ಜಯಂತ್ ಕಾಯ್ಕಿಣಿಯವರ ಕಥಾಲೋಕ - ಬಣ್ಣದ ಕಾಲು

ಜಯಂತ್ ಕಾಯ್ಕಿಣಿಯವರ ಕಥಾಲೋಕ - ಬಣ್ಣದ ಕಾಲು

ಬರಹ

ಗಾಳಿ ಮರದ ನೆಳಲು, ಸ್ವಪ್ನದೋಷ, ಟ್ರೈಸಿಕಲ್, ಬಿಡು ಬಿಡು ನಿನ್ನಯ, ಚೌತಿ ಚಂದ್ರ, ಬಣ್ಣದ ಕಾಲು, ಸೇವಂತಿ ಹೂವಿನ ಟ್ರಕ್ಕು ಮತ್ತು ಅಪರೂಪ ಕತೆಗಳು ಬೇರೆ ಬೇರೆ ಕಾರಣಗಳಿಗಾಗಿ ಮುಖ್ಯವಾಗುತ್ತವೆ. ಗಾಳಿ ಮರದ ನೆಳಲು, ಸೇವಂತಿ ಹೂವಿನ ಟ್ರಕ್ಕು, ಬಣ್ಣದ ಕಾಲು ಮೂರೂ ಕತೆಗಳು ಭಿನ್ನ ಭಿನ್ನ ನೆಲೆಯಲ್ಲಿ, ಭಿನ್ನ ಭಿನ್ನ ವಯೋಮಾನದ ಪಾತ್ರಗಳ ಪಾತಳಿಯಲ್ಲಿ ಮಾನವನ ಆಂತರಿಕ ತುಮುಲಗಳ ಸುತ್ತ, ಅವನ ಅಂತಃಕರಣದ ಸೆಲೆಗಳ ಮೂಲ ಅರಸುತ್ತ ಬಿಚ್ಚಿಕೊಳ್ಳುತ್ತವೆ. ಆದರೆ ಮಾಸ್ತಿ ಕತೆಗಳ ನೆನಪು ತರುವ ಬಿಡುಬಿಡು ನಿನ್ನಯ ಕತೆಯಲ್ಲಿ ಮಾಸ್ತರರು ಘನಶ್ಯಾಮನನ್ನು ನೋಡಲು ಹೋಗದಿರುವ ನಿರ್ಧಾರಕ್ಕೆ ಬರುವುದು ಅಚ್ಚರಿ ಹುಟ್ಟಿಸುತ್ತದೆ. ಹಾಗಾಗಿ ಗಾಳಿ ಮರದ ನೆಳಲು ಕತೆಯ ನಾಗಮ್ಮನ ಔದಾರ್ಯವನ್ನು ಘನಶ್ಯಾಮನಲ್ಲಿ ಕಾಣಬಹುದಾದ ಸಾಧ್ಯತೆ ಇಲ್ಲಿಲ್ಲ. ಅದರೆದುರು ಘನಶ್ಯಾಮ ಮನಸ್ಸಿಗೆ ಹಿಂಸೆ ಮಾಡಿಕೊಂಡರೆ ಎಂಬ ಮಾಸ್ತರರ ತರ್ಕ ಸ್ವಲ್ಪ ಕಡಿಮೆಯದ್ದಕ್ಕೆ ರಾಜಿ ಮಾಡಿಕೊಂಡಂತೆಯೇ ಕಾಣುತ್ತದೆ! ಟ್ರೈಸಿಕಲ್ ಮತ್ತು ಅಪರೂಪ ಕತೆಗಳಲ್ಲೂ ಜಯಂತರ ಕಾಳಜಿ ಮನುಷ್ಯ ಸಂಬಂಧಗಳ ನಡುವೆ ದೃವಿಸುವ ಅಂತಃಕರಣದ ಅಪರೂಪದ ಕ್ಷಣಗಳನ್ನು ಕಟ್ಟಿಕೊಡುವುದೇ ಆಗಿದೆ. ಸ್ವಪ್ನದೋಷ ಕತೆ ಕೂಡ ಬಿಡು ಬಿಡು ನಿನ್ನಯ ಕತೆಯಂತೆಯೇ ಜಯಂತರ ಎಂದಿನ ಶೈಲಿ, ಆಶಯ ಮತ್ತು ನಿಲುವುಗಳಿಗೆ ಭಿನ್ನವಾಗಿ ಹೊಸತನವನ್ನು ತೋರುತ್ತವೆ. ಇದೇ ಮಾತು ನಿರೂಪಣೆಯ ವಿಧಾನದ ಮಟ್ಟಿಗೆ ಚೌತಿಚಂದ್ರ ಕತೆಗೂ ಅನ್ವಯಿಸುತ್ತದೆ.

೧೯೯೯ರಲ್ಲಿ ಬಂದ ಈ ಸಂಕಲನ ದ್ವಿತೀಯ ಮುದ್ರಣ ಕಂಡಿದೆ, ಅಂಕಿತದವರು ತಂದಿದ್ದಾರೆ.