ಜಮೀನು ಕಿತ್ತುಕೊಳ್ಳುವ ಪೋಸ್ಕೋ ಕಂಪೆನಿಗೆ ರೈತರ ಷರತ್ತುಗಳು

ಜಮೀನು ಕಿತ್ತುಕೊಳ್ಳುವ ಪೋಸ್ಕೋ ಕಂಪೆನಿಗೆ ರೈತರ ಷರತ್ತುಗಳು

ನಮ್ಮ ದೇಶದಲ್ಲೀಗ ಹಲವಾರು ರಾಜ್ಯಗಳಲ್ಲಿ ವಿಶೇಷ ವಿತ್ತ ವಲಯ (ಸ್ಪೆಷಲ್ ಇಕಾನಾಮಿಕ್ ಜೋನ್) ಮತ್ತು ಬೃಹತ್ ಕೈಗಾರಿಕೆಗಳ ವಿರುದ್ಧ ಮಣ್ಣಿನ ಮಕ್ಕಳ ಪ್ರತಿಭಟನೆ ಪ್ರಬಲವಾಗುತ್ತಿದೆ. ಒರಿಸ್ಸಾ ರಾಜ್ಯದಲ್ಲಿ ಪೋಸ್ಕೋ ಕಂಪೆನಿಯ ವಿರುದ್ಧ ರೈತರ ಪ್ರತಿಭಟನೆಯಲ್ಲಿ ಕಂಡು ಬಂದಿರುವ ಬದಲಾವಣೆ ಕುತೂಹಲಕರ.

ಒರಿಸ್ಸಾದ ಮೂರು ಜಿಲ್ಲೆಗಳಲ್ಲಿ ಗಣಿಗಾರಿಕೆ, ಉಕ್ಕಿನ ಕೈಗಾರಿಕೆ ಮತ್ತು ಸಮುದ್ರ ತೀರದ ಬಂದರು ನಿರ್ಮಾಣ ಕೈಗೆತ್ತಿಕೊಳ್ಳುವುದು ಪೋಸ್ಕೋ ಕಂಪೆನಿಯ ಬೃಹತ್ ಯೋಜನೆ. ಇದಕ್ಕೆ ರೈತರ ವಿರೋಧ ಯಾಕೆ? ಆ ಕಂಪೆನಿಗೆ “ತಪ್ಪು ಪರಿಸರ ಪರಿಣಾಮ ಮೌಲ್ಯಮಾಪನ” ಮತ್ತು ಕಾನೂನುಬಾಹಿರ ಸಾರ್ವಜನಿಕ ಅಹವಾಲು ಸಭೆಯ ಆಧಾರದಿಂದ “ಪರಿಸರ ಸಂಬಂಧಿ ಪರವಾನಗಿ” ನೀಡಲಾಗಿದೆ; ಇದು ಸರಿಯಲ್ಲ ಎಂಬುದು ಜಮೀನು ಕಳೆದುಕೊಳ್ಳಲಿರುವ ರೈತರ ಆಕ್ಷೇಪ.

"ನಮ್ಮ ನೆಲದ ಮಣ್ಣು ಒರಿಸ್ಸಾದ ಬೇರೆ ಪ್ರದೇಶಗಳದ್ದಕ್ಕಿಂತ ಫಲವತ್ತಾದ ಮಣ್ಣು. ಸರಕಾರದಿಂದ ಯಾವುದೇ ಸಹಾಯ ಪಡೆಯದೆ ನಾವಿಲ್ಲಿ ವರುಷಕ್ಕೆ ಎರಡು ಬೆಳೆ ಬೆಳೀತೇವೆ. ಯಾಕೆಂದರೆ ಅಂತರ್ಜಲ ಮೇಲ್ ಮಟ್ಟದಲ್ಲಿದೆ. ಜಗತ್‌ಸಿಂಗ್ ಪುರದ ಮಣ್ಣು ವೀಳ್ಯದೆಲೆ ಕೃಷಿಗೆ ಅತ್ಯುತ್ತಮ. ಇಲ್ಲಿ ಬೆಳೆಸಿದ ವೀಳ್ಯದೆಲೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ರಫ್ತಾಗುತ್ತಿದೆ. ನಮ್ಮ ಜಮೀನು ಕಿತ್ತುಕೊಂಡರೆ ನಮ್ಮ ಜೀವನಾಧಾರ ಕಿತ್ತುಕೊಂಡಂತೆ. ಕೈಗಾರಿಕೆಗಳ ಮಾಲೀಕರು ಕೊಡುವ ಪರಿಹಾರದ ಹಣ ನಮ್ಮ ಜೀವನೋಪಾಯವನ್ನು ಮರಳಿ ಕೊಡ್ತದೆಯೇ?” - ಇದು ಧಿನ್ಕಿಯ ಗ್ರಾಮವಾಸಿ ಪ್ರಫುಲ್ಲದಾಸರ ಪ್ರಶ್ನೆ. ಇದರಿಂದ ರೈತರ ವಿರೋಧದ ಕಾರಣ ಸ್ಪಷ್ಟ.

ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಹೋರಾಟದ ಬೆನ್ನು ಮುರಿಯಲು ಅಲ್ಲೊಂದು ಹುನ್ನಾರ. ನುವಾಗಾವೊನ್, ಗಂಧಕುಜಂಗ ಮತ್ತು ಧಿನ್ಕಿಯ - ಈ ಮೂರು ಗ್ರಾಮಗಳ ಪ್ರತಿಭಟನಾನಿರತ ರೈತರನ್ನು 23 ನವಂಬರ್ 2007ರಂದು ಪೊಲೀಸರು ಸುತ್ತುವರಿದರು. ಅನಂತರ ನವಂಬರ್ 29ರಂದು ಸುಮಾರು 200 ಜನರಿಂದ ಆ ರೈತರ ಮೇಲೆ ಧಾಳಿ! "ನಮ್ಮ ಪ್ರತಿಭಟನಾ ಶಿಬಿರಕ್ಕೆ 200 - 300 ಜನ ನುಗ್ಗಿ, ಆರು ಬಾಂಬ್ ಎಸೆದರು. ನಮ್ಮ ಸೈಕಲುಗಳನ್ನು ಮುರಿದು ಹಾಕಿ, ಡೇರೆಗಳಿಗೆ ಬೆಂಕಿ ಕೊಟ್ಟು ಸುಟ್ಟರು” ಎನ್ನುತ್ತಾರೆ ಪ್ರಶಾಂತ್ ಪೈಕ್ರೆ. ಅವರು ಪ್ರತಿಭಟನೆಯಲ್ಲಿ ಭಾಗಿಯಾದ “ಒರಿಸ್ಸಾ ಬಚಾವೋ ಆಂದೋಲನ”ದ ಸಕ್ರಿಯ ಸದಸ್ಯ. ಆ ಧಾಳಿಕೋರರನ್ನು ತಮ್ಮ ಮೇಲೆ ಸರಕಾರವೇ ಛೂ ಬಿಟ್ಟಿದೆ ಎಂಬುದು ಪ್ರತಿಭಟನಾಕಾರರ ಹೇಳಿಕೆ.

ಈ ಹಿನ್ನೆಲೆಯಲ್ಲಿ, ಒರಿಸ್ಸಾದ ರಾಜ್ಯಪಾಲರ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಪಿ. ಮಿಶ್ರಾ ಅವರ ಹೇಳಿಕೆ ಗಮನಾರ್ಹ: "ನಮ್ಮ ರಾಜ್ಯದ ಆಡಳಿತವು ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದು ಕೊಂಡಿದೆ. ಉಕ್ಕಿನ ಕಾರ್ಖಾನೆಗಾಗಿ ಈಗ ಆಯ್ಕೆ ಮಾಡಿರುವ ಸ್ಥಳವೇ ಅತ್ಯುತ್ತಮವೆಂದು ಗ್ರಾಮಸ್ಥರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಯಾಕೆಂದರೆ ಆ ಸ್ಥಳವು ಪೋಸ್ಕೋ ನಿರ್ಮಿಸಬೇಕೆಂದಿರುವ ಬಂದರಿಗೆ ಬಹಳ ಹತ್ತಿರ." ಬಂದರಿನ ಯೋಜನೆ ಇನ್ನೂ ಅಂತಿಮಗೊಳಿಸಿಲ್ಲ ಎಂಬುದೂ ಅದೇ ಮಿಶ್ರಾ ಅವರ ಇನ್ನೊಂದು ಹೇಳಿಕೆ!

