ಚಿಪ್ಕೋ ಆಂದೋಲನ: ಹಿಮಾಲಯದ ಅರಣ್ಯ ರಕ್ಷಣೆಗೆ ಜನಾಂದೋಲನ

ಚಿಪ್ಕೋ ಆಂದೋಲನ: ಹಿಮಾಲಯದ ಅರಣ್ಯ ರಕ್ಷಣೆಗೆ ಜನಾಂದೋಲನ

೨೦೧೮ರಲ್ಲಿ ಕೇರಳದಲ್ಲಿ ಮತ್ತು ಕರ್ನಾಟಕದ ಕೊಡಗಿನಲ್ಲಿ ಮಹಾಮಳೆ ಹಾಗೂ ಮಹಾನೆರೆಯಿಂದಾದ ಜೀವಹಾನಿ ಮತ್ತು ಸೊತ್ತು ಹಾನಿಯ ನೆನಪು ಮಾಸುವ ಮುನ್ನ ೨೦೧೯ರಲ್ಲಿ ಪುನಃ ಅಂತಹದೇ ಅನಾಹುತ. ಇದಕ್ಕೆ ಮುಖ್ಯ ಕಾರಣ ಪಶ್ಚಿಮಘಟ್ಟಗಳಲ್ಲಿ ಕಾಡಿನ ಮಹಾನಾಶ ಎಂಬುದನ್ನು ತಿಳಿಯಲು ಯಾವುದೇ ಸಂಶೋಧನೆ ಅಗತ್ಯವಿಲ್ಲ.
ಈ ಸಂದರ್ಭದಲ್ಲಿ, ಐದಾರು ದಶಕಗಳ ಮುಂಚೆಯೇ ಹಿಮಾಲಯ ಪರ್ವತ ಶ್ರೇಣಿಯ ಉದ್ದಕ್ಕೂ ಸುಂದರಲಾಲ್ ಬಹುಗುಣ “ಚಿಪ್ಕೋ” (ಮರಗಳನ್ನು ರಕ್ಷಿಸಲಿಕ್ಕಾಗಿ ಅಪ್ಪಿಕೋ) ಆಂದೋಲನದ ಮೂಲಕ ಅರಣ್ಯ ರಕ್ಷಣೆ ಮಾಡಿದ್ದನ್ನು ನೆನಪು ಮಾಡಿಕೊಳ್ಳುವುದು ಅಗತ್ಯ.
ಆ ಜಗತ್ಪ್ರಸಿದ್ಧ ಆಂದೋಲನ ಹಿಮಾಲಯದ ತಪ್ಪಲಿನ ಹಳ್ಳಿಹಳ್ಳಿಗೆ ಹಬ್ಬಿದ ಬಗೆ ಅರ್ಥವಾಗಬೇಕಾದರೆ ಸುಂದರಲಾಲ್ ಬಹುಗುಣ ವಿವಿಧ ಆಂದೋಲನಗಳನ್ನು ಹುಟ್ಟು ಹಾಕಿ ಮುನ್ನಡೆಸಿದ್ದನ್ನು ತಿಳಿಯಬೇಕು. ಉತ್ತರಖಂಡದ ಗರ್‍ವಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ೧೯೨೭ರಲ್ಲಿ ಹುಟ್ಟಿದ ಸುಂದರಲಾಲ್ ಈಗ ೯೨ ವರುಷದ ವಯೋವೃದ್ಧ. ತನ್ನ ೧೩ನೆಯ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಅವರು, ಅದಕ್ಕಾಗಿ ೧೭ನೆಯ ವಯಸ್ಸಿನಲ್ಲಿ ಜೈಲು ಶಿಕ್ಷೆ ಅನುಭವಿಸಿದವರು.
