ಚೀನಾದಲ್ಲಿ ಬಾಲಕಾರ್ಮಿಕರ ಸಮಸ್ಯೆ:ಎಚ್ ಪಿ ಬಿಗಿನಿಲುವು

ಚೀನಾದಲ್ಲಿ ಬಾಲಕಾರ್ಮಿಕರ ಸಮಸ್ಯೆ:ಎಚ್ ಪಿ ಬಿಗಿನಿಲುವು

ಚೀನಾದಲ್ಲಿ ಬಾಲಕಾರ್ಮಿಕರ ಸಮಸ್ಯೆ:ಎಚ್ ಪಿ ಬಿಗಿನಿಲುವು
ಚೀನಾದಲ್ಲಿ ಒಂದು ಮಗು ಕಾನೂನು ಇದ್ದು, ಅದರ ಅನುಷ್ಠಾನವೂ ಬಿಗಿಯಾಗಿದೆ. ಹಾಗಾಗಿ ಅಲ್ಲಿ ಎಳೆಯರ ಸಂಖ್ಯೆ ಕುಸಿದಿದೆ. ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನರೇಂದ್ರಮೋದಿ ಇತ್ತೀಚೆಗೆ ಮಾಡಿದ ಭಾಷಣದಲ್ಲಿದ್ದನ್ನು ಪ್ರಸ್ತಾಪಿಸಿದ್ದು ನೆನಪಿದೆ ತಾನೆ? ಕಾರ್ಖಾನೆಗಳು ತಮಗೆ ಹೆಚ್ಚು ಬೇಡಿಕೆ ಬಂದ ಕೂಡಲೇ, ಸ್ಥಳೀಯ ಶಾಲೆಗಳಿಗೆ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವಂತೆ ಕೇಳಿಕೆ ಸಲ್ಲಿಸುತ್ತಾರೆ. ಮಕ್ಕಳು ಒಲ್ಲೆ ಅಂದರೂ, ಶಾಲಾ ಆಡಳಿತ ಮಂಡಳಿ ತಾತ್ಕಾಲಿಕ ಕೆಲಸಕ್ಕೆ ಹೋಗುವುದನ್ನು ಕಡ್ಡಾಯವೆಂದು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಕಾರಣ, ಆಡಳಿತ ಮಂಡಳಿ ಇದಕ್ಕಾಗಿ ಕಂಪೆನಿಗಳಿಂದ ಹಣ ಪಡೆಯುತ್ತವೆ. ಈ ಸಮಸ್ಯೆಯನ್ನು ಅಮೆರಿಕಾದ ಕಂಪೆನಿಗಳು ನಿರ್ಲಕ್ಷಿಸಿದ್ದುವು.  ಆದರೀಗ ಸಮಸ್ಯೆಯ ಗಂಭೀರತೆ ಹೆಚ್ಚಿದ್ದು, ಹಲವು ಕಂಪೆನಿಗಳು ಹಾಂಕಾಂಗ್ ಮುಂತಾದ ಕಂಪೆನಿಗಳಿಂದ ತಮ್ಮ ಇಲೆಕ್ಟ್ರಾನಿಕ್ ವಸ್ತುಗಳ ಪೂರೈಕೆ ಪಡೆಯುತ್ತಿರುವ ಹ್ಯೂಲೆಟ್‌ಪ್ಯಾಕರ್ಡ್ ಅಂತಹ ಕಂಪೆನಿಗಳು, ಒಲ್ಲದ ಬಾಲಕರನ್ನು ದುಡಿಮೆಗೆ ಹಚ್ಚಬಾರದು ಎಂದು ತಮ್ಮ ಪೂರೈಕೆದಾರರಿಗೆ ಸ್ಪಷ್ಟವಾಗಿ ಹೇಳಿವೆ.
ಪೂರೈಕೆದಾರ ಕಂಪೆನಿಗಳಲ್ಲಿ ಒಂದಾದ ಫಾಕ್ಸ್‌ಕಾನ್ ಇದಕ್ಕೆ ಸಮಜಾಯಿಸಿ ನೀಡುತ್ತಾ, ಬಾಲಕಾರ್ಮಿಕರಲ್ಲಿ ಒಲ್ಲದ ಮನದಿಂದ ಕೆಲಸ ಮಾಡುವವರಿಲ್ಲ ಎಂದೂ, ಬಾಲಕಾರ್ಮಿಕರಿಗೆ ವೃತ್ತಿಪರ ತರಬೇತಿ ನೀಡುವ ಶಿಕ್ಷಣ ಸಂಸ್ಥೆಗಳ ಗುರಿ ಸಾಧಿಸಲು ಇದನ್ನು ಕಡ್ಡಾಯ ಮಾಡಲಾಗಿದೆ. ಮಕ್ಕಳಿಗೆ ಕನಿಷ್ಠ ವೇತನಕ್ಕಿಂತ ಹೆಚ್ಚು ಹಣ ಪಾವತಿಸಲಾಗುತ್ತಿದೆಯಲ್ಲದೆ, ಅವರಿಗೆ ಕಡಿಮೆ ದರದಲ್ಲಿ ಊಟ, ವಸತಿ ಒದಗಿಸಲಾಗುತ್ತಿದೆ. ಮಕ್ಕಳನ್ನು ಅವಲಂಬಿಸದಿದ್ದರೆ,  ಪೂರೈಕೆ ನಿಧಾನವಾಗುತ್ತದೆ ಎಂದಿದೆ.