ಇವೆಲ್ಲ ಘಟನೆಗಳ ನಂತರ, ಜಗತ್‌ಸಿಂಗ್ ಪುರ ಜಿಲ್ಲೆಯ ಕೆಲವರು ತಮ್ಮ ನಿಲುವು ಬದಲಾಯಿಸಿದ್ದಾರೆ. "ಜಮೀನು ಕೊಡುವುದಿಲ್ಲ” ಎನ್ನುತ್ತಿದ್ದ ಅವರು 5 ಜನವರಿ 2008ರಂದು ಪೋಸ್ಕೋ ಕೈಗಾರಿಕೆಗೆ ತಮ್ಮ ಜಮೀನು ಕೊಡಲು ಒಪ್ಪಿದ್ದಾರೆ. ಆದರೆ, ಇತರ ಹಲವು ಬೇಡಿಕೆಗಳೊಂದಿಗೆ “ಕಂಪೆನಿಯ ಲಾಭಗಳಲ್ಲಿ ಶೇಕಡಾ 5 ಪಾಲು ನಮಗೆ ಪಾವತಿಸಬೇಕು” ಎಂಬ ಷರತ್ತು ಮುಂದಿಟ್ಟಿದ್ದಾರೆ.

ಪೋಸ್ಕೋ ಅಧಿಕಾರಿಗಳು ಈ ಷರತ್ತನ್ನು ಒಪ್ಪಿಕೊಂಡಿಲ್ಲ. ಆದರೆ ಇದನ್ನು ಚರ್ಚಿಸಲಿಕ್ಕಾಗಿ ಉನ್ನತಮಟ್ಟದ ಸಮಿತಿಯೊಂದನ್ನು ರಚಿಸಲು ಒರಿಸ್ಸಾ ಸರಕಾರ ಯೋಜಿಸಿದೆ. ತಮ್ಮ ಜಮೀನು ಬಿಟ್ಟುಕೊಡಲಿಕ್ಕಾಗಿ ರೈತರು ಒಡ್ಡಿರುವ ಇತರ ಷರತ್ತುಗಳು ಹೀಗಿವೆ: ಕೃಷಿ ಜಮೀನಿಗೆ ಎಕ್ರೆಗೆ ರೂ.25 ಲಕ್ಷ ಪರಿಹಾರ; ಮನೆಯಡಿ ಜಾಗಕ್ಕೆ ಎಕ್ರೆಗೆ ರೂ.40 ಲಕ್ಷ ಪರಿಹಾರ; ಉದ್ಯೋಗದ ಗ್ಯಾರಂಟಿ; 60 ವರುಷ ವಯಸ್ಸು ದಾಟಿದವರಿಗೆ ತಿಂಗಳಿಗೆ ರೂ.1,000 ಭತ್ತೆ; ಉದ್ಯೋಗಕ್ಕೆ ಅರ್ಹರಾದ ಸದಸ್ಯರು ಇಲ್ಲದಿರುವ ಕುಟುಂಬಗಳಿಗೆ ಮತ್ತು ವೀಳ್ಯದೆಲೆ ತೋಟಗಳ ಭೂರಹಿತ ದಿನಗೂಲಿ ಕೆಲಸಗಾರರ ಕುಟುಂಬಗಳಿಗೆ ತಿಂಗಳಿಗೆ ರೂ.3,000 ಭತ್ತೆ. ಸ್ಥಳೀಯ ಶಾಸಕ ದಾಮೋದರ ರೌತ್ ನಡೆಸಿದ ಸಭೆಯಲ್ಲಿ ಈ ಬೇಡಿಕೆಗಳಿಗೆ ಅಂತಿಮ ರೂಪ ನೀಡಲಾಯಿತು.

