ಚಾಲಕ - ಚಾಲನೆ ಎಂಬ ವೃತ್ತಿ ಮತ್ತು ಕಲೆ

ಚಾಲಕ - ಚಾಲನೆ ಎಂಬ ವೃತ್ತಿ ಮತ್ತು ಕಲೆ

ಡ್ರೈವಿಂಗ್ ಎಂಬುದು ಒಂದು ಯೋಜನಾ ಬದ್ದ ಮತ್ತು ಯೋಚನಾ ಬದ್ದ ವೃತ್ತಿ - ಕಲೆ, ಮುಖ್ಯವಾಗಿ ರಸ್ತೆ ಮೇಲಿನ ವಾಹನಗಳ ಚಾಲನೆಗೆ ಸಂಬಂಧಿಸಿದಂತೆ ಈ ಅಭಿಪ್ರಾಯ.

ಬೆಂಗಳೂರು - ಚೆನ್ನೈ,

ಬೆಂಗಳೂರು - ಮುಂಬಯಿ,

ಬೆಂಗಳೂರು - ಹೈದರಾಬಾದ್,

ಬೆಂಗಳೂರು - ಮೈಸೂರು,

ಬೆಂಗಳೂರು - ಮಂಗಳೂರು,

ಬೆಂಗಳೂರು - ತಿರುಪತಿ

ಸೇರಿ ಯಾವುದೇ ಮುಖ್ಯ ರಸ್ತೆಯಲ್ಲಿ ನೀವು ಪ್ರಯಾಣಿಸಿದರೆ ೮೦-೧೦೦ ಕಿಲೋಮೀಟರ್ ಒಳಗೆ ಕನಿಷ್ಠ ಒಂದಾದರೂ ಸಣ್ಣ ಪ್ರಮಾಣದ ಅಪಘಾತವಾಗಿರುವ ದೃಶ್ಯಗಳನ್ನು ದಿನನಿತ್ಯ ಕಾಣಬಹುದು. ಹಾಗೆಯೇ ನಗರ ಪ್ರದೇಶದಲ್ಲಿ ಓಡಾಡುವ ಎಲ್ಲಾ ವರ್ಗದ ಬಹುತೇಕ ವಾಹನಗಳು ಸ್ವಲ್ಪವಾದರೂ ಏಟು ತಿಂದಿರುವ ಲಕ್ಷಣಗಳನ್ನು ಗಮನಿಸಬಹುದು ಮತ್ತು ಅಲ್ಲಿನ ಜನರ ಅಪಘಾತಗಳ ನೆನಪುಗಳನ್ನು ಕೇಳಬಹುದು. ಇಷ್ಟೊಂದು ವ್ಯಾಪಕವಾದ ಅಪಘಾತಗಳಿಗೆ ಅಪರೂಪದ ತಾಂತ್ರಿಕ ಮತ್ತು ಆಕಸ್ಮಿಕ ಅಂಶಗಳನ್ನು ಹೊರತುಪಡಿಸಿ ನಮ್ಮ ಜನಗಳ ಒಟ್ಟು ವ್ಯಕ್ತಿತ್ವವೇ ಬಹುಮುಖ್ಯ ಕಾರಣವಾಗಿದೆ.

ಚಾಲನೆ ಎಂಬುದು ಒಂದು ಕಲಿಕೆಯ ಕ್ರಮ. ಶಿಕ್ಷಣ ಸಂಗೀತ ಸಾಹಿತ್ಯ ಕ್ರೀಡೆ ನಟನೆಯಂತೆ, ವೈದ್ಯಕೀಯ ಇಂಜಿನಿಯರಿಂಗ್ ಕಟ್ಟಡ ನಿರ್ಮಾಣ ಮುಂತಾದ ವೃತ್ತಿಗಳಂತೆ ಚಾಲನೆ ಕೂಡ ಅತ್ಯಂತ ಹೆಚ್ಚಿನ ಕುಶಲತೆ ಮತ್ತು ಏಕಾಗ್ರತೆ ಬಯಸುವ ಒಂದು ಕಲೆ ಮತ್ತು ವೃತ್ತಿ. ಕೇವಲ ಒಂದಷ್ಟು ಅಭ್ಯಾಸದ ನಂತರ ಸ್ಟೀರಿಂಗ್ ಹಿಡಿದು ಕ್ಲಚ್ ಮುಖಾಂತರ ಗೇರ್ ಬದಲಾಯಿಸಿ ವಾಹನವನ್ನು ಮುಂದಕ್ಕೆ ಓಡಿಸಿದ ಮಾತ್ರಕ್ಕೆ ಯಾರೂ ಚಾಲಕರಾಗುವುದಿಲ್ಲ. ಏಕೆಂದರೆ ರಸ್ತೆಗಳಲ್ಲಿ ನಾವು ಮಾತ್ರ ಓಡಾಡಲು ಇದು ನಮ್ಮಪ್ಪನ ಆಸ್ತಿಯಲ್ಲ. ಅಲ್ಲಿ ವಾಸಿಸುವ ಪ್ರತಿ ಜೀವಿಗೂ ಅದರಲ್ಲಿ ಪಾಲಿದೆ. 