ಸ್ಯಾಮ್‌ಸಂಗ್ ಪ್ರಚಾರಕ್ಕೆ ಫ್ಯಾಶನ್ ವಿನ್ಯಾಸಕಾರ್ತಿ




ಸ್ಯಾಮ್‌ಸಂಗ್ ಕಳೆದ ವರ್ಷ ಮೂವತ್ತೊಂಭತ್ತು ಕೋಟಿ ಮೊಬೈಲ್ ಫೋನುಗಳನ್ನು ಮಾರಾಟ ಮಾಡಿದರೂ, ಆಪಲ್ ಕಂಪೆನಿಗೆ ಸರಿಗಟ್ಟಲು ವಿಫಲವಾಗಿದೆ. ಹಾಗಾಗಿ, ಇದು ಜನರ ಗಮನ ಸೆಳೆಯಲು ಫ್ಯಾಶನ್ ವಿನ್ಯಾಸಕಾರನನ್ನು ಬಳಸಲು ಆರಂಭಿಸಿದೆ. ಅಲೆಕ್ಸಾಂಡರ್ ವಾಂಗ್ ಎನ್ನುವ ಫ್ಯಾಶನ್ ವಿನ್ಯಾಸಕಾರ್ತಿ ಸ್ಯಾಮ್‌ಸಂಗ್ ಮೊಬೈಲನ್ನು ಸಮರ್ಥವಾಗಿ ಬಳಸುವ ಬಗೆಯನ್ನು ತನ್ನ ಜಾಹೀರಾತುಗಳಲ್ಲಿ ಪ್ರದರ್ಶಿಸಿ, ಜನರ ಗಮನಸೆಳೆಯಲದು ಬಯಸಿದೆ. ಜನರಲ್ ಮೋಟಾರ್ಸ್ ಕಂಪೆನಿಯೂ ಈ ಹಿಂದೆಯೇ ಹೀಗೆ ಮಾಡಿದ್ದಿದೆ. ಅಂದ ಹಾಗೆ ಮೊಬೈಲ್ ಮತ್ತು ಫ್ಯಾಶನ್‌ಗೆ ಏನು ಸಂಬಂಧ ಎಂದಿರಾ?ವಾಂಗ್ ತಾವು ಹೋಗುವ ದಾರಿಯಲ್ಲಿ ಕಾಣುವ ಚಿತ್ರಗಳನ್ನು ಸೆರೆಹಿಡಿಯಲು ಮೊಬೈಲ್ ಬಳಸುತ್ತಾರೆ. ಇಂಟರ್ನೆಟ್ ಜಾಲಾಡುವಾಗ, ಸಿಗುವ ಗೂಗಲ್ ಡೂಡಲ್, ಬ್ಲಾಗ್‌ಗಳಲ್ಲಿ ಕಂಡ ಉತ್ತಮ ಚಿತ್ರಗಳನ್ನು ಉಳಿಸಿಕೊಂಡು ಅವನ್ನು ವಿನ್ಯಾಸದಲ್ಲಿ ಬಳಸಲು ಅವಕಾಶವಾಗುತ್ತದೆ. ಇನ್ನು ಫ್ಯಾಶನ್ ಪೆರೇಡ್ ನಡೆಯಲಿರುವ ಸಭಾಭವನಗಳಿಗೆ ಭೇಟಿಯಿತ್ತಾಗ, ಅಲ್ಲಿನ ಸೀಟು, ಪ್ರಕಾಶ ವ್ಯವಸ್ಥೆಗಳನ್ನು ಮೊಬೈಲಿನಲ್ಲಿ ಗುರುತು ಹಾಕಿಕೊಂಡು, ಅದಕ್ಕನುಗುಣವಾಗಿ ತಮ್ಮ ನಡೆಯನ್ನು ಯೋಜಿಸಿ, ತಮ್ಮ ಸಹಾಯಕರಿಗೆ ಸೂಚನೆಗಳ ಜತೆ ರವಾನಿಸಲೂ ವಾಂಗ್ ಅಲೆಕ್ಸಾಂಡರ್‌ಗೆ ಸಾಧ್ಯವಾಗುತ್ತದೆ. ಇಂತಹ ಅವರ ಮೊಬೈಲ್ ಬಳಕೆಯ ಪರಿಯನ್ನು ಜಾಹೀರಾತಿನಲ್ಲಿ ಬಳಸಿ, ಸ್ಯಾಮ್‌ಸಂಗ್ ಜನರನ್ನು ಆಕರ್ಷಿಸಲು ಯತ್ನಿಸುತ್ತಿದೆ. ಇದು ಎಷ್ಟು ಪರಿಣಾಮಕಾರಿಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗುತ್ತದೆ.

