ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೨

ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೨

ಬರಹ

ಬೇಂದ್ರೆ ಚಿಕ್ಕವರಾಗಿದ್ದಾಗ ತಾಯಿ(ಅಂಬಾಬಾಯಿ) ತೀವ್ರ ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂದಿತ್ತು. ಇದು ಬೇಂದ್ರೆ ಅವರಿಗೂ ವಂಶಪಾರಂಪರ್ಯವಾಗಿ ನಡೆದು ಬಂತು ಅದು ವಿಧಿ ಲಿಖಿತ. ಒಮ್ಮೆ ಯೋಗಿಗಳೊಬ್ಬರು ಬಂದು ಬೇಂದ್ರೆ ಅವರ ತಾಯಿಯನ್ನು ಕಂಡು "ಅಮ್ಮ..ನೀವು ದತ್ತನನ್ನು ಪೂಜೆ ಮಾಡಿ. ಸಂಕಷ್ಠಗಳು ದೂರವಾಗುವವು" ಎಂದರಂತೆ. ತಾಯಿ ವೃತದಂತೆ ಪಾಲಿಸಲು ಮುಂದಾಗಿ, ಮಗ ದತ್ತಾತ್ರೇಯನನ್ನು ಕರೆದು "ದತ್ತ ಮಹಾರಾಜರನ್ನು ಪೂಜಿಸಬೇಕು. ಹೋಗಿ ಹೂ ತೆಗೆದುಕೊಂಡು ಬಾ" ಎಂದರು.
ಕೂಡಲೇ ಅಶ್ಚರ್ಯಚಕಿತರಾದ ಬೇಂದ್ರೆ ತಮ್ಮ ಅತಿ ಚಿಕ್ಕ ವಯಸ್ಸಿನಲ್ಲಿಯೆ "ಅಮ್ಮ ನಾನೇ ದತ್ತ. ನಿನ್ನ ಮಗ. ಈಗ ನಾನು ಹುಟ್ಟಿದ್ದೇನೆ. ಚಿಂತೆ ಬೇಡ. ನಿನ್ನ ಎಲ್ಲ ಕಷ್ಠಗಳನ್ನು ದೂರ ಮಾಡಲಿದ್ದೇನೆ. ನೀನು ನನ್ನ ಪೂಜೆ ಮಾಡುವ ಅವಶ್ಯಕತೆ ಇಲ್ಲ" ಎಂದರು. ಬಾಚಿ, ಬರಸೆಳೆದು, ಬಿಗಿದಪ್ಪಿದ ಅಮ್ಮ ಮುತ್ತಿಟ್ಟು ‘ಅಂಬಿಕಾತನಯದತ್ತ’ನನ್ನು ಹರಸಿದ್ದರಂತೆ.
*ಬೇಂದ್ರೆ ಮಾಸ್ತರು ಪುಣೆಯ ಶಾಲೆಯೊಂದರಲ್ಲಿ ಮಾಸ್ತರಾಗಿ ಕಾರ್ಯಾರಂಭ ಮಾಡಿದ ಸಂದರ್ಭ. ಆಗಲೇ ಕವಿಯಾಗಿ ಬೇಂದ್ರೆ ಹೆಸರು ಮಾಡಿದ್ದರು ಎಂಬುದು ಉಲ್ಲೇಖನೀಯ. ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಪ್ರೇಮಪತ್ರ ಬರೆದ. ಹೆಸರು ಹಾಕದೆಯೇ ಶಾಲೆಯ ನೋಟೀಸ್ ಬೋರ್ಡಿಗೆ ಅಂಟಿಸಿದ. ನೋಡಿದ ಪ್ರಾಚಾರ್ಯರು ತೀವ್ರ ಕೆಂಡಾಮಂಡಲರಾಗಿ, ಹುಡುಗನನ್ನು ತಮ್ಮ ಕೊಠಡಿಗೆ ಕರೆಯಿಸಿ ವಿಚಾರನೇ ನಡೆಸಿದರು. ಅವನನ್ನು ಶಾಲೆಯಿಂದ ಅಮಾನತು ಗೊಳಿಸುವ ನಿರ್ಧಾರಕ್ಕೆ ಬಂದರು.
