ಜನರ ಮೆಚ್ಚಿನ ‘ಪ್ರೊಫೆಸರ್' -ಡಾ. ಎಸ್. ರಾಧಾಕೃಷ್ಣನ್

ಜನರ ಮೆಚ್ಚಿನ ‘ಪ್ರೊಫೆಸರ್' -ಡಾ. ಎಸ್. ರಾಧಾಕೃಷ್ಣನ್

೧೯೨೧ರ ಇಸವಿಯ ಒಂದು ದಿನ. ಸ್ಥಳ-ಮೈಸೂರಿನ ಪ್ರತಿಷ್ಟಿತ ಮಹಾರಾಜಾ ಕಾಲೇಜು. ಕಾಲೇಜಿನ ಆವರಣದಲ್ಲಿ ಒಂದು ಕುದುರೆ ಬಂಡಿಯನ್ನು ಹೂವಿನಿಂದ ಅಲಂಕರಿಸಲಾಗುತಿತ್ತು. ಹಲವಾರು ವಿದ್ಯಾರ್ಥಿಗಳು ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡುತ್ತಿದ್ದರು. ಆದರೆ ಅವರ ಮುಖದಲ್ಲಿ ಆನಂದದ ಛಾಯೆ ಇರಲಿಲ್ಲ. ಏನಾಗಿತ್ತು ಅವರಿಗೆಲ್ಲಾ? ಅವರ ಪ್ರಿಯ ಉಪನ್ಯಾಸಕರು ಅಂದು ಮಹಾರಾಜಾ ಕಾಲೇಜಿನಿಂದ ಕಲ್ಕತ್ತಾದ ವಿಶ್ವವಿದ್ಯಾನಿಲಯಕ್ಕೆ ವರ್ಗವಾಗಿ ಹೋಗುತ್ತಿದ್ದರು. ಆ ವಿದಾಯ ಸಮಾರಂಭದಂದು ಅನೇಕ ಮಂದಿ ಭಾವಪೂರ್ಣ ಭಾಷಣ ಮಾಡಿದರು, ವರ್ಗವಾಗಿ ಹೋಗುತ್ತಿರುವ ಉಪನ್ಯಾಸಕರಿಗೆ ಶುಭ ಕೋರಿದರು, ಸನ್ಮಾನ ಮಾಡಿದರು. ಕಾರ್ಯಕ್ರಮ ಮುಗಿದು ಸಭಾಂಗಣದಿಂದ ಹೊರಗೆ ಬಂದು ನೋಡುತ್ತಾರೆ ಸಿಂಗಾರ ಮಾಡಿದ ಬಂಡಿಗೆ ಕುದುರೆಗಳನ್ನೇ ಕಟ್ಟಲಾಗಿರಲಿಲ್ಲ.

ಇದನ್ನು ಗಮನಿಸಿದ ಆ ಉಪನ್ಯಾಸಕರ ಸಹಿತ ಎಲ್ಲರಿಗೂ ಅಚ್ಚರಿಯಾಗುತ್ತದೆ. ಕೂಡಲೇ ಹಲವಾರು ವಿದ್ಯಾರ್ಥಿಗಳು ಕುದುರೆಗಳನ್ನು ಕಟ್ಟುವ ಜಾಗಕ್ಕೆ ಹೋಗಿ ನಿಲ್ಲುತ್ತಾರೆ ಮತ್ತು ಉಪನ್ಯಾಸಕರನ್ನು ಬಂಡಿ ಹತ್ತುವಂತೆ ಹೇಳುತ್ತಾರೆ. ಉಪನ್ಯಾಸಕರು ಬಂಡಿಯಲ್ಲಿ ಕುಳಿತೊಡನೆಯೇ ವಿದ್ಯಾರ್ಥಿಗಳು ಬಂಡಿಯನ್ನು ಮೈಸೂರಿನ ರಸ್ತೆಗಳಲ್ಲಿ ಎಳೆಯುತ್ತಾ ರೈಲು ನಿಲ್ದಾಣವನ್ನು ತಲುಪುತ್ತಾರೆ. ಬಂಡಿ ಯಾವೆಲ್ಲಾ ರಸ್ತೆಯ ಮೂಲಕ ಚಲಿಸಿತೋ ಅದರ ಇಕ್ಕೆಲಗಳಲ್ಲಿ ಜನರು ನಿಂತು ಆ ಉಪನ್ಯಾಸಕರಿಗೆ ಜಯಕಾರ ಹಾಕುತ್ತಾರೆ. ಉಪನ್ಯಾಸಕರು ರೈಲು ಬಂಡಿಯನ್ನು ಹತ್ತುವಾಗ ಎಲ್ಲರ ಕಣ್ಣಲ್ಲಿ ನೀರಿತ್ತು. ಇಷ್ಟೆಲ್ಲಾ ಪ್ರೀತಿಗೆ ಪಾತ್ರವಾದ ಉಪನ್ಯಾಸಕರು ಬೇರೆ ಯಾರೂ ಅಲ್ಲ ನಮ್ಮ ದೇಶ ಕಂಡ ಹೆಮ್ಮೆಯ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು.