ಹೊಸ ತಾಲೂಕುಗಳು, ರಾಜ್ಯಗಳ ರಚನೆಗಿಂತ ಕಂಪ್ಯೂಟರೀಕರಣ ಹೆಚ್ಚು ಪರಿಣಾಮಕಾರಿ
ಸಣ್ಣ ರಾಜ್ಯಗಳ ರಚನೆ,ಹೆಚ್ಚು ತಾಲೂಕು ಜಿಲ್ಲೆಗಳನ್ನು ರಚಿಸುವ ಮೂಲಕ ಜನರಿಗೆ ಅನುಕೂಲವಾಗುತ್ತದೆ ಎನ್ನುವುದು ಒಂದು ವಾದ. ಅಭಿವೃದ್ಧಿಗಿದು ಪೂರಕವೆನ್ನುವ ತರ್ಕ ಸಾಮಾನ್ಯ. ಆದರೆ ಇಂತಹ ಕ್ರಮಗಳು ಹೆಚ್ಚು ಆಡಳಿತ ಯಂತ್ರವನ್ನು ಸೃಷ್ಟಿಸಿ, ಆಡಳಿತ ವ್ಯವಸ್ಥೆಯ ಖರ್ಚನ್ನು ಹೆಚ್ಚಿಸುತ್ತದೆ. ರಾಜಕಾರಣಿಗಳಿಗೆ ಹೆಚ್ಚು ಉದ್ಯೋಗ ಸೃಷ್ಟಿಸುತ್ತದೆ. ಜನರ ತೆರಿಗೆ ಹಣದ ಪೋಲಿಗೆ ಕಾರಣವಾಗುತ್ತದೆ, ಜನರು ತಮ್ಮ ಕೆಲಸಗಳಿಗೆ ಮೊದಲಿಗಿಂತ ಸಮೀಪದ ಕಚೇರಿಗಳಿಗೆ ಹೋಗಬೇಕಾಗುತ್ತದೆ ಎನ್ನುವುದೇನೋ ನಿಜವೇ.. ಇದರ ಬದಲು ಕಂಪ್ಯೂಟರೀಕರಣ, ಆನ‌ಲೈನ್ ಮೂಲಕ ಸೇವೆಗಳ ಪೂರೈಕೆಗೆ ಅನುವು ಮಾಡಿದರೆ, ಜನರು ಕಚೇರಿಗೆ ಅಲೆದು ಹಣ ಮತ್ತು ಸಮಯವನ್ನು ಪೋಲು ಮಾಡುವುದು ತಪ್ಪುತ್ತದೆ. ಮಾತ್ರವಲ್ಲದೆ ಇದರಿಂದ ಪಾರದರ್ಶಕತೆ ಹೆಚ್ಚುತ್ತದೆ, ಲಂಚಕ್ಕೆ ಹೊಂಚು ಹಾಕುವವರ ಮೇಲೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.

