ಜಡ್ಜರೇ ಜುಲ್ಮಾನೆಯ ದಂಡ ಕಟ್ಟಿದರು
(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.
ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.
ಇದರ ಮುನ್ನುಡಿಯಲ್ಲಿ ಎ. ವೆಂಕಟ ರಾವ್ ಬರೆದಿರುವ ಈ ಮಾತುಗಳು ಗಮನಾರ್ಹ: "ಸತ್ಯಂ ವದ ಧರ್ಮಂ ಚರ”, "ದಯೆಯೇ ಧರ್ಮದ ಮೂಲವಯ್ಯಾ” ….. ಎಂಬ ಸೂಕ್ತಿಗಳನ್ನು ನಾವು ಹೇಳುತ್ತಲೇ ಇರುತ್ತೇವೆ. ಆದರೆ ವಾಸ್ತವ ನ್ಯಾಯದಾನದಲ್ಲಿ - ಆತ ಎಷ್ಟೇ ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ - ಅನಿರೀಕ್ಷಿತ ಮತ್ತು ಪರಿಹಾರವಾಗಿರದ ನೂತನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. …. ಅಂಥ ಪ್ರತಿಯೊಂದು ಪ್ರಸಂಗದಲ್ಲಿಯೂ ಧರ್ಮಮಾರ್ಗದಿಂದ ನಾನು ವಿಚಲಿತನಾಗಿಲ್ಲ ಎಂಬ ತೃಪ್ತಿ ಸಮಾಧಾನಗಳು ನನಗಿವೆ”
ಇಡೀ ದೇಶದಲ್ಲಿ ಕಳೆದ ಏಳು ವರುಷಗಳ ಕಾಲ ಸಂಚಲನ ಮೂಡಿಸಿದ್ದ “ನಿರ್ಭಯಾ ಪ್ರಕರಣ”ದಲ್ಲಿ ೨೦ ಮಾರ್ಚ್ ೨೦೨೦ರಂದು ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜ್ಯಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಧೀಶರು “ಧರ್ಮಮಾರ್ಗ"ದಲ್ಲಿ ಹೇಗೆ ನಡೆಯಬೇಕೆಂದು ಬೆಳಕು ಚೆಲ್ಲುವ ಕೆಲವು ಆಯ್ದ ಅನುಭವಗಳನ್ನು ದಿ. ಎ. ವೆಂಕಟ ರಾವ್ ಅವರ ಪುಸ್ತಕದಿಂದ ಪ್ರಸ್ತುತ ಪಡಿಸುತ್ತಿದ್ದೇವೆ.)
೧೯೫೪ರಲ್ಲಿ ಮ್ಯಾಜಿಸ್ಟ್ರೇಟಾಗಿ ಕುಂದಾಪುರದಲ್ಲಿ ಕಾರ್ಯಭಾರ ವಹಿಸಿಕೊಂಡ ಸುಮಾರು ಮೂರು-ನಾಲ್ಕು ತಿಂಗಳಲ್ಲಿ ಸುಮಾರು ೧೩ ವರ್ಷಗಳ ಬಾಲಕನನ್ನು ನನ್ನ ಮುಂದೆ ಕರೆತರಲಾಯಿತು. ಸಿನಿಮಾ ಥಿಯೇಟರಿನ ಒಳಗೆ ಬೀಡಿ ಸೇದಿ ತಪ್ಪು ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.
ಅಂದಿನ ದಿನಗಳಲ್ಲಿ, ಸಮನ್ಸ್ ಪ್ರಕರಣಗಳಲ್ಲಿ (ಸಮನ್ಸ್ ಮೊಕದ್ದಮೆ) -ಎಂದರೆ ಲಘು ಅಪರಾಧ ಮಾಡಿರುವುದಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ – ಆಪಾದಿತನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರೆ ಅಥವಾ ಹಾಜರಾಗುವಂತೆ ಮಾಡಿದರೆ, ಆಪಾದನೆಯನ್ನು ಆತನಿಗೆ ತಿಳಿಸುವುದು ಮತ್ತು ಆ ದಿನವೇ ಅವನ ಹೇಳಿಕೆಯನ್ನು ದಾಖಲಿಸಲಾಗುತ್ತಿತ್ತು. ತಾನು ತಪ್ಪಿತಸ್ಥನೆಂದು ಒಪ್ಪಿಕೊಂಡರೆ, ತೀರ್ಪು ಪ್ರಕಟಿಸುವುದು ಮತ್ತು ದಂಡ ವಿಧಿಸುವುದರ ಮೂಲಕ ಅಂದೇ ಪ್ರಕರಣವನ್ನು ವಿಲೆ ಮಾಡಲಾಗುತ್ತಿತ್ತು.
ಅದರಂತೆಯೇ ಆಪಾದನೆಯ ಸಾರಾಂಶವನ್ನು ಆ ಬಾಲಕನಿಗೆ ತಿಳಿಸಿದಾಗ ತಾನು ಥಿಯೇಟರಿನಲ್ಲಿ ಬೀಡಿ ಸೇದಿದುದು ಹೌದು ಎಂದ ಮತ್ತು ತನ್ನ ತಪ್ಪನ್ನು ಒಪ್ಪಿಕೊಂಡ. ನಾನು ಅವನಿಗೆ ಐದು ರೂ. ಜುಲ್ಮಾನೆ ವಿಧಿಸಿದೆ ಮತ್ತು ಸಂದಾಯ ಮಾಡಲು ತಪ್ಪಿದಲ್ಲಿ ಎರಡು ದಿನ ಸಾದಾ ಸಜೆ (ಕಾರಾವಾಸ) ಅನುಭವಿಸುವಂತೆ ತೀರ್ಪು ನೀಡಿದೆ.
ಸಾಮಾನ್ಯವಾಗಿ ಜುಲ್ಮಾನೆಯನ್ನು ಅಂದೇ ಅಲ್ಲಿಯೇ ಕಟ್ಟಿಬಿಡುತ್ತಿದ್ದರು. ಆದರೆ ಈ ನಿರ್ದಿಷ್ಟ ಪ್ರಕರಣದಲ್ಲಿ ಜುಲ್ಮಾನೆ ಕಟ್ಟಲು ತನ್ನಲ್ಲಿ ಹಣವಿಲ್ಲವೆಂದು ಹೇಳಿದ. ಜುಲ್ಮಾನೆ ಕಟ್ಟದಿದ್ದರೆ ಜೈಲಿಗೆ ಕಳುಹಿಸಲಾಗುವುದೆಂದು ಅವನಿಗೆ ತಿಳಿಸಿದೆ. ಆಗ ನಾನು ಮಾಡಿದ್ದ ಪ್ರಮಾದ ಇದ್ದಕ್ಕಿದ್ದಂತೆ ಮನಗಂಡೆ. ಹದಿನೈದು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ಜೈಲಿಗೆ ಕಳುಹಿಸುವುದು ಕಾನೂನಿನ ಅನುಸಾರ ನಿಷೇಧವಾಗಿತ್ತು.
ಆ ಬಾಲಕನ ಪರವಾಗಿ ಯಾರಾದರೂ ಬಂದು ಜುಲ್ಮಾನೆ ಸಂದಾಯ ಮಾಡಿಬಿಡಲಿ ಎಂದು ಉತ್ಕಟಭಾವದಿಂದ ಬಯಸಿದೆ. ಆದರೆ ಮಧ್ಯಾಹ್ನ ೧ ಘಂಟೆಯವರೆಗೆ ಯಾರೂ ಮುಂದೆ ಬರಲಿಲ್ಲ. ನನ್ನನ್ನು ನಾನು ಪಾರು ಮಾಡಿಕೊಳ್ಳಲು ಮತ್ತು ಬಾಲಕನನ್ನು ಜೈಲಿಗೆ ಕಳುಹಿಸಿದುದಕ್ಕಾಗಿ ಯಾವುದೇ ಸಮಜಾಯಿಷಿ ನೀಡುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾನೇ ಜುಲ್ಮಾನೆ ಹಣ ಕಟ್ಟಿಬಿಟ್ಟೆ ಮತ್ತು ಆ ಬಾಲಕನನ್ನು ಬಿಡುಗಡೆ ಮಾಡಿಬಿಟ್ಟೆ.
ನನ್ನ ಈ ಕೆಲಸದಿಂದ ಮ್ಯಾಜಿಸ್ಟ್ರೇಟರು ಜುಲ್ಮಾನೆ ಹಾಕಿದರು ಮತ್ತು ಅದನ್ನು ತಾವೇ ಕಟ್ಟಿದರು ಎಂಬುದು ಅಲ್ಲಿ ಮನೆಮಾತಾಗುತ್ತದೆ ಎಂದು ನಾನು ಎಣಿಸಿರಲೇ ಇಲ್ಲ. ನೀವು ಅದೃಷ್ಟಶಾಲಿಗಳಾಗಿದ್ದರೆ ನೀವು ಮಾಡುವ ಪ್ರಮಾದ ಕೂಡ ನಿಮಗೆ ವರವಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಇದೊಂದು ಪುಟ್ಟ ನಿದರ್ಶನ.