ಚಾಲಕನಾದವನು ಆ ಎಲ್ಲಾ ಸಂಕೀರ್ಣ ವ್ಯವಸ್ಥೆಯನ್ನು ಅರಿತು ಯಾರಿಗೂ ಹಾನಿಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ವಾಹನ ಮುನ್ನಡೆಸಬೇಕು. ಅದೊಂದು ಯೋಜನಾಬದ್ಧ ಕಲೆಗಾರಿಕೆ. ಆದರೆ ನಮ್ಮಲ್ಲಿ ಈ ಬಗ್ಗೆ ತುಂಬಾ ಕೆಳಮಟ್ಟದ ಭಾವನೆ ಇದೆ. ಯಾರು ಬೇಕಾದರೂ ವಾಹನವನ್ನು ಸುಲಭವಾಗಿ ಚಲಾಯಿಸಬಹುದು ಎಂಬ ಅಭಿಪ್ರಾಯವಿದೆ. ಅದರ ಫಲವೇ ಇಡೀ ದೇಶದಲ್ಲಿ ಪ್ರತಿ ನಿಮಿಷಕ್ಕೆ ಹಲವಾರು ಪ್ರಾಣಗಳ ಮಾರಣ ಹೋಮ. ಮನೆಯಿಂದ ಹೊರಗೆ ಹೋದ ವ್ಯಕ್ತಿ ಮನೆಗೆ ಬರುವವರೆಗೂ ಅಭದ್ರತೆಯಿಂದ ಕಾಯುವ ಆತಂಕದ ನರಕಯಾತನೆ. ಇದಕ್ಕೆ ಕೆಲವು ಉದಾಹರಣೆ ಗಮನಿಸಿ.

ಎಷ್ಟೋ ಜನ ವಾಹನ ಖರೀದಿಸಿದ ನಂತರ ಚಾಲನಾ ಪರವಾನಗಿ ಪಡೆದು ಆಮೇಲೆ ರಸ್ತೆಗಳ ಮೇಲೆ ಪ್ರಯೋಗ ಮಾಡುತ್ತಾರೆ. ವಾಹನವನ್ನು ಮುಂದಕ್ಕೆ ಹಿಂದಕ್ಕೆ ಚಲಿಸುವುದು ಕಲಿತ ಮಾತ್ರಕ್ಕೆ ನಮಗೆ ಚಾಲನೆ ಬರುತ್ತದೆ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ.

ವಾಣಿಜ್ಯ ವಾಹನಗಳನ್ನು ತೀರ್ಥ ಯಾತ್ರೆಯ ಅಥವಾ ಪ್ರೇಕ್ಷಣೀಯ ಅಥವಾ ಸಮಾರಂಭಗಳಿಗೆ ತೆಗೆದುಕೊಂಡು ಹೋಗುವವರು ಅವರ ಸಮಯದ ಅನುಕೂಲಕ್ಕೆ ತಕ್ಕಂತೆ ಚಾಲಕನ ನಿದ್ರೆ ಮತ್ತು ಊಟವನ್ನು ನಿಯಂತ್ರಿಸುತ್ತಾರೆ. ರಾತ್ರಿ ವೇಳೆ ಪ್ರಯಾಣ ಮಾಡಿ ದಿನವಿಡೀ ಓಡಾಡಿಸಿ ಏನೋ ಮಹಾ ಉಪಕಾರ ಮಾಡಿದಂತೆ ಚಾಲಕರಿಗೆ ಒಂದೆರೆಡು ಗಂಟೆಗಳ ನಿದ್ರೆಗೆ ಅವಕಾಶ ನೀಡಿ ಮತ್ತೆ ರಾತ್ರಿಯ ವೇಳೆ ವಾಹನ ಚಲಾಯಿಸುವಂತೆ ಮಾಡುತ್ತಾರೆ. ಚಾಲಕ ಏನು ಸೂಪರ್ ಮ್ಯಾನ್ ಅಲ್ಲವಲ್ಲ. ಸಾಮಾನ್ಯವಾಗಿ ಹಗಲಿನಲ್ಲಿ ಎಷ್ಟೇ ನಿದ್ದೆ ಮಾಡಿದರು ರಾತ್ರಿ ೧೨- ೪ ಗಂಟೆಯ ನಡುವೆ ನಿದ್ರೆ ಎಳೆಯುವುದು ದೇಹದ ಸಹಜ ನಡವಳಿಕೆ. 

