿಸಿದ ರಾಜಶೇಖರ, ಗಂಗ ಸಾಮ್ರಾಟ್ ದುರ್ವಿನೀತ, ಕನಕದಾಸರನ್ನು ಕುರಿತ ಕನಕ ಕಂಡ ಕೃಷ್ಣ ಎಂಬ ನೃತ್ಯ ನಾಟಕ, ಭಾರತ ಸ್ವಾತಂತ್ರ್ಯಕ್ಕಾಗಿ ದುಡಿದ, ಮಡಿದ ಮಹನೀಯರನ್ನೊಳಗೊಂಡ ಸ್ವಾತಂತ್ರ್ಯ ಸಮರದೀಪ, ಕರ್ನಾಟಕ ಗಂಗರಿಂದ ಸ್ಥಾಪಿತವಾದ ಒರಿಸ್ಸಾದ ಕೋನಾರ್ಕ ಸೂರ್ಯ ದೇವಾಲಯದ ನಿರ್ಮಾಣ ಮತ್ತು ಅವರ ಸುತ್ತಾಮುತ್ತಾ ನಡೆದು ಬಂದ ಘಟನಾವಳಿಗಳ ಹಿನ್ನೆಲೆಯನ್ನೊಳಗೊಂಡ ಐತಿಹಾಸಿಕ ನಾಟಕ ಇವುಗಳನ್ನು ರಚಿಸುವ ಮಹದಾಸೆಯಿಂದ ವಿಷಯ ಸಂಗ್ರಹಣೆಯಲ್ಲಿ ಪ್ರಸ್ತುತ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ರಚಿಸಿ, ನಟಿಸಿ, ನಿರ್ದೇಶಿಸಿದ ಸಾಮ್ರಾಟ್ ಶ್ರೀಪುರುಷ, ಮಹಾಪ್ರಭು ಮಾಗಡಿ ಕೆಂಪೇಗೌಡ ನೃತ್ಯರೂಪಕ, ರಾಜಾ ಕೆಂಪೇಗೌಡ, ಬೆಂಗಾಳೂರ ಭಾಗ್ಯಲಕ್ಷ್ಮಿ ಎಂಬ ಐತಿಹಾಸಿಕ ನಾಟಕಗಳು ಹಲವಾರು ಪ್ರದರ್ಶನ ಕಂಡು ಇವರಿಗೆ ಒಳ್ಲೆಯ ಹೆಸರನ್ನು ತಂದುಕೊಟ್ಟಿದೆ.

ರಂಗಭೂಮಿ ಸೇವೆ:
೧೯೮೫ರಲ್ಲಿ ಕುರುಕ್ಷೇತ್ರ ನಾಟಕದ ಅರ್ಜುನನ ಪಾತ್ರವನ್ನು ವಹಿಸುವುದರ ಮೂಲಕ ಬಣ್ಣದ ಬದುಕನ್ನು ಪ್ರಾರಂಭಿಸಿ, ಇದುವರೆಗೆ ೬೦ಕ್ಕೂ ಹೆಚ್ಚಿನ ನಾಟಕಗಳ ೩೦೦ಕ್ಕೂ ಹೆಚ್ಚಿನ ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಇವರು ಮುಖ್ಯವಾಗಿ ಅಭಿನಯಿಸಿದ ನಾಟಕಗಳೆಂದರೆ ಕುರುಕ್ಷೇತ್ರ, ಸಾಮ್ರಾಟ್ ಸುಯೋಧನ, ಪಾಂಡು ವಿಜಯ, ಬೆಂಗಾಳೂರ ನಿರ್ಮಾಪಕ ರಾಜಾ ಕೆಂಪೇಗೌಡ, ಬೆಂಗಾಳೂರ ಭಾಗ್ಯಲಕ್ಷ್ಮಿ, ರಣಭೈರೇಗೌಡ, ಮಾಹಭಕ್ತೆ ದೊಡ್ಡಾಂಬೆ, ಗೌಡನ ಮಗಳು ದೇವತೆಯಾದಳು, ಮಹಾತ್ಯಾಗಿ ಲಕ್ಷ್ಮೀದೇವಿ, ಗಂಗ ಸಾಮ್ರಾಟ ಶ್ರೀಪುರುಷ, ಕಾರಣಿಕ ಶಿಶು, ನೀನು ಸಾಹುಕಾರನಾಗು, ಅಪರಂಜಿ, ತ್ಯಾಗಮಯಿ, ಫೋಟೋಗ್ರಾಫರ್ ಪುಟ್ತು, ದ್ರೋಹಿ, ಶಿಲಾಲಿಪಿ, ಯಮಬಂಧು, ಭಾರತ ರತ್ನ ನೇತಾಜಿ ಸುಭಾಷ್ ಚಂದ್ರ ಬೋಸ್, ಶ್ರೀ ಆದಿಚುಂಚನಗಿರಿ ಮಹಾತ್ಮೆ, ಬಸ್ ಕಂಡಕ್ಟರ್, ಕಿಟ್ಟುಪುಟ್ಟು, ಅಡಿಗೆ ಭಟ್ಟ, ವೈದ್ಯ ದೇವೋಭವ, ಹೆಣ್ಣಿಗೊಂದು ಗಂಡು, ಫಾರಿನ್ನಿಂದ ಬಂದ ಫ್ಯಾನ್ಸಿ, ಮಸಣದ ಮಕ್ಕಳು, ಸೀಕರಣೆ ಸಾವಿತ್ರಿ ಇತ್ಯಾದಿ.
ಕರ್ಪೂರದ ಬೆಂಕಿ, ಬಾದಷಹನ ದಂಡ ಇವು ಇವರು ದೂರದರ್ಶನದಲ್ಲಿ ಅಭಿನಯಿಸಿದ ನಾಟಕಗಳು.
ನಟನೆಯೊಂದೇ ಅಲ್ಲದೆ, ನಿರ್ದೇಶನ, ವಸ್ತ್ರ ವಿನ್ಯಾಸ, ನಾಟಕ ರಚನೆ, ನಿರ್ಮಾಣ-ನಿರ್ವಹಣೆ ಹೀಗೆ ಎಲ್ಲಾ ಪ್ರಾಕಾರಗಳಲ್ಲಿಯೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಾಟ್ಯರಾಗ ಮತ್ತು ಸ್ವಾತಂತ್ರ್ಯ ದೀಪಿಕೆ ಎಂಬ ಧ್ವನಿ ಸುರುಳಿಯನ್ನೂ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ವಿಚಾರ ಸಂಕಿರಣಗಳು:
ರಂಗಭೂಮಿಯ ಇತಿಹಾಸ, ಸಾಹಿತ್ಯ, ಸಾಮಾಜಿಕ ಸಮಸ್ಯೆಗಳು ಮುಂತಾದ ರಾಷ್ಟ್ರೀಯ ವಿಚಾರಧಾರೆಗಳ ಬಗ್ಗೆ ೨೦ಕ್ಕೂ ಹೆಚ್ಚಿನ ವಿಚಾರ ಸಂಕಿರಣಗಳನ್ನು ಏರ್ಪಡಿಸಿದ್ದಾರೆ. ಇವುಗಳಲ್ಲಿ ಕರ್ನಾಟಕದ ಹಲವಾರು ಸುಪ್ರಸಿದ್ಧ ಸಾಹಿತಿಗಳು ಹಾಗು ರಂಗಭೂಮಿ ತಜ್ಞರುಗಳು ಭಾಗವಹಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವುಗಳಲ್ಲಿ ಅತ್ಯಂತ ಗಮನಾರ್ಹವಾದುದೆಂದರೆ ೨೦೦೬ರಲ್ಲಿ ಇವರು ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಕಲೆಯಾದ ಹಾಡಿಯಾಟ ಮತ್ತು ಆಧುನಿಕ ರಂಗಭೂಮಿಯಲ್ಲಿ ಐತಿಹಾಸಿಕ ನಾಟಕಗಳ ಸಾಧ್ಯತೆ - ಸಾಮ್ರಾಟ್ ಶ್ರೀಪುರುಷ ಎಂಬ ವಿಚಾರ ಸಂಕಿರಣ ಹಾಗೆಯೆ ೨೦೦೭ರಲ್ಲಿ ಇವರು ನಡೆಸಿಕೊಟ್ಟ ವಿಚಾರ ಸಂಕಿರಣ -ರಂಗಭೂಮಿಯಲ್ಲಿ ನೃತ್ಯ ರೂಪಕದ ಸಮ್ಮಿಳನ ಸಾಧ್ಯತೆಗಳು ಕೆಂಪೇಗೌಡ - ರಂಗಭೂಮಿಯ ಇತಿಹಾಸಕ್ಕೆ ಹೊಸ ದಿಕ್ಕನ್ನು ತೋರಿಸಿಕೊಟ್ಟಿದೆ.

