ಚುನಾವಣೆ - ಹೊರಟಿದೆ ನೋಡ ಮಲದ ಮೆರವಣಿಗೆ

ಚುನಾವಣೆ - ಹೊರಟಿದೆ ನೋಡ ಮಲದ ಮೆರವಣಿಗೆ

ಬರಹ

{ದೇಶದಿ ಚುನಾವಣೆ ಕಾವು ಏರಿದೆ. ಅಧಿಕಾರಕ್ಕಾಗಿ ಹತ್ಯಾಕಾಂಡದಂತಹ ವೈಪರೀತ್ಯ ಇತ್ತೀಚೆಗೆ ನೋಡಿದ್ದೇವೆ. ಮತ್ತೊಂದೆಡೆ ತಾವೇ ಉತ್ತಮ, ತಮ್ಮನ್ನು ಚುನಾಯಿಸಿ ಎಂದು ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ರಾಜಕೀಯ ಮುಖಂಡರು. ಪ್ರಮುಖವಾದ ಮೂರು ಪಕ್ಷಗಳು ಸೆಣಸುತ್ತಿರುವ ಈ ರಾಜಕೀಯ ಯುದ್ದದಲ್ಲಿ ಮತದಾರನ ಮುಂದಿರುವ ಪ್ರಶ್ನೆ ’ಯಾರು ಹಿತವರು ಈ ಮೂವರೊಳಗೆ ?’ ಎಂದು.}

ಹೊರಟಿದೆ ನೋಡ ಮಲದ ಮೆರವಣಿಗೆ

ಮೈಯ ತೊಳೆವುದು ಗಂಗಾ ಜಲ
ತೊಳೆಯದದು ಮನದ ಮಲ
ಹೊರಟಿದೆ ನೋಡ ಮಲದ ಮೆರವಣಿಗೆ

ಸುತ್ತಿಬಂದರು ತಿರುಮಲ
ಕಳಿಯಲಿಲ್ಲ ಪಾಪದ ಫಲ
ಹೊರಟಿದೆ ನೋಡ ಮಲದ ಮೆರವಣಿಗೆ

ಕುಡಿದು ಬೆಳೆದರೂ ಕಾವೇರಿ ಜಲ
ಕರಗಲಿಲ್ಲ ಮನದ ಮಲ
ಹೊರಟಿದೆ ನೋಡ ಮಲದ ಮೆರವಣಿಗೆ

ಮನದ ತುಂಬ ಹಾಲಾಹಲ
ಮನವಾಗುವುದೆಂದೋ ನಿರ್ಮಲ
ಹೊರಟಿದೆ ನೋಡ ಮಲದ ಮೆರವಣಿಗೆ

ಬುಟ್ಟಿ ಹೊತ್ತು ನಿಂತ ಕೋಮಲ
ನೋಡಿ ಅಲ್ಲಿ ಅರಳಿದ ಕಮಲ
ತೋರುತ ಅಭಯ ಹಸ್ತ ಅಗಲ
ಹೊರಟಿದೆ ನೋಡ ಮಲದ ಮೆರವಣಿಗೆ

ಕುಡಿಸುತ ನೀರಾ ಏರಿಸಿ ಅಮಲ
ನೀಡುತ ವಸ್ತ್ರ ತೋರುತ ಹಣಬಲ
ಹೊರಟಿದೆ ನೋಡ ಮಲದ ಮೆರವಣಿಗೆ

ಸೀಟಿನಾಸೆಗೆ ಎಳೆಯುತ ಕಾಲ
ಹಿಡಿದರು ಗೆದ್ದೆತ್ತಿನ ಬಾಲ
ಹೊರಟಿದೆ ನೋಡ ಮಲದ ಮೆರವಣಿಗೆ

ಅರಳಲು ದೇಶದಿ ಕೇಸರಿಯ ಕಮಲ
ತುಂಬುವುದೇ, ನೀರಿಲ್ಲದೇ ಒಣಗಿದಾ ನೆಲ
ಗೆದ್ದು ಬಂದರೆ ಬುಟ್ಟಿ ಹೊತ್ತ ಕೋಮಲ
ಕಾಣುವುದೇ ಹಸಿರು, ಉಳುವವನಾ ಹೊಲ
ಮರಳಲು ಹಸ್ತ, ತೋರುತ ಹಣಬಲ
ನೀಡುವುದೇ ಹಸಿವಿನ ಹೋರಾಟಕ್ಕೆ, ಬೆಂಬಲ

ಹೊರಟಿದೆ ನೋಡ ಮಲದ ಮೆರವಣಿಗೆ
ಅಟ್ಟುತ ನಿರೀಕ್ಷೆಗಳನು ಸಾವಿನರಮನೆಗೆ