ಜನಪರ ಚರ್ಚೆ ಅಗತ್ಯ
ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಜೆಟ್ ಅಧಿವೇಶನ ಇಂದು ಆರಂಭಗೊಳ್ಳಲಿದ್ದು, ರಾಜ್ಯಪಾಲರು ಜಂಟಿ ಅಧಿವೇಶವನವನ್ನು ಉದ್ದೇಶಿಸಿ ಮಾತಾಡಲಿದ್ದಾರೆ. ಅಧಿವೇಶನದ ಕಲಾಪದಲ್ಲಿ ಹಣಕಾಸು ವಿಧೇಯಕ, ಬೆಲೆ ಏರಿಕೆ, ಅಭಿವೃದ್ಧಿ ಯೋಜನೆ, ಜ್ವಲಂತ ಸಮಸ್ಯೆ ಮುಂತಾದ ಜನಪರ ವಿಷಯಗಳ ಕುರಿತಂತೆ ಸೂಕ್ತ ಚರ್ಚೆ, ವಿಚಾರ ವಿನಿಮಯ ನಡೆಯಲೆಂಬುದು ಜನರ ಅಪೇಕ್ಷೆ. ಆದರೆ ಸದ್ಯದ ವಾತಾವರಣ ಗಮನಿಸಿದರೆ, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳಿಗೆ ಅಧಿವೇಶನದ ಬಹುಮೂಲ್ಯ ಸಮಯವು ವ್ಯಯವಾಗುವ ಸಾಧ್ಯತೆ ಗೋಚರಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾದ ಮತಾಂತರ ನಿಷೇಧ, ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಇತ್ಯಾದಿಗಳನ್ನು ನೂತನ ಸರ್ಕಾರ ಹಿಂಪಡೆಯುವ ಕುರಿತು ಜಟಾಪಟಿ ನಡೆಯುವುದು ನಿಶ್ಚಿತವಾಗಿದೆ. ಅಲ್ಪಸಂಖ್ಯಾರನ್ನು ಓಲೈಸಲು ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸುವ ಕ್ರಮಕ್ಕೆ ಮುಂದಾಗಿದೆ ಎಂಬ ಆರೋಪವನ್ನು ಬಿಜೆಪಿ ಮಾಡಿದೆ. ೧೧ ಕಾನೂನು ತಿದ್ದುಪಡಿ ವಿಧೇಯಕಗಳನ್ನು ಅಧಿವೇಶನದಲ್ಲಿ ಮಂಡನೆ ಮಾಡಲು ಸರ್ಕಾರ ಪಟ್ಟಿ ಮಾಡಿದೆ. ಅಧಿಕಾರಕ್ಕೆ ಬಂದ ದಿನದಿಂದಲೇ ಜಾರಿಗೊಳಿಸುತ್ತೇವೆ ಎಂದು ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ್ದ ‘ಗ್ಯಾರಂಟಿ' ಯೋಜನೆಗಳು ಈಗ ಅನುಷ್ಟಾನ ಹಂತದಲ್ಲಿದ್ದು, ಷರತ್ತುಗಳ ಮೂಲಕ ಫಲಾನುಭವಿಗಳನ್ನು ವಂಚಿಸಲಾಗುತ್ತಿದೆ ಎಂದು ಆಡಳಿತಾರೂಢ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಸಜ್ಜಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಟಾನದಲ್ಲಿನ ವೈಫಲ್ಯಗಳನ್ನು ಬಿಂಬಿಸಲು ಸದನದ ಹೊರಗಡೆಯೂ ಹೋರಾಟ ನಡೆಸಲು ಕೇಸರಿ ಪಡೆ ಮುಂದಾಗಿದೆ. ಹಿಂದಿನ ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ನಡೆದಿವೆ ಎನ್ನಲಾದ ಬಿಟ್ ಕಾಯಿನ್, ೪೦ ಪರ್ಸೆಂಟ್ ಕಮೀಷನ್, ಕೊರೋನಾ ಕಾಲದ ಖರೀದಿ ಅವ್ಯವಹಾರ, ಕೆಎಐಡಿಬಿ ಜಮೀನು ಡಿನೋಟಿಫಿಕೇಷನ್ ಮುಂತಾದ ಪ್ರಕರಣಗಳ ತನಿಖೆ ನಡೆಸುವ ಮೂಲಕ ಬಿಜೆಪಿ ನಾಯಕರಿಗೆ ಠಕ್ಕರ್ ನೀಡಲು ಮುಂದಾಗಿರುವ ಕಾಂಗ್ರೆಸ್ ಸರಕಾರವು ಇದಕ್ಕಾಗಿ ಎರಡು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಮತ್ತು ನಾಲ್ಕು ಹಗರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ ಐ ಟಿ) ರಚಿಸಲು ನಿರ್ಧಾರ ಕೈಗೊಂಡಿದೆ.
ಬಿಜೆಪಿ ಇದುವರೆಗೂ ವಿಧಾನಸಭೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಬಿ ಎಸ್ ಯಡಿಯೂರಪ್ಪ, ಕೆ ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ, ಜೆ ಸಿ ಮಾಧುಸ್ವಾಮಿ ಅವರಂತಹ ಹಿರಿಯರ ಅನುಪಸ್ಥಿತಿಯು ಆಡಳಿತ ಪಕ್ಷವನ್ನು ಎದುರಿಸುವಲ್ಲಿ ಪ್ರತಿಪಕ್ಷವಾದ ಬಿಜೆಪಿಗೆ ಅನುಭವದ ಕೊರತೆಯನ್ನುಂಟು ಮಾಡಬಹುದಾಗಿದೆ. ಬಜೆಟ್ ಸೇರಿದಂತೆ ಸಾಕಷ್ಟು ಮಹತ್ವದ ವಿಧೇಯಕಗಳಿಂದ ಕೂಡಿರುವ ಈ ಅಧಿವೇಶನವು ಬಿಜೆಪಿಗೆ ಸವಾಲಾಗಿ ಪರಿಣಮಿಸಬಹುದಾಗಿದ್ದು, ಯಾರ ನೇತೃತ್ವದಲ್ಲಿ ಹಾಗೂ ಹೇಗೆ ಇದನ್ನೆಲ್ಲ ನಿಭಾಯಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಪ್ರಸ್ತುತ ಆಡಳಿತ ಹಾಗೂ ವಿರೋಧ ಪಕ್ಷಗಳು ಅದಲು ಬದಲಾಗಿದ್ದು ಪಕ್ಷ ಸಿದ್ಧಾಂತ ಹಾಗೂ ವೈಯಕ್ತಿಕ ಆಧರಿತ ಆರೋಪ ಪ್ರತ್ಯಾರೋಪಗಳು ನಿರೀಕ್ಷಿತ. ಆದರೆ, ಅಂತಿಮವಾಗಿ ಜನಹಿತವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ವಿಧೇಯಕಗಳು, ಬಜೆಟ್ ಹಂಚಿಕೆಗಳ ಕುರಿತಂತೆ ಸೂಕ್ತ ರೀತಿಯ ಚರ್ಚೆ, ವಿಚಾರ ವಿನಿಮಯಗಳನ್ನು ಉಭಯ ಪಕ್ಷಗಳಿಂದ ಪ್ರಜ್ಞಾವಂತರು ಅಪೇಕ್ಷಿಸುತ್ತಿದ್ದಾರೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೩-೦೭-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