ಸಂಶೋಧಕರಾಗಿ:
ಮೇಲೆ ತಿಳಿಸಿದಂತೆ ಗಂಗ ಸಾಮ್ರಾಜ್ಯದ ಇತಿಹಾಸವನ್ನು ಆಮೂಲಾಗ್ರವಾಗಿ ಶೋಧಿಸಿ, ಸಂಸ್ಕರಿಸಿ ನಾಟಕ ರೂಪದಲ್ಲಿ ಜನತೆಗೆ ನೀಡಿರುವ ಆಂಜನೇಯ ಈಗ ಕರ್ನಾಟಕದ ಪ್ರಾಚೀನ ಕಲೆಗಳಲ್ಲಿ ಒಂದಾದ, ವಿನಾಶದ ಅಂಚನ್ನು ತಲಪಿರುವ ಸೋಮನ ಕುಣಿತ ಎಂಬ ಜಾನಪದ ಕಲಾಪ್ರಕಾರದ ಬಗ್ಗೆ ರಾಜ್ಯಾದ್ಯಂತ ಸುತ್ತಾಡಿ, ಭಾವಚಿತ್ರಗಳ ಸಮೇತ ವಿಷಯ ಸಂಗ್ರಹಣೆ ಮಾಡಿ ದಾಖಲಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ನಾಟಕ ಸಂಘಟಕರಾಗಿ:
ಸುಮಾರು ೩೦೦ಕ್ಕೂ ಹೆಚ್ಚಿನ ನಾಟಕಗಳ ಸಂಘಟಕರಾಗಿ ದುಡಿದಿದ್ದಾರೆ. ಇವರ ಸಂಘಟನಾ ನೇತೃತ್ವದಲ್ಲಿ ರಾಜಾ ಕೆಂಪೇಗೌಡ ೪೨ ಪ್ರದರ್ಶನಾಳನ್ನು ಕಂಡಿದ್ದರೆ, ಬೆಂಗಾಳೂರ ಭಾಗ್ಯಲಕ್ಷ್ಮಿ ೧೬ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಮಹಾಪ್ರಭು ಮಾಗಡಿ ಕೆಂಪೇಗೌಡ ಎಂಬ ನೃತ್ಯ ರೂಪಕ ೪೭ ಪ್ರದರ್ಶನಗಳನ್ನು ಕಂಡಿದ್ದು, ೫೦ನೇ ಪ್ರದರ್ಶನದತ್ತ ದಾಪುಗಾಲಿಡುತ್ತಿದೆ. ಇವರು ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನಾಟ್ಯಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಐತಿಹಾಸಿಕ ನಾಟಕಗಳನ್ನು ಪ್ರಯೋಗಿಸುವ ಸಂಸ್ಥೆ ಎಂಬ ಹೆಸರನ್ನು ಗಳಿಸಿದೆ.

