ಜಂಬೂಕ ಮೊದಲ ಅಧ್ಯಾಯ
ಹೇಮಂತ ಸಾಹಿತ್ಯ 53/1 ಕಾಟನ್ ಪೇಟೆ ಮುಖ್ಯ ರಸ್ತೆ ಬೆಂಗಳೂರು 560053
ದೂರವಾಣಿ 080 26702010
ಪುಟ 248
ಬೆಲೆ 160
ಇವರು ಪ್ರಕಟಿಸಿರುವ ನನ್ನ ಪ್ರಥಮ ಕಾದಂಬರಿ ' ಜಂಬೂಕ' ದ ಮೊದಲ ಅಧ್ಯಾಯ ಸಂಪದದ ಮಿತ್ರರಿಗಾಗಿ.
ಅಧ್ಯಾಯ 1
ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರೆಂಬ ಮಾಯಾನಗರಿಗೆ ವಿಶ್ವದ ಐಟಿ ದಿಗ್ಗಜ ಕಂಪನಿಗಳೆಲ್ಲಾ ಬಂದು ನೆಲೆಸಿ ಬೆಂಗಳೂರಿನ ಮೂಲನಿವಾಸಿಗಳು ‘ಸುತ್ತಮುತ್ತಲೂ ಏನಾಗುತ್ತಿದೆಯಪ್ಪಾ...’ ಎಂದು ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಬೆಂಗಳೂರು “ಸಿಲಿಕಾನ್ ಸಿಟಿ”ಯಾಗಿ ಪರಿವರ್ತನೆಗೊಂಡಿತ್ತು. ವಿಶ್ವದ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ವಿಶ್ವದ ಭೂಪಟದಲ್ಲಿ ಎದ್ದು ಕಾಣಿಸಿ ದೇಶದೆಲ್ಲೆಡೆಯಿದ್ದ ಮಹಾತ್ವಾಕಾಂಕ್ಷಿ ಯುವಕ-ಯುವತಿಯರನ್ನು ತನ್ನೆಡೆಗೆ ಸೆಳೆದುಕೊಂಡಿತ್ತು. ಪ್ರತೀ ಕ್ಷಣವನ್ನೂ ಬಿಡದೆ ಅನುಭವಿಸಿಬಿಡಬೇಕೆಂಬ ಇವರ ಮನೋಭಾವಕ್ಕೆ ಇಂಬು ಕೊಡುವಂತೆ ಸಿಲಿಕಾನ್ ಸಿಟಿಯ ತುಂಬಾ ಪಬ್ಬು, ಬಾರು, ಸ್ಪಾ, ಡಿಸ್ಕೋತೆಕ್, ಮಸಾಜ್ ಪಾರ್ಲರುಗಳು ತುಂಬಿಕೊಂಡು ಇದ್ದ ಖಾಲಿಜಾಗಗಳನ್ನೆಲ್ಲಾ ಶಾಪಿಂಗ್ ಮಾಲ್ಗಳು, ಮಲ್ಟಿಫ್ಲೆಕ್ಸ್ಗಳು, ಗಗನಚುಂಬಿ ಕಟ್ಟಡಗಳು ಆವರಿಸಿಕೊಂಡವು. ಆಕಾಶದೆತ್ತರಕ್ಕೆ ತಲೆ ಎತ್ತಿನಿಂತ ಅಪಾರ್ಟ್ಮೆಂಟ್ಗಳು, ವೈಭವೋಪೇತ ಹೋಟೆಲ್ಗಳು, ಹೊರವರ್ತುಲ ರಸ್ತೆಗಳು, ಮೇಲು ಸೇತುವೆಗಳು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೊ ರೈಲುಗಳಿಂದ ಅಲಂಕೃತವಾದ ಉದ್ಯಾನನಗರಿ ಮತ್ತಷ್ಟು ಸೌಂದರ್ಯ ತುಂಬಿಕೊಂಡು ಕಂಗೊಳಿಸುತ್ತಿತ್ತು. ವೇಗವಾಗಿ ಬೆಳೆಯುತ್ತಿರುವ ಎಲ್ಲಾ ಮಹಾನಗರಗಳಂತೆ ಪೊಲ್ಯೂಷನ್, ಟ್ರಾಫಿಕ್ ಟೆನ್ಶನ್ನು..............ಇತ್ಯಾದಿಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದ್ದರೂ ಕೂಡ ಸಂಜೆಯಾದಂತೆ ಇದೆಲ್ಲಾ ಮಾಮೂಲೆಂಬಂತೆ ಝಗಮಗಿಸುವ ವಿದ್ಯುತ್ ದೀಪಗಳಿಂದ ಸಿಂಗರಿಸಿಕೊಂಡು ‘ಸಾಧಿಸು, ಸಂಪಾದಿಸು, ಸಂತೋಷಪಡು’ ಎಂಬ ಯುವಜನರ ಪಾಲಿಗೆ ಸ್ವರ್ಗಸದೃಶವಾಗಿಬಿಡುತಿತ್ತು.
ಒಂದು ಶನಿವಾರದ ಸಂಜೆ ಈ ಸಿಲಿಕಾನ್ ಸಿಟಿಯ ಪ್ರತಿಷ್ಠಿತ ‘ಹಾಟ್ಸ್ಪಾಟ್’ ಪಬ್ನ ಮೂಲೆಯೊಂದರಲ್ಲಿ ಪ್ರಖ್ಯಾತ ಬಹುರಾಷ್ಟ್ರೀಯ ಐಟಿ ಕಂಪೆನಿಯೊಂದರ ಸಾಫ್ಟ್ವೇರ್ ಎಂಜಿನಿಯರುಗಳಾದ ಅಂಕಿತ್, ರಮೇಶ, ವಿಜೇತ ಮತ್ತು ನವೀನ್ರೆಡ್ಡಿ ಒಟ್ಟಿಗೆ ಕುಳಿತು ತಣ್ಣನೆಯ ಬಿಯರ್ ಹೀರುತ್ತಿದ್ದರು. ಪಬ್ನಲ್ಲಿದ್ದ ಮಂದ ಬೆಳಕಿಗೆ ಹಿನ್ನಲೆಯಲ್ಲಿ ಕೇಳಿಬರುತ್ತಿದ್ದ ಲಘು ಸಂಗೀತ ಬೆರೆತು ಬಿಯರ್ನ ಸವಿಯನ್ನು ಹೆಚ್ಚಿಸಿದ್ದವು.
ಸೋಮವಾರದಿಂದ ಶುಕ್ರವಾರದವರೆಗೆ ಕಣ್ಣು ಬಿಟ್ಟರೆ ಕಂಪ್ಯೂಟರ್ ತೆರೆ, ಮುಟ್ಟಿದರೆ ಕೀಬೋರ್ಡ್ ಎಂಬಂತೆ ಹಗಲಿರುಳೆನ್ನದೆ ಮೈಮರೆತು ದುಡಿಯುತ್ತಿದ್ದವರಿಗೆ ಶುಕ್ರವಾರ ಸಂಜೆಯಾದ ತಕ್ಷಣ ವೀಕೆಂಡ್ ಫೀವರ್ ತಗಲುತ್ತಿತ್ತು. ಶನಿವಾರ ಮತ್ತು ಭಾನುವಾರಗಳಂದು ಎಲ್ಲರೂ ಒಟ್ಟಾಗಿ ನಗರದಲ್ಲಿದ್ದ ಶಾಪಿಂಗ್ ಮಾಲ್ಗಳನ್ನು ಸುತ್ತಿಕೊಂಡು ಮಲ್ಟಿಫ್ಲೆಕ್ಸ್ನಲ್ಲಿ ಯಾವುದಾದರೊಂದು ಪಿಕ್ಚರ್ ನೋಡಿ ಸಂಜೆ ಪಬ್ನಲ್ಲಿ ಕುಳಿತು ಬಿಯರ್ ಕುಡಿದು ತಮ್ಮ ವೃತ್ತಿ ಜೀವನದ ಏಕತಾನತೆಯನ್ನು ಮರೆಯುವುದು ಅವರಿಗೆ ಅಭ್ಯಾಸವಾಗಿತ್ತು.
ಅಲ್ಲಿ ಕುಳಿತಿದ್ದ ನಾಲ್ವರೂ ಹುಡುಗರು ಇಪ್ಪತ್ತನಾಲ್ಕರಿಂದ ಇಪ್ಪತ್ತೈದು ವರ್ಷ ವಯಸ್ಸಿನ ಉತ್ಸಾಹೀ ಯುವಕರಾಗಿದ್ದು, ಎರಡು ವರ್ಷಗಳ ಹಿಂದೆ ಒಟ್ಟಿಗೇ ಕೆಲಸಕ್ಕೆ ಸೇರಿದ್ದರು. ಕಂಪನಿಯಲ್ಲಿ ಒಂದು ಮುಖ್ಯ ಪ್ರಾಜೆಕ್ಟನ್ನು ಕಾರ್ಯಗತಗೊಳಿಸಲು ರಚಿಸಲಾಗಿದ್ದ ಟೀಮ್ನಲ್ಲಿ ಇವರೆಲ್ಲಾ ಒಟ್ಟಿಗೆ ಕೆಲಸ ಮಾಡುತ್ತಿದ್ದುದರಿಂದ ಆತ್ಮೀಯತೆ ಬೆಳೆದು ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಹ ಗೆಳೆತನವೊಂದು ಅವರುಗಳ ಮಧ್ಯೆ ರೂಪುಗೊಂಡಿತ್ತು.
ಒಟ್ಟು ಐದು ಜನರಿದ್ದ ಇವರ ಟೀಮಿಗೆ ಲೀಡರ್ ಆಗಿದ್ದ ಅಂಕಿತ್ ಸೌಮ್ಯ ಸ್ವಭಾವದ ಸ್ನೇಹಜೀವಿ. ತನ್ನ ಬುದ್ಧಿವಂತಿಕೆ, ಶಿಸ್ತು, ಸಂಯಮ ಮತ್ತು ಕಷ್ಟಪಟ್ಟು ಕೆಲಸ ಮಾಡುವ ಗುಣಗಳಿಂದ ಬಹುಬೇಗ ಕಂಪನಿಯ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರನಾಗಿದ್ದ. ಅಂಕಿತನ ತಂದೆ ಡಾ|| ಹರಿಪ್ರಸಾದರು ಇಸ್ರೋ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿದ್ದರು. ತಾಯಿ ಸುಮತಿ ಒಳ್ಳೆಯ ಗೃಹಿಣಿಯಾಗಿದ್ದಳು. ತಂಗಿ ಪಿಂಕಿ ಪಿಯುಸಿ ಮುಗಿಸಿದ ನಂತರ ಇಷ್ಟಪಟ್ಟು ಪ್ಯಾಷನ್ ಡಿಸೈನಿಂಗ್ ಕೋರ್ಸ್ಗೆ ಸೇರಿ ಈಗ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ರಮೇಶ ಅಂಕಿತನ ಬಾಲ್ಯ ಸ್ನೇಹಿತ ಮತ್ತು ಎಂಜಿನಿಯರಿಂಗ್ ಪದವಿಯಲ್ಲಿ ಸಹಪಾಠಿ. ಈತನಿಗೆ ಗಣಿತದಲ್ಲಿ ಹೆಚ್ಚು ಆಸಕ್ತಿ ಇತ್ತು. ಎಷ್ಟೇ ಕ್ಲಿಷ್ಟಕರವಾದ ಸಮಸ್ಯೆಗಳನ್ನೂ ಕ್ಷಣಮಾತ್ರದಲ್ಲಿ ಬಿಡಿಸಬಲ್ಲನವಾಗಿದ್ದ. ತಂದೆ ಪ್ರಹ್ಲಾದರಾಯರು ರಾಷ್ಟ್ರೀಕೃತ ಬ್ಯಾಂಕ್ವೊಂದರಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರಾಗಿ ಕೆಲಸ ಮಾಡುತ್ತಿದ್ದರು. ತಾಯಿ ಅಂಬುಜಮ್ಮ ಸಂಪ್ರದಾಯಸ್ಥ ಗೃಹಿಣಿಯಾಗಿದ್ದರು. ಅಂಕಿತನ ಬಾಲ್ಯ ಸ್ನೇಹಿತನಾಗಿದ್ದ ರಮೇಶ ತನ್ನ ಹೆಚ್ಚಿನ ಸಮಯವನ್ನು ಅಂಕಿತನ ಮನೆಯಲ್ಲಿಯೇ ಕಳೆಯುತ್ತಿದ್ದ. ಇದರಿಂದಾಗಿ ಅಂಕಿತನ ತಂಗಿ ಪಿಂಕಿಯೆಡೆಗೆ ಆತ ಆಕರ್ಷಿತನಾಗಿದ್ದ. ಆದರೆ ಇದುವರೆಗೆ ಆ ವಿಷಯವನ್ನು ಆತ ಯಾರಲ್ಲಿಯೂ ಹೇಳಿಕೊಳ್ಳುವ ಧೈರ್ಯ ಮಾಡಿರಲಿಲ್ಲ.
ವಿಜೇತನ ತಂದೆ ರಾಮೇಗೌಡರು ಚಿಕ್ಕಮಗಳೂರಿನಲ್ಲಿ ಕಾಫಿ ಪ್ಲಾಂಟರಾಗಿದ್ದರು. ಬೆಂಗಳೂರಿನಲ್ಲಿಯೇ ಎಂಜಿನಿಯರಿಂಗ್ ಪದವಿ ಮುಗಿಸಿದ್ದ ವಿಜೇತನಿಗೆ ಕೆಲಸ ಸಿಕ್ಕ ಮೇಲೆ ಇವರೆಲ್ಲಾ ಪರಿಚಯವಾಗಿ ಆತ್ಮೀಯತೆ ಬೆಳೆದಿತ್ತು. ಬಿಯರ್ ಕುಡಿಯುವ ಇಲ್ಲವೇ ಸಿಗರೇಟು ಸೇದುವ ಯಾವ ಅಭ್ಯಾಸಗಳೂ ಅವನಿಗೆ ಇರಲಿಲ್ಲ. ಆದರೆ ಸ್ನೇಹಿತರೆಂದರೆ ಆತನಿಗೆ ಪ್ರಾಣ. ಅವರ ಹಿಂದೆಯೇ ಯಾವಾಗಲೂ ಇರುತ್ತಿದ್ದ ವಿಜೇತನನ್ನು ಕಂಡರೆ ಎಲ್ಲರಿಗೂ ಬಹಳ ಇಷ್ಟ ಮತ್ತು ಸಲಿಗೆ ಕೂಡ. ಎಲ್ಲರೂ ಅವನನ್ನು ‘ವಿಜಿ ಕಿಡ್’ ಎಂದೇ ಸಂಬೋಧಿಸುತ್ತಿದ್ದರು ಮತ್ತು ಸಮಯ ಸಿಕ್ಕಾಗಲೆಲ್ಲಾ ಪ್ರೀತಿಯಿಂದ ರೇಗಿಸಲು ಇಷ್ಟಪಡುತ್ತಿದ್ದರು.
ಇನ್ನು ನವೀನ್ರೆಡ್ಡಿ ಮೂಲತಃ ಆಂಧ್ರ ಪ್ರದೇಶದ ಕುಪ್ಪಂನವನು. ಅಲ್ಲಿ ಆತನ ತಂದೆ ರಂಗಾರೆಡ್ಡಿಯವರು ಗ್ರಾನೈಟ್ ವ್ಯಾಪಾರಿಯಾಗಿದ್ದರು. ವ್ಯಾಪಾರಿ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದಿದ್ದ ರೆಡ್ಡಿ ಯಾವುದಕ್ಕೂ ಹೆದರುತ್ತಿರಲಿಲ್ಲ. ತುಸು ವಾಚಾಳಿ ಮತ್ತು ಒರಟು ಸ್ವಭಾವದವನಾಗಿದ್ದರೂ ತನ್ನ ಸ್ನೇಹಿತರಿಗಾಗಿ ಜೀವ ಕೊಟ್ಟೇನೆಂಬ ಮನೋಭಾವ ಅವನಲ್ಲಿತ್ತು. ಕಂಪೆನಿಯಿಂದ ಹೊರಗೆ ಸಿಗರೇಟು ಅವನ ಸಂಗಾತಿಯಾಗಿರುತ್ತಿತ್ತು. ಇಂದು ಇಂದಿಗೆ, ನಾಳೆ ನಾಳೆಗೆ ಎನ್ನುವ ಸಿದ್ಧಾಂತ ಅವನದು. ಬೆಂಗಳೂರಿನಲ್ಲಿಯೇ ಎಂಜಿನಿಯರಿಂಗ್ ಪದವಿ ಮುಗಿಸಿದ್ದ ಆತ ಕೆಲಸಕ್ಕೆ ಸೇರಿ ತನ್ನ ನಿಷ್ಕಲ್ಮಶ ಹೃದಯದಿಂದಾಗಿ ಸ್ನೇಹಿತರಿಗೆಲ್ಲಾ ಆತ್ಮೀಯನಾಗಿದ್ದ.
ಇವರ ಟೀಮ್ನಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಸಾಫ್ಟ್ವೇರ್ ಎಂಜಿನಿಯರ್ ವೈಶಾಲಿ ಮುಂಬಯಿಯ ಕಡೆಯ ಹುಡುಗಿ. ಎಲ್ಲರ ಪಾಲಿಗೆ ಡೀಸೆಂಟ್ಗರ್ಲ್. ಯಾವುದೇ ಕೆಲಸವಾದರೂ ಅತೀವ ಶ್ರದ್ಧೆ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ವೈಶಾಲಿಗೆ ಇವರೆಲ್ಲಾ ಉತ್ತಮ ಸ್ನೇಹಿತರಾಗಿದ್ದರು. ಆದರೆ ಅಂಕಿತನ ಸೌಮ್ಯ ಸ್ವಭಾವ ಮತ್ತು ಬುದ್ಧಿವಂತಿಕೆ ಕಂಡು ಆತನೆಡೆಗೆ ಹೆಚ್ಚು ಆಕರ್ಷಿತಳಾಗಿದ್ದ ವೈಶಾಲಿ ವೀಕೆಂಡ್ನ ಕೆಲವು ದಿನಗಳಲ್ಲಿ ಅಂಕಿತನ ಜೊತೆ ನಗರ ಸುತ್ತುತ್ತಿದ್ದುದು ಗುಟ್ಟಾಗಿಯೇನೂ ಉಳಿದಿರಲಿಲ್ಲ. ಆದರೆ ಅವರಿಬ್ಬರ ಮಧ್ಯೆ ಒಳ್ಳೆಯ ಗೆಳೆತನವನ್ನು ಹೊರತುಪಡಿಸಿ ಪ್ರೀತಿ ಪ್ರೇಮದಂತಹ ಭಾವನೆಗಳೇನೂ ಮೂಡಿರಲಿಲ್ಲ. ಅಂಕಿತನಂತಹ ಮುದ್ದಾದ ಹುಡುಗನ ಜೊತೆ ಇವಳ ಸ್ನೇಹ, ಸಲುಗೆ ಕಂಡು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇತರ ಹುಡುಗಿಯರಾದ ಜೂಲಿ, ನಯನ, ಪಮ್ಮಿ ಮತ್ತು ಮಿನ್ನಿಯರಿಗೆ ಇವಳ ಬಗ್ಗೆ ಹೊಟ್ಟೆಕಿಚ್ಚಾಗಿತ್ತು.
ಅದೂ ಇದೂ ಮಾತನಾಡಿಕೊಂಡು ಆಗಲೇ ಮೂರ್ನಾಲ್ಕು ಮಗ್ ಬಿಯರ್ ಕುಡಿದಿದ್ದ ಅಂಕಿತ್, ರಮೇಶ ಮತ್ತು ರೆಡ್ಡಿಗೆ ಪಬ್ನೊಳಗಿದ್ದ ಮಂದ ಬೆಳಕಿನ ದೀಪಗಳು ಇನ್ನೂ ಮಬ್ಬಾಗಿ ಕಾಣತೊಡಗಿದವು. ಅಷ್ಟರಲ್ಲಾಗಲೇ ಪಬ್ನಲ್ಲಿದ್ದ ಎಲ್ಲಾ ಟೇಬಲ್ಗಳೂ ಭರ್ತಿಯಾಗಿ ಹುಡುಗ-ಹುಡುಗಿಯರಿಂದ ತುಂಬಿ ತುಳುಕಾಡುತ್ತಿದ್ದವು. ಕೆಲವು ಟೇಬಲ್ಗಳಲ್ಲಿ ಎರಡು-ಮೂರು ಹುಡುಗಿಯರು ಮಾತ್ರ ಕುಳಿತಿದ್ದರೆ, ಮತ್ತೆ ಕೆಲವು ಟೇಬಲ್ಗಳಲ್ಲಿ ಹುಡುಗಿಯರು ತಮ್ಮ ಗೆಳೆಯರೊಂದಿಗೆ ಕುಳಿತು ಬಿಯರ್ ಕುಡಿಯುತ್ತಿದ್ದರು. ಪಬ್ನೊಳಗೆಲ್ಲಾ ಸಿಗರೇಟಿನ ಹೊಗೆ ತುಂಬಿ ತೇಲಾಡುತ್ತಿತ್ತು. ಸಿಗರೇಟಿನ ಹೊಗೆಯ ಜೊತೆಯಲ್ಲಿ ಅಲ್ಲಿ ಸುತ್ತಲೂ ಕುಳಿತಿದ್ದ ಹುಡುಗ-ಹುಡುಗಿಯರು ತಮ್ಮ ಮೈ-ಕೈಗಳಿಗೆಲ್ಲಾ ಪೂಸಿಕೊಂಡಿದ್ದ ಸುಗಂಧ ದ್ರವ್ಯಗಳ ಪರಿಮಳ ಸೇರಿ ಒಂದು ರೀತಿಯ ಅಮಲೇರಿಸುವ ವಿಚಿತ್ರ ವಾಸನೆಯೊಂದು ಸೃಷ್ಟಿಯಾಗಿತ್ತು.
ಬರೀ ಸಾಫ್ಟ್ ಡ್ರಿಂಕೊಂದನ್ನು ಕುಡಿದು ಕುಳಿತಿದ್ದ ವಿಜೇತ ಪಬ್ನಲ್ಲಿ ಮೂಡಿದ್ದ ವಾತಾವರಣವನ್ನು ಕುತೂಹಲದಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಏನೂ ಅಚಾತುರ್ಯವಾಗದಂತೆ ತಡೆಯಲು ಸೂಟು ಧರಿಸಿ ಟೈ ಕಟ್ಟಿಕೊಂಡು ಕಟ್ಟುಮಸ್ತಾಗಿದ್ದ ಐದಾರು ಜನ ಬೌನ್ಸರ್ಗಳು ಪಬ್ನಲ್ಲಿ ಅಲ್ಲಲ್ಲಿ ಗಮನಿಸಿಕೊಂಡು ಅತ್ತಿಂದಿತ್ತ ತಿರುಗುತ್ತಿದ್ದರು. ಕುಡಿದ ಮತ್ತಿನಲ್ಲಿ ಇತರರಿಗೆ ತೊಂದರೆ ಕೊಡುವ ಹುಡುಗರನ್ನು ಅನಾಮತ್ತಾಗಿ ಎತ್ತಿಕೊಂಡು ಆಚೆ ಹಾಕಲು ಅವರು ಸಿದ್ಧರಾದಂತಿತ್ತು.
ಸ್ವಲ್ಪ ಹೊತ್ತಿನಲ್ಲಿಯೇ ಶುರುವಾದ ಕಿವಿಗಡಚಿಕ್ಕುವ ರಾಕ್ ಸಂಗೀತದ ಸದ್ದು ಅಲ್ಲಿ ನೆರೆದಿದ್ದವರ ಎದೆಗೇ ನೇರವಾಗಿ ಬಂದು ಬಡಿದಂತೆ ಭಾಸವಾಗುತ್ತಿತ್ತು. ಬಿಯರ್ ಕುಡಿದು ಅಮಲೇರಿ ಕುಳಿತಿದ್ದ ಹುಡುಗ- ಹುಡುಗಿಯರೆಲ್ಲಾ ತಮ್ಮ ಜೊತೆಗಾರರೊಂದಿಗೆ ಡ್ಯಾನ್ಸಿಂಗ್ ಫ್ಲೋರ್ಗೆ ನಡೆದು ಉನ್ಮಾದದಿಂದ ನರ್ತಿಸತೊಡಗಿದರು.
ಅಷ್ಟು ಹೊತ್ತಿಗಾಗಲೇ ಬಿಯರ್ನ ಪ್ರಭಾವಕ್ಕೊಳಗಾಗಿದ್ದ ಅಂಕಿತ್, ರಮೇಶ ಮತ್ತು ರೆಡ್ಡಿ ಕುಳಿತಲ್ಲಿಂದ ಎದ್ದು ಡ್ಯಾನ್ಸಿಂಗ್ ಫ್ಲೋರ್ ಬಳಿ ನಡೆದರು. ‘ನೀವು ಹೋಗ್ರಪ್ಪಾ, ನಾನು ಇಲ್ಲೇ ಕುಳಿತು ಎಂಜಾಯ್ ಮಾಡ್ತೀನಿ’ ಎಂದ ವಿಜೇತನ ಕೈಹಿಡಿದು ಎಳೆದ ರೆಡ್ಡಿ, ‘ಸುಮ್ನೆ ಬಾ ಕಿಡ್ ತರಲೆ ಮಾಡ್ಬೇಡ, ನೀನು ಜೊತೇಲಿಲ್ದೆ ಇದ್ರೆ ನಮ್ಗೆಲ್ಲಾ ಡ್ಯಾನ್ಸ್ ಮಜಾ ಸಿಕ್ಕಲ್ಲಾ’ ಎಂದು ಪುಸಲಾಯಿಸಿದ. ವಿಜೇತ ಎದ್ದು ಡ್ಯಾನ್ಸಿಂಗ್ ಫ್ಲೋರ್ಗೆ ಬಂದು ಅವರೆಲ್ಲರ ಜೊತೆ ಹೆಜ್ಜೆ ಹಾಕತೊಡಗಿದ. ಗೋಡೆ ಮತ್ತು ಛಾವಣಿಗೆ ಅಳವಡಿಸಿದ್ದ ವಿದ್ಯುತ್ ದೀಪಗಳು ಮಿಣುಕು ಹುಳಗಳಂತೆ ಕಣ್ಣಾಮುಚ್ಚಾಲೆ ಆಡತೊಡಗಿದಾಗ ಹುಡುಗ-ಹುಡುಗಿಯರೆಲ್ಲಾ ‘ಹೋ’ ಎಂದು ಕೂಗಿಕೊಂಡು ತಮ್ಮ ಜೊತೆಗಾರರ ಕೈ ಮತ್ತು ಸೊಂಟಗಳನ್ನು ಹಿಡಿದು ನರ್ತಿಸತೊಡಗಿದರು.
ತುಸು ಹೊತ್ತಿನ ನಂತರ ಅಸ್ಪಷ್ಟವಾದ ಮಂಕು ಬೆಳಕಿನಲ್ಲಿ ಕಾಣಿಸದೆ ವಿಜೇತ ಪಕ್ಕದಲ್ಲಿ ಧಡೂತಿ ಆಸಾಮಿಯೊಬ್ಬನೊಂದಿಗೆ ನರ್ತಿಸುತ್ತಿದ್ದ ಬಿಳಿಯ ಹುಡುಗಿಯ ಕಾಲನ್ನು ತುಳಿದು, ತಕ್ಷಣವೇ ‘ಸಾರಿ’ ಎಂದು ತನ್ನ ಕಾಲನ್ನು ಪಕ್ಕಕ್ಕೆ ತಂದುಕೊಂಡ. ಆ ಹುಡುಗಿ ಕೋಪದಿಂದ ‘ಯೂ ರ್ಯಾಸ್ಕಲ್’ ಎಂದು ಬೈಯ್ದು ತನ್ನ ಗೆಳೆಯನೊಂದಿಗೆ ನರ್ತಿಸುವುದರಲ್ಲಿ ತಲ್ಲೀನಳಾದಳು. ಆಕೆಯ ಜೊತೆಯಲ್ಲಿ ನರ್ತಿಸುತ್ತಿದ್ದ ಧಡೂತಿ ಆಸಾಮಿ ತುಸು ಕೋಪಗೊಂಡು ನರ್ತಿಸುತ್ತಲೇ ವಿಜೇತನ ಹತ್ತಿರಕ್ಕೆ ಬಂದು ತನ್ನ ದಪ್ಪ ಪೃಷ್ಠದಿಂದ ವಿಜೇತನನ್ನು ತಳ್ಳತೊಡಗಿದ. ಇದನ್ನು ಕಂಡು ರಮೇಶ, ಅಂಕಿತ್ ಮತ್ತು ರೆಡ್ಡಿಗೆ ತೀವ್ರ ಸಿಟ್ಟು ಬಂದಿತು. ಎತ್ತರವಾಗಿದ್ದ ರೆಡ್ಡಿ ತನ್ನ ಮೂವರೂ ಸ್ನೇಹಿತರನ್ನು ಒಂದು ಪಕ್ಕಕ್ಕೆ ಸರಿಸಿಕೊಂಡು ನರ್ತಿಸುತ್ತಲೇ ಆ ಧಡೂತಿ ಆಸಾಮಿಯ ಪೃಷ್ಠವನ್ನು ತನ್ನ ಪೃಷ್ಠದಿಂದ ಜೋರಾಗಿ ತಳ್ಳತೊಡಗಿದಾಗ ವಿಜೇತನಿಗೆ ‘ಏನಾದರೂ ಜಗಳ ಶುರುವಾದರೆ ರೆಡ್ಡಿ ಅವನಿಗೆ ಹಿಡಿದು ನಾಲ್ಕು ಬಾರಿಸಿ ದೊಡ್ಡ ರಾದ್ಧಾಂತವಾಗುತ್ತದೆ’ ಎಂದು ಹೆದರಿಕೆಯಾಗತೊಡಗಿತು. ಅಷ್ಟರಲ್ಲಿ ಆ ಧಡೂತಿ ಆಸಾಮಿಗೆ ಏನನ್ನಿಸಿತೋ ತನ್ನ ಗೆಳತಿಯನ್ನು ಎಳೆದುಕೊಂಡು ಗುಂಪಿನಲ್ಲಿ ಅತ್ತಕಡೆ ಸರಿದು ಹೋದ.
ಸ್ವಲ್ಪ ಹೊತ್ತಿನ ನಂತರ ವಿಜೇತ ‘ನಡಿರೋ.. ಊಟ ಮಾಡ್ಕೊಂಡು ಹೋಗೋಣ.. ಟೈಮಾಯಿತು’ ಎಂದು ಎಲ್ಲರನ್ನು ಒತ್ತಾಯಿಸತೊಡಗಿದ. ರಮೇಶ ‘ಇರೋ ಸ್ವಲ್ಪ ಹೊತ್ತು’ ಎಂದಾಗ ಸುಮ್ಮನಾದ ವಿಜೇತ ಮತ್ತೆ ಸ್ವಲ್ಪ ಹೊತ್ತಿನ ನಂತರ ‘ನಡಿರೋ.. ಹೋಗೋಣ..’ ಎಂದು ಅವಸರಿಸಿದ. ಅಂಕಿತ್ ಈ ಬಾರಿ ವಿಜೇತ ಬೇಸರ ಮಾಡಿಕೊಂಡಾನು ಎಂದುಕೊಂಡು ‘ಸರಿ ನಡೀರಪ್ಪಾ.. ಊಟಕ್ಕೋಗೋಣ’ ಎಂದಾಗ ಎಲ್ಲರೂ ಪಬ್ನಿಂದ ಹೊರಗೆ ಬಂದು ಪಕ್ಕದಲ್ಲಿದ್ದ ರೆಸ್ಟೋರೆಂಟಿನಲ್ಲಿ ಕುಳಿತು ಊಟ ಮಾಡತೊಡಗಿದರು.
ಪ್ರತೀ ವೀಕೆಂಡನ್ನು ತನ್ನ ಸ್ನೇಹಿತರ ಜೊತೆ ಬೆಂಗಳೂರಿನಲ್ಲಿಯೇ ಸುತ್ತಿಕೊಂಡು ಎರಡು ವರ್ಷಗಳಲ್ಲಿ ಇದ್ದಬದ್ದ ಪಬ್ಗಳನ್ನೆಲ್ಲಾ ಜಾಲಾಡಿ ಕಾಲ ಕಳೆದಿದ್ದ ಅಂಕಿತನಿಗೆ ಮುಂದಿನ ವೀಕೆಂಡ್ಗೆ ಎಲ್ಲಾದರೂ ಹೊರಗೆ ಹೋಗೋಣವೆನಿಸಿತ್ತು. ವಿಜೇತನನ್ನು ರೇಗಿಸಲೆಂದು-
‘ಏನ್ ವಿಜಿಕಿಡ್, ನೆಕ್ಟ್ ವೀಕ್ ಮಂಡೇನೂ ರಜ, ನಿಮ್ಮೂರಿಗೆ ಹೋಗೋಣವೇ..’ ಎಂದ.
“ಅದಕ್ಕೇನು ಅಂಕಿ, ಖಂಡಿತ ಹೋಗೋಣ. ಹೇಗಿದ್ರೂ ನೀವೆಲ್ಲಾ ನಮ್ ಎಸ್ಟೇಟ್ ನೋಡಿಲ್ಲ.. ನಮ್ ಡ್ಯಾಡಿಗೇಳ್ತೀನಿ ಎಲ್ಲಾ ಅರೆಂಜ್ ಮಾಡ್ತಾರೆ.” ವಿಜೇತ ಉತ್ಸಾಹದಿಂದ ಹೇಳಿದ.
ಸುಮ್ಮನೆ ಹೇಳಿದ್ದನ್ನೇ ಸೀರಿಯಸ್ಸಾಗಿ ತೆಗೆದುಕೊಂಡ ವಿಜೇತನನ್ನು ಕಂಡು ಅಂಕಿತ್ ನಗುತ್ತಾ ‘ಸುಮ್ನೆ ಹೇಳ್ದೆ ಕಿಡ್, ನಿಮ್ ಡ್ಯಾಡಿ ಮಮ್ಮಿಗೆಲ್ಲಾ ಸುಮ್ನೆ ತೊಂದ್ರೆ ಕೊಡೋದು ಬೇಡ, ಬೇರೆಲ್ಲಾದರೂ ಹೋಗೋಣ.’ ಅಂದ.
“ಹಾಗೇನಿಲ್ಲ ಅಂಕಿ.. ಅದರಲ್ಲೇನು ತೊಂದ್ರೆ..? ನಮ್ ಡ್ಯಾಡಿ ಮಮ್ಮೀನೂ ಖುಷಿಯಾಗ್ತಾರೆ.. ಯಾವಾಗ್ಲೂ ಹೇಳ್ತಾ ಇರ್ತಾರೆ, ನಿನ್ ಫ್ರೆಂಡ್ಸ್ನೆಲ್ಲಾ ಒಂದ್ಸಾರಿ ಕರ್ಕೊಂಡು ಬಾ ಅಂತ. ನೆಕ್ಟ್ ವೀಕ್ ಹೋಗೋಣ” ಎಂದು ಪಟ್ಟು ಹಿಡಿದ ವಿಜೇತ.
ರಮೇಶ ಮತ್ತು ರೆಡ್ಡಿ ಒಪ್ಪಲಿಲ್ಲ.
‘ಬೇಡಾ ಅಂಕಿ.. ಅವರಿಗೆಲ್ಲಾ ಸುಮ್ನೆ ತೊಂದ್ರೆ ಯಾಕೆ? ಬೇರೆ ಯಾವುದಾದ್ರೂ ಪ್ಲೇಸ್ ಸೆಲೆಕ್ಟ್ ಮಾಡು. ಅಲ್ಲಿಗೋಗೋಣ’ ಎಂದ ರೆಡ್ಡಿ.
‘ನಮ್ಮೂರಿಗೇ ಹೋಗೋಣ’ ಎಂದು ಹಟ ಹಿಡಿದ ವಿಜೇತನನ್ನು ‘ಇನ್ನೊಂದ್ಸಾರಿ ಹೋಗೋಣ ಈಗ ಬೇಡ’ ಅಂತ ಹೇಳಿ ಅಂಕಿತ್ ಮತ್ತು ರಮೇಶ ಸಮಾಧಾನಗೊಳಿಸಿದರು. ಎಲ್ಲರೂ ಊಟ ಮಾಡುತ್ತಾ ಎಲ್ಲಿಗೆ ಹೋಗುವುದೆಂದು ಚರ್ಚಿಸತೊಡಗಿದರು. ಕೊನಗೆ ಅಂಕಿತನೇ “ಯಾವುದಾದ್ರೂ ಫಾರೆಸ್ಟ್ ರೆಸ್ಟ್ಹೌಸ್ಗೆ ಹೋದ್ರೆ ಹೇಗೆ?”ಎಂಬ ಪ್ರಸ್ತಾಪ ಮಾಡಿದಾಗ ಎಲ್ಲರೂ ‘ಸರಿ ಗುಡ್ ಐಡಿಯಾ’ ಎಂದು ತಮ್ಮ ಸಮ್ಮತಿ ಸೂಚಿಸಿದರು. ಅದಕ್ಕೆ ಬೇಕಾದ ಎಲ್ಲಾ ಏರ್ಪಾಟುಗಳನ್ನು ತಾನು ಮಾಡುವುದಾಗಿ ಅಂಕಿತ್ ಉತ್ಸಾಹದಿಂದ ಪ್ರಕಟಿಸಿದಾಗ ಎಲ್ಲರೂ ನೆಕ್ಟ್ ವೀಕೆಂಡನ್ನು ಕಾಡೊಂದರಲ್ಲಿ ಎಂಜಾಯ್ ಮಾಡುವ ಕನಸನ್ನು ಕಾಣತೊಡಗಿದರು.
ಭಾನುವಾರ ಬೆಳಿಗ್ಗೆ ತನ್ನ ತಂದೆಯ ಜೊತೆ ಬೆಳಗಿನ ತಿಂಡಿಯನ್ನು ತಿನ್ನುತ್ತಿದ್ದ ಅಂಕಿತ್, ನೆಕ್ಟ್ ವೀಕೆಂಡನ್ನು ತಾನು ತನ್ನ ಸ್ನೇಹಿತರೊಂದಿಗೆ ಕಾಡಿನಲ್ಲಿ ಕಳೆಯುವ ಇಂಗಿತವನ್ನು ವ್ಯಕ್ತಪಡಿಸಿ ನಾಗೇಂದ್ರರವರ ಸಹಾಯದಿಂದ ಯಾವುದಾದರೂ ಫಾರೆಸ್ಟ್ ರೆಸ್ಟ್ಹೌಸನ್ನು ಬುಕ್ ಮಾಡಿಸಿಕೊಡಬೇಕಾಗಿ ತನ್ನ ತಂದೆಯವರನ್ನು ಕೇಳಿಕೊಂಡ.
ಹರಿಪ್ರಸಾದರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾಗ ನಾಗೇಂದ್ರರವರ ಸಹಪಾಠಿಯಾಗಿದ್ದರಲ್ಲದೆ ಹಾಸ್ಟೆಲಿನಲ್ಲಿ ರೂಮ್ಮೇಟ್ ಕೂಡ ಆಗಿದ್ದರು. ಮುಂದೆ ನಾಗೇಂದ್ರರವರು ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾಗಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಈಗ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಉನ್ನತ ಹುದ್ದೆಯಲ್ಲಿದ್ದರು. ನಾಗೇಂದ್ರರವರು ಮುಖ್ಯ ಕಛೇರಿಗೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಂದ ಮೇಲೆ ಹರಿಪ್ರಸಾದರೊಂದಿಗಿನ ಅವರ ಒಡನಾಟ ಹೆಚ್ಚಿತ್ತು. ಬಿಡುವಿನ ದಿನಗಳಲ್ಲಿ ಹರಿಪ್ರಸಾದರು ಆಫೀಸರ್ಸ್ ಕ್ಲಬ್ನಲ್ಲಿ ನಾಗೇಂದ್ರರವರನ್ನು ಭೇಟಿಯಾಗುತ್ತಿದ್ದರು.
ಹರಿಪ್ರಸಾದರು ತುಂಬಾ ಸ್ವಾಭಿಮಾನಿಯಾಗಿದ್ದರಿಂದ ತಮ್ಮ ಮಗನ ಕೋರಿಕೆಯನ್ನು ಸುಲಭವಾಗಿ ಒಪ್ಪಲಿಲ್ಲ. “ನೀನೇ ಹೋಗಿ ಫಾರೆಸ್ಟ್ ರೆಸ್ಟ್ಹೌಸ್ಗಳ ವಿವರ ತಿಳಿದುಕೊಂಡು ಬುಕ್ ಮಾಡಿಸಿಕೊಂಡು ಬಾ” ಎಂದು ಹೇಳಿದರು. ‘ಸರಿ’ ಎಂದ ಅಂಕಿತ್ ಅಲ್ಲಿಗೆ ಯಾವಾಗ ಹೋಗುವುದೆಂದು ಯೋಚಿಸತೊಡಗಿದ. ಅಂಕಿತನ ತಾಯಿ ಸುಮತಿ ತನ್ನ ಮಗನ ಅಭಿಲಾಷೆಯನ್ನು ತಿಳಿದು, ‘ಈಗ ಮಳೆಗಾಲ ವೀಕೆಂಡ್ಗಾಗಿ ಕಾಡಿಗೆ ಹೋಗುವುದು ಬೇಡ’ ಅನ್ನಿಸಿದರೂ ಮಗ ಆಸೆಪಡುತ್ತಿದ್ದಾನೆ. ದಿನವೂ ಬೆಳಗಿನಿಂದ ಸಂಜೆಯವರೆಗೂ ಪುರುಸೊತ್ತಿಲ್ಲದೆ ದುಡಿಯುತ್ತಿರುತ್ತಾನೆ, ಸ್ನೇಹಿತರ ಜೊತೆ ಒಂದೆರಡು ದಿನ ಹೋಗಿ ಹಾಯಾಗಿದ್ದು ಬರಲಿ ಎನಿಸಿ ತನ್ನ ಪತಿಯನ್ನು ಮನವೊಲಿಸಿ “ಯಾವುದಾದರೂ ಫಾರೆಸ್ಟ್ ರೆಸ್ಟ್ಹೌಸ್ನ್ನು ಎರಡು ದಿನಗಳ ಮಟ್ಟಿಗೆ ಬುಕ್ ಮಾಡಿಸಿಕೊಡಿ” ಎಂದು ಕೇಳಿಕೊಂಡಿದ್ದಳು.
ಹರಿಪ್ರಸಾದರು ಸಂಜೆ ಕ್ಲಬ್ಬಿಗೆ ಹೋದಾಗ ಮನಸಿಲ್ಲದ ಮನಸ್ಸಿನಿಂದ ಹೇಳಲೋ ಬೇಡವೊ ಎಂದುಕೊಂಡು ನಾಗೇಂದ್ರರವರಿಗೆ ಈ ವಿಷಯ ತಿಳಿಸಿದರು. ನಾಗೇಂದ್ರರವರು “ಏನ್ ಸಂಕೋಚದ ಪ್ರಾಣೀನಯ್ಯಾ ನೀನು, ಅದನ್ನ ಹೇಳೋದಿಕ್ಕೆ ಇಷ್ಟೊಂದು ಒದ್ದಾಡ್ತಿದೀಯ” ಎಂದು ಹೇಳಿ ನಕ್ಕು, ‘ಮಹದೇಶ್ವರ ಬೆಟ್ಟದ ಬಳಿ ಇರುವ ಜಂಬೂಕ ರೆಸ್ಟ್ಹೌಸ್ ತುಂಬಾ ಚೆನ್ನಾಗಿದೆ. ಈಗ್ಗೆ ಆರು ತಿಂಗಳ ಹಿಂದೆ ನಾನು ಅಲ್ಲಿಗೆ ಹೋಗಿದ್ದೆ. ಒಂದೆರಡು ದಿನ ಆರಾಮವಾಗಿ ಕಾಲ ಕಳೆಯೋದಿಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳೂ ಅಲ್ಲಿವೆ. ನಿನ್ನ ಮಗನಿಗೆ ಅಲ್ಲಿ ಬುಕ್ ಮಾಡಿಸಿಕೊಡ್ತೀನಿ, ವೀಕೆಂಡ್ನಲ್ಲಿ ಹೋಗಿ ರೆಸ್ಟ್ ತೆಗೆದುಕೊಂಡು ಬರೋದಿಕ್ಕೆ ಹೇಳು’ ಎಂದರು. ಮರುದಿನ ಅಂಕಿತನ ಹೆಸರಿನಲ್ಲಿ ನಾಲ್ಕು ಜನರಿಗಾಗಿ ಫಾರೆಸ್ಟ್ ರೆಸ್ಟ್ಹೌಸ್ನ್ನು ಬುಕ್ ಮಾಡಿದ್ದ ರಸೀದಿಯನ್ನು ಹರಿಪ್ರಸಾದರಿಗೆ ನೀಡಿದ್ದರು. ಹರಿಪ್ರಸಾದರು ಎಷ್ಟೇ ಕೇಳಿಕೊಂಡರೂ ರೆಸ್ಟ್ಹೌಸ್ನಲ್ಲಿ ಎರಡು ದಿನದ ವಾಸ ಮತ್ತು ಊಟಕ್ಕಾಗಿ ಕಟ್ಟಿದ್ದ ಹಣದ ಮೊತ್ತವನ್ನು ನಾಗೇಂದ್ರರವರು ಸ್ವೀಕರಿಸಲಿಲ್ಲ. “ಪರವಾಗಿಲ್ಲ ಬಿಡೋ ಹರಿ.. ಕಾಲೇಜು ಹಾಸ್ಟೆಲ್ಲಿನಲ್ಲಿದ್ದಾಗ ನಾನು ನೋಟ್ಬುಕ್ ತಗೋಳೋದಿಕ್ಕೂ ದುಡ್ಡಿಲ್ಲದೆ ಪರದಾಡುತ್ತಿದ್ದೆ. ಆಗೆಲ್ಲಾ ಎಷ್ಟೊಂದು ನೋಟ್ಬುಕ್ಗಳನ್ನು ನೀನೇ ಕೊಡಿಸಿದ್ದೆ” ಎಂದು ಕಾಲೇಜು ದಿನಗಳನ್ನು ನೆನೆದು ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದರು.
ಮುಂದಿನ ವೀಕೆಂಡ್ಗಾಗಿ ‘ಜಂಬೂಕ ಫಾರೆಸ್ಟ್ ರೆಸ್ಟ್ಹೌಸ್’ ಬುಕ್ ಆಗಿರುವ ವಿಷಯವನ್ನು ಅಂಕಿತ್ ತನ್ನ ಸ್ನೇಹಿತರಿಗೆ ತಿಳಿಸಿದಾಗ ರಮೇಶ, ರೆಡ್ಡಿ ಮತ್ತು ವಿಜೇತ “ತುಂಬಾ ಮಜವಾಗಿರುತ್ತೆ” ಎಂದು ಖುಷಿಯಿಂದ ಕುಣಿದಾಡಿ ಕಾಡಿನಲ್ಲಿ ಎರಡು ದಿನ ಇರಲು ಬೇಕಾದ ಎಲ್ಲಾ ಏರ್ಪಾಟುಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದರು. ಅಂಕಿತ್ ಮತ್ತು ವಿಜೇತ ಇಂಟರ್ನೆಟ್ನಿಂದ ಕರ್ನಾಟಕದ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಂಡು ತಲುಪಬೇಕಾದ ಸ್ಥಳದ ಮಾರ್ಗವನ್ನು ಸರಿಯಾಗಿ ಗುರುತಿಸಿಕೊಂಡರು. ಶನಿವಾರದಂದು ಬೆಳಿಗ್ಗೆ ಅಂಕಿತನ ಸ್ವಿಫ್ಟ್ ಕಾರಿನಲ್ಲಿ ಹೊರಡುವುದೆಂದು ತೀರ್ಮಾನವಾಯಿತು. ಸುಮತಿ ಅಂಕಿತನಿಗೆ “ಎಲ್ಲರಿಗೂ ಶನಿವಾರ ಬೆಳಿಗ್ಗೆ ತಿಂಡಿಗೆ ಇಲ್ಲೇ ಬರೋದಿಕ್ಕೆ ಹೇಳು” ಎಂದು ತಾಕೀತು ಮಾಡಿದ್ದಳು.