ಪೋಸ್ಕೋ ಕಂಪೆನಿಯ ಬೆಂಬಲಿಗರು ಮಾತ್ರ ಷರತ್ತುಬದ್ಧ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎನ್ನುತ್ತಾರೆ ಒರಿಸ್ಸ ಬಚಾವೋ ಆಂದೋಲನದ ಕಾರ್ಯಕರ್ತರು. ಅವರಲ್ಲೊಬ್ಬರಾದ ನಿಕುಂಜ್ ಭುಟಿಯಾ ಹಿಂದೊಮ್ಮೆ ಪೋಸ್ಕೋ ಅಧಿಕಾರಿಗಳು ಬೇಡಿಕೆಗಳನ್ನು ತಿರಸ್ಕರಿಸಿದ್ದನ್ನು ನೆನಪು ಮಾಡಿಕೊಳ್ಳುತ್ತಾರೆ.

ಒರಿಸ್ಸಾದ ನುವಾಗಾವೊನ್, ಗಂಧಕುಜಂಗ ಮತ್ತು ಧಿನ್ಕಿಯ ಗ್ರಾಮಗಳ ಜನರು ಜುಲಾಯಿ 2005ರಿಂದಲೂ ಪೋಸ್ಕೋ ಕಂಪೆನಿಯ ಉಕ್ಕಿನ ಕಾರ್ಖಾನೆ ಮತ್ತು ಬಂದರಿಗಾಗಿ ಭೂಸ್ವಾಧೀನ ಮಾಡುವುದನ್ನು ಪ್ರತಿಭಟಿಸುತ್ತಿದ್ದಾರೆ. ನವಂಬರ್ 2007ರಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಸುತ್ತುವರಿದ ನಂತರ, ಪ್ರತಿಭಟನಾಕಾರರಿಗೆ ಬೆದರಿಕೆ ಒಡ್ಡಲಾಗಿದೆ ಮತ್ತು ಶಿಕ್ಷೆ ನೀಡಲಾಗಿದೆ; ಈಗ ಕೆಲವರು ನಿಲುವು ಬದಲಾಯಿಸಿ, ಪೋಸ್ಕೋ ಕಂಪೆನಿಯ ಒತ್ತಡಕ್ಕೆ ಮಣಿಯಲು ಅದುವೇ ಕಾರಣ ಎಂಬುದು ಒರಿಸ್ಸಾ ಬಚಾವೋ ಆಂದೋಲನದ ಕಾರ್ಯಕರ್ತರ ಅಭಿಪ್ರಾಯ.

ಒರಿಸ್ಸಾ ರಾಜ್ಯಪಾಲರ ಸಂಪರ್ಕಾಧಿಕಾರಿ ಮಿಶ್ರಾರಿಗೆ ಈ ಎಲ್ಲ ವಿವಾದ ಬೇಗ ಬಗೆಹರಿಯಲಿದೆ ಎಂಬ ಆಶಾವಾದ. ಜೀವನೋಪಾಯವನ್ನೇ ಕಳೆದುಕೊಳ್ಳಲಿರುವ ಮಣ್ಣಿನ ಮಕ್ಕಳಿಗೆ ನಿಶ್ಚಿಂತೆಯ ಬದುಕು ಸಾಗಿಸಲಿಕ್ಕಾಗಿ ನ್ಯಾಯಬದ್ಧ ಪರಿಹಾರ ಸಿಗಬೇಕು, ಅಲ್ಲವೇ? ತಲೆಮಾರುಗಳಿಂದ ಉಳಿಸಿಕೊಂಡು ಬಂದಿರುವ ಹಾಗೂ ಏಕೈಕ ಸೊತ್ತಾದ ಜಮೀನನ್ನು ಕಿತ್ತುಕೊಳ್ಳುವಾಗ ರೈತರಿಗೆ ಅಷ್ಟಾದರೂ ಕೊಡಬೇಕಾದದ್ದು ನ್ಯಾಯೋಚಿತ ಮತ್ತು ಸರಕಾರದ ಕರ್ತವ್ಯ.