ಜನಸಂಖ್ಯಾ ದಿನದತ್ತ ಒಂದು ನೋಟ
ಭಾರತದಂತಹ ಬೆಳೆಯುತ್ತಿರುವ ದೇಶಕ್ಕೆ ಜನಸಂಖ್ಯೆಯ ಹೆಚ್ಚಳ ಒಂದು ರೀತಿಯಲ್ಲಿ ಶಾಪವಾದರೆ, ಒಂದು ಕಡೆಯಿಂದ ವರವೂ ಆಗುವ ಸಾಧ್ಯತೆ ಇದೆ. ಹೇಗೆ ಅಂತೀರಾ? ವೇಗವಾಗಿ ಬೆಳೆಯುತ್ತಿರುವ ನಮ್ಮ ದೇಶದ ಜನಸಂಖ್ಯೆಯಿಂದಾಗಿ ನಮ್ಮ ನಾಗರಿಕರಿಗೆ ಅವರ ಮೂಲಭೂತ ಹಕ್ಕುಗಳನ್ನು ಕಲ್ಪಿಸಲು ಸರಕಾರ ಹಲವಾರು ಸಲ ಅಸಫಲವಾಗುತ್ತದೆ. ಒಬ್ಬ ವ್ಯಕ್ತಿ ಸಾಮಾನ್ಯ ಜೀವನ ಸಾಗಿಸಲು ಅವಶ್ಯಕವಾದ ಊಟ, ವಸತಿ, ಉದ್ಯೋಗ ಸಿಗುವುದು ಬಹಳ ಕಷ್ಟವಾಗುತ್ತದೆ. ಪ್ರತಿಯೊಂದು ಹಂತದಲ್ಲಿ ಆ ವ್ಯಕ್ತಿ ತನ್ನ ಹಕ್ಕುಗಳಿಗಾಗಿ ಇತರರ ಜೊತೆ ವಿಪರೀತ ಸ್ಪರ್ಧೆ ಮಾಡಬೇಕಾಗುತ್ತದೆ.
ಮತ್ತೊಂದು ಮಗ್ಗುಲಲ್ಲಿ ಯೋಚನೆ ಮಾಡಿದರೆ ಹೆಚ್ಚಳವಾಗುತ್ತಿರುವ ಜನಸಂಖ್ಯೆ ವರವಾಗಲೂ ಬಹುದು. ಹೇಗೆ ಅಂತೀರಾ? ನಮ್ಮ ಮಾನವ ಸಂಪನ್ಮೂಲಗಳನ್ನು ಬಳಸಿ ಹೊಸ ಹೊಸ ವಿಚಾರದೊಂದಿಗೆ ಉದ್ಯೋಗಾವಕಾಶಗಳನ್ನು ಅಧಿಕಗೊಳಿಸಬಹುದು. ಕೆಲಸದಲ್ಲಿ ವೇಗವನ್ನು ಕಲ್ಪಿಸಬಹುದು. ಯಾವುದೇ ವಸ್ತುಗಳನ್ನು ನಿಗದಿತ ಸಮಯದಲ್ಲಿ ತಯಾರಿಸಿ ಮಾರಾಟ ಮಾಡಬಹುದು. ವಿದೇಶೀ ವಿನಿಮಯವನ್ನು ಹೆಚ್ಚಿಸಿಕೊಳ್ಳಬಹುದು. ಈ ವಿಚಾರವನ್ನು ನಾವು ನಮಗಿಂತ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಚೀನಾ ದೇಶದೊಂದಿಗೆ ತುಲನೆ ಮಾಡಿ ನೋಡಬಹುದು. ಅವರ ಕಾರ್ಯಕ್ಷಮತೆಯನ್ನು ನಾವೂ ಅಳವಡಿಸಿಕೊಳ್ಳಬಹುದು. ಒಳ್ಳೆಯ ಸಂತತಿಯನ್ನು ಯಾರನ್ನು ಬೇಕಾದರೂ ನೋಡಿ ಕಲಿಯಬಹುದು.
ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತೀರಾ? ಜುಲೈ ೧೧, ವಿಶ್ವ ಜನಸಂಖ್ಯಾ ದಿನ. ವಿಶ್ವ ಜನಸಂಖ್ಯಾ ದಿನವನ್ನು ೧೯೮೭ರಲ್ಲಿ ಮೊದಲ ಸಲ ಆಚರಿಸಲಾಯಿತು. ಜಾಗತಿಕವಾಗಿ ಜನಸಂಖ್ಯೆಯು ೫೦೦ ಕೋಟಿ ದಾಟಿದಾಗ ಹಲವಾರು ರಾಷ್ಟ್ರಗಳು ಈ ವಿಷಯದ ಗಂಭೀರತೆಯನ್ನು ಅರಿತುಕೊಂಡು ೧೯೮೯ರ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸಂಭೆಯಲ್ಲಿ ಜುಲೈ ೧೧ನ್ನು ಪ್ರತೀ ವರ್ಷ ವಿಶ್ವ ಜನಸಂಖ್ಯಾದಿನವನ್ನಾಗಿ ಆಚರಿಸಬೇಕು ಎಂದು ನಿರ್ಧಾರಕ್ಕೆ ಬರಲಾಯಿತು. ಈ ದಿನವನ್ನು ಜಾಗತಿಕ ದಿನಾಚರಣೆಯಾಗಿ ಆಚರಿಸಲು ಕಾರಣ, ನಿಮಗೆ ತಿಳಿದೇ ಇರುವಂತೆ ಜನಸಂಖ್ಯೆಯ ಮಿತಿಮೀರಿದ ಏರಿಕೆ. ಮಾನವ ಸಂಪನ್ಮೂಲವನ್ನು ಉತ್ತಮವಾಗಿ ಮೌಲ್ಯವರ್ಧಿತ ಉತ್ಪನ್ನ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಉದ್ಯೋಗ, ಕೃಷಿ, ಸ್ವಾವಲಂಬನೆ ಮೂಲಕ ಆರ್ಥಿಕವಾಗಿ ಎತ್ತರಿಸಿ, ಬದುಕಿನ ದಾರಿ ಕಂಡುಕೊಂಡರೆ ಜನಸಂಖ್ಯೆ ಖಂಡಿತಾ ಶಾಪವಲ್ಲ.
ಏನೂ ಮಾಡದೆ, ಕಾಲಹರಣ ಮಾಡಿಕೊಂಡು, ದಿವಸಗಳನ್ನು ದೂಡುವ, ಅಪರಾಧ ಚಟುವಟಿಕೆಗಳನ್ನು ಮಾಡುವ, ನಿರುದ್ಯೋಗ, ಅನಕ್ಷರತೆಯ ಪಿಡುಗು ಇವುಗಳೆಲ್ಲ ಜನಸಂಖ್ಯೆ ಹೆಚ್ಚಳದ ಶಾಪಗಳು. ಅತಿಯಾದ ಜನಸಂಖ್ಯೆಯಿಂದ ಉದ್ಯೋಗದ ತೊಡಕು, ಸಮಾಜದ ಮೇಲೆ ಒತ್ತಡ, ಅಪರಾಧಗಳ ಹೆಚ್ಚಳ, ಕೊಲೆ, ಸುಲಿಗೆ (ಹಣ ಗಳಿಕೆಯ ದಾರಿಗಳು) ಮಾನವ ಕಳ್ಳ ಸಾಗಣೆ, ಚಿಕ್ಕ ಮಕ್ಕಳನ್ನು ಸಂಪಾದನೆಗೆ ಕಳುಹಿಸುವುದು, ವಿದ್ಯಾಭ್ಯಾಸದ ಕೊರತೆ ಇತ್ಯಾದಿಗಳೆಲ್ಲ ತಲೆದೋರುವುದು.
