ಜನರ ಹಣ ಜನಹಿತಕ್ಕಾಗಿ…

ಜನರ ಹಣ ಜನಹಿತಕ್ಕಾಗಿ…

೧೮ ದಿನಗಳ ಕುರುಕ್ಷೇತ್ರ ಯುದ್ಧ ಮುಗಿದು ಪಾಂಡವರು ಜಯ ಗಳಿಸುತ್ತಾರೆ. ಹಸ್ತಿನಾಪುರದ ಮಹಾರಾಜ ಧೃತರಾಷ್ಟ್ರನು ತನ್ನ ಪದವಿಯನ್ನು ಯುಧಿಷ್ಟಿರನಿಗೆ ಬಿಟ್ಟುಕೊಡಬೇಕಾಗುತ್ತದೆ. ಧೃತರಾಷ್ಟ್ರ, ಆತನ ಪತ್ನಿ ಗಾಂಧಾರಿ ಹಾಗೂ ಪಾಂಡವರ ಮಾತೆ ಕುಂತಿ ವಾನಪ್ರಸ್ತಕ್ಕೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಾರೆ. 

ಯುಧಿಷ್ಟಿರ ರಾಜ ಪದವಿಯನ್ನು ಗ್ರಹಣ ಮಾಡಿಕೊಂಡ ಬಳಿಕ ತನ್ನ ಅನುಜ ಭೀಮನಿಗೆ ರಾಜ ಬೊಕ್ಕಸದ ಜವಾಬ್ದಾರಿಯನ್ನು ವಹಿಸುತ್ತಾನೆ. ಅಂದರೆ ಅರ್ಥ ಮಂತ್ರಿ. ಭೀಮನು ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವನೆಂಬ ನಂಬಿಕೆ ಯುಧಿಷ್ಟಿರನಿಗಿತ್ತು. 

ಧೃತರಾಷ್ಟ್ರನಿಗೆ ತನ್ನ ನೂರು ಮಕ್ಕಳು ಯುದ್ಧದಲ್ಲಿ ಸತ್ತು ಹೋದರೂ, ಅದಕ್ಕೆ ತನ್ನ ಪುತ್ರ ವ್ಯಾಮೋಹವೇ ಕಾರಣವೆಂದು ತಿಳಿದಿದ್ದರೂ ಬುದ್ಧಿ ಬಂದಿರಲಿಲ್ಲ. ಇನ್ನೂ ಅವರಲ್ಲಿ ಪುತ್ರ ವ್ಯಾಮೋಹ ಉಳಿದಿತ್ತು. ಧೃತರಾಷ್ಟ್ರ ತಾನು ಕಾಡಿಗೆ ತೆರಳುವ ಮೊದಲು ಯುದ್ಧದಲ್ಲಿ ನಿಧನ ಹೊಂದಿದ ತನ್ನ ಪುತ್ರರಿಗೆ ಸದ್ಗತಿ ದೊರೆಯಲಿ ಎಂಬ ಬಯಕೆ ಉಂಟಾಗುತ್ತದೆ. ಅದಕ್ಕೆ ಏನು ಮಾಡಬೇಕು ಎಂದು ಋಷಿ-ಮುನಿಗಳಲ್ಲಿ, ರಾಜ ಜ್ಯೋತಿಷಿಯವರಲ್ಲಿ ವಿಚಾರಿಸಿದಾಗ ಎರಡು ಪ್ರಮುಖ ಯಾಗವನ್ನು ಮಾಡಬೇಕೆಂಬ ಸಲಹೆ ದೊರೆಯುತ್ತದೆ. ಅದಕ್ಕೆ ಅಪಾರವಾದ ಹಣಕಾಸಿನ ಅಗತ್ಯವಿರುತ್ತದೆ. ಈಗಾಗಲೇ ರಾಜ ಪದವಿಯನ್ನು ಯುಧಿಷ್ಟಿರನಿಗೆ ವಹಿಸಿದ್ದುದರಿಂದ ಅವನ ಬಳಿ ಯಾವುದೇ ಹಣ ಉಳಿದಿರಲಿಲ್ಲ.

ಅನಿವಾರ್ಯವಾಗಿ ಅವನು ಯುಧಿಷ್ಟಿರನ ಬಳಿಗೆ ತೆರಳುತ್ತಾನೆ. ಅವನ ಬಳಿ ತನ್ನ ಮನದ ಅಪೇಕ್ಷೆಯನ್ನು ತಿಳಿಸಿದಾಗ, ದೊಡ್ಡಪ್ಪನೆಂಬ ಗೌರವದಿಂದ ಯಜ್ಞಯಾಗಾದಿಗಳಿಗೆ ರಾಜ ಬೊಕ್ಕಸದಿಂದ ಹಣವನ್ನು ನೀಡುವಂತೆ ಭೀಮನಿಗೆ ತಿಳಿಸುತ್ತಾನೆ. 

