ಚಿರಂಜೀವಿಯಾದ ಉದಯಶಂಕರ

ಚಿರಂಜೀವಿಯಾದ ಉದಯಶಂಕರ

ಅರವತ್ತರ ದಶಕದಿಂದೀಚೆಗೆ ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಪ್ರತಿಭೆಯೆಂದರೆ ಚಿ ಉದಯಶಂಕರ್. ಹಲವಾರು ನಾಯಕರು, ಹಲವು ನಾಯಕಿಯರು, ವಿದೂಷಕರು, ಪೋಷಕ ಪಾತ್ರಗಳಿಗೂ ಬಹಳ ವರ್ಷಗಳವರೆಗೆ ಬಾಳುವಂತಹ ಇಂಪಾದ ಗೀತೆಗಳ ರಚಿಸಿ; ಚಿತ್ರರಂಗದಲ್ಲಿ ಅಳಿಸಲಾಗದ ದಾಖಲೆ ಬರೆದವರು. ಸಂಭಾಷಣೆ, ನಿರ್ದೇಶನ ಅಲ್ದೇ ಸೊಗಸಾದ ನಟನೆಯನ್ನೂ ಮಾಡಿ ಸೈ ಎನಿಸಿದವರು. 

ಇಷ್ಟಾದರೂ ಇವರನ್ನು ಡಾ|| ರಾಜ್ ಬ್ಯಾನರ್ ನ ಆಸ್ಥಾನ ಕವಿಯೆಂದೇ ಹೇಳಲಾಗುತ್ತಿತ್ತು. ಇವರಿಗೆ ಭರಪೂರ ಅವಕಾಶಗಳನ್ನು ನೀಡುತ್ತಾ; ಬೇರಾವ ಕಡೆಗೂ ಕಣ್ಣೆತ್ತಿಯೂ ನೋಡದ ರೀತಿಯಲ್ಲಿ ನೋಡಿಕೊಂಡದ್ದೂ ಸುಳ್ಳಲ್ಲ. ಹಲವು ಬಾರಿ ರಾಜ್ ಕುಟುಂಬ ಹೊರಡುತ್ತಿದ್ದ ತೀರ್ಥಕ್ಷೇತ್ರಗಳ ಯಾತ್ರೆಗೆ ಖಾಯಂ ಅತಿಥಿ *ಚಿ ಉ* ಅವರಾಗಿರುತ್ತಿದ್ದರು. ಅಷ್ಟಕ್ಕೇ ತೃಪ್ತಿ ಪಡುತ್ತಿರಲಿಲ್ಲ, ಮಂತ್ರಾಲಯ, ಧರ್ಮಸ್ಥಳ, ಉಡುಪಿ, ಶಬರಿಮಲೆ, ಗಾಣಗಾಪುರ ಮೊದಲಾದ ಕ್ಷೇತ್ರದರ್ಶನದ ನೆನಪಲ್ಲಿ ಆಗಾಗಲೇ ಭಕ್ತಿಗೀತೆಗಳನ್ನು ಬರೆದು, ಡಾ|| ರಾಜ್ ರಿಂದಲೇ ಹಾಡಿಸಿ; ಧ್ವನಿಮುದ್ರಣ ಮಾಡಿಸಿ ಅಭಿಮಾನಿಗಳಿಗೆ ತಲುಪಿಸುತ್ತಿದ್ದರು. 

ಡಾ|| ರಾಜ್ ಇವರನ್ನು ತಮ್ಮ ಆಪ್ತವಲಯದ ಮುಖ್ಯಸ್ಥರೆಂದೇ ಬಿಂಬಿಸುತ್ತಿದ್ದರು. ಬಹಳಷ್ಟು ಸೊಗಸಾದ ಗೀತೆಗಳನ್ನು ರಚಿಸಿ ಚಲನಚಿತ್ರ ಗೀತಸಾಹಿತ್ಯ ರಚನೆಕಾರರೆಂದು ಗುರುತಿಸಿಕೊಂಡಿದ್ದರೂ ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ಸೌಮ್ಯ ಸ್ವಭಾವದ ‘ಚಿ ಉ’ ಅವರಿಗೆ ತಿಳಿಯದ ವಿಷಯವೇ ಇಲ್ಲವೆಂದು ಡಾ|| ರಾಜ್ ನಂಬಿದ್ದರು, ಉದಯಶಂಕರ್ ಇಹಲೋಕ ತ್ಯಜಿದ ಬಳಿಕ ಅವರ ಗುಂಗಲ್ಲೇ ಇದ್ದ ಅಣ್ಣಾವ್ರು ಸಂದರ್ಭ ಸಿಕ್ಕಾಗೆಲ್ಲಾ "ನಮ್ಮ ಉದಯಶಂಕರ್ ನ ಮೀರಿಸುವ ಚಿತ್ರ ಸಾಹಿತಿ ಇನ್ನೊಬ್ಬರಿಲ್ಲಾ ಎಂದೊ; ಮತ್ತೊಂದು ಅಪರೂಪವೆಂಬಂತಹ ಹಾಡು ಹಾಡಲು ಸಿಕ್ಕಾಗ ಈ ಹಾಡನ್ನು ನಮ್ಮ ಉದಯಶಂಕರ್ ಯಾಕೆ ಬರೆಯಲಿಲ್ಲ..?!" ಎಂದೊ ನೆನಪಿಸಿಕೊಳ್ಳುತ್ತಿದ್ದರಂತೆ..       

-ಸತ್ಯ ಹರಿಹಳ್ಳಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