ಚಾ, ಕಾಪಿ, ಪೆಪ್ಸಿ, ಕೋಲಾ : ಕಾಲು, ಬಾಲ, ಮೂಲ
’ತಲೆಹರಟೆ ಪುರಾಣ’ವೆಂಬ ೧೯ನೇ ಪುರಾಣದಲ್ಲಿ ಚಾ ಕಾಪಿಗಳ ಉಗಮೋಲ್ಲೇಖ ಇರುವ ಬಗ್ಗೆ ಯಾರೋ ಪ್ರಗಲ್ಭ ’ಪನ್’ಡಿತರು ಸಂಶೋಧಿಸಿ (ಚಾ ಕಾಪಿ ಶೋಧಿಸಿದಂತೆ ಶೋಧಿಸಿ) ಬರೆದ ಪ್ರ(ಚಂಡ)ಬಂಧವೊಂದು ನನ್ನ ಕಿರಿಯ ಮಿತ್ರ ಪರಾಂಜಪೆಯವರ ಮಿಂಚಂಚೆಪೆಟ್ಟಿಗೆಗೆ ಬಂದುಬಿದ್ದದ್ದೇ ತಡ, ಪರಾಂಜಪೆಯವರು ಆ ಮಿಂಚಂಚೆ ಪುರಾಣವನ್ನು ನನಗೂ ಸೇರಿದಂತೆ ತಮ್ಮೆಲ್ಲ ಮಿತ್ರರಿಗೂ (ಮಿಂಚಂಚೆ ದ್ವಾರಾ) ಕಳಿಸುವ ಮೂಲಕ ನನ್ನಂಥವರ ಮನಸ್ಸಿನಲ್ಲಿ ಮಿಂಚಿನ ಸಂಚಲನಕ್ಕೆ ಕಾರಣೀ’ಭೂತ’ರಾಗಿದ್ದಾರೆ.
’ಭಲೆ ಭಲೆ!’ ಎನ್ನುವಂತೆ ’ತಲೆಹರಟೆ ಪುರಾಣ’ ಕೊರೆದಿರುವ ಆ ಪನ್ಡಿತ ಮಹಾಆಶಯರು ಯಾರೋ, ತಮ್ಮ ಅಭಿಧಾನವನ್ನು ಅನಾವರಣಗೊಳಿಸಿದ್ದಿದ್ದರೆ ಬೇಷಿತ್ತು, ಇರಲಿ.
’ನ ಭಯಂ ಚಾಸ್ತಿ ಜಾಗೃತಃ’, ಅಂದರೆ, ’ಚಾ ಕುಡಿದವನಿಗೆ ಯಾವ ಭಯವೂ ಇಲ್ಲ’, ಎಂದು ಕರೆಕ್ಟಾಗಿ ಹೇಳಿರುವ ಸದರಿ ಪನ್ಡಿತರು ಚಹಾವನ್ನು ಭಾರತಕ್ಕೆ ತಂದವರು ಟಾಟಾ ಎಂದು ಅಪ್ಪಣೆಕೊಡಿಸಿದ್ದಾರೆ. ಈ ಬಗ್ಗೆ ನನ್ನ ಎಕ್ಸ್-ಪರ್ಟ್ ಒಪಿನಿಯನ್ ಇಂತಿದೆ.
ಟೀಟೀಯನ್ನು, ಅದಕ್ಕಿಂತ ಒಂದು ಹೆಜ್ಜೆ ಹಿಂದಿದ್ದ ಟಾಟಾ ಅಲ್ಲದೆ ಇನ್ನ್ಯಾರು ಹೊತ್ತು ತರಲು ಸಾಧ್ಯ?
ಭಾರತದಲ್ಲಿ ಟೀಯನ್ನು ಚಾ ಎಂದು ಕರೆಯಲು ಕಾರಣವೇನೆಂಬುದನ್ನು ನಾನು ಕಂಡು ಕುಡಿದಿದ್ದೇನೆ, ಕ್ಷಮಿಸಿ, ಕಂಡುಹಿಡಿದಿದ್ದೇನೆ.
’ಕುವಲಯಾನಂದ’ದ ಸುಭಾಷಿತವೊಂದು ಇಂತಿದೆ.