ವಿದ್ಯಾರ್ಥಿಗಳ ಬಾಯಿಂದ ಬಾಯಿಗೆ ಈ ವಿಷಯ ಕಾಳ್ಗಿಚ್ಚಿನಂತೆ ಹರಡಿ ಬೇಂದ್ರೆ ಮಾಸ್ತರ್ ಕಿವಿ ತಲುಪಿತು. ಕೂಡಲೇ ಧಾವಿಸಿ ಪ್ರಾಚಾರ್ಯರ ಕೊಠಡಿಗೆ ಬಂದ ಅವರು ವಿನೀತರಾಗಿ, ಕೈ ಮುಗಿದು "ಸರ್..ಲವ್ ಲೆಟರ್ ಬರೆದಿದ್ದಕ್ಕೆ ಈ ವಿದ್ಯಾರ್ಥಿಯನ್ನು ನೀವು ಶಾಲೆಯಿಂದ ಡಿಬಾರ್ ಮಾಡುವುದಾದರೆ..ಮೊದಲು ನೀವು ನನ್ನನ್ನು ಈ ಶಾಲೆಯಿಂದ ಕಿತ್ತು ಹಾಕಬೇಕು" ಎಂದು ಗಂಭೀರವಾಗಿ ಹೇಳಿದರು.
ಪ್ರಾಚಾರ್ಯರಿಗೆ ಹೇಗಾಗಿರಬೇಡ? ಕಾರಣ ಕೇಳಿದರು. ಬೇಂದ್ರೆ ಹೇಳಿದರು. " ನಾನು ಕವಿ. ಬಹುಶ: ನಾನು ಬರೆದಷ್ಟು ಪ್ರೇಮ ಪತ್ರಗಳನ್ನು ಯಾರೂ ಇದುವರೆಗೆ ಬರೆದಿಲ್ಲ. ಹಾಗಾಗಿ ನಾನೂ ತಮ್ಮ ಶಿಕ್ಷೆಗೆ ಅರ್ಹ!" ಒಟ್ಟಾರೆ ಬೇಂದ್ರೆ ಮಾಸ್ತರ್ ತರ್ಕದಿಂದ ವಿದ್ಯಾರ್ಥಿ ಬದುಕಿದ!.
*ಕವಿ ಬೇಂದ್ರೆ ಅವರನ್ನು ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಅಹ್ವಾನಿಸಲಾಗಿತ್ತು. ಪ್ರಾಸ್ತಾವಿಕ ಭಾಷಣ, ಸ್ವಾಗತ ಭಾಷಣ, ಪರಿಚಯ ಭಾಷಣ ಹೀಗೆ ಎಲ್ಲರೂ ಮಾತಿನಲ್ಲಿ ಮಲ್ಲಯುದ್ಧ ಪೂರೈಸುವ ಹೊತ್ತಿಗೆ ಬೇಂದ್ರೆ ಅವರ ತಾಳ್ಮೆ ಮೀರಿತ್ತು. ಆದರೂ ಸಭೆಯ ಮರ್ಯಾದೆಗೆ ಸೌಜನ್ಯ ಪಾಲಿಸಿ ಬಿಮ್ಮನೆ ಕುಳಿತಿದ್ದರು. ಅಂತೂ ಬೇಂದ್ರೆ ಮಾಸ್ತರ್ ಸರದಿ ಬಂತು. ಭಾಷಣಕ್ಕೆಂದೋ..ಕಾವ್ಯ ವಾಚನಕ್ಕೆಂದೋ ಬೇಂದ್ರೆ ಮಾಸ್ತರ್ ಎದ್ದು ನಿಂತರು.
"ಈಗ ಸಭಾಕ್ಕ ನಮಸ್ಕಾರ. ಸಂಘಟಕರು ನನಗ..ಬೇಕಾದಷ್ಟು ಹೊತ್ತು ಮಾತಾಡ್ರಿ ಅಂತ ಅಪ್ಪಣೆ ಕೊಟ್ಟಾರ. ಸದ್ಯ ‘೭ ಗಂಟೆ’ ಹೊಡದದ. ನೀವು ‘ಏಳು’ ತನಕ ನಾನು ಮಾತಾಡ್ತೇನಿ! ಸಾಕು ಅನ್ನಿಸಿದ ಕೂಡಲೇ ನೀವು ‘ಎದ್ದು ನಿಲ್ರಿ’; ನಾನು ನಿಲ್ಲಸ್ತೇನಿ?" ಇಡಿ ಸಭಾಭವನ ನಗೆಗಡಲಲ್ಲಿ.