ಅನಂತರ ರಾಜಕೀಯ ಸೇರಿ, ರಚನಾತ್ಮಕ ಕೆಲಸಗಳಲ್ಲಿ ತೊಡಗಿದರು. ಸಾಮಾಜಿಕ ಆಂದೋಲನದತ್ತ ಅವರನ್ನು ಸೆಳೆದದ್ದು, ಮೀರಾ ಬೆನ್ ಮತ್ತು ಥಕ್ಕರ್ ಬಾಪಾ ಅವರೊಂದಿಗೆ ೧೯೪೯ರಲ್ಲಿ ನಡೆದ ಭೇಟಿ. “ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ರಾಜಕೀಯದ ಮೂಲಕ ತರಬಹುದು ಎಂದು ನಾನು ಭಾವಿಸಿದ್ದೆ. ಆದರೆ ನನ್ನ ಪತ್ನಿ ವಿಮಲಾ ನಾನು ಆಳವಾಗಿ ಯೋಚಿಸಲು ಪ್ರೇರೇಪಿಸಿದಳು. ಅವಳ ಬೆಂಬಲ ಮತ್ತು ಇನ್ನೂ ಕೆಲವರ ಮಾರ್ಗದರ್ಶನದಿಂದ, ಬದಲಾವಣೆ ತರಲಿಕ್ಕಾಗಿ ಏನು ಮಾಡಬೇಕೆಂಬುದು ನನಗೆ ಅರ್ಥವಾಯಿತು” ಎಂಬುದು ಸುಂದರಲಾಲರ ಮನದಾಳದ ಮಾತು.
ಮಾನವ ಮಲ ಹೊರುವವರ ಮಕ್ಕಳಿಗಾಗಿ ಶಾಲೆಯೊಂದನ್ನು ಆರಂಭಿಸಿದ್ದು ಜಾತಿಪದ್ಧತಿಯ ಅನಿಷ್ಟಗಳನ್ನು ಎದುರಿಸಲು ಅವರು ಕೈಗೆತ್ತಿಕೊಂಡ ಮೊದಲ ಕಾರ್ಯಕ್ರಮ. ಇದಕ್ಕೆ ಅವರ ಸ್ನೇಹಿತರು, ಬಂಧುಗಳು ಮತ್ತು ಮೇಲ್ಜಾತಿಯವರಿಂದ ತೀವ್ರ ವಿರೋಧ. ಆದರೆ ಸುಂದರಲಾಲ್ ಸಮಾಜ ಸುಧಾರಣೆಗೆ ಸಂಕಲ್ಪ ಮಾಡಿದ್ದರು. ಹಾಗಾಗಿಯೇ, ತೆಹ್ರಿಯಲ್ಲಿ ಎಲ್ಲ ಸಮುದಾಯಗಳ ಬಡ ಮಕ್ಕಳಿಗಾಗಿ ಥಕ್ಕರ್ ಬಾಪಾ ಹಾಸ್ಟೆಲ್ ಆರಂಭಿಸಿದರು. ಅನಂತರ ಹರಿಜನರಿಗೆ ದೇವಾಲಯಗಳ ಪ್ರವೇಶ ದೊರಕಿಸುವ ಮೂಲಕ ಸಮಾಜ ಸುಧಾರಣೆಯ ಆಂದೋಲನ ಮುನ್ನಡೆಸಿದರು. ಇವೆಲ್ಲದಕ್ಕೂ ಅವರಿಗೆ ಪ್ರೇರಣೆ ಮಹಾತ್ಮಾ ಗಾಂಧಿಯವರ ತತ್ವಗಳು.
೧೯೬೦ರಲ್ಲಿ ವಿನೋಬಾ ಭಾವೆಯವರ ಸಂದೇಶವನ್ನು ಹಿಮಾಲಯ ಪರ್ವತ ಶ್ರೇಣಿಯ ಏಳು ಜಿಲ್ಲೆಗಳಲ್ಲಿ ಪ್ರಸಾರ ಮಾಡಲಿಕ್ಕಾಗಿ ಪಾದಯಾತ್ರೆಗಳನ್ನು ನಡೆಸಿದರು. ಕಾಲ್ನಡಿಗೆಯಲ್ಲಿ ಸಾಗುವಾಗ, ಹಿಮಾಲಯದ ನದಿಗಳ ಉಗಮಸ್ಥಾನಗಳ ಜಲಾನಯನ ಪ್ರದೇಶಗಳಲ್ಲಿ ಪ್ರಾಕೃತಿಕ ಸಮತೋಲನಕ್ಕೆ ತೀವ್ರ ಧಕ್ಕೆಯಾದದ್ದನ್ನು ಕಣ್ಣಾರೆ ಕಂಡರು. ಅದಕ್ಕೆ ಅರಣ್ಯಗಳ ಮಾರಣನಾಶವೇ ಕಾರಣ ಎಂಬುದು ಅರ್ಥವಾಗುತ್ತಿದ್ದಂತೆ, ಸುಂದರಲಾಲರಿಗೆ ತನ್ನ ಅಂತರಂಗದ ಕೂಗು ಕೇಳಿಸಿತು – ನಮ್ಮೆಲ್ಲರ ಬದುಕಿಗೆ ಮೂಲಾಧಾರವಾದ ಕಾಡುಗಳ ರಕ್ಷಣೆಗೆ ತುರ್ತಾಗಿ ಕಾರ್ಯಶೀಲರಾಗಬೇಕೆಂಬ ಕೂಗು.