ಪರಿಸರದ ಮೇಲೆ ಪರಿಣಾಮ, ನೆಲ, ಜಲ, ಭೂಮಿಯ ಮೇಲೆ ಒತ್ತಡ, ಮಾಲಿನ್ಯ ಆಹಾರ, ಬಟ್ಟೆ, ವಸತಿ ಸಮಸ್ಯೆ ಈ ಎಲ್ಲದಕ್ಕೂ ಪರಿಹಾರ ಕಂಡುಹಿಡಿದು ಮುನ್ನಡೆಯಲು, ಅಭಿವೃದ್ಧಿ ಸಾಧಿಸಲು ಪ್ರಯತ್ನಪಡಲು 'ವಿಶ್ವಜನಸಂಖ್ಯಾ ದಿನ'ವೆಂದು ಆರಂಭಿಸಲಾಯಿತು.
ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಬೀದಿನಾಟಕ, ಜಾಹೀರಾತುಗಳ ಮೂಲಕ, ಬ್ಯಾನರ್, ಭಿತ್ತಿಪತ್ರಗಳ ಮೂಲಕ, ದೂರದರ್ಶನ, ರೇಡಿಯೋ ಮೂಲಕ ಪ್ರಚಾರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಇವೆಲ್ಲವನ್ನೂ ಪ್ರಚಾರ ಮಾಡುವುದರ ಮೂಲಕ ಜನರಲ್ಲಿ ತಿಳುವಳಿಕೆ ಮೂಡಿಸಲಾಯಿತು. ಆರೋಗ್ಯ ಇಲಾಖೆ ಮೂಲಕ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಭಾರತದ ಜನಸಂಖ್ಯೆ ಈಗಾಗಲೇ ೧೩೮ ಕೋಟಿಗೆ ಏರಿಕೆಯಾಗಿದೆ. ವಿಶ್ವದಲ್ಲಿ ಭಾರತದ ಜನಸಂಖ್ಯಾ ಅಂಕಿಅಂಶಗಳನ್ನು ಗಮನಿಸಿದರೆ ದ್ವಿತೀಯ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲಿದೆ. ಒಬ್ಬರಿಗೆ ಒಂದೇ ಮಗು ಎಂಬ ಚೀನಾ ನೀತಿಯಿಂದಾಗಿ ಈಗ ಅದು ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಚೀನಾದಲ್ಲಿ ಯುವ ಜನಾಂಗವೇ ಕಾಣಿಸುತ್ತಿಲ್ಲವಂತೆ. ಹೆಚ್ಚಿನವರಿಗೆ ಮಕ್ಕಳನ್ನು ಹೊಂದುವ ಆಸೆಯೇ ಇಲ್ಲವಂತೆ. ಅಲ್ಲಿಯ ಸರಕಾರ ಈಗ ಹಳೆಯ ನಿಯಮವನ್ನು ಸಡಿಲ ಮಾಡಿ ಒಬ್ಬರು ಮೂರು ಮಕ್ಕಳನ್ನು ಹೊಂದಬಹುದು ಎಂದು ಆಜ್ಞೆ ಮಾಡಿ, ಹಲವಾರು ರಿಯಾಯತಿಯ ಆಮಿಷಗಳನ್ನು ಒಡ್ಡಿದೆ.
ವಿಶ್ವದ ಜನಸಂಖ್ಯೆಯು ಒಂದು ಅಧ್ಯಯನದ ಪ್ರಕಾರ ಸುಮಾರು ೭೮೦ ಕೋಟಿ. ೨೦೫೦ರ ಹೊತ್ತಿಗೆ ಅದು ಸುಮಾರು ೯೭೦ ಕೋಟಿಗೆ ಏರಲಿದೆ. ವಿಶ್ವದಾದ್ಯಂತ ಇರುವ ದೊಡ್ದ ಸಮಸ್ಯೆಯೆಂದರೆ ಜನಸಂಖ್ಯೆಯು ಸಮಾನವಾಗಿ ಹಂಚಿಕೆಯಾಗಿಲ್ಲ. ಚೀನಾ, ಭಾರತ ಹಾಗೂ ಬ್ರೆಝಿಲ್ ದೇಶಗಳಲ್ಲಿ ವಿಪರೀತ ಜನಸಂಖ್ಯೆಯಿದೆ. ಈ ದೇಶಗಳ ಜನಸಂಖ್ಯೆಯೇ ವಿಶ್ವದ ಒಟ್ಟು ಜನಸಂಖ್ಯೆಯ ಮೂರನೇಯ ಒಂದರಷ್ಟು.
