ಚಿನ್ನ ಕಳ್ಳಸಾಗಣೆ : ಸತ್ಯ ಹೊರಬರಲಿ

ಚಿತ್ರನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣವು ದಿನಗಳೆದಂತೆ ಹೆಚ್ಚೆಚ್ಚು ನಿಗೂಢವಾಗುತ್ತ ಸಾಗುತ್ತಿದೆ. ಈ ಚಿನ್ನ ಕಳ್ಳಸಾಗಣೆಯಲ್ಲಿ ಅವರೊಬ್ಬರೇ ಶಾಮೀಲಾಗಿರುವುದಲ್ಲ, ಬದಲಾಗಿ ಇನ್ನಿತರ ಹಲವಾರು ‘ದೊಡ್ಡ’ ಮನುಷ್ಯರೂ ಶಾಮೀಲಾಗಿದ್ದಾರೆ ಎಂಬ ಶಂಕೆ ಹೆಚ್ಚೆಚ್ಚು ಧೃಢವಾಗುತ್ತಿದೆ. ಕಲವು ವರ್ಷಗಳಿಂದಲೇ ಆಕೆಯ ಮೂಲಕ ಈ ದಂಧೆ ನಡೆಯುತ್ತಿತ್ತು ಹಾಗೂ ಆಕೆ ಕಾನೂನಿನ ಕೈಗೆ ಸಿಲುಕದೆ ಸುರಕ್ಷಿತವಾಗಿ ಬರುವಂತಾಗಲು ‘ಉನ್ನತ ಮೂಲದವರು’ ಸಾಕಷ್ಟು ವ್ಯವಸ್ಥೆ ಮಾಡುತ್ತಿದ್ದರು ಎಂಬ ಅನುಮಾನಗಳೂ ಗಟ್ಟಿಗೊಳ್ಳುತ್ತಿವೆ. ಮುಖ್ಯವಾಗಿ ರನ್ಯಾ ರಾವ್ ಚಿನ್ನದೊಂದಿಗೆ ದುಬೈಯಿಂದ ಬಂದಾಗಲೆಲ್ಲ ಸೂಕ್ತ ತಪಾಸಣೆಗೆ ಒಳಪಡದೆ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಅವಕಾಶ ಪಡೆಯುತ್ತಿದ್ದುದು ಆಶ್ಚರ್ಯದ ವಿಷಯವೇ ಸರಿ. ಆಕೆಯ ಮಲತಂದೆ ಹಿರಿಯ ಪೋಲೀಸ್ ಅಧಿಕಾರಿಯಾಗಿದ್ದು, ತಮ್ಮ ಕುಟುಂಬದ ಪ್ರಭಾವವನ್ನು ಬಳಸಿಕೊಂಡು ರನ್ಯಾ ರಾವ್ ತಪಾಸಣೆ ತಪ್ಪಿಸಿಕೊಳ್ಳುತ್ತಿದ್ದರು ಎಂಬಂತಹ ಆರೋಪಗಳು ಕೇಳಿಬಂದಿವೆ. ಪೋಲೀಸ್ ಬೆಂಗಾವಲಿನೊಂದಿಗೆ ಆಕೆ ವಿಮಾನ ನಿಲ್ದಾಣದಿಂದ ತೆರಳುತ್ತಿದ್ದುದು ಕೂಡಾ ಈ ಅನುಮಾನವನ್ನು ದಟ್ಟಗೊಳಿಸಿದೆ. ಇದೇ ವೇಳೆ, ಕೆಲವು ಸಚಿವರ ನಂಟೂ ಈ ಚಿನ್ನ ಕಳ್ಳಸಾಗಣೆ ಜಾಲದಲ್ಲಿ ಇದೆ ಎಂಬಂತಹ ಆರೋಪಗಳೂ ಕೇಳಿಬರುತ್ತಿದ್ದು, ಇದು ಈ ಜಾಲವು ವಿಸ್ತಾರವಾಗಿ ಹರಡಿರುವುದರ ದ್ಯೋತಕವಾದಂತಿದೆ.
ರನ್ಯಾ ರಾವ್ ರಿಂದ ಕಂದಾಯ ಗುಪ್ತಚರ ಇಲಾಖೆ (ಡಿಆರ್ ಐ) ವಶಪಡಿಸಿಕೊಂಡುದು ಸುಮಾರು ೧೨.೫೬ ಕೋಟಿ ರೂ. ಮೌಲ್ಯದ ೧೪.೮ ಕಿಲೋ ತೂಕದ ಚಿನ್ನವನ್ನು, ಕಳೆದೊಂದು ತಿಂಗಳಲ್ಲಿ ರನ್ಯಾ ರಾವ್ ೨೭ ಬಾರಿ ದುಬೈ ಪ್ರಯಾಣ ಮಾಡಿ ಬಂದಿದ್ದಾರೆಂದು ಹೇಳಲಾಗಿದೆ. ಪ್ರತಿ ಬಾರಿಯೂ ದೊಡ್ದ ಪ್ರಮಾಣದಲ್ಲಿ ಚಿನ್ನವನ್ನು ತರುತ್ತಿದ್ದರು ಎಂಬುದಾಗಿ ಡಿ ಆರ್ ಐ ಹೇಳಿದೆ. ಹೀಗೆ ನಿರಂತರವಾಗಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿರಬೇಕಾದರೆ ಹಾಗೂ ಈವರೆಗೆ ತಪಾಸಣೆಯಲ್ಲೂ ಸಿಕ್ಕಿ ಬೀಳಲಿಲ್ಲವೆಂದಾದರೆ ನಮ್ಮ ವ್ಯವಸ್ಥೆಯಲ್ಲೇ ಲೋಪವಿರುವುದು ಕಂಡುಬರುತ್ತದೆ ಹಾಗೂ ಕೆಲವು ‘ಉನ್ನತ’ ವ್ಯಕ್ತಿಗಳು ತಮ್ಮ ಪ್ರಭಾವವನ್ನು ಬಳಸಿಕೊಂಡಿರುವುದು ನಿಚ್ಚಳವಾಗುತ್ತದೆ. ಈ ಪ್ರಕರಣವು ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ಸ್ವಪ್ನಾ ಸುರೇಶ್ ಎಂಬಾಕೆ ರಾಜಕೀಯ ಪ್ರಭಾವ ಬಳಸಿಕೊಂಡು ೧೦ ಕಿಲೋ ಚಿನ್ನ ಕಳ್ಳಸಾಗಣೆ ಮಾಡಿ ತಂದುದನ್ನು ನೆನಪಿಸುವಂತಿದೆ.
ರನ್ಯಾ ರಾವ್ ಪ್ರಕರಣದಲ್ಲಿ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಬೇಕಾದ ಅಗತ್ಯವಿದೆ. ಈ ಜಾಲದಲ್ಲಿ ಒಳಗೊಂಡಿರುವ ಪ್ರತಿಯೊಬ್ಬರ ಗುರುತು ಬಹಿರಂಗವಾಗುವಂತೆ ಮಾಡಬೇಕಾಗಿದೆ. ಚಿನ್ನ ಕಳ್ಳಸಾಗಣೆ ತಡೆಯಲು ಇನ್ನಷ್ಟು ಬಿಗಿಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೩-೦೩-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