ಜನಕಲ್ಯಾಣಕ್ಕೆ ಆದ್ಯತೆ ಕೊಡಿ
ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯವೀಗ ‘ಚರ್ಚಾ ವಿಷಯ' ಆಗಿಬಿಟ್ಟಿದೆ. ಅದಕ್ಕೆ ಕಾರಣ, ಒಬ್ಬರು ಆಕಾಂಕ್ಷಿಗೆ ಅದು ಕೈತಪ್ಪಿರುವುದು ಮತ್ತು ‘ಹೊರಗಿನವರಿಗೆ' ಸಿಕ್ಕಿರುವುದು. ಹೀಗೆ ಟಿಕೆಟ್ ತಪ್ಪಿರುವ ಆಕಾಂಕ್ಷಿ ‘ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವ ಪಕ್ಷದಿಂದ ಟಿಕೆಟ್ ಕೊಟ್ಟರೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ; ಯಾರೋ ನೋಡಿದ ಹೆಣ್ಣನ್ನು ನಾನು ಮದುವೆಯಾಗುವುದಿಲ್ಲ. ಹೊರಗಿನವರನ್ನು ಬೆಂಬಲಿಸಲು ಮನಸ್ಸು ಒಪ್ಪುತ್ತಿಲ್ಲ. ನಮ್ಮ ಜಿಲ್ಲೆಯ ಕಷ್ಟ ನಮಗೆ ಮಾತ್ರ ಗೊತ್ತಿರುತ್ತದೆ. ಅದು ಹೊರಗಿನವರಿಗೇನು ಗೊತ್ತು? ಎಂದು ಅಲವತ್ತುಕೊಂಡಿದ್ದಾರೆ. ಮತ್ತೊಂದೆಡೆ, ಟಿಕೆಟ್ ದಕ್ಕಿಸಿಕೊಂಡವರು, ನಾನು ಹೊರಗಿನವನಲ್ಲ, ತುಮಕೂರು ಕರ್ಮಭೂಮಿಯನ್ನಾಗಿ ಮಾಡಿಕೊಳ್ಳುತ್ತೇನೆ. ಆದರೆ ಟಿಕೆಟ್ ತಪ್ಪಿರುವವರು, ನನ್ನನ್ನು ಸೋಲಿಸುವುದಾಗಿ ಹೇಳುವುದು ಎಷ್ಟು ಸರಿ? ಎಂದು ಸಮರ್ಥಿಸಿಕೊಂಡಿದ್ದಾರೆ.
ನಿರ್ದಿಷ್ಟ ಮತಕ್ಷೇತ್ರಕ್ಕೆ ಟಿಕೆಟ್ ಬಯಸಿದವರು, ಅದು ತಮಗೆ ದಕ್ಕದೆ ಕ್ಷೇತ್ರಕ್ಕೆ ಸೇರಿಲ್ಲದವರ ಮಡಿಲು ಸೇರಿದಾಗ ಹೀಗೆ ಹತಾಶರಾಗುವುದು ಸಹಜ. ಆದರೆ, ವಿಶಾಲ ದೃಷ್ಟಿಕೋನದಿಂದ ನೋಡಿದರೆ, ಇಂಥ ಹತಾಶೆಗೆ ಅರ್ಥವಿಲ್ಲ. ಚುನಾವಣಾ ಗೆಲುವು ಮತ್ತು ಚುನಾಯಿತರ ಸಂಖ್ಯಾಬಲವೇ ಮುಖ್ಯವಾಗಿರುವ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ, ಟಿಕೆಟ್ ಹಂಚಿಕೆ ಮಾಡುವಾಗ ವರಿಷ್ಟರು ಹಲವು ಆಯಾಮಗಳಿಂದ ಆಲೋಚಿಸಿ ಕಾರ್ಯತಂತ್ರ ರೂಪಿಸಿರುವುದು ವಾಡಿಕೆ. ಮತಕ್ಷೇತ್ರಗಳ ಬದಲಾವಣೆಯೂ ಇದರಲ್ಲಿ ಸೇರಿರುತ್ತದೆ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಇದಕ್ಕೆ ಸಾಕಷ್ಟು ಪೂರ್ವ ನಿದರ್ಶನಗಳಿವೆ. ಆದರೆ, ಇದನ್ನೇ ಮುಖ್ಯವಾಗಿಸಿಕೊಂಡು ಪರಸ್ಪರ ವಿರುದ್ಧ ದೋಷಾರೋಪಣೆ ಮಾಡುವ ಬದಲು ‘ಜನಪ್ರತಿನಿಧಿ ಎನಿಸಿಕೊಳ್ಳಲು ಹೊರಟಿರುವವರಿಗೆ ಜನಕಲ್ಯಾಣವೇ ಮುಖ್ಯ' ಎಂಬ ಸರಳಸತ್ಯವನ್ನು ಅರಿಯಬೇಕು. ಹಾಗೆ ನೋಡಿದರೆ, ಈಗ ತುಮಕೂರು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ದಕ್ಕಿಸಿಕೊಂಡ ನಾಯಕರೂ ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ‘ಕ್ಷೇತ್ರ ಬದಲಾವಣೆ'ಗೆ ಒಳಗಾಗಿದ್ದವರೇ. ಆದ್ದರಿಂದ ಇಂಥ ಸಣ್ಣ ಪುಟ್ಟ ಮುನಿಸು, ಅಸಮಧಾನಗಳನ್ನು ಸಂಬಂಧಪಟ್ಟವರು ಕೈಬಿಟ್ಟೂ ಪ್ರಜ್ಞಾವಂತಿಕೆ ಮೆರೆದರೆ ಒಳಿತು. ಜನರು ನಿರೀಕ್ಷಿಸುವುದೂ ಇದನ್ನೇ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೩-೦೩-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