ಜಪಾನಿನ ಬುಲೆಟ್ ಟ್ರೈನಿನ ಶಿಷ್ಟಾಚಾರಗಳು
ನಮಗೆ ಜಪಾನ್ ಎಂಬ ಹೆಸರು ಕೇಳಿದೊಡನೆಯೇ ನೆನಪಾಗುವುದು ಅಣು ಬಾಂಬ್ ದಾಳಿ ಮತ್ತು ಬುಲೆಟ್ ಟ್ರೈನ್ ಗಳು. ವಾಯು ವೇಗದಲ್ಲಿ ಚಲಿಸುವ ಬುಲೆಟ್ ರೈಲುಗಳು ಬಹಳ ಆಕರ್ಷಣೀಯ. ಭಾರತದಲ್ಲೂ ವೇಗದ ರೈಲುಗಳಿಗೆ ಶ್ರೀಕಾರ ಮಾಡಿದ್ದಾರೆ. ಆದರೆ ಅಲ್ಲಿಯ ವೇಗಕ್ಕೆ ಸಾಟಿಯಾಗಲು ನಮಗೆ ಇನ್ನಷ್ಟು ಸಮಯದ ಅಗತ್ಯ ಇದೆ ಎಂದು ಅನಿಸುತ್ತಿದೆ. ಅಲ್ಲಿನ ಬುಲೆಟ್ ರೈಲಿನಲ್ಲಿ ನಾವು ಪ್ರಯಾಣಿಸುವಾಗ ಏನೆಲ್ಲಾ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂಬ ಪುಟ್ಟ ಬರಹವನ್ನು ನಾನು ಕಳೆದ ವಾರ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಕಂಡೆ. ಆ ಪತ್ರಿಕೆಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಆ ಬರಹವನ್ನು ಯಥಾವತ್ತಾಗಿ ಪ್ರಕಟಿಸಿದ್ದೇನೆ.
ಜಗತ್ತಿನಲ್ಲಿಯೇ ಜಪಾನಿನ ಬುಲೆಟ್ ಟ್ರೇನ್ ಸರ್ವೋತ್ಕೃಷ್ಟ ಎಂದು ಹೆಸರುವಾಸಿಯಾಗಿದೆ. ಬುಲೆಟ್ ಟ್ರೇನ್ ಆರಂಭವಾಗಿ ೬೦ ವರ್ಷ (ಅಕ್ಟೋಬರ್ ೧, ೧೯೬೪) ಗಳಾದರೂ ಇಲ್ಲಿ ತನಕ, ಯಾವ ದುರಂತ ಸಂಭವಿಸದೇ ಇರುವುದರಿಂದ, ಅದು ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಾರಿಗೆ ವ್ಯವಸ್ಥೆ ಎಂದು ಕರೆಯಿಸಿಕೊಂಡಿದೆ. ಇಡೀ ವ್ಯವಸ್ಥೆಯಲ್ಲಿ ಯಾವ ದೋಷವೂ ಇಲ್ಲದಿರುವುದು ಅದರ ದಕ್ಷತೆ ಮತ್ತು ಕಾರ್ಯಕ್ಷಮತೆ ಬಗ್ಗೆ ಸಂಪೂರ್ಣ ವಿಶ್ವಾಸ ನೆಲೆಸುವಂತೆ ಮಾಡಿದೆ. ಇಂಥ ಬುಲೆಟ್ ಟ್ರೇನಿನಲ್ಲಿ ಪ್ರಯಾಣ ಮಾಡುವಾಗ ಕೆಲವು ಶಿಷ್ಟಾಚಾರ ಮತ್ತು ಸಾಮಾಜಿಕ ಅಭ್ಯಾಸಗಳನ್ನು ಪಾಲಿಸಬೇಕೆಂದು ಅಪೇಕ್ಷಿಸಲಾಗಿದೆ.
