ಚುಮುಚುಮು ಚಳಿಯ ಜತೆ ಕ್ರಿಸ್ ಮಸ್ ಸಂಭ್ರಮ

ಚುಮುಚುಮು ಚಳಿಯ ಜತೆ ಕ್ರಿಸ್ ಮಸ್ ಸಂಭ್ರಮ

ಬರಹ

ಡಿಸೆಂಬರ್ ತಿಂಗಳು ಬಂತೆಂದರೆ ಚಳಿ ಹೆಚ್ಚುತ್ತಿರುತ್ತದೆ. ಮಕ್ಕಳಿಗೆ ಶಾಲೆಗೆ ಹೋಗಲು ಇಷ್ಟವಿಲ್ಲ. ಬದಲಾಗಿ ಕ್ರಿಸ್ ಮಸ್ ತಯಾರಿ ನಡೆಸಲು ಎಲ್ಲಿಲ್ಲದ ಆಸಕ್ತಿ. ಉದ್ಯೋಗಿಗಳಂತೂ ಶಾಪಿಂಗ್ ಗಾಗಿ ಒಂದು ವಾರ ರಜೆ ಪಡೆಯುತ್ತಾರೆ. ವಿದೇಶದಲ್ಲಿದ್ದ ಸ್ನೇಹಿತರೆಲ್ಲಾ ಕ್ರಿಸ್ ಮಸ್ ಆಚರಣೆಗಾಗಿ ಹುಟ್ಟೂರಿಗೆ ಆಗಮಿಸುತ್ತಾರೆ.

ಕ್ರೈಸ್ತರಿಗೆ ಕ್ರಿಸ್ ಮಸ್ ಅಂದರೆ ಯೇಸುವಿನ ಜನನದ ಸಂಭ್ರಮವನ್ನು ತಮ್ಮ ಹುಟ್ಟೂರಿನಲ್ಲೇ ಆಚರಿಸುವ ತವಕ.
೨೦೪೧ ವರ್ಷಗಳ ಹಿಂದೆ ಜೆರುಸಲೇಮಿನ ಬೆತ್ಲೆಹೆಮ್ ಎಂಬ ಶಹರದ ಗೋದಲಿಯೊಂದರಲ್ಲಿ ಮೇರಿ ಹಾಗೂ ಸಂತ ಜೋಸೆಫ್ ಅವರ ಮಗುವಾಗಿ ಡಿ. ೨೫ ರಂದು ಯೇಸುವಿನ ಜನನವಾಯಿತು. ಅಂದು ದೇವದೂತರು, ದನಕಾಯುವವರು ಅಷ್ಟೇ ಅಲ್ಲ, ಎಲ್ಲ ಜೀವಿಗಳು ಸಂಭ್ರಮಪಟ್ಟವು. ಮುರು ಮಂದಿ ರಾಜರುಗಳು ತಮ್ಮ ಕಾಣಿಕೆಗಳೊಡನೆ ನಕ್ಷತ್ರದ ಸಹಾಯದಿಂದ ಯೇಸುವನ್ನು ನೋಡಲು ಹೋಗಿದ್ದರು.

ಈ ನೆನಪಿನಲ್ಲೇ ಕ್ರೈಸ್ತರು ಗೋದಲಿ ನಿರ್ಮಿಸುತ್ತಾರೆ. ನಕ್ಷತ್ರ ತೂಗುತ್ತಾರೆ, ಬಾಲ ಯೇಸುವಿನ ಶಿಲ್ಪವನ್ನಿಟ್ಟು ಅಕ್ಕ ಪಕ್ಕದಲ್ಲಿ ಸಂತ ಜೋಸೆಫ್, ಮೇರಿ ಮಾತೆಯ ಪ್ರತಿಮೆಯನ್ನಿಡುತ್ತಾರೆ. ‘ಕ್ರಿಸ್ ಮಸ್ ಟ್ರೀ’ ಕುರಿತಾಗಿ ಹೇಳುವುದಾದರೆ ಕ್ರಿಸ್ ಮಸ್ ಸಂಭ್ರಮವನ್ನು ಹೆಚ್ಚಿಸುವ ಉದ್ದೇಶದಿಂದ ಸಂತ ಫ್ರಾನ್ಸಿಸ್ ಅಸ್ಸಿಸಿ ಎಂಬವರು ಮೊದಲ ಬಾರಿಗೆ ಕ್ರಿಸ್ಮಸ್ ಟ್ರೀ ಮಾಡಿದರು. ಮುಂದೆ ಈ ಆಚರಣೆ ಪ್ರಪಂಚದಲ್ಲೆಡೆ ಪಸರಿಸಿತು.

ಸಂತ ನಿಕೋಲಸ್ ಎಂಬಾತ ಕ್ರಿಸ್ಮಸ್ ದಿನದಂದು ಬಡವರಿಗಾಗಿ ಕಾಣಿಕೆಗಳನ್ನು ಕೊಡುತ್ತಿದ್ದರು. ಅವರು ತಮ್ಮ ವಿಶಿಷ್ಟ ಉಡುಗೆಯಿಂದ ಮಕ್ಕಳ ಮನಗೆದ್ದರು. ಅವರ ನೆನಪಿಗಾಗಿ ಸಾಂತಾ ಕ್ಲಾಸ್ ಈಗಲೂ ಡಿಸೆಂಬರ್ ತಿಂಗಳಲ್ಲಿ ನಮ್ಮ ಮನೆಮುಂದೆ ಪ್ರತ್ಯಕ್ಷರಾಗುತ್ತಾರೆ.