*ವರಕವಿ ಬೇಂದ್ರೆ ಕಾರ್ಯನಿಮಿತ್ತ ಸೊಲ್ಲಾಪುರಕ್ಕೆ ತೆರಳಿದ್ದರು. ಅಲ್ಲಿ ಸಾಹಿತ್ತಿಕ ವಿಚಾರ ಮಂಥನ. ಬೇಂದ್ರೆ ಮಾತನಾಡುತ್ತ "ನೀರಿಳಿಯದ ಗಂಟಲೊಲ್ ಕಡುಬಂ ತುರುಕಿದಂತೆ" ಎಂದರು. ಅವರ ಮುಂದೆ ಕುಳಿತಿದ್ದ ಮರಾಠಿಗನ್ನಡಿಗ ಬೃಹಸ್ಪತಿ ಈ ಮರಾಠಿ ಮಾತೃ ಭಾಷೆಯ ಅಚ್ಚ ಕನ್ನಡಿಗನನ್ನು ತಿದ್ದಲು ಹೋದರು. "ಬೇಂದ್ರೆ ಅವರೆ..ಅದು ‘ನೀರಿಳಿಯದ ಗಂಟಲೊಲ್ ಕಡುಬುಂ ತುರುಕಿದಂತೆ’ ಅಲ್ಲ. "ಅದು ಕಡುಂಬುಂ ತುರುಕಿದಂತೆ!" ಎಂದು ಸಮಜಾಯಿಷಿ ನೀಡಿದರು.
ತಣ್ಣಗೆ ಆಲಿಸಿದ ಬೇಂದ್ರೆ ಅವರು.."ಸ್ವಾಮಿ ಕೇವಲ ಕಡುಬೇ ಇಳಿಯದ ಗಂಟಲಿನಲ್ಲಿ ತಾವು ’ಕಡುಂಬುಂ’ ಎಂದು ಮತ್ತೆರಡು ಗಾಲಿ (‘೦ ೦’) ಜೋಡಿಸಿ ಉಸಿರುಗಟ್ಟಿಸಿ ಕೊಲ್ತಾಯಿದ್ದೀರಿ!" ಎಂದರು. ಇಡೀ ಸಭಾಭವನ ಕವಿಯ ಹಾಸ್ಯ ಪ್ರಜ್ನೆಗೆ ಬೆರಗಾಗಿ ನಗೆಗಡಲಲ್ಲಿ ತೇಲಿತು. ‘ಬೃಹಸ್ಪತಿ’ ಮುಖ ನೋಡಬೇಕಿತ್ತಂತೆ!
*ವರಕವಿ ಬೇಂದ್ರೆ ಅವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭ- ಧಾರವಾಡದ ಕಲಾಭವನದಲ್ಲಿ. ಇಡೀ ಊರಿಗೆ ಊರೇ ಸಂಭ್ರಮದಿಂದ ಮುಂದಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು. ನೂರಾರು ಜನ ಬೇಂದ್ರೆ ಹಾಗು ಬೇಂದ್ರೆ ಸಾಹಿತ್ಯದ ಅಭಿಮಾನಿಗಳು ಬಂದು ಸೇರಿ ನೂರಾರು ಹಾರಗಳನ್ನು ಹಾಕಿ ಸನ್ಮಾನಿಸಿದರು. ಕುಸಿದು ಹೋಗುವಷ್ಠು ಮಣಭಾರದ ಮಾಲೆಗಳನ್ನು ಕೊರಳಲ್ಲಿ ಸಿಕ್ಕಿಸಿಕೊಂಡು ಬೇಂದ್ರೆ ಮೈಕ್ ಕಡೆಗೆ ವಾಲಿದರು.