ಬುಲೆಟ್ ಟ್ರೇನಿನಲ್ಲಿ ಒಂದು ಹ್ಯಾಂಡ್ ಬ್ಯಾಗ್ ಅಥವಾ ಕ್ಯಾಬಿನ್ ಬ್ಯಾಗ್ ಹೊರತಾಗಿ ಮತ್ತೇನನ್ನೂ ಒಯ್ಯುವಂತಿಲ್ಲ. ಪ್ರಯಾಣಿಕರ ಸರಾಗ ಓಡಾಟಕ್ಕೆ ತೊಂದರೆಯಾಗುವುದರಿಂದ ಮತ್ತು ಬ್ಯಾಗನ್ನು ಎತ್ತಿ ಮೇಲೆ ಇಡುವುದು, ಇಳಿಸುವುದು ಕಷ್ಟವಾಗುವುದರಿಂದ ದೊಡ್ಡ ಗಾತ್ರದ ಸೂಟ್ ಕೇಸ್ ಗಳನ್ನು ಒಳಗೆ ಬಿಡುವುದಿಲ್ಲ. ಪ್ರಯಾಣಿಕರು ಓಡಾಡುವ ಮಾರ್ಗದಲ್ಲಿ ಯಾವ ಬ್ಯಾಗುಗಳನ್ನೂ ಇಡುವಂತಿಲ್ಲ. ರಿಸರ್ವೇಶನ್ ಹೊಂದಿರುವವರು ಬೋಗಿಯ ಹಿಂಭಾಗದಲ್ಲಿ ದೊಡ್ದ ಸೂಟ್ ಕೇಸುಗಳನ್ನು ಇಡಬಹುದು.
ಅರ್ಬನ್ ಮತ್ತು ಲೋಕಲ್ ಟ್ರೇನುಗಳಲ್ಲಿ ಆಹಾರ ಪದಾರ್ಥಗಳನ್ನು ಸೇವಿಸುವುದು ಒರಟು ವರ್ತನೆ ಎಂದು ಕರೆಯಿಸಿಕೊಳ್ಳುತ್ತದೆ. ಟ್ರೇನು ಚಲಿಸುವಾಗ, ಆಹಾರವನ್ನು ಸೇವಿಸಿದರೆ ಅದು ಕೆಳಗೆ ಅಥವಾ ಅಕ್ಕ-ಪಕ್ಕದಲ್ಲಿದ್ದವರ ಮೇಲೆ ಬೀಳಬಹುದು ಮತ್ತು ಆಹಾರದ ವಾಸನೆ ಪಕ್ಕದವರಿಗೆ ಕಿರಿಕಿರಿಯಾಗಬಹುದು ಎಂಬ ಕಾರಣಕ್ಕೆ ಸಾಮಾನ್ಯವಾಗಿ ಯಾರೂ ಆಹಾರ ಸೇವಿಸುವುದಿಲ್ಲ. ಆದರೆ ನೀರು ಕುಡಿಯಬಹುದು. ಆದರೆ ಬುಲೆಟ್ ಟ್ರೇನಿನಲ್ಲಿ ಸ್ನ್ಯಾಕ್ಸ್ ಸೇವಿಸಬಹುದು. ಪ್ರಯಾಣಿಕರಿಗೆಂದೇ, ಕೆಲವು ಸ್ಟೇಷನ್ ಗಳಲ್ಲಿ ಲಘು ತಿಂಡಿಗಳನ್ನು ಮಾರಾಟ ಮಾಡಲಾಗುತ್ತದೆ. ಅಲ್ಲಿ ಹೋಗಿ ಖರೀದಿಸಬಹುದು. ಬುಲೆಟ್ ಟ್ರೇನಿನಲ್ಲಿ ಕಾಫಿ, ಟೀ ಕುಡಿಯುವುದು ಸಹ ಒಳ್ಳೆಯ ವರ್ತನೆಯಲ್ಲ. ಕೋಕ್ ಮತ್ತು ಸೋಡಾ ಬಾಟಲಿ ಓಪನ್ ಮಾಡುವಾಗ ಅದು ಹೊರಗೆ ಚೆಲ್ಲದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು.
ಆದರೆ ಜೋರಾಗಿ ಮಾತನಾಡುವುದು, ಕೇಕೆ ಹಾಕುವುದು, ಹಾಡುವುದು ಇವೆಲ್ಲಾ ನಿಷಿದ್ಧ. ಮೊಬೈಲ್ ಫೋನಿನಲ್ಲಿ ಜೋರಾಗಿ ಮಾತನಾಡುವಂತಿಲ್ಲ. ಮೊಬೈಲ್ ನಲ್ಲಿ ಮಾತನಾಡುವಾಗಲೂ ಒಳದನಿಯಲ್ಲಿದ್ದರೆ ಯಾರೂ ದುರುಗುಟ್ಟಿ ನೋಡುವುದಿಲ್ಲ. ಬುಲೆಟ್ ಟ್ರೇನಿನಲ್ಲಿ ಯಾರೂ ಫೊಟೋ ತೆಗೆಯುವುದು ಮತ್ತು ವಿಡಿಯೋ ಮಾಡುವುದು ಒಳ್ಳೆಯ ನಡತೆಯಲ್ಲ. ಅಲ್ಲಿ ಸಿಗರೇಟು ಸೇದುವಂತಿಲ್ಲ. ಆದರೆ ಸ್ಮೋಕಿಂಗ್ ಕಾರ್ ವ್ಯವಸ್ಥೆ ಇರುವ ಬುಲೆಟ್ ಟ್ರೇನುಗಳಲ್ಲಿ ಸಿಗರೇಟು ಸೇದಬಹುದು. ಬಾಗಿಲ ಹತ್ತಿರದಲ್ಲಿರುವ ಆಸನಗಳು ವಯಸ್ಸಾದವರಿಗೆ, ವಿಕಲಚೇತನರಿಗೆ, ಗರ್ಭಿಣಿಯರಿಗೆ ಮತ್ತು ಮಕ್ಕಳನ್ನು ಎತ್ತಿಕೊಂಡವರಿಗೆ ಮೀಸಲು. ಈ ಆಸನಗಳ ಬಣ್ಣವೇ ಬೇರೆ. ಆಸನಗಳನ್ನು ಹಿಂದಕ್ಕೆ ಬಾಗಿಸುವಾಗ, ಹಿಂದಿನವರನ್ನು ಗಮನಿಸುವುದು ಲೇಸು.