ಕರಾವಳಿ ಕ್ರೈಸ್ತರು ತಯಾರಿಸುವ ಕ್ರಿಸ್ಮಸ್ ತಿಂಡಿಗೆ ‘ಕುಸ್ವಾರ್’ ಎಂದು ಹೆಸರು. ಕ್ರಿಸ್ಮಸ್ ಕೇಕ್ ಇಲ್ಲಿನ ಯಜಮಾನ. ಕಿಡಿಯೊ, ಗುಳಿಯೊ, ನಿವ್ರ್ಯೊ, ಕ್ಕೊಕ್ಕಿಸಾ, ಲಾಡು, ತುಕ್ಡಿ, ಚಕ್ಕುಲಿ, ಚಿಪ್ಸ್ ಇವೆಲ್ಲವನ್ನು ಮನೆಯಲ್ಲೇ ತಯಾರಿಸಿ ನಂತರ ನೆರೆಹೊರೆ ಹಾಗೂ ಸ್ನೇಹಿತರಿಗೆ ಹಂಚಿ ಸಂಭ್ರಮಿಸುವುದು ಪರಸ್ಪರರ ನಡುವೆ ಆತ್ನೀಯತೆ ಹೆಚ್ಚಿಸಲು ಸಹಕಾರಿ.

ಕ್ರಿಸ್ ಮಸ್ ಕುರಿತ ಸಂದೇಶ ನೀಡುವ ಗ್ರೀಟಿಂಗ್ಸ್ ಕಾರ್ಡ್ ಗಳನ್ನು ಪರಸ್ಪರ ರವಾನಿಸುವುದು, ಶಾಲಾ ಕಾಲೇಜುಗಳಲ್ಲಿ ‘ಕ್ರಿಸ್ ಮಸ್ ಫ್ರೆಂಡ್’ ಆಚರಿಸುವುದು ಇವೆಲ್ಲಾ ಕ್ರಿಸ್ ಮಸ್ ಸಡಗರವನ್ನು ಹೆಚ್ಚಿಸುತ್ತಿದೆ. ಉಳಿದಂತೆ ಹೊಸ ವಿನ್ಯಾಸದ ಹೊಸ ಉಡುಗೆ ತೊಡುಗೆ ಧರಿಸಿ ಡಿ. ೨೪ರ ರಾತ್ರಿ ಚರ್ಚ್ ಗಳಲ್ಲಿ ಪೂಜಾ ಸಮಾರಂಭದಲ್ಲಿ ಭಾಗಿಯಾಗುವುದು. ಪೂಜಾ ಬಲಿದಾನ ನಂತರ ಪರಸ್ಪರ ಕ್ರಿಸ್ಮಸ್ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಕ್ರಿಸ್ಮಸ್ ಹಾಡುಗಳಿಗೆ (ಕ್ಯಾರಲ್ಸ್) ಸಾಂತಾ ಕ್ಲಾಸ್ ಜತೆಗೆ ಕುಣಿಯುವುದು. ಡಿಸೆಂಬರ್ ೨೫ ರಿಂದ ಕ್ಯಾರಲ್ಸ್ ಜತೆಗೆ ಸಾಂತಾಕ್ಲಾಸ್ ಮನೆಮನೆಗೆ ಆಗಮಿಸಿ ಸಂತಸ ಹಂಚಿಕೊಳ್ಳುವುದು.

ಕುಸ್ವಾರ್, ಕ್ರಿಸ್ಮಸ್ ಟ್ರೀ, ಗೋದಲಿ ಮುಂತಾದವುಗಳನ್ನು ಚೆನ್ನಾಗಿ ಮಾಡಿದ್ದವರಿಗೆ ಬಹುಮಾನಗಳನ್ನು ವಿತರಿಸುವ ಕಾರ್ಯಕ್ರಮಗಳು ಇತ್ತೀಚೆಗೆ ಹೆಚ್ಚುತ್ತಿದೆ.
ಇದು ಕ್ರೈಸ್ತ ಬಾಂಧವರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಕ್ರಿಸ್ ಮಸ್ ದಿನಾಚರಣೆಯ ಮೌಲ್ಯಗಳನ್ನು ತಿಳಿಯಲು ಅನುವು ಮಾಡಿಕೊಡುತ್ತಿದೆ.

ಮಾರಾಟಗಾರರಿಗಂತೂ ಡಿಸೆಂಬರ್ ತಿಂಗಳು ಬಂತೆಂದರೆ ರಸದೌತಣ. ಬಹುಶ: ವರ್ಷದಲ್ಲಿ ಅತೀ ಹೆಚ್ಚು ವಸ್ತುಗಳಿಗೆ ಬೇಡಿಕೆ ಇರುವ ಏಕೈಕ ತಿಂಗಳು ಡಿಸೆಂಬರ್.

ಮನೆಗೆ ಮರು ಪೈಂಟ್ ಹಾಕಿ ಮನೆಯನ್ನು ಅಲಂಕರಿಸುವುದು, ಬಗೆಬಗೆಯ ನಕ್ಷತ್ರಗಳನ್ನು, ವಿದ್ಯುತ್ ದೀಪಗಳನ್ನು ಖರೀದಿಸುವುದು, ಮೊಬೈಲ್ ಗಳಲ್ಲಿ ಜಿಂಗಲ್ ಬೆಲ್ಸ್ ಕುರಿತ ರಿಂಗ್ ಟೋನ್ ಹಾಕುವುದು, ಕ್ರಿಸ್ಮಸ್ ಗಾಗಿಯೇ ರಚಿಸಿರುವ ಹಾಡುಗಳನ್ನು ಹಾಡುವುದು ಕ್ರಿಸ್ತ ಜಯಂತಿಯ ಸಂಭ್ರಮದಲ್ಲಿ ಸೇರಿದೆ.