"ಮುಗೀತೇನ್ರೀಪಾ..ನಿಮ್ಮ ಹಾರಾಹಾಕೋದು? ಎಂದು ಸಭಾಸದರನ್ನು ಪ್ರಶ್ನಿಸಿದರು. "ಸದ್ಯಕ್ಕೆ ಮುಗೀತು!" ಎಂದು ತಾವೇ ಮುಸು ಮುಸಿ ನಕ್ಕು, ಮತ್ತೊಂದು ಹಾರ ತಮ್ಮ ಕೈಗೆ ಕೊಡುವಂತೆ ಕೇಳಿದರು. ಆಶ್ಚರ್ಯದಿಂದ ಸಂಘಟಕರು ಮಾಲೆಯೊಂದಿಗೆ ಬಂದು ಬೇಂದ್ರೆ ಅವರ ಮುಂದೆ ನಿಂತರು. ಬೇಂದ್ರೆ ಅಂದರು. "ನೋಡ್ರೀಪಾ..ನೀವೆಲ್ಲ ಹಾರಗಳನ್ನ ಹಾಕಿ ಸನ್ಮಾನ ಮಾಡಿದ್ದು ಅಂಬಿಕಾತನಯ ದತ್ತಗ. ಈ ಬೇಂದ್ರೆಗ ಯಾರೂ ಹಾರ ಹಾಕಲಿಲ್ಲ. ಅದಕ್ಕ ನಿಮ್ಮ ಪರ್ಮಿಶನ್ ತುಗೊಂಡು ಈ ಬೇಂದ್ರೆ ಈ ಕೈಯಾಗಿನ ಹಾರ ಹಾಕ್ಕೊಳ್ತಾನ!" ಅಂದವರೆ..ಅದನ್ನೂ ಕೊರಳಿಗೆ ಏರಿಸಿಕೊಂಡು ನಿಸ್ಪ್ರುಹತೆ ಮೆರೆದಿದ್ದರು ನಮ್ಮ ಬೇಂದ್ರೆ.
*ಅಂತೂ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಕನ್ನಡಕ್ಕೆ ಪ್ರಥಮ ಜ್ನಾನಪೀಠ, ವರಕವಿ ಬೇಂದ್ರೆ ಅವರ ‘ನಾಕು ತಂತಿ’ ಕವನ ಸಂಕಲನಕ್ಕೆ ದ್ವಿತೀಯ ಜ್ನಾನಪೀಠ ಅರಸಿ ಬಂತು. ಆಗ ಇವರಿಬ್ಬರ ಅಭಿಮಾನಿಗಳು ತರಹೇವಾರಿ ಮಾತನಾಡಿಕೊಳ್ಳುತ್ತಿದ್ದರಂತೆ. "ಪುಟ್ಟಪ್ಪನವರು ಇನ್ನೊಬ್ಬ ಕವಿಯೊಂದಿಗೆ ಜ್ನಾನಪೀಠ ಹಂಚಿಕೊಂಡು ಕೇವಲ ೫೦ ಸಾವಿರ ನಗದು ಹಣ ಪಡೆದರು. ಅದು ಅರ್ಧ ಪೀಠ ಎಂದು ಬೇಂದ್ರೆ ಅಭಿಮಾನಿಗಳು ಅಂದರು. ಅತ್ತ ಪುಟ್ಟಪ್ಪನವರ ಅಭ್ಮಾನಿಗಳು "ಬೇಂದ್ರೆ ಮತ್ತೊಬ್ಬ ಕವಿಯೊಂದಿಗೆ ಜ್ನಾನಪೀಠ ಹಂಚಿಕೊಂಡು ೫೦ ಸಾವಿರ ರುಪಾಯಿ ಪಡೆದರು, ಅದು ಅರ್ಧ ಪೀಠ" ಎಂಬ ವಾದ ಮಂಡಿಸಿದರು.
ಈ ವಿಷಯ ಬೇಂದ್ರೆ ಅವರ ಕಿವಿಗೆ ಬಿತ್ತು. ಅವರ ಪ್ರತಿಕ್ರಿಯೆ ನೋಡಿ. "ನೋಡ್ರೆಪಾ..ಒಟ್ಟಾರೆ ಎರಡು ಅರ್ಧ ಅಂದ್ರ ಒಂದು ಪೂರ್ಣ ಹೌದಲ್ಲೋ.?ಕನ್ನಡಕ್ಕ ಬೇಕಾದ ೧ ಲಕ್ಷ ನಾವಿಬ್ಬರೂ ಸೇರಿ ಜೋಡಿಸೀವಿ. ಆತಿಲ್