ದಿನಕ್ಕೆ ೮ ಗಂಟೆಗಳು ಮಾತ್ರ ಚಾಲನೆ, ಒಟ್ಟು ಸಮಾಜದ ಮನೋಭಾವ, ವ್ಯಕ್ತಿಗಳ ಸಂಪೂರ್ಣ ಮಾಗಿದ ವ್ಯಕ್ತಿತ್ವ, ಚಾಲನಾ ವೃತ್ತಿಗೆ ಗೌರವ, ಹದ್ದು ಮೀರಿದ ಚಾಲಕನಿಗೆ ತಕ್ಷಣವೇ ಲೈಸೆನ್ಸ್ ಅಮಾನತು, ಖಾಸಗಿ ವಾಹನಗಳ Fitness ಗೆ ತುಂಬಾ ಮಹತ್ವ ಮುಂತಾದ ಅನೇಕ ಕ್ರಮಗಳನ್ನು ಕೈಗೊಂಡರೆ ಮಾತ್ರ ಅಪಘಾತಗಳು ಕಡಿಮೆಯಾಗಬಹುದು.

ಕೇವಲ ಘಟನೆ ನಡೆದಾಗ ಯಾವನೋ ಒಬ್ಬ RTO ಅಥವಾ ಡ್ರೈವರ್ ಅಥವಾ ವಾಹನ ಮಾಲೀಕ ಅಥವಾ ‌ರಸ್ತೆ ನಿರ್ಮಿಸಿದವ ಅಥವಾ ವಾಹನ ನಿರ್ಮಿಸಿದವನ ಮೇಲೆ ಕ್ರಮ ಕೈಗೊಂಡರೆ ಅಪಘಾತಗಳು ನಿಲ್ಲುವುದಿಲ್ಲ. ಎಂದಿನಂತೆ ಸಾವು ಗೋಳಾಟ ವಿಧಿಲೀಲೆ ದುರಾದೃಷ್ಟ ಎಂದು ಸಮಾಧಾನ ಮಾಡಿಕೊಳ್ಳಬೇಕಷ್ಟೆ. ನೀವು ಯಾವುದೇ ರೀತಿಯ ವಾಹನ ಚಾಲಕರಾಗಿದ್ದರೂ ದಯವಿಟ್ಟು ವಾಹನ ಚಾಲನೆ ಒಂದು ಬಹುದೊಡ್ಡ ಕಲೆ ಮತ್ತು ಅದೇ ಸಮಯದಲ್ಲಿ ಒಂದು ದೊಡ್ಡ ಜವಾಬ್ದಾರಿ ಎಂಬ ಮನೋಭಾವದಿಂದ ವಾಹನ ಚಲಾಯಿಸಿ. ಆಗ ಕನಿಷ್ಠ ಇದರಿಂದಾಗುವ ಅನಾಹುತ ತಪ್ಪಿಸಬಹುದು.

  • ಜ್ಞಾನ ಭಿಕ್ಷಾ ಪಾದಯಾತ್ರೆಯ 244 ನೆಯ ದಿನ ಚಿತ್ರದುರ್ಗ ಜಿಲ್ಲೆಯ ಹೊಸ ದುರ್ಗಾ ತಾಲ್ಲೂಕಿನಿಂದ ಸುಮಾರು 17 ಕಿಲೋಮೀಟರ್ ದೂರದ ಸಾಣೇಹಳ್ಳಿ ಗ್ರಾಮ ತಲುಪಿತು ಮತ್ತು ಅಲ್ಲಿಯೇ ವಾಸ್ತವ್ಯ ಹೂಡಿತು

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಇಂಟರ್ನೆಟ್ ತಾಣ