ಸೇವೆ ಸಲ್ಲಿಸಿರುವ ಕಲಾ ಸಂಘ, ಸಂಸ್ಥೆಗಳು:
ಶ್ರೀ ಧನಲಕ್ಷ್ಮಿ ನಾಟಕ ಮಂಡಲಿ, ಶ್ರೀ ತ್ರಿಮೂರ್ತಿ ಕಲಾಕೂಟ, ಶ್ರೀ ಅಮರೇಶ್ವರ ವಿಜಯ ನಾಟಕ ಮಂಡಲಿ, ಶ್ರೇ ಬೆಂಗಾಳೂರ ಭಾಗ್ಯಲಕ್ಷ್ಮಿ ಕಲಾ ಸಂಘ, ಶ್ರೀ ರೇವಣಸಿದ್ದೇಶ್ವರ ನಾಟಕ ಸಂಘ, ಸುರಕ್ಶಾ ಮಹಿಳಾ ವಿವಿದೋದ್ಧೇಶ ಕ್ಷೇಮಾಭಿವ್ರುದ್ಧಿ ಸಾಂಸ್ಕೃತಿಕ ಸಾಮಾಜಿಕ ಮತ್ತು ದತ್ತಿ ಸಮಿತಿ, ನಾಟಕಮನೆ, ಇಂಟೆಗ್ರೇಟೆಡ್ ರೂರಲ್ ಎಜುಕೇಶನ್ ಸೊಸೈಟಿ, ಅಪ್ಪೂರಾವ್ ಕಲಾಕೂಟ, ರಂಗಕಹಳೆ, ರಂಗಸಾಧನ, ಸುರಕ್ಷಾ ರಂಗವೇದಿಕೆ, ಕಾಲಭೈರವ ಕಲಾನಿಕೇತನ ಇತ್ಯಾದಿ ಸಂಘ ಸಂಸ್ಥೆಗಳಲ್ಲಿ ನಟನಾಗಿ, ನಿರ್ದೇಶಕನಾಗಿ, ಸಂಘಟಕನಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ೧೯೯೧ರಲ್ಲಿ ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘವನ್ನು ಸ್ಥಾಪಿಸಿ, ಸ್ಥಾಪನಾ ಕಾರ್ಯದರ್ಶಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾ, ಸಂಘದಿಂದ ೬೦ಕ್ಕೂ ಹೆಚ್ಚಿನ ನಾಟಕಗಳ ೪೦೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವುದಲ್ಲದೆ, ಬಹಳಷ್ಟು ನಾಟಕಗಳಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿದ್ದಾರೆ. ೩೦ ನಾಟಕಗಳ ೮೦ ಪ್ರದರ್ಶನಗಳಿಗೆ ನಿರ್ದೇಶನದ ಹೊಣೆಯನ್ನೂ ಹೊತ್ತು ನಿಭಾಯಿಸಿದ್ದಾರೆ.

ಇವರಿಗೆ ಸಂದಿರುವ ಪ್ರಶಸ್ತಿ, ಪುರಸ್ಕಾರಗಳು:
ಇವರು ಭಾಗವಹಿಸಿ ಕಾರ್ಯನಿರ್ವಹಿಸಿದ ಹಾಗು ಇವರು ನಾಟಕರಂಗಕ್ಕೆ ನೀಡುತ್ತಿರುವ ಸೇವೆಯನ್ನು ಗಮನಿಸಿದ ಕರ್ನಾಟಕದ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಪುರಸ್ಕರಿಸಿದೆ. ಇವರಿಗೆ ಬಂದಿರುವ ಪ್ರಶಸ್ತಿಗಳ ಪಟ್ಟಿಯೆ ಬಹು ದೊಡ್ಡದಾಗಿದ್ದು, ಕೆಲವು ಹೀಗಿವೆ:
(೧) ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿ, (೨) ಅಭಿನವ ಶ್ರೀಪುರುಷ ಸಾಮ್ರಾಟ ಪ್ರಶಸ್ತಿ, (೩) ಸ್ರುಜನಶ್ರೀ ಪ್ರಶಸ್ತಿ, (೪) ಕರ್ನಾಟಕ ಪ್ರಿಯದರ್ಶಿನಿ ಪ್ರಶಸ್ತಿ, (೫) ವಿಶ್ವೇಶ್ವರಯ್ಯ ಸ್ಮಾರಕ ದಶಮಾನೋತ್ಸವದ ಪ್ರಶಸ್ತಿ, (೬) ಪದ್ಮಶ್ರೀ ಕಲಾವಾಹಿನಿ ಪ್ರಶಸ್ತಿ, (೭) ರಂಗರತ್ನ ಪ್ರಶಸ್ತಿ, (೮) ಕಲಾ ಮನೆಯಂಗಳ ಪ್ರಶಸ್ತಿ.

ಇವರು ಗಳಿಸಿರುವ ಬಿರುದುಗಳು:
(೧) ನಾಟ್ಯಪ್ರಿಯ ಮತ್ತು (೨) ಕಲಾಚತುರ

ಗಣ್ಯರ ಒಡನಾಟ:
ಇವರು ಸಾಹಿತ್ಯ ಸೇವೆ, ರಂಗ ಚಟುವಟಿಕೆಗಳಲ್ಲಿ ಅಭಿವ್ರುದ್ಧಿ ಹೊಂದಲು ಅನೇಕ ರಂಗಭೂಮಿ ಮತ್ತು ಸಾಹಿತ್ಯ ರಂಗದ ದಿಗ್ಗಜಗಳ ಸಂಪರ್ಕ ಮತ್ತು ಆಶೀರ್ವಾಧ ಹಾಗು ಒಡನಾಟವೇ ಕಾರಣವೆಂದು ಸೌಜನ್ಯದಿಂದ ಹೇಳುತ್ತಾರೆ. ಅಂತಹ ಮಹನೀಯರಲ್ಲಿ ಪ್ರಮುಖರೆಂದರೆ ಎಂ. ಚಂದ್ರಶೇಖರ್, ಪ್ರೊ. ದೊಡ್ಡರಂಗೇಗೌಡ, ಡಾ. ಹಂಪನಾ, ಗೋವಿಂದಳ್ಳಿ ದೇವೇಗೌಡ, ಹೆಚ್.ಎನ್. ಹೂಗಾರ್, ಗೋಪಾಲಕ್ರುಷ್ನ ನಾಯರಿ, ಪಾಟೀಲ ಪುಟ್ಟಪ್ಪ, ದೇಜಗೌ, ಹಾಮಾ ನಾಯಕ್, ಚೇತನ್ ರಾಮರಾವ್, ಐ.ಎಂ. ವಿಠಲ ಮೂರ್ತಿ, ನೇತಾಜಿ ಸುಭಾಷರ ಒಡನಾಡಿಯಾಗಿದ್ದ ಐ.ಎನ್.ಎ. ರಾಮರಾವ್, ಬೇಲೂರು ಕೃಷ್ನಮೂರ್ತಿ, ಕವಿತಾಕೃಷ್ನ, ಬಿವಿ. ಲಕ್ಷ್ಮಣ್, ಚನ್ನಬಸಯ್ಯ ಗುಬ್ಬಿ, ಎನ್.ಎಸ್. ಶಂಕರೇಗೌಡ, ಆನಂದಮೂರ್ತಿ, ಮಹಾಲಿಂಗು, ಮೈಸೂರು ರಮಾನಂದ್, ಆರ್. ರವೀಂದ್ರ, ಸಿ. ಲಕ್ಷ್ಮಣ್, ಚಿತ್ರದುರ್ಗ ರಾಜಣ್ಣ, ಬೆಳಗಲ್ ವೀರಣ್ಣ, ಹರಪನಹಳ್ಳಿ ಪರಶುರಾಂ, ಜಯರಾಂ ಗಂಗಟ್ಕರ್, ಮಲ್ಲಿಕಾರ್ಜುನ ಮಹಾಮನೆ, ಸುರೇಶ್ ಆನಗಳ್ಳಿ, ವಾಲ್ಟರ್ ಡಿಸೌಜಾ, ಕೆ.ವಿ. ನಾಗರಾಜಮೂರ್ತಿ, ಪ್ರೊ. ಎಂ.ಹೆಚ್. ಕೃಷ್ಣಯ್ಯ, ಗುಡಿಹಳ್ಳಿ ನಾಗರಾಜ, ಡಾ. ಬಿ.ವಿ. ರಾಜಾರಾಂ, ಡಾ. ರಮೇಶಚಂದ್ರ ದತ್ತ ಮುಂತಾದವರು.

