ಜಂಕ್ಷನ್ ಪಾಯಿಂಟ್

ಜಂಕ್ಷನ್ ಪಾಯಿಂಟ್

ಪುಸ್ತಕದ ಲೇಖಕ/ಕವಿಯ ಹೆಸರು
ದಾದಾಪೀರ್ ಜೈಮನ್
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೫

ದಾದಾಪೀರ್‌ ಜೈಮನ್‌ ಅವರ “ಜಂಕ್ಷನ್‌ ಪಾಯಿಂಟ್” ಎಂಬ ಅಂಕಣ ಬರಹಗಳ ಸಂಗ್ರಹವು ಒಂದು ಕಾಲದ ಚಿತ್ರಣವಷ್ಟೇ ಅಲ್ಲ, ಒಂದು ಸಮಾಜದ, ವ್ಯಕ್ತಿಗಳ, ಭಾವನೆಗಳ, ಕಷ್ಟ ಕೋಟಲೆಗಳ ಕನ್ನಡಿಯಾಗಿದೆ. ಕೋವಿಡ್‌ ಕಾಲದ ದುಗುಡ ದುಮ್ಮಾನಗಳು, ಅಕಾಲಿಕ ಮಳೆಯಿಂದ ಕವಿದ ಮೋಡದ ವಾತಾವರಣ, ಯುದ್ಧ, ದೌರ್ಜನ್ಯ, ಕೊಲೆ ಸರಣಿಗಳಂತಹ ಸುದ್ದಿಗಳ ನಡುವೆ, ಈ ಬರಹಗಳು ಓದುಗರ ಮನಸ್ಸಿನಲ್ಲಿ ಒಂದು ಭಾವನಾತ್ಮಕ ಜಂಕ್ಷನ್‌ ರಚಿಸುತ್ತವೆ. ಇದೊಂದು ಕೇವಲ ಕತೆಯ ಸಂಗ್ರಹವಲ್ಲ, ಬದುಕಿನ ಹಲವು ದಾರಿಗಳು ಕೂಡುವ, ಬೇರ್ಪಡುವ, ಒಡದು ಒಡದು ನಡೆಯುವ ಒಂದು ಜಾಗ.

ಈ ಕೃತಿಯ ಬರಹಗಳು ಕೋವಿಡ್‌ನ ಹೊಸ ತಳಿಯ ಸುದ್ದಿಗಳು, ಸರಕಾರದ ಟೆಸ್ಟಿಂಗ್‌ ಲ್ಯಾಬ್‌ ಸಿದ್ಧತೆಗಳು, ಕ್ಲೈಮೇಟ್‌ ಚೇಂಜ್‌ನಿಂದ ಉಂಟಾದ ಪ್ರಾಕೃತಿಕ ವಿಕೋಪಗಳು, ಸಾಮಾಜಿಕ ಕ್ಷೋಭೆಗಳು, ಜಾತಿ, ಧರ್ಮ, ಲಿಂಗ, ಭಾಷೆ, ಭೌಗೋಳಿಕ ಅಸಮಾನತೆಗಳಂತಹ ವಿಷಯಗಳೊಂದಿಗೆ ಸಮ್ಮಿಳಿತವಾದಂತಿವೆ. ದಾದಾಪೀರ್‌ ಇವುಗಳನ್ನು ಕೇವಲ ವಿಶ್ಲೇಷಣೆಯಾಗಿ ಬರೆಯದೆ, ಒಂದು ಕಾವ್ಯಾತ್ಮಕ, ಕಥನಾತ್ಮಕ ಶೈಲಿಯಲ್ಲಿ ಓದುಗರ ಮನಸ್ಸಿಗೆ ತಾಕುವಂತೆ ಚಿತ್ರಿಸಿದ್ದಾರೆ.

ಈ ಬರಹಗಳು ಓದುಗರನ್ನು ಒಂದು ಆತ್ಮಾವಲೋಕನದ ಪಯಣಕ್ಕೆ ಕರೆದೊಯ್ಯುತ್ತವೆ. ಒಬ್ಬ ಓದುಗನಾಗಿ ನನ್ನೊಳಗಿನ ಚಿಂತೆ, ನೋವು, ನಲಿವುಗಳನ್ನು ಈ ಬರಹಗಳು ಉಲ್ಬಣಗೊಳಿಸಿವೆ. ಆದರೆ ಅದೇ ಸಮಯದಲ್ಲಿ, ಇವು ನನ್ನನ್ನು ಮತ್ತಷ್ಟು ಮಾನವೀಯವಾಗಿ ಚಿಂತಿಸುವಂತೆ ಮಾಡಿವೆ. ದಾದಾಪೀರ್‌ ತಮ್ಮ ಬದುಕಿನ ಅನುಭವಗಳ ಜೊತೆಗೆ, ತಾವು ಭೇಟಿಯಾದ ವ್ಯಕ್ತಿಗಳ ಕಷ್ಟಕೋಟಲೆ, ಜೀವನ ಸಂಘರ್ಷಗಳನ್ನು ಸಾವಯವವಾಗಿ ತಾದಾತ್ಮ್ಯದಿಂದ ಬರೆದಿದ್ದಾರೆ. ಯಾರನ್ನೂ ತೀರ್ಪಿನ ದೃಷ್ಟಿಯಿಂದ ನೋಡದೆ, ಎಲ್ಲರ ಬದುಕಿನ ಹೋರಾಟವನ್ನು ತಮ್ಮದೇ ಆಗಿ ಒಡಮೂಡಿಸಿದ್ದಾರೆ.