ಆಸಸ್ ಕಂಪೆನಿಯಿಂದ ಅಗ್ಗದ ಟ್ಯಾಬ್ಲೆಟ್
ಡೆಸ್ಕ್‌ಟಾಪ್ ಕಂಪ್ಯೂಟರುಗಳ ತಯಾರಿ ಮಾಡುತ್ತಿರುವ ಆಸಸ್ ಕಂಪೆನಿಯಿನ್ನು ಅಗ್ಗದ ಟ್ಯಾಬ್ಲೆಟ್‌ಗಳ ತಯಾರಿಕೆಗೂ ಕೈಹಾಕಲಿದೆ. ಆರುಸಾವಿರದಿಂದ ಹತ್ತು ಸಾವಿರ ಬೆಲೆಯ ಅಗ್ಗದ ಟ್ಯಾಬ್ಲೆಟ್‌ಗಳಲ್ಲಿ ಸಿಮ್ ಕಾರ್ಡ್ ಬಳಕೆಗೆ ಅವಕಾಶವಿರದು, ಹಾಗಾಗಿ ಅವುಗಳಿಂದ ಧ್ವನಿಕರೆ ಮಾಡುವುದು ಸಾಧ್ಯವಿಲ್ಲ. ಇನ್ನು ದುಬಾರಿ ಟ್ಯಾಬ್ಲೆಟ್‌ಗಳಲ್ಲಿ ಈ ವ್ಯವಸ್ಥೆಯೂ ಇರುತ್ತದೆ. ಕಂಪೆನಿಯು ತನ್ನ ಉತ್ಪನ್ನಗಳನ್ನು ಬಹುಬ್ರಾಂಡ್ ಚಿಲ್ಲರೆ ಮಳಿಗೆಗಳ ಮೂಲಕ ಮಾರುಕಟ್ಟೇಯಲ್ಲಿ ಲಭ್ಯವಾಗಿಸಿದೆ. ಒಂದು ಆಂಡ್ರಾಯಿಡ್ ವ್ಯವಸ್ಥೆ ಅಳವಡಿಸಿರುವ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್ ಅರುವತ್ತೈದು ಸಾವಿರ ಬೆಲೆಯಲ್ಲದು ಮಾರಾಟ ಮಾಡುತ್ತಿದೆ. ಪ್ಯಾಡ್‌ಫೋನ್ ಎಂದಿದರ ಹೆಸರು.

ಅಮೇಜಾನ್.ಕಾಮ್ ದೃಷ್ಟಿ ಭಾರತದತ್ತ
ಭಾರತದಲ್ಲಿ ಇ-ವ್ಯವಹಾರದಲ್ಲಿ ನೇರ ಹೂಡಿಕೆಗೆ ಸದ್ಯ ಅವಕಾಶವಿಲ್ಲ. ಇದು ಅಮೇಜಾನ್ ಕಂಪೆನಿಗೆ ನಿರಾಸೆ ಮೂಡಿಸಿದೆ. ಅಮೇಜಾನ್ ಕಂಪೆನಿ ವಿಶ್ವದ ದೊಡ್ಡ ಇ-ವ್ಯವಹಾರ ನಡೆಸುತ್ತಿರುವ ಕಂಪೆನಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕಂಪೆನಿಯ ಅಧಿಕಾರಿಗಳು ಭಾರತಕ್ಕೆ ಆಗಮಿಸಿ, ಸಚಿವರುಗಳನ್ನು ಭೇಟಿ ಮಾಡಿ, ಈ ಬಗ್ಗೆ ಲಾಬಿ ಮಾಡಲಿದ್ದಾರೆಂದು ಕಂಪೆನಿ ಹೇಳಿದೆ. ಸದ್ಯ ಅದು ಜಂಗ್ಲಿ ಎನ್ನುವ ಇಂಟರ್ನೆಟ್ ತಾಣದ ಮೂಲಕ, ವಿವಿಧ ಆನ್‌ಲೈನ್ ತಾಣಗಳಲ್ಲಿ ಲಭ್ಯ ಉತ್ಪನ್ನಗಳ ಬೆಲೆಯನ್ನು ಹೋಲಿಸಿ ನೋಡಲು ಅವಕಾಶ ಕಲ್ಪಿಸಿದೆ.