ಈ ಘಟನೆಯ ಐದು ವರ್ಷಗಳ ಬಳಿಕ ಅಂದರೆ ೧೯೨೬ರಲ್ಲಿ ಅಮೇರಿಕಾದ ಹಾವರ್ಡ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಬಗ್ಗೆ ಸಭೆ ನಡೆಯಿತು. ಈ ಸಭೆಯಲ್ಲಿ ರಾಧಾಕೃಷ್ಣನ್ ಅವರು ಭಾಗವಹಿಸಿದ್ದರು. ಅಲ್ಲಿಯವರೆಗೆ ಸ್ವಾಮಿ ವಿವೇಕಾನಂದರ ವಿದ್ವತ್ ಅನ್ನು ಮಾತ್ರ ಪ್ರತ್ಯಕ್ಷವಾಗಿ ನೋಡಿ, ಕೇಳಿ ತಿಳಿದಿದ್ದ ಅಮೇರಿಕಾದ ಜನತೆ ಅಂದು ರಾಧಾಕೃಷ್ಣನ್ ಅವರು ನೀಡಿದ ಅದ್ಭುತ ಉಪನ್ಯಾಸದಿಂದ ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬ ವಿಷಯನ್ನು ತಿಳಿದುಕೊಂಡರು. ಪಾಶ್ಚಾತ್ಯ  ಶೈಲಿಯಲ್ಲಿ ಇವರು ನೀಡಿದ ಆ ಉಪನ್ಯಾಸದಲ್ಲಿ ಮೂರು ಪ್ರಮುಖ ವಿಷಯಗಳು ಅಡಕವಾಗಿದ್ದವು. ಮೊದಲನೆಯದ್ದು ಸ್ವಾಮಿ ವಿವೇಕಾನಂದರ ಹಿಂದಿನ ವಿದ್ವತ್ ಪೂರ್ಣ ಉಪನ್ಯಾಸ, ಎರಡನೆಯದ್ದು ಭಾರತದ ಸಂಸ್ಕೃತಿ ಹಾಗೂ ಮೂರನೆಯದ್ದು ತಮ್ಮನ್ನೂ ಸೇರಿ ಭಾರತದಲ್ಲಿ ಪ್ರತಿಭೆಗಳಿಗೆ ಹಾಗೂ ಜ್ಞಾನಕ್ಕೆ ಯಾವ ಕೊರತೆಯೂ ಇಲ್ಲ.  ಇವರ ಈ ವಿಷಯಗಳ ಮಂಡನೆಯ ಸುದ್ದಿಯನ್ನು ಮರುದಿನದ ಬಹುತೇಕ ಎಲ್ಲಾ ಪತ್ರಿಕೆಗಳು ಮುಖಪುಟದಲ್ಲೇ ಪ್ರಕಟ ಮಾಡಿದ್ದವು. ಹೀಗಿತ್ತು ನಮ್ಮ ಪ್ರೀತಿಯ ‘ಪ್ರೊಫೆಸರ್' ರಾಧಾಕೃಷ್ಣನ್ ಅವರ ವಿದ್ವತ್.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ನಾವಿಂದು ಶಿಕ್ಷಕರ ದಿನ ಎಂದು ಆಚರಿಸುತ್ತೇವೆ. ಸುಮಾರು ಮೂರು ದಶಕಗಳ ಕಾಲ ಶಿಕ್ಷಕರಾಗಿ ವಿದ್ಯಾದಾನ ಮಾಡಿ ಹಲವಾರು ಉದಾತ್ತ ನಾಗರಿಕರನ್ನು ತಯಾರು ಮಾಡಿದ ಗುರು ಇವರು. ಇವರ ಖ್ಯಾತಿ ಜವಾಹರ ಲಾಲ್ ನೆಹರೂ ಕಿವಿಗೆ ಬಿದ್ದಾಗ ಇವರನ್ನು ತಮ್ಮ ಆಪ್ತ ಬಳಗದಲ್ಲಿ ಸೇರಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯಾ ನಂತರ ರಷ್ಯಾಗೆ ರಾಯಭಾರಿಯಾಗಿ ಕಳುಹಿಸುತ್ತಾರೆ. ರಷ್ಯಾದ ಆಗಿನ ನಾಯಕರಾದ ಸ್ಟಾಲಿನ ಅವರ ಜೊತೆ ಮಾತನಾಡಿ ಅವರನ್ನೂ ಪ್ರಭಾವಿತರನ್ನಾಗಿಸುತ್ತಾರೆ. ಸ್ಟಾಲಿನ್ ಅವರ ಜೊತೆ ಮಾತಾಡಲು ಸಲಯ ಸಿಗುವುದೇ ಬಹಳ ಕಷ್ಟಕರವಾಗಿತ್ತು. ಸ್ಟಾಲಿನ್ ಜೊತೆ ಮಾತನಾಡಲು ರಾಧಾಕೃಷ್ಣನ್ ಅವರಿಗೆ ಸಿಕ್ಕಿದ್ದು ಕೇವಲ ಐದು ನಿಮಿಷಗಳ ಸಮಯ. ಆದರೆ ಇವರ ಮಾತುಗಳನ್ನು ಕೇಳಿ, ಪ್ರಭಾವಿತರಾಗಿ ಸ್ಟಾಲಿನ್ ಸುಮಾರು ಮೂರು ತಾಸುಗಳ ಕಾಲ ರಾಧಾಕೃಷ್ಣನ್ ಜೊತೆ ಕಳೆದರು. ಹೀಗಿದ್ದರು ನಮ್ಮ ಪ್ರೊಫೆಸರ್.

