ಜನ ಏಕೆ ಹೀಗೆ?

ಜನ ಏಕೆ ಹೀಗೆ?

ಕಳೆದ ವಾರಾಂತ್ಯದಂದು ಮಂತ್ರಾಲಯ ಪ್ರವಾಸ ಕೈಗೊಂಡಿದ್ದೆವು. ಬೆಂಗಳೂರಿಂದ ರಾಜ ಧ್ವಂಸ(ಹಂಸ) ಬಸ್ಸಿನಲ್ಲಿ ಹೊರೆಟೆವು. ಧ್ವಂಸ ಏಕೆಂದರೆ ಬಸ್ಸಿನಲ್ಲಿ ಹೋದ ಹಾಗೆ ಇರಲಿಲ್ಲ, ಯಾವುದೋ ರಾಗಿ ಮಿಲ್ ನಲ್ಲಿ ಕೂತಂತ ಅನುಭವವಾಯಿತು. ಅದೇನೋ ಸಮಸ್ಯೆಯಿಂದ ಪೂರ್ತಿ ಪ್ರಯಾಣ ಗಿರ್ ಗಿರ್ ಗಿರ್ ಎಂದು ಸದ್ದು ಮಾಡುತ್ತಾ ಎಲ್ಲರ ನಿದ್ದೆ ಕೆಡಿಸುತ್ತಾ ಮಂತ್ರಾಲಯ ತಲುಪಿತು. ಮುಂಚೆಯೇ ತಂಗಲು ವ್ಯವಸ್ಥೆ ಮಾಡಿದ್ದರಿಂದ ಏನೂ ತೊಂದರೆ ಇರಲಿಲ್ಲ. ನಮ್ಮ ಕೋಣೆಗೆ ತೆರಳಿ ಬಹಿರ್ದೆಶೆ ಮುಗಿಸಿಕೊಂಡು ಸ್ನಾನಕ್ಕೆ ನದಿಗೆ ತೆರಳೋಣ ಎಂದುಕೊಂಡೆವು. ಮೂವರು ಮಾತ್ರ ನಾವು ಇಲ್ಲೇ ಕೋಣೆಯಲ್ಲೇ ಬಿಸಿನೀರು ಸ್ನಾನ ಮಾಡುವುದಾಗಿ ಹೇಳಿದರು. ನಾವು ಕ್ಷೇತ್ರಕ್ಕೆ ಬಂದಿದ್ದೀವಿ ಒಂದು ದಿನವಾದರೂ ನದಿಯಲ್ಲಿ ಸ್ನಾನ ಮಾಡೋಣ ಎಂದಾಗ ಇಲ್ಲ ನಾವು ಇಲ್ಲೇ ಮಾಡುತ್ತೇವೆ ಎಂದು ಅಲ್ಲೇ ಬಿಸಿ ನೀರ ಸ್ನಾನ ಮಾಡಿದರು. ಮಿಕ್ಕ ಎಲ್ಲರೂ ನದಿಯಲ್ಲಿ ಸ್ನಾನ ಮಾಡಲು ಹೊರಟೆವು.