ವಿಶ್ವ ಜನಸಂಖ್ಯೆಯು ಪ್ರತೀ ವರ್ಷ ಸುಮಾರು ೭.೪ ಕೋಟಿಯಷ್ಟು ಏರಿಕೆಯನ್ನು ಕಾಣುತ್ತಿದೆ. ಇದು ಹೀಗೇ ಮುಂದುವರೆದರೆ ಮುಂದೊಂದು ದಿನ ಪ್ರಪಂಚದ ಯಾವ ವ್ಯಕ್ತಿಗೂ ಅವನ ಬದುಕಿಗೆ ಬೇಕಾದ ಕನಿಷ್ಟ ಸೌಲಭ್ಯಗಳು ದೊರೆಯಲಾರವು. ಆದುದರಿಂದ ಬಹುಮುಖ್ಯವಾಗಿ ನಮ್ಮ ದೇಶದ ಮನೆ ಮನೆ ಭೇಟಿ ಮಾಡಿ ಗಂಡು ಮಗುವಾಗಲಿ, ಹೆಣ್ಣಾಗಲಿ ಎರಡೇ ಮಕ್ಕಳನ್ನು ಹೊಂದುವ ಅಗತ್ಯವನ್ನು ತಿಳಿ ಹೇಳಬೇಕಾಗಿದೆ. ಮೌಢ್ಯತನ, ಧಾರ್ಮಿಕ ಕಟ್ಟುಪಾಡುಗಳ ಬಗ್ಗೆ ಮಾಹಿತಿ ನೀಡಬೇಕು. ಅತಿಯಾದ ಜನಸಂಖ್ಯೆ ದೇಶದ ಅಭಿವೃದ್ಧಿ ಗೆ ಮಾರಕವೆಂಬ ವಿಷಯವನ್ನು ಬಹಿರಂಗ ಹೇಳಿಕೆಗಳ ಮೂಲಕ ಪ್ರಚಾರ ಮಾಡುವುದು ಅತೀ ಅಗತ್ಯ.
ಇಲ್ಲವಾದಲ್ಲಿ ಮುಂದೊಂದು ದಿನ ಅಪರಾಧಗಳ ಸಂಖ್ಯೆ, ಟ್ರಾಫಿಕ್ ಸಮಸ್ಯೆಗಳು, ನೀರು, ವಿದ್ಯುತ್ ಸಮಸ್ಯೆ, ಆಹಾರದ ಕೊರತೆ ಹೀಗೆ ಹತ್ತು ಹಲವಾರು ಸಮಸ್ಯೆಗಳು ವಿಪರೀತವಾಗಿ ಏರುವ ಸಾಧ್ಯತೆ ಇದೆ. ನಾವು ಆರೋಗ್ಯಕರ ಜೀವನ, ನೆಮ್ಮದಿ, ಚಿಕ್ಕ ಕುಟುಂಬದ ಅರಿವು, ಲಿಂಗ ತಾರತಮ್ಯ ಹೋಗಲಾಡಿಸುವುದು ಇತ್ಯಾದಿಗಳಿಗೆ ಆದ್ಯತೆ ನೀಡ ಬೇಕಾಗಿದೆ. ಒಟ್ಟಿನಲ್ಲಿ ಎಲ್ಲರಿಗೂ ನೆಮ್ಮದಿಯ ಜೀವನ ಕಲ್ಪಿಸುವ ಸಂಕಲ್ಪ ಮಾಡಲಾಗಿದೆ. ನಮ್ಮಿಂದಾದ ಅಳಿಲ ಸೇವೆ ಸಲ್ಲಿಸೋಣ.
ಸಹಕಾರ-ರತ್ನಾ ಕೆ ಭಟ್, ತಲಂಜೇರಿ
ಚಿತ್ರ : ಅಂತರ್ಜಾಲ ತಾಣ