ನೆಹರೂರವರು ರಾಧಾಕೃಷ್ಣನ್ ಅವರನ್ನು ಸ್ವತಂತ್ರ ಭಾರತದ ಮೊದಲ ಉಪರಾಷ್ಟ್ರಪತಿಯಾಗಿ ಆಯ್ಕೆ ಮಾಡುತ್ತಾರೆ. ಈ ಕಾರಣದಿಂದ ಅವರು ರಷ್ಯಾದಿಂದ ಮರಳಿ ಭಾರತಕ್ಕೆ ಬರುತ್ತಾರೆ. ನಂತರ ಇವರು ರಾಷ್ಟ್ರಪತಿಯಾಗುತ್ತಾರೆ. ಇಬ್ಬರು ಪ್ರಧಾನ ಮಂತ್ರಿಗಳಿಗೆ ಹಾಗೂ ಎರಡು ಬಾರಿ ಹಂಗಾಮಿ ಪ್ರಧಾನಿಮಂತ್ರಿಗೆ ಪ್ರಮಾಣ ವಚನ ಭೋಧಿಸಿದ ಏಕೈಕ ರಾಷ್ಟ್ರಪತಿ ಇವರೇ. ರಾಜ್ಯಸಭೆಯ ಸಭಾಪತಿಯಾಗಿ ಇವರು ಸದನವನ್ನು ನಡೆಸಿದ ರೀತಿ ಈಗಿನ ಎಲ್ಲಾ ಸಭಾಪತಿಗಳಿಗೆ ಮಾದರಿಯಾಗ ಬೇಕು. ವಿರೋಧ ಪಕ್ಷದವರೂ ಇವರ ಮಾತುಗಳಿಗೆ ತಲೆದೂಗುತ್ತಿದ್ದರು.      