ಸರಳ ಸ್ವಭಾವದ ಸೌಜನ್ಯಮೂರ್ತಿಯಾದ ಆಂಜನೇಯ ನಾಟಕವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ. ಅವರ ಚಿಕ್ಕ ಚೊಕ್ಕ ಸಂಸಾರವೂ ನಾಟಕವನ್ನೇ ತನ್ನ ಹವ್ಯಾಸವನ್ನಾಗಿಸಿಕೊಂಡಿದೆ. ಪತ್ನಿ ಪ್ರಭಾವತಿ, ಪುತ್ರಿ ಶಾಂತಲಾದೇವಿ, ಪುತ್ರ ಧನ್ವಂತ್ರಿ ನಾಟಕರಂಗದ ವಿವಿಧ ಪ್ರಾಕಾರಗಳಲ್ಲಿ ಈಗಾಗಲೇ ಸಿದ್ಧಿಯನ್ನು ಸಾಧಿಸಿದ್ದು, ಕಲಾರಂಗಕ್ಕೆ ಮಹತ್ವದ ಕಾಣಿಕೆಯನ್ನು ನೀಡುತ್ತಿದ್ದಾರೆ.

ಆಂಜನೇಯರ ಮತ್ತೊಂದು ವಿಶೇಷತೆ ಎಂದರೆ ಇವರು ಯುವ ಪೀಳಿಗೆಯಲ್ಲಿ ನಾಟಕದ ಬಗ್ಗೆ ಆಸಕ್ತಿ ಮತ್ತು ಕಾಳಜಿಯನ್ನು ನಿರಂತರವಾಗಿ ತುಂಬುತ್ತಿರುವುದು. ಇವರ ಗರಡಿಯಲ್ಲಿ ಹಲವಾರು ಯುವಕ ಯುವತಿಯರು ಪಳಗಿ ನಾಟಕಕ್ಕೆ ತಮ್ಮ ಕಾಣಿಕೆ ನೀಡುತ್ತಿರುವುದು, ಕಲಾಸೇವೆಯಲ್ಲಿ ಪ್ರಗತಿ ಹೊಂದುತ್ತಿರುವುದು ಒಂದು ವಿಶೇಷವೇ. ಒಂದರ್ಥದಲ್ಲಿ ಆಂಜನೇಯ ಒಂದು ನಾಟಕಶಾಲೆಯಿದ್ದಂತೆ. ಅದರ ಹೊರ ಒಳಗೆಲ್ಲಾ ನಾಟಕದ್ದೇ ಉಸಿರು, ಹೆಸರು.

ಇಂತಹ ಮಹನೀಯರಿಗೆ ದೇವರು ಆಯುರಾರೋಗ್ಯ ಐಶ್ವರ್ಯಾಧಿಗಳನ್ನು ಕೊಟ್ತು, ಬಹಳಕಾಲ ನಾಟಕರಂಗದ ಸೇವೆಯಲ್ಲಿ ತೊಡಗಿಸಿಕೊಂಡಿರಲು ಅನುವು ಮಾಡಿಕೊಡಲೆಂದು ಭಗವಂತನಲ್ಲಿ ನನ್ನ ಪ್ರಾರ್ಥನೆ.

ಎ.ವಿ. ನಾಗರಾಜು
ಅಗಿಲೆನಾತ್[ಎಟ್]ರಿಡಿಫ್ ಮೈಲ್.ಕಾಂ