ಅನಂತರ, ಈ ಗುರಿ ಸಾಧನೆಗಾಗಿ ಯೋಜನೆ ರೂಪಿಸುವುದರಲ್ಲೇ ತಲ್ಲೀನರಾದರು ಸುಂದರಲಾಲ್ ಬಹುಗುಣ. ೧೯೭೨ರಲ್ಲಿ ಕಾಡಿನ ಮರಗಳನ್ನು ಕಡಿಯುವುದನ್ನು ಅಹಿಂಸಾತ್ಮಕವಾಗಿ ಪ್ರತಿಭಟಿಸಲಿಕ್ಕಾಗಿ ಜನರನ್ನು ಸಂಘಟಿಸ ತೊಡಗಿದರು. ಅವರ ಜನಸಂಘಟನೆಯ ಕೆಲಸಕಾರ್ಯಗಳು ಇಡೀ ದೇಶದ ಗಮನ ಸೆಳೆದವು.
ಅದುವೇ ಚಿಪ್ಕೋ ಎಂಬ ಚಾರಿತ್ರಿಕ ಆಂದೋಲನಕ್ಕೆ ನಾಂದಿಯಾಯಿತು. ಮನಮೀಟುವ ಘೋಷವಾಕ್ಯಗಳ ಮೂಲಕ ಸುಂದರಲಾಲ್ ಸಾವಿರಾರು ಜನರ ಅಂತಃಪ್ರಜ್ನೆಯನ್ನು ಬಡಿದೆಬ್ಬಿಸಿದರು. ಸಾಮಾನ್ಯವಾಗಿ ಮನೆಯೊಳಗಿನ ಕೆಲಸಗಳಲ್ಲೇ ತೊಡಗಿರುವ ಗ್ರಾಮೀಣ ಮಹಿಳೆಯರೂ ಚಿಪ್ಕೋ ಚಳವಳಕ್ಕೆ ಧುಮುಕಿದರು. ಮರಗಳನ್ನು ಅಪ್ಪಿ ಹಿಡಿದು ಅವನ್ನು ಕಡಿಯಲು ಬಂದ ಗುತ್ತಿಗೆದಾರರ ಕಾರ್ಮಿಕರಿಗೆ ತಡೆಯೊಡ್ಡಿದರು.
ಅರಣ್ಯನಾಶದ ದುಷ್ಪರಿಣಾಮಗಳ ಬಗ್ಗೆ ಜನರ ಹಾಗೂ ಸರಕಾರದ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುವುದು ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ಪ್ರಕೃತಿಯೊಂದಿಗೆ ಸಾಮರಸ್ಯದ ಬದುಕಿನ ಅಗತ್ಯ ಮನದಟ್ಟು ಮಾಡುವುದು ತುರ್ತಿನ ಕೆಲಸವಾಗಿತ್ತು; ಅದಕ್ಕಾಗಿ ಸುಂದರಲಾಲ್ ಬಹುಗುಣ ಹಿಮಾಲಯದ ತಪ್ಪಲಿನಲ್ಲಿ ಸಾವಿರಾರು ಕಿಲೋ ಮೀಟರುಗಳ ದೀರ್ಘ ಪಾದಯಾತ್ರೆಗಳನ್ನು ಕೈಗೊಂಡರು: ೧೯೭೩ರಲ್ಲಿ ೧೨೦ ದಿನಗಳ ೧,೪೦೦ ಕಿಮೀ ಪಾದಯಾತ್ರೆ; ೧೯೭೫ರಲ್ಲಿ ಉತ್ತರಖಂಡದಲ್ಲಿ ೨,೮೦೦ ಕಿಮೀ ಪಾದಯಾತ್ರೆ ಮತ್ತು ೧೯೮೧-೮೩ರಲ್ಲಿ ಕಾಶ್ಮೀರದಿಂದ ಕೊಹಿಮಾ ತನಕ ೪,೮೭೦ ಕಿಮೀ ಪಾದಯಾತ್ರೆ.