ಸಿ-ಡ್ಯಾಕ್‌ನಿಂದ ಸೂಪರ್ ಕಂಪ್ಯೂಟರ್
ಭಾರತದ ಅತಿವೇಗದ ಸೂಪರ್‌ಕಂಪ್ಯೂಟರ್ ಪರಂ ಯುವ IIನ್ನು ಸಿ-ಡ್ಯಾಕ್ ಸಿದ್ಧಪಡಿಸಿದೆ.  ಇದಕ್ಕೆ ಹಿಡಿದ ಸಮಯಾವಧಿ ಸುಮಾರು ಮೂರು ತಿಂಗಳು ಮಾತ್ರಾ. ಪ್ರತಿ ಸೆಕೆಂಡಿಗೆ 524 ಟೆರಾಪ್ಲಾಫ್ ಲೆಕ್ಕಗಳನ್ನು ಮಾಡಬಲ್ಲ ಈ ಸೂಪರ್ ಕಂಪ್ಯೂಟರನ್ನು ಅಭಿವೃದ್ಧಿ ಪಡಿಸಲು ಸುಮಾರು ಹದಿನಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಮುಂದಿನ ಹಂತದಲ್ಲಿ ಪೆಟಾ ಫ್ಲಾಪ್ ವೇಗದಲ್ಲಿ ಲೆಕ್ಕ ಮಾಡಬಲ್ಲ ಸೂಪರ್ ಕಂಪ್ಯೂಟರುಗಳನು ಸಿ-ಡ್ಯಾಕ್ ತಯಾರಿಸಲಿದೆ. ಹವಾಮಾನ ಮುನ್ಸೂಚನೆ, ಸಾಗರತಳದ ಸಂಪನ್ಮೂಲ ಪತ್ತೆ ಮತ್ತು ವ್ಯಕ್ತಿಗತ ಔಷದ ತಯಾರಿಕೆಯಲ್ಲಿದನ್ನು ಬಳಸಬಹುದಾಗಿದೆ. ಬಾಹ್ಯಾಕಾಶ ಬಗೆಗಿನ ಸಂಶೋಧನೆಯಲ್ಲೂ ಇದು ಉಪಯೋಗಿಯಾಗಲಿದೆ.

ಗೂಗಲ್ ಮ್ಯಾಪ್ ಸುಧಾರಣೆಗಾಗಿ ಸ್ಪರ್ಧೆ
ಭಾರತದಲ್ಲಿ ಗೂಗಲ್ ತನ್ನ ನಕಾಶೆಸೇವೆಯನ್ನು ಉತ್ತಮಗೊಳಿಸಲು ಬಯಸಿದೆ. ಹೆಚ್ಚಿನ ವಿವರಗಳನ್ನು ಬಳಕೆದಾರರಿಗೆ ನೀಡುವುದು ಗೂಗಲ್ ಉದ್ದೇಶ. ಇದರಲ್ಲಿ ಸಾಮಾನ್ಯ ಜನರನ್ನು ಒಳಗೊಳಿಸುವುದು ಅನಿವಾರ್ಯ. ತಮ್ಮ ಸುತ್ತಮುತ್ತಲಿನ ವ್ಯವಹಾರ ಸ್ಥಳಗಳ ವಿವರಗಳನ್ನು, ವಿವಿಧ ಸೇವೆಗಳು, ಬ್ಯಾಂಕ್ ಎಟಿಎಂ, ಪೆಟ್ರೋಲ್ ಬಂಕ್ ಇತ್ಯಾದಿ ವಿವರಗಳನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚು ಜನರನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲೋಸುಗ, ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿದೆ.