ಚಿಗುರ ತೋರಣ
ಕವನ
ಹೊನ್ನ ಬಣ್ಣಕೆ ಜಗದ ಪ್ರಕೃತಿಯು
ನಲಿಯುತಾ ತಾನ್ ಕುಣಿಯಿತು
ಮತ್ತೆ ಮಾವಿನ ಚಿಗುರ ತೋರಣ
ಸವಿಯ ಗಾಳಿಗೆ ತೊನೆಯಿತು
ನೀರ ಹನಿಗಳು ಎಲೆಯ ಮೇಲ್ಗಡೆ
ಬೀಳುತಿರೆ ತಾನ್ ಮೆರೆಯಿತು
ನಾಚಿ ಹೋಗಿಹ ಪುಷ್ಪ ಕುಲಗಳು
ಮೋಹದಾಳದಿ ನಲುಗಿತು
ಚಿಣ್ಣರೆಲ್ಲರ ಧ್ವನಿಯ ಕಲರವ
ಸುತ್ತ ಓಣಿಲಿ ಹರಡಿತು
ಪಕ್ಷಿ ಸಂಕುಲ ಕೋಟೆ ಸುತ್ತುತ
ಹರುಷ ಪಡುತಲಿ ಹಾರಿತು
ಮೂಲೆ ಕಂಬವ ಹಿಡಿದು ಮಲಗಿದ
ರೈತನೆದ್ದನು ಬೇಗದಿ
ಹೆಗಲ ಮೇಲೆಯೆ ನೊಗವನಿಡುತಲಿ
ಉಳುಮೆಗೈದನು ಚಂದದಿ
ತಂಪು ಮನಸ್ಸಲಿ ಬಂದ ಕಿರಣವು
ಜಲವ ತಬ್ಬುತ ಮಲಗಿತು
ಮನೆಯ ಒಳಗಿನ ಮಧುರ ಸ್ವರವದು
ಕಿಟಕಿ ಹೊರಗದು ಇಣುಕಿತು
ಮೌನ ಮುರಿಯುತ ಮಾತು ಸಾಗಲು
ಮನವು ಹಾಡುತ ಸುಖಿಸಿತು
ಜಗವು ಹೀಗೆಯೆ ನಗುತ ನಲಿಯಲು
ಪ್ರೇಮ ಸೌಧವು ತುಂಬಿತು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