ಮೊದಲ ಬರಹದಿಂದಲೇ ಈ ಕೃತಿಯ ಸಂವೇದನೆಯ ಆಳ ಗೊತ್ತಾಗುತ್ತದೆ. “ನಮಾಜ್‌ ಟೈಮ್‌” ಎಂದು ಒಬ್ಬರು ಇಂಟರ್‌ವ್ಯೂಗೆ ಬೇರೆ ಸಮಯ ಕೇಳಿದರೆ, ನಾವು ಬಹುಶಃ ಅವರನ್ನು ಕೈಬಿಡಬಹುದಿತ್ತು. ಆದರೆ ದಾದಾಪೀರ್‌ ಇಂತಹ ಕ್ಷಣಗಳನ್ನು ತಮ್ಮ ಬರವಣಿಗೆಯಲ್ಲಿ ಬಹುತ್ವದ ಗ್ರಹಿಕೆಯ ಒಂದು ಪಾಠವಾಗಿ ರೂಪಿಸಿದ್ದಾರೆ. ಇದು ಕೇವಲ ಮಾತಿನ ಬಹುತ್ವವಲ್ಲ, ಆಳದಲ್ಲಿ ಅರಿತು ನಡೆಯುವ ಬಹುತ್ವ.

“ಉಳಿದು ಬದುಕುವುದನ್ನೇ ಆಯ್ಕೆ ಮಾಡಿಕೊಂಡನ ಕಥೆ” ಎಂಬ ಬರಹದಲ್ಲಿ, “ಪ್ರತಿಯೊಬ್ಬರ ಬದುಕು ಕೂಡ ರೋಚಕ ಕಥೆಗಳ ಗುಚ್ಛವೇ ಆಗಿರುತ್ತದೆ” ಎಂದು ದಾದಾಪೀರ್‌ ಬರೆಯುತ್ತಾರೆ. ಆದರೆ ಈ ಕಥೆಗಳು ಹುಡುಕುವವರಿಗಷ್ಟೇ ಸಿಗುತ್ತವೆ. ಇನ್ನೊಬ್ಬರ ಬದುಕನ್ನು ಅರ್ಥಮಾಡಿಕೊಳ್ಳುವ, ಅವರ ಹೋರಾಟವನ್ನು ತಮ್ಮದೇ ಆಗಿಸಿಕೊಳ್ಳುವ ಸಂವೇದನೆಯೇ ಈ ಕೃತಿಯ ಶಕ್ತಿ. ಲೇಖಕರು ತಮ್ಮ ಪೂರ್ವಗ್ರಹಗಳನ್ನು ಮೀರಿಕೊಳ್ಳಲು ಯತ್ನಿಸುವ, ಅರಿವಿನ ದಾರಿಯಲ್ಲಿ ನಡೆಯುವ ಪ್ರಾಮಾಣಿಕತೆಯನ್ನು ತಮ್ಮ ಬರವಣಿಗೆಯಲ್ಲಿ ತೋರಿಸಿದ್ದಾರೆ.

ದಾದಾಪೀರ್‌ ಅವರ ಬರವಣಿಗೆಯ ಶೈಲಿಯೇ ಒಂದು ವಿಶೇಷತೆ. ರಾಜಕೀಯ ವಿಶ್ಲೇಷಣೆಯನ್ನು ಕಾವ್ಯದಂತೆ, ಕಥನದಂತೆ ಮಾಡುವ ಕಲೆ ಇವರಿಗೆ ಸಿದ್ಧಿಸಿದೆ. ಕೊಟ್ಟೂರೇಶ್ವರನ ಜಾತ್ರೆ, ಅಲಾಯಿ ಹಬ್ಬದ ಸಂಭ್ರಮವನ್ನು ಬರೆಯುವಾಗ, ಒಂದು ಆತಂಕದ ಹಿನ್ನೆಲೆಯನ್ನು ಇಟ್ಟುಕೊಂಡು, ಆದರೂ ಸೌಹಾರ್ದದ ಖುಷಿಯನ್ನು ಚಿತ್ರಿಸುತ್ತಾರೆ. ಗೆರೆ-ಗಡಿಗಳು, ಸಮಾಜದ ಒಡಂಬಡಿಕೆಗಳ ಗೆರೆಗಳು, ಒಣಿಯ ಚರಂಡಿಯ ಗೆರೆಗಳು—ಇವೆಲ್ಲವೂ ಈ ಬರಹಗಳಲ್ಲಿ ಮರುಕಳಿಸುತ್ತವೆ. ಒಡೆದ ಕನ್ನಡಿಯ ಚೂರುಗಳಂತೆ, ಬದುಕಿನ ಬಿಂಬಗಳು ಛಿದ್ರವಾಗಿರುತ್ತವೆ. ಆದರೆ ಆ ಚೂರುಗಳಲ್ಲೂ ಒಂದು ಸತ್ಯ ಕಾಣುತ್ತದೆ.

