ಛಿದ್ರ - ಏಳು ಕಥೆಗಳು

ಛಿದ್ರ - ಏಳು ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ನಾಗತಿಹಳ್ಳಿ ಚಂದ್ರಶೇಖರ
ಪ್ರಕಾಶಕರು
ಅಭಿವ್ಯಕ್ತ, ಬನಶಂಕರಿ, ಬೆಂಗಳೂರು-೫೬೦೦೭೦
ಪುಸ್ತಕದ ಬೆಲೆ
ರೂ.೫೦.೦೦, ಮುದ್ರಣ: ೨೦೦೩ ಆಗಸ್ಟ್

ವಿಭಿನ್ನ ಶೈಲಿಯ ಕಥೆಗಳು ಹಾಗೂ ಲೇಖನಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಚಿತ್ರ ನಿರ್ದೇಶಕರೂ ಆಗಿರುವ ನಾಗತಿಹಳ್ಳಿ ಚಂದ್ರಶೇಖರವರ ೭ ಕಥೆಗಳ ಪುಟ್ಟ ಕಥಾ ಸಂಕಲನವೇ ‘ಛಿದ್ರ'. ಡಾ. ಯು.ಆರ್. ಅನಂತಮೂರ್ತಿಯವರು ಮುನ್ನುಡಿ ಬರೆದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ ಇವರ ಬಗ್ಗೆ ಅನಂತಮೂರ್ತಿಯವರು ಹೀಗೆ ಬರೆಯುತ್ತಾರೆ ‘ನಾಗತಿಹಳ್ಳಿ ನನ್ನ ಸಮಕಾಲೀನರಿಂದ ಕಲಿತವರಾಗಿದ್ದೂ ನವ್ಯವನ್ನು ದಾಟಿದವರು ; ಬಂಡಾಯ ಚಳುವಳಿಯಿಂದ ಪ್ರಭಾವಿತರಾಗಿದ್ದೂ ಅದನ್ನು ಮೀರಿದವರು. ನಾನು ತುಂಬಾ ಇಷ್ಟ ಪಡುವ ಈಚಿನ ಬರಹಗಾರರ ನಡುವೆ ಅನನ್ಯ ದೃಷ್ಟಿಕೋನವುಳ್ಳವರು. ಸತ್ಯಪಕ್ಷಪಾತಿಯೊಬ್ಬನ ಸಂಕಟ ಅವರ ಉತ್ತಮ ಬರವಣಿಗೆಯಲ್ಲಿ, ಅವರ ಬರವಣಿಗೆಯ ನೇಯ್ಗೆಯಲ್ಲೇ ಕಾಣುತ್ತದೆ ಎಂಬುದು ನಾನು ಅವರ ಬರವಣಿಗೆಯನ್ನು ಇಷ್ಟಪಡಲು ಕಾರಣ. ಕಥೆಗಾರರಿಗೆ ನಾಗತಿಹಳ್ಳಿ ಕಾಣುವ ಸತ್ಯದಲ್ಲೂ, ಕಾಣುವ ಕ್ರಮದಲ್ಲೂ ನನಗಿಂತ ಭಿನ್ನರೆಂಬುದು ಎಚ್ಚರದಿಂದಲೂ ಅವರನ್ನು ಓದುವಂತೆ ಮಾಡಿದೆ.’

ಪರಿವಿಡಿಯಲ್ಲಿ ಮೊದಲೇ ಹೇಳಿದಂತೆ ೭ ಕಥೆಗಳಿವೆ. ಯಾತ್ರೆ, ಸನ್ಯಾಸ, ಗಾಯ, ಪೂರ್ವಿ, ಛಿದ್ರ, ನಾಯಿಪಾಡು ಹಾಗೂ ನಾಟ್ಯರಾಣಿ ಶಾಂತಲೆ. ಕಥೆಗಳ ಬಗ್ಗೆ ಲೇಖಕರೇ ಹೇಳುವಂತೆ ‘ ಇವು ಬರೆದ ಕತೆಗಳಲ್ಲ- ಅವೇ ಬರೆಸಿಕೊಂಡದ್ದು, ಬರೆಸಿಕೊಳ್ಳುವಾಗ ಇವು ಒಡ್ಡಿದ ಬೆರಗು, ಸವಾಲು, ಸಂಕಟ, ವಿಸ್ಮಯ, ಆರ್ದ್ರತೆ ಮತ್ತು ಖುಷಿಗಾಗಿ ಈ ಕಥೆಗಳಿಗೆ ಕೃತಜ್ಞ.’