ಆದರೆ ಬೊಕ್ಕಸದ ಜವಾಬ್ದಾರಿ ಹೊತ್ತ ಭೀಮ ಹಣ ನೀಡಲು ಒಪ್ಪುವುದಿಲ್ಲ. ಸದಾ ಕಾಲ ತನ್ನ ಮಾತಿಗೆ ಬೆಲೆ ನೀಡುವ ಭೀಮ ಈ ಬಾರಿ ಯಾಕೆ ಒಪ್ಪಲಿಲ್ಲ? ಎಂದು ಅಚ್ಚರಿಯಾಗಿ ಅವನನ್ನೇ ಕೇಳುತ್ತಾನೆ ಯುಧಿಷ್ಟಿರ. ಅದಕ್ಕೆ ಭೀಮ ಹೇಳುತ್ತಾನೆ “ಅಣ್ಣಾ, ನಮ್ಮ ಬೊಕ್ಕಸದಲ್ಲಿರುವುದು ನಾವು ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣ. ಇದು ಜನರಿಗೆ ಸೇರಿದ್ದು. ಅವರ ಹಿತಕ್ಕಾಗಿ ಇದರ ಉಪಯೋಗವಾಗಬೇಕೇ ಹೊರತು, ನಮ್ಮ ವೈಯಕ್ತಿಕ ಆಸೆಗಳಿಗೆ ಹಾಗೂ ಕಾರ್ಯಗಳಿಗೆ ಅಲ್ಲ. ದೊಡ್ಡಪ್ಪ ಯಾಗ ಮಾಡುವುದು ತನ್ನ ಸತ್ತು ಹೋದ ಮಕ್ಕಳ ಸದ್ಗತಿಗಾಗಿ. ಇದು ಅವರ ವೈಯಕ್ತಿಕ ಕೆಲಸ. ಇದಕ್ಕಾಗಿ ಜನರ ದುಡ್ಡಿಂದ ನಾನು ಒಂದು ನಾಣ್ಯವನ್ನೂ ಕೊಡಲಾರೆ." ಎಂದು ಖಡಾಖಂಡಿತವಾಗಿ ನಿರಾಕರಿಸುತ್ತಾನೆ. ಇವನ ಈ ಉತ್ತರದಿಂದ ಯುಧಿಷ್ಟಿರ ಪ್ರಸನ್ನನಾಗುತ್ತಾನೆ.

ಹೀಗಿತ್ತು ಅಂದಿನ ರಾಜ್ಯಭಾರದ ಕ್ರಮ.

ಆದರೆ ಈಗ ಏನಾಗಿದೆ?. ಪ್ರಜಾಪ್ರಭುತ್ವ ಎಂಬ ಹೆಸರಿನಲ್ಲಿ ‘ಪ್ರಜೆಗಳೇ ಪ್ರಭುಗಳು' ಎಂದು ಹೇಳುತ್ತಾ, ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ತಮ್ಮ ಎಲ್ಲಾ ವೈಯಕ್ತಿಕ ತೆವಲುಗಳಿಗೆ ನಮ್ಮದೇ (ಸಾರ್ವಜನಿಕ) ಹಣವನ್ನು ಪೋಲು ಮಾಡುತ್ತಿದ್ದಾರೆ. ತಮ್ಮ ಮನೆ ರಿಪೇರಿಯಾಗಿರಲಿ, ಹೊಸ ವಾಹನ ಬೇಕಾಗಿರಲಿ, ಖಾಸಗಿ ಪ್ರವಾಸ ಅಥವಾ ಔತಣ ಕೂಟಗಳಾಗಿರಲಿ ಬಹಳ ಕಡೆ ಸಾರ್ವಜನಿಕರ ಹಣವೇ ಪೋಲಾಗುತ್ತಿದೆ. ಯಾವುದೇ ಬರ, ನೆರೆ ಬರಲಿ. ರಾಜಕಾರಣಿಗಳ ಜೋಬು ಮಾತ್ರ ತುಂಬುತ್ತಿರಲಿ.. ಹೀಗಾಗಿದೆ ನಮ್ಮ ಇಂದಿನ ಪರಿಸ್ಥಿತಿ. ನ್ಯಾಯಯುತವಾಗಿ, ನಿರ್ವಂಚನೆಯಿಂದ ತೆರಿಗೆ ಕಟ್ಟುವ ಬಡಪಾಯಿ ಜನರ ಕಲ್ಯಾಣ ಮಾಡದೇ ತಮ್ಮ ಸ್ವಂತ ಕೆಲಸಕ್ಕೆ ಈ ಹಣ ಬಳಸಿಕೊಳ್ಳುವುದು ಎಷ್ಟು ಉಚಿತ?

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