ಬುಲೆಟ್ ಟ್ರೇನಿನಲ್ಲಿ ಪತ್ರಿಕೆಗಳನ್ನು ಓದಬಹುದು. ಆದರೆ ಎದ್ದು ಹೋಗುವಾಗ ಅದನ್ನು ತೆಗೆದುಕೊಂಡು ಹೋಗಬೇಕು. ಪತ್ರಿಕೆಗಳನ್ನು ಬೇರೆಯವರ ಮುಖಕ್ಕೆ ತಾಕುವಂತೆ ಇರಿಸಿಕೊಂಡು ಓದುವುದು ಸಭ್ಯ ನಡತೆಯಲ್ಲ. ಓದಿದ ಪತ್ರಿಕೆಗಳನ್ನು ಬಿಟ್ಟು ಹೋಗುವುದು ರದ್ದಿ ಅಥವಾ ಕಸ ಎಂದೇ ಕರೆಯಿಸಿಕೊಳ್ಳುತ್ತದೆ. ಬುಲೆಟ್ ಟ್ರೇನಿನಲ್ಲಿ ಚಾಕಲೇಟ್ ಹೊದಿಕೆಯನ್ನೂ ಚೆಲ್ಲಿ ಹೋಗುವುದನ್ನು ಜಪಾನೀಯರು ಇಷ್ಟ ಪಡುವುದಿಲ್ಲ. ಕೆಲವರು ಖಾಲಿಯಾದ ನೀರಿನ ಬಾಟಲಿ, ಕೋಕ್ ಬಾಟಲಿ ಮತ್ತು ಚಿಪ್ಸ್ ಪ್ಯಾಕೆಟ್ ಗಳನ್ನು ಅಲ್ಲಿಯೇ ಬಿಟ್ಟುಹೋಗುವುದನ್ನು ಸಹಿಸುವುದಿಲ್ಲ.
ಬುಲೆಟ್ ಟ್ರೇನ್ ಆಗಮಿಸುತ್ತಿದ್ದಂತೆ ಬೇರೆಯವರನ್ನು ನೂಕುವಂತಿಲ್ಲ. ಮತ್ತೊಬ್ಬರಿಂದ ಕನಿಷ್ಟ ಎರಡು ಅಡಿ ಅಂತರವನ್ನಾದರೂ ಕಾಪಾಡಿಕೊಳ್ಳಬೇಕು. ಯಾವ ಕಾರಣಕ್ಕೂ ತಳ್ಳಾಟ, ನೂಕುನುಗ್ಗಲಿಗೆ ಅವಕಾಶವಿಲ್ಲ. ಟ್ರೇನ್ ಏರುತ್ತಿದ್ದಂತೆ, ಮುಂದಕ್ಕೆ ಚಲಿಸಬೇಕು. ಯಾವ ಕಾರಣಕ್ಕೂ ಬಾಗಿಲ ಹತ್ತಿರ ನಿಲ್ಲುವಂತಿಲ್ಲ. ನಿಲ್ದಾಣದಲ್ಲಿ ನಡೆಯುತ್ತಾ ಆಹಾರ ಸೇವಿಸುವುದು ಒಳ್ಳೆಯ ನಡೆಯಲ್ಲ. ನಿಲ್ದಾಣದಲ್ಲಿ ಕಾಲಿಟ್ಟು ರೈಲು ಪ್ರಯಾಣ ಮುಗಿಸಿ, ಹೊರಬೀಳುವ ತನಕ ಎಲ್ಲೂ ಗೊಂದಲ, ಗಲಿಬಿಲಿ ಆಗುವುದಿಲ್ಲ. ಅದೇ ಸ್ವಾರಸ್ಯ.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