ಕಳೆದ ವರ್ಷ ಪ್ರವಾಹದಿಂದ ಮಂತ್ರಾಲಯವನ್ನು ಮುಳುಗಿಸಿದ್ದ ತುಂಗಭದ್ರ ಹೇಗಿದ್ದಾಳೋ ಎಂಬ ಕುತೂಹಲದಿಂದ ನದಿಯ ಬಳಿ ತೆರಳುತ್ತಿದ್ದಾಗ ನಮಗೆ ಅಲ್ಲೆಲ್ಲೂ ನದಿ ಇರುವ ಕುರುಹೇ ಇರಲಿಲ್ಲ. ನಾವು ಹೋಗುತ್ತಿರುವ ದಾರಿ ಸರಿಯೇ ಎಂದು ಒಬ್ಬರಲ್ಲಿ ಕೇಳಿದಾಗ ಹೌದು ಇದೆ ದಾರಿ ಎಂದಾಗ ಮುಂದುವರಿದೆವು. ಸ್ವಲ್ಪ ದೂರ ತೆರಳಿದ ಮೇಲೆ ಬರೀ ಬಂಡೆಗಳು ಗೋಚರಿಸಿದವು. ನದಿ ಕಟ್ಟೆಯಿಂದ ಸುಮಾರು ೫೦೦ ಗಜಗಳು ಹೋಗಬೇಕಾಗಿತ್ತು ನೀರಿಗೆ. ಒಂದು ಕ್ಷಣ ಆಶ್ಚರ್ಯವಾಯಿತು. ಸುಮಾರು ೨೦-೩೦ ಅಡಿ ನೀರು ಬಂದು ಇಡೀ ಮಂತ್ರಾಲಯವನ್ನು ಮುಳುಗಿಸಿದ್ದ ತುಂಗಭದ್ರ ಇದೇನಾ ಎಂದು. ಎಲ್ಲೋ ಬಂಡೆಗಳ ಮಧ್ಯೆ ಅಲ್ಲಲ್ಲಿ ಹರಿಯಲೋ ಬೇಡವೋ ಎಂದು ಹರಿಯುತ್ತಿದ್ದಳು ತುಂಗಭದ್ರ. ಅಲ್ಲಲ್ಲಿ ಬಂಡೆಗಳ ಮೇಲೆ ಅಪಾಯದ ಸ್ಥಳ ಎಂದು ಬರೆದಿದ್ದರು. ನೀರೆ ಇಲ್ಲ ಇನ್ನು ಅಪಾಯವೆಲ್ಲಿದೆ ಎಂದುಕೊಂಡೆವು. ಇನ್ನೂ ಸ್ವಲ್ಪ ಮುಂದೆ ಹೋದ ಮೇಲೆ ಶುರುವಾಯಿತು ನಿಜವಾದ ಅಪಾಯ!! ಹೆಜ್ಜೆ ಹೆಜ್ಜೆಗೂ ಅಪಾಯ. ಎಲ್ಲೆಂದರಲ್ಲಿ ಗಲೀಜು ಮಾಡಿದ್ದರು. ಕ್ಷೇತ್ರ, ತುಂಗಭದ್ರ ಎಂಬ ಅರಿವು ಇಲ್ಲದ ಜನ ಹೆಜ್ಜೆ ಹೆಜ್ಜೆಗೂ ಅಸಹ್ಯ ಮಾಡಿದ್ದರು. ನದಿ ಗದ್ದೆಯ ಪಕ್ಕದಲ್ಲೇ ಶೌಚಾಲಯವಿದ್ದರೂ ಜನ ಅದರ ಉಪಯೋಗ ಪಡೆದುಕೊಳ್ಳದೆ ನಡೆ ಗಡ್ದೆಯಲ್ಲೆಲ್ಲಾ ಗುಡ್ಡೆಗಳನ್ನು ಹಾಕಿದ್ದರು. ಯಾಕೆ ನಮ್ಮ ಜನ ಹೀಗೆ ಮಾಡುತ್ತಾರೆ. ಏನು ಮಾಡುವುದು ಎಂದು ಸುಮಾರು ಅರ್ಧಗಂಟೆ ಮಾತುಕತೆ ನಡೆಸಿ ಇದ್ದದ್ದರಲ್ಲೇ ಒಂದು ಒಳ್ಳೆ ಜಾಗ ನೋಡಿ ಸ್ನಾನದ ಶಾಸ್ತ್ರ ಮುಗಿಸಿ ಬಂದೆವು. ಕೋಣೆಯಲ್ಲೇ ಸ್ನಾನ ಮಾಡಿ ಬಂದಿದ್ದ ಮೂವರು ನಮ್ಮನ್ನು ನೋಡಿ ಒಳಗೊಳಗೇ ನಗುತ್ತಿದ್ದರು. ಇಷ್ಟೆಲ್ಲಾ ಆಧುನಿಕತೆ ಇದ್ದರೂ, ಜನ ಮುಂದುವರಿದಿದ್ದರೂ ನಮ್ಮನ್ನು ಕಾಡುವ ಒಂದೇ ಪ್ರಶ್ನೆ ಹೀಗೂ ಉಂಟೆ???

ಅಲ್ಲಿಂದ ಬಂದು ಸೀದಾ ಮಂಚಾಲಮ್ಮನ ದರ್ಶನ ಮುಗಿಸಿ ರಾಯರ ದರ್ಶನಕ್ಕೆ ಹೊರಟೆವು. ಜನ ಸಂದಣಿ ಅಷ್ಟಾಗಿ ಇರದ ಕಾರಣ ರಾಯರ ದರ್ಶನ ಅದ್ಭುತವಾಗಿ ನಡೆಯಿತು. ಎಲ್ಲ ಬೃಂದಾವನಗಳ ದರ್ಶನ ಮುಗಿಸಿ ಊಟಕ್ಕೆ ಹೊರಟೆವು. ಊಟ ಮುಗಿಸಿ ಆಚೆ ಬಂದು ವಿಶ್ರಾಂತಿ ತೆಗೆದುಕೊಂಡು ಅಲ್ಲಿನ ವಾಸಿಯೊಬ್ಬರ ಬಳಿ ಮಾತಾಡುತ್ತಿದ್ದಾಗ ನಮ್ಮ ನದಿ ದಂಡೆಯ ಅನುಭವ ಹೇಳಿದಾಗ ಅವರು ಎಂದರು. ನೀವು ಯಾಕೆ ಅಲ್ಲಿಗೆ ಹೋದಿರಿ. ನಾವು ನದಿಗೆ ಹೋಗುವುದೇ ಇಲ್ಲ. ವರ್ಷಕ್ಕೆ ಒಮ್ಮೆ ಮಾತ್ರ ಮಳೆಗಾಲದಲ್ಲಿ ನದಿ ತುಂಬಿದಾಗ ಹೋಗಿ ಪೂಜೆ ಸಲ್ಲಿಸಿ ಬರುತ್ತೇವೆ ಅಷ್ಟೇ. ಮರುದಿನ ಸುಮ್ಮನೆ ನಮ್ಮ ನಮ್ಮ ಕೋಣೆಯಲ್ಲಿ ಬಿಸಿ ಬಿಸಿ ನೀರು ಸ್ನಾನ ಮಾಡಿದೆವು. ಈಗ ಯಾರಾದರೂ ಹೇಗಿತ್ತು ಮಂತ್ರಾಲಯ ಎಂದರೆ ಹೋಗಿ ರಾಯರ ದರ್ಶನ ಮಾಡಿ ಆದರೆ ನದಿ ಕಡೆ ಮಾತ್ರ ಹೋಗಬೇಡಿ ಎನ್ನುತ್ತೇನೆ..

ಏಕೆ ನಮ್ಮ ಜನ ಹೀಗೆ???

Comments