ಶಿಕ್ಷಕ, ಗುರು ಎಂದೊಡನೆ ಓರ್ವ ಸಂಪನ್ನ, ಆದರ್ಶ, ಗಾಂಭೀರ್ಯದ ವ್ಯಕ್ತಿಯ ಮುಖ ಕಣ್ಣೆದುರು ಬರುತ್ತದೆ. ಏನೂ ತಿಳುವಳಿಕೆ ಇಲ್ಲದ ಒಂದು ಮಗುವನ್ನು ತಿದ್ದಿ ತೀಡಿ ಬುದ್ಧಿವಂತನನ್ನಾಗಿ ಮಾಡುವ ಮಹತ್ತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಅಂಥ ಮಹಾಪುರುಷರಲ್ಲಿ ಓರ್ವರು, ಹಲವಾರು ವರ್ಷ ಅಧ್ಯಾಪಕರಾಗಿ ದೇಶವಿದೇಶಗಳಲ್ಲಿ ದುಡಿದ, ಭಾರತದ  ಸರ್ವಶ್ರೇಷ್ಠ ಶಿಕ್ಷಕರಲ್ಲಿ ಓರ್ವರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರು. ಓರ್ವ ಸಾತ್ವಿಕ, ಗುಣವಂತ, ಬುದ್ಧಿವಂತ, ಹೊಂದಾಣಿಕೆಯ ಬದುಕು ನಡೆಸುವ, ಜೀವನಮೌಲ್ಯಗಳನ್ನು ಅರಿತವ ಮತ್ತು ಸಮನ್ವಯಗೊಳಿಸಿ ಜೀವಿಸುವ ಕಲೆಯನ್ನು ಕಲಿತವ, ಸಂಸ್ಕೃತಿ, ಸಂಪ್ರದಾಯ, ಗೌರವ, ನಿಷ್ಠೆ ಇರುವಂಥ ವ್ಯಕ್ತಿ ಯನ್ನು ಕಲಿಸಿ ಸಮಾಜಕ್ಕೆ ನೀಡುವ ಮಹತ್ತರ ಜವಾಬ್ದಾರಿ ಅಧ್ಯಾಪಕರ ಹೆಗಲ ಮೇಲಿದೆ. ಓರ್ವ ಶಿಕ್ಷಕ ಕರ್ತವ್ಯದಲ್ಲಿದ್ದರೂ ಶಿಕ್ಷಕನೇ, ನಿವೃತ್ತಿಯಾದರೂ ಶಿಕ್ಷಕನೇ, ಕಡೆಗೆ ಉಸಿರು ನಿಂತರೂ ಹೇಳುವುದು ಶಿಕ್ಷಕ ಅಂತಲೇ. ಈ ಭಾಗ್ಯ ಯಾರಿಗುಂಟು ಯಾರಿಗಿಲ್ಲ. ಅಷ್ಟೂ ಪುಣ್ಯದ ಕೆಲಸ. ವೃತ್ತಿಗೆ ಅಪಚಾರ ಮಾಡದೆ, ಹೆತ್ತವರು ಇಟ್ಟ ನಂಬಿಕೆಯನ್ನು ಸತ್ಯವಾಗಿಸುವುದು ಆದ್ಯ ಕರ್ತವ್ಯ. ಮಗುವಿನ ತಳಪಾಯ ಗಟ್ಟಿಯಾಗಿಸಲೇ ಬೇಕು.ಇದರಲ್ಲಿ ಶಿಕ್ಷಕರೊಂದಿಗೆ ಹೆತ್ತವರು, ಪರಿಸರ, ಇಲಾಖೆಯ ಅಧಿಕಾರಿ ವೃಂದದವರು ಕೈಜೋಡಿಸಿ ದಾಗ ಗುಣಮಟ್ಟದ ಶಿಕ್ಷಣ ಖಂಡಿತಾ ನೀಡಬಹುದು.

ಮಗುವಿನ ಮಾನಸಿಕ ಮಟ್ಟ, ಕೌಟುಂಬಿಕ ಹಿನ್ನೆಲೆಯರಿತು ಬೋಧಿಸುವ ಶಿಕ್ಷಕ ನೂರಕ್ಕೆ ನೂರು ಯಶಸ್ವಿಯಾಗಬಲ್ಲ ದಾರ್ಶನಿಕರ ಮಾತು. ಇಂದಿನ ಈ ವಿಷಮ ಪರಿಸ್ಥಿತಿಯಲ್ಲಿ ಅಧ್ಯಾಪಕರ ಹೊಣೆಗಾರಿಕೆ ಮಹತ್ತರವಾದುದಾಗಿದೆ. ಒಟ್ಟಿನಲ್ಲಿ ಹೊಂದಾಣಿಕೆ ಬಹುಮುಖ್ಯ. ಎಲ್ಲರ ಆಶಯವರಿತು ಶಿಕ್ಷಣದ  ಚಟುವಟಿಕೆಗಳನ್ನು ಹಮ್ಮಿಕೊಂಡು ನಡೆಯಬೇಕಾಗಿದೆ. ರಾಧಾಕೃಷ್ಣನ್ ಜನ್ಮದಿನವಾದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಇಂಥ ಶಿಕ್ಷಕ ವೃಂದಕ್ಕೆ ನಮನಗಳನ್ನು ಸಲ್ಲಿಸೋಣ.

ಗುರುಬ್ರಹ್ಮ ಗುರುವಿಷ್ಣು

ಗುರುದೇವೋ ಮಹೇಶ್ವರ

ಗುರು ಸಾಕ್ಷಾತ್ ಪರಬ್ರಹ್ಮ

ತಸ್ಮ್ಯೆ ಶ್ರೀ ಗುರುವೇ ನಮಃ

ಹೊತ್ತು ಹೆತ್ತ ತಾಯಿಯ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಏಕೈಕ ವ್ಯಕ್ತಿ ಶಿಕ್ಷಕರು ಎಂಬ ಮಾತು ಸರ್ವಕಾಲಕ್ಕೂ ಸತ್ಯ. 

ಆಧಾರ: ಕೆ. ಸಚ್ಚಿದಾನಂದರವರ ‘Radhakrishnan : His Life and Ideas. ಪುಸ್ತಕ.

ಸಹಕಾರ: ರತ್ನಾಭಟ್ ತಲಂಜೇರಿ, (ನಿವೃತ್ತ ಮುಖ್ಯೋಪಾಧ್ಯಾಯಿ)

ಚಿತ್ರ ಕೃಪೆ: ಅಂತರ್ಜಾಲ ತಾಣ