ಇಲ್ಲಿರುವ ‘ಸನ್ಯಾಸ’ ಎಂಬ ಕಥೆಯಂತೂ ಬಹಳ ವಿಡಂಬನಾತ್ಮಕ ರೀತಿಯಲ್ಲಿ ಚಿತ್ರಿತವಾಗಿದೆ. ಹುಟ್ಟಿನಿಂದ ಶ್ರೀಮಂತಿಕೆಯಲ್ಲೇ ಬದುಕಿದ ವ್ಯಕ್ತಿಯೊಬ್ಬ ಸನ್ಯಾಸಿಯಾಗಲು ಹೊರಟಾಗ ಅವನ ಮನದಲ್ಲಿ ಮೂಡಿದ ಹಾಗೂ ಅವನ ಮನೆಯವರ ವರ್ತನೆಗಳು ಬಹಳ ರೋಚಕವಾಗಿದೆ. ಅವರು ಸನ್ಯಾಸಿಯಾಗಲು ಮಾಡಿಕೊಂಡ ತಯಾರಿಯಂತೂ ಬಹಳ ಹಾಸ್ಯಮಯವಾಗಿದೆ. 

‘..... ಸುಮ್ಮನೆ ಎಂದೋ ಒಂದು ದಿನ ನಾಪತ್ತೆಯಾಗಿಬಿಡುವುದು, ಗುಹೆಯಲ್ಲಿ ಕೂತು ಬಿಡುವುದು, ಉದ್ದನೆಯ ಗಡ್ಡ ಬಿಡುವುದು, ಗೆಡ್ಡೆ ಗೆಣಸು ತಿನ್ನುವುದು ಇದೆಲ್ಲಾ ನನ್ನಿಂದಾಗುವುದಿಲ್ಲ. ನಾನು “ವ್ಯವಸ್ಥಿತ ಸನ್ಯಾಸಿ" ಆಗಬಲ್ಲೆ. ನಾನೆಲ್ಲಿರುತ್ತೇನೆ ಎಂಬುದು ಮನೆಯವರಿಗೆ ಗೊತ್ತಿರಬೇಕು. ಆದರೆ ಅವರು ನನ್ನನ್ನು ಹುಡುಕಿಕೊಂಡು ಬರಬಾರದು. ಭಕ್ಷ್ಯಭೋಜನಗಳು ಬೇಡವಾದರೂ ಉಪವಾಸ ಬೀಳಲಾರೆ. ನನ್ನ ಆಶ್ರಮದವರೆಗೆ ಕಾರಿನಲ್ಲೇ ಹೋಗಬೇಕು. ಅಶ್ರಮದಲ್ಲಿ ಟಿವಿ, ರೇಡಿಯೋ ಇರಬೇಕು. ನನ್ನ ಸುತ್ತಣ ಜಗತ್ತಿನಲ್ಲಿ ಏನಾಗುತ್ತದೆ ಎಂದು ತಿಳಿಯಬೇಕೆನಿಸಿದಾಗ ತಿಳಿಯುವ ಅವಕಾಶವಿರಬೇಕು. ನನ್ನ ಸನ್ಯಾಸೀ ಸಂಬಂಧ ಖರ್ಚು ವೆಚ್ಚಗಳೆಲ್ಲಾ ನನ್ನ ಹಣದಲ್ಲೇ ಭರಿಸುವಂತಿರಬೇಕು. ಸನ್ಯಾಸದ ಹೆಸರಿನಲ್ಲಿ ಸೊಳ್ಳೆ ಕಚ್ಚಿಸಿಕೊಂಡು ಕುಳಿತುಕೊಳ್ಳಲಾರೆ. ಏರ್ ಕಂಡೀಶನ್ ರೂಮಿನಲ್ಲಿ ಕೂತು ಧ್ಯಾನಿಸಿದರೆ ಏನು ತಪ್ಪು? ಒಂದು ಉಗ್ರ ಏಕಾಂತವಂತೂ ಬೇಕು. ಅದರೊಟ್ಟಿಗೆ ಸಹಜ ಸೌಲಭ್ಯಗಳು. ನಾನು ಪ್ರಾಣಾಯಾಮ ಮಾಡುವಾಗ ಬೇರಾರೂ ಬಾಗಿಲು ತಟ್ಟಬಾರದು. ಯೋಗಕ್ಕೆ ಕುಳಿತರೆ ಹೊರಜಗತ್ತಿನ ಸದ್ದುಗಳು ಕೇಳಬಾರದು. ...' ಹೀಗೆ ಬರೆದುದನ್ನು ಓದುವಾಗ ಹೈಫೈ ಸನ್ಯಾಸಿಯ ಚಿತ್ರ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ.

ಇಲ್ಲಿರುವ ಎಲ್ಲಾ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಲೇಖಕರು ಈ ಪುಸ್ತಕವನ್ನು ಪಿ.ಲಂಕೇಶ್ ಅವರಿಗೆ ಅರ್ಪಿಸಿದ್ದಾರೆ. ೭೦ ಪುಟಗಳ ಈ ಪುಟಾಣಿ ಕಥಾಸಂಕಲನವನ್ನು ಒಂದೇ ಏಟಿಗೆ ಓದಿ ಮುಗಿಸಬಹುದಾಗಿದೆ.