ದಾದಾಪೀರ್‌ ಅವರ ತಾಯಿಯ ಮಾತು—“ಚಿಂತಿ ಯಾಕ್ ಮಾಡ್ತಿಯಪಿ? ನಾವೆಲ್ಲಾ ನೆಲ ಅಗೆದು ಭೂಮಿತಾಯಿ ಹೊಟ್ಟೆಯೊಳಗ್‌ ಹೋಗಿ ಬಚ್ಚಿಟ್ಟುಕೊಂಡು ಬಿಡಾಣ”—ಒಂದು ಆರ್ದ್ರ, ಆದರೆ ಆತಂಕದ ಕಂಪನದ ಮಾತು. ಇಂತಹ ಮಾತುಗಳು ಸಾವಿರಾರು ತಾಯಿಯರ ಬಾಯಿಯಲ್ಲಿ, ಸಾವಿರಾರು ಕುಟುಂಬಗಳಲ್ಲಿ ಅನುರಣಿಸುತ್ತವೆ. ಈ ಕೃತಿಯ ಬರಹಗಳು ಕತ್ತಲಿನ ಕುರಿತೇ ಬರೆದರೂ, ಬೆಳಕಿನ ಹಂಬಲವನ್ನು, ಬೆಳಕಿನ ದಾರಿಯನ್ನು ತೋರಿಸುತ್ತವೆ.

ಪುಸ್ತಕದ ಬೆನ್ನುಡಿಯಲ್ಲಿ ಲೇಖಕರಾದ ಜನಾರ್ದನ ಕೆಸರಗದ್ದೆ ಇವರು “ಇದು ಲೇಖಕನೂ ಸೇರಿದಂತೆ ಹಲವು ಜನರ ಕಷ್ಟ ಕೋಟಲೆಗಳು, ದುಗುಡ ದುಮ್ಮಾನಗಳು,  ಭಾವನೆಗಳು, ಬದುಕಿನ ಬಗೆಗಿನ ಹಲವು ಗ್ರಹಿಕೆಗಳು ಸಂಧಿಸುವ ಜಂಕ್ಷನ್ ಪಾಯಿಂಟ್. ಹಲವು ದಾರಿಗಳು ಕೂಡುವ ಜಂಕ್ಷನ್ ಹಲವು ದಾರಿಗಳು ಹೊರಡುವ ಜಂಕ್ಷನ್ನೂ ಹೌದು. ಅಲ್ಲಿ ನಿಂತು ಕಿರು ಬೆಳಕಿನ ದಾರಿ ಸಿಗುವುದೋ ಎಂದು ನೋಡುವುದು ಓದುಗರ ನಿರೀಕ್ಷೆ. ನನಗೆ ಇಲ್ಲಿನ ಬರವಣಿಗೆ ಒಂದು ರೀತಿ ಸೆಮಿ ಫಿಕ್ಷನ್ನಂತೆ ಕಂಡಿದೆ. ಈ ಓದು ನನ್ನನ್ನು ಮತ್ತಷ್ಟು ಮನುಷ್ಯನನ್ನಾಗಿ ಮಾಡುತ್ತಿದೆಯೋ ಅಥವಾ ನನ್ನೊಳಗೆ ಮನೆ ಮಾಡಿಕೊಂಡಿರುವ ಚಿಂತೆಗಳನ್ನು ಇಮ್ಮಡಿಗೊಳಿಸುತ್ತಿದೆಯೋ ಎಂಬ ಗೊಂದಲವಾಗುತ್ತಿದೆ. ಈ ಬರಹಗಳು ಅಷ್ಟು ಕಾಡುತ್ತವೆ.” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

ಕನ್ನಡದಲ್ಲಿ ಹೊಸ ತಾತ್ವಿಕ ಚೌಕಟ್ಟಿನಲ್ಲಿ, ಹೊಸ ಪರಿಭಾಷೆಯಲ್ಲಿ ಬರೆಯುವ ದಾದಾಪೀರ್‌ ಜೈಮನ್‌ ಅವರಂತಹ ಯುವ ಲೇಖಕರ ಬಳಗವನ್ನು ಓದಲೇಬೇಕು. ೧೪೫ ಪುಟಗಳ ಈ ಪುಸ್ತಕದ ಓದು ಮನಸ್ಸಿಗೆ ಆಹ್ಲಾದ ನೀಡುವುದು ಖಂಡಿತ.