ಸುಂದರಲಾಲ್ ಬಹುಗುಣರ ನಿರಂತರ ಹೋರಾಟಕ್ಕೆ ಉತ್ತರ ಪ್ರದೇಶ ಸರಕಾರ ಕೊನೆಗೂ ಮಣಿಯಬೇಕಾಯಿತು. ವಾಣಿಜ್ಯ ಉದ್ದೇಶಗಳಿಗಾಗಿ ೧,೦೦೦ ಮೀಟರಿಗಿಂತ ಎತ್ತರದಲ್ಲಿ ಬೆಟ್ಟಗಳಲ್ಲಿ ಮರ ಕಡಿಯುವುದನ್ನು ಸರಕಾರ ನಿಷೇಧಿಸಿತು.
“ಅರಣ್ಯಗಳ ಉಳಿವೇ ನಮ್ಮ ಉಳಿವು” ಎಂಬ ಘೋಷವಾಕ್ಯಕ್ಕೆ ಲಕ್ಷಗಟ್ಟಲೆ ಜನರು ಸ್ಪಂದಿಸುವಂತೆ ಮಾಡಿದ್ದರು ಸುಂದರಲಾಲ್ ಬಹುಗುಣ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು: ಯುಎನ್‍ಇಪಿ ಪ್ರಶಸ್ತಿ, ಐಎಲ್‍ಓ ಪ್ರಶಸ್ತಿ, ಎಫ್‍ಎಓ ಪ್ರಶಸ್ತಿ ಇತ್ಯಾದಿ. ಇವರ ಹೋರಾಟಕ್ಕೆ ಕೈಜೋಡಿಸಿದ ದಿ. ರಿಚರ್ಡ್ ಬಾರ್ಬೆ ಬೆಕರ್ ಎಂಬವರು ಚಿಪ್ಕೋ ಆಂದೋಲನ ಜಗತ್ತಿನ ೧೦೮ ದೇಶಗಳಿಗೆ ವ್ಯಾಪಿಸಲು ನೆರವಾದರು.
ಸುಂದರಲಾಲ್ ಬಹುಗುಣ ದೊಡ್ಡ ಸುದ್ದಿ ಮಾಡಿದ್ದು ೧೯೮೧ರಲ್ಲಿ, ಭಾರತ ಸರಕಾರದ ಪದ್ಮವಿಭೂಷಣ ಪ್ರಶಸ್ತಿಯನ್ನು ನಿರಾಕರಿಸುವ ಮೂಲಕ. ಅದಕ್ಕೆ ಅವರು ನೀಡುವ ಕಾರಣ: “ಎಂದಿನ ವರೆಗೆ ಮರಗಳನ್ನು ಕಡಿಯುವುದರಿಂದಾಗಿ ಹಿಮಾಲಯದ ಅಮೂಲ್ಯ ಮೇಲ್ಮಣ್ಣಿನ ರೂಪದಲ್ಲಿ ಭಾರತ ಮಾತೆಯ ರಕ್ತಮಾಂಸಗಳು ಸಮುದ್ರಕ್ಕೆ ಹೋಗಿ ಸೇರುತ್ತದೆಯೋ ಅಂದಿನ ವರೆಗೆ ಇಂತಹ ಪ್ರಶಸ್ತಿ ಪಡೆಯಲು ನಾನು ಅನರ್ಹ.”
ಸುಂದರಲಾಲ್ ಬಹುಗುಣ ಅವರಂತಹ ಮಹಾನ್ ವ್ಯಕ್ತಿಯ ಬದುಕು ನೆಲ ಜಲ ವನ್ಯ ಸಂಪತ್ತನ್ನು ಮುಂದಿನ ತಲೆಮಾರುಗಳಿಗಾಗಿ ಉಳಿಸಲು ನಮ್ಮೆಲ್ಲರಿಗೂ ಪ್ರೇರಣೆಯಾಗಲಿ. ಮನುಷ್ಯ ನಿರ್ಮಿತ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟುವ ವಿವೇಕವನ್ನು ನಮ್ಮೆಲ್ಲರಿಗೂ ನೀಡಲಿ.
ಫೋಟೋ ಕೃಪೆ: ದ ಬೆಟರ್ ಇಂಡಿಯಾ ಡಾಟ್ ಕೋಮ್