’ಚಾತಕಸ್ತ್ರಿಚತುರಾನ್ ಪಯಃಕಣಾನ್
ಯಾಚತೇ ಜಲಧರಂ ಪಿಪಾಸಯಾ’.
ಅಂದರೆ, ’ಬಾಯಾರಿಕೆಯಿಂದಾಗಿ ಚಾತಕಪಕ್ಷಿಯು ಮೋಡದ ಬಳಿ ಮೂರ್ನಾಲ್ಕು ನೀರಹನಿಗಳನ್ನು ಬೇಡುತ್ತದೆ’, ಎಂದು ಇದರ ಅರ್ಥ.
ನಾವೂ ’ಚಾ’ತಕ ಪಕ್ಷಿಯಂತೆ ಕಾತರಪಟ್ಟು ಗುಟುಕರಿಸುತ್ತೇವಾದ್ದರಿಂದ ಅದು ಚಾ.
ಚಾ ಎಂಬುದು ರಾಮನ ಕಾಲದಲ್ಲೇ ಇತ್ತೆಂಬುದಕ್ಕೂ ನನ್ನ ಬಳಿ ಆಧಾರ ಇದೆ.
ಈ ’ಚಾ’ಟುಪದ್ಯ ನೋಡಿ.
’ವನೇ ಚರಾಮಃ ವಸು ಚಾ ಹರಾಮಃ
ನದೀಸ್ತರಾಮಃ ನ ಭಯಂ ಸ್ಮರಾಮಃ
ಇತ್ಥಂ ಬ್ರುವಂತೋಪಿ ವನೇ ಕಿರಾತಾಃ
ಮುಕ್ತಿಂ ಗತಾ ರಾಮಪದಾನುಷಂಗಾತ್’.
ಇಲ್ಲಿ, ’ವನೇ ಚರಾಮಃ ವಸು ಚಾ ಹರಾಮಃ’ ಎಂಬುದರ ಅರ್ಥ, ’ವನದಲ್ಲಿ ಸಂಚರಿಸೋಣ ಮತ್ತು ಐಶ್ವರ್ಯ ಅಪಹರಿಸೋಣ’, ಎಂದು. ಕಳ್ಳರ ಗುಂಪೊಂದು ಕಾಡಿನಲ್ಲಿ ಈ ರೀತಿ ಮಾತಾಡಿಕೊಳ್ಳುತ್ತಿತ್ತಂತೆ.
ಕಳ್ಳರ ಈ ಸಂಭಾಷಣೆಯ ಉತ್ತರಾರ್ಧದಲ್ಲಡಗಿರುವ ಇನ್ನೊಂದು ಅರ್ಥ ಇಂತಿದೆ.
’ವಸು ಚಾ ಹರಾಮಃ’ ಅಂದರೆ,
’ಚಾ ಎಂಬ ದ್ರವ್ಯ ಬಲು ಹರಾಮಕೋರವಾದದ್ದು’, ಎಂದರ್ಥ.
ಈ ವಿವಿಧಾರ್ಥಕ ಪದ್ಯವನ್ನು ಎಳೆಎಳೆಯಾಗಿ ಎಳೆದು ನೋಡಿದಾಗ, ಚಾ ಎಂಬ ಹೆಸರು ರಾಮನ ಕಾಲದಲ್ಲೇ ಇತ್ತೆಂದು ಈ ಆನಂದರಾಮನಿಗೆ ಬಲವಾಗಿ ಅನ್ನಿಸುತ್ತಿದೆ.
ಇದೇ ಪದ್ಯದ ’ಬ್ರುವಂತೋಪಿ’ ಪದದಿಂದಲೇ ’ಬ್ರೂ’ ಕಾಪಿ ತಯಾರಾಗಿರಬಹುದೆಂದೂ ನನಗೆ ಅನುಮಾನ.
ಕಾಪಿ ಕತೆ
ಕಾಲಕೂಟ, ಪೀಯೂಷಗಳ ಮೊದಲಕ್ಷರಗಳನ್ನು ಸೇರಿಸಿ ಕಾಪಿ ಮಾಡಲಾಯಿತೆಂದು, ಅಲ್ಲಲ್ಲ, ಕಾಪಿ ಎಂದು ಹೆಸರಿಡಲಾಯಿತೆಂದು ತಮ್ಮ ಚಹಾಪ್ರಬಂಧದಲ್ಲಿ, ಕ್ಷಮಿಸಿ, ಮಹಾಪ್ರಬಂಧದಲ್ಲಿ ಸದರಿ ಅನಾಮಧೇಯ ತಲೆಹರಟೆ ಪುರಾಣೇಶ್ವರ ಪನ್ಡಿತರು ಪುನ್ಗಿ ಊದಿದ್ದಾರೆ. ನನ್ನ ಪ್ರಕಾರ ’ಕಾಪಿ’ ಎಂಬ ಹೆಸರು ಬರಲು ಕಾರಣ ಬೇರೆಯೇ ಇದೆ.
’ಕಾಕಃ ಕೃಷ್ಣಃ ಪಿಕಃ ಕೃಷ್ಣಃ’, ಅನ್ನುತ್ತದೆ ’ಕುವಲಯಾನಂದ’ದ ಒಂದು ಸೂಕ್ತಿ.
ಕಾಕವೂ ಕಪ್ಪು, ಪಿಕವೂ ಕಪ್ಪು.
ಅಂತೆಯೇ, ಕಪ್ಪು ತುಂಬ ಇರುವ (ಹಾಲಿಲ್ಲದ) ಪೇಯವೂ ಕಪ್ಪು.
ಎಂದೇ, ಈ ಪೇಯ ’ಕಾ’ಕ - ’ಪಿ’ಕಗಳ ತಿಕಗಳನ್ನು ಕೈಬಿಟ್ಟು ಮುಖಗಳನ್ನು ಮಾತ್ರ ಕೂಡಿಸಿ ಹೆಸರಿಟ್ಟುಕೊಂಡು ’ಕಾಪಿ’ಯಾಯಿತು.
ಪೆಪ್ಸಿ-ಕೋಲಾ
ತಮ್ಮ ಪುರಾಣದ ಕೊನೆಯಲ್ಲಿ ತಲೆಹರಟೇಶ್ವರರು ಪೆಪ್ಸಿ ಕೋಲಾಹಲ, ಅಲ್ಲಅಲ್ಲ, ಪೆಪ್ಸಿ-ಕೋಲಾ ಮೂಲ ತಿಳಿಯಲಿಚ್ಛಿಸಿದ್ದಾರೆ. ಪೆಪ್ಸಿ ಕೋಲಾ ಮೂಲ ಇದೋ ಇಂತಿದೆ.
’ಪೇಶಲಮಪಿ ಖಲವಚನಂ ದಹತಿತರಾಂ ಮಾನಸಂ ಸುತತ್ತ್ವವಿದಾಂ’ ಎನ್ನುತ್ತದೆ ’ಕಾವ್ಯಪ್ರಕಾಶ’.
’ದುಷ್ಟರ ಮಾತು ಮೃದುವಾಗಿದ್ದರೂ ತತ್ತ್ವಜ್ಞರ ಮನಸ್ಸನ್ನು ಅತಿಯಾಗಿ ಸುಡುತ್ತದೆ’, ಎಂದು ಇದರರ್ಥ.
ಕುಡಿಯಲು ಹಿತವಾಗಿದ್ದರೂ ಕರುಳನ್ನು ಅತಿಯಾಗಿ ಸುಡುತ್ತದೆಂದೇ ಅಂಥ ಕಾಲಾಪಾನಿಯ ಹೆಸರು ’ಪೇಶ...’.
ಪೇಶ ಎಂಬುದು ಕಾಲಕ್ರಮದಲ್ಲಿ ಪೇಶಿ ಆಗಿ, ಪೇಪ್ಶಿ ಆಗಿ, ಪೇಪ್ಸಿ ಆಗಿ, ಪೆಪ್ಸಿ ಆಯಿತು.
ಇದನ್ನು ಕುಡಿದು ಉಲ್ಲಸಿತನಾದ ಇಂದ್ರನು, ’ಮುಂದೆ ಈ ಪೇಯವನ್ನು ನನ್ನ ಹೆಸರಿನವಳೇ ಆಳಲಿ’, ಎಂದು ಹರಸಿದನು.
ಇನ್ನು, ಕೋಲಾ ದ ಉತ್ಪತ್ತಿ, ಕ್ಷಮಿಸಿ, ವ್ಯುತ್ಪತ್ತಿ ಬಗ್ಗೆ.
’ಕೋ ನ ಯಾತಿ ವಶಂ ಲೋಕೇ ಮುಖೇ ಪಿಂಡೇನ ಪೂರಿತಃ’.
ಅಂದರೆ, ’ಬಾಯಿಗೆ ಮುತ್ತು, ಕ್ಷಮಿಸಿ, ತುತ್ತು ಕೊಟ್ಟರೆ ಯಾರುತಾನೇ ವಶವಾಗುವುದಿಲ್ಲ!’
’ಲಾಲಯೇದ್ಬಾಲಕಂ ತಾವದ್ಯಾವದತ್ರ ವಿಮುಗ್ಧತಾ’.
ಅಂದರೆ, ’ಮಗನು ಚಿಕ್ಕವನಿರುವಾಗ ತಂದೆಯು ಅವನನ್ನು ಮುದ್ದಿಸಬೇಕು’.
ಈ ಸುಭಾಷಿತದ್ವಯದ ಸ್ಫೂರ್ತಿಯಿಂದ ತಂದೆಯೊಬ್ಬನು ತನ್ನ ಪುಟ್ಟ ಮಗನ ಬಾಯಿಗೆ ಕರಿನೀರಿನ ಬಾಟಲಿ ಇಟ್ಟು ಮುದ್ದಿಸಿ, ಅಳುತ್ತಿದ್ದ ಅವನನ್ನು ಸುಮ್ಮನಾಗಿಸಿದನು. ಅಂದಿನಿಂದ ಆ ಕರಿನೀರಿಗೆ ’ಕೋ ನ ಯಾತಿ..’ ಮತ್ತು ’ಲಾಲಯೇತ್..’ಗಳ ಮೊದಲಕ್ಷರಗಳ ಮರ್ಯಾದೆ ಸಂದು ಅದು ’ಕೋಲಾ’ ಆಯಿತು.
ಉಪಸಂಹಾರ
ಎಲ್ಲೋ ಕುಳಿತು ಅನಾಮಧೇಯರಾಗಿ ತಲೆಹರಟೆ ಬರೆದು ನನ್ನ ತಲೆತಿಂದ ಪುರಾಣ ಪನ್ಡಿತರೇ,
ಸದರಿ ’ತಲೆಹರಟೆ ಪುರಾಣ’ವನ್ನು ನನ್ನ ತಲೆಗಂಟಿಸಿದ ಪರಾಂಜಪೆಯವರೇ,
ಚಾ, ಕಾಪಿ, ಪೆಪ್ಸಿ, ಕೋಲಾಗಳ ಬಗ್ಗೆ ನನ್ನ ಸಂಶೋಧನೆಯನ್ನು ಒದರಿರುವ ನಾನೀಗ ಫಲವೊಂದರ ಬಗ್ಗೆಯೂ ನನ್ನ ದೃಷ್ಟಿ’ಕೋಣ’ವನ್ನು ಒದರಿಸಿಬಿಡುತ್ತೇನೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಏನು ಹೇಳಿದ್ದಾನೆ?
’ಕರ್ಮಣ್ಯೇ ವ್ಯಾಧಿಕಾರಸ್ತೇ ಮಾಫಲೇಷು ಕದಾಚನ’, ಎಂದಿದ್ದಾನೆ.
ಇದರರ್ಥ ಏನು ಗೊತ್ತೆ?
’ಎಂದಿಗೂ ಮಾವಿನಹಣ್ಣನ್ನು ತಿನ್ನುತ್ತಲೇ ಇರುವುದರಿಂದಾಗಿ ನಿಮಗೆ ವ್ಯಾಧಿಗಳು ಬರುತ್ತವೆ. ಏನು ಮಾಡೋದು, ನಿಮ್ಮ ಕರ್ಮ!’
ಇತಿ, ಆನಂದಪುರಾಣಂ ಸಂಪೂರ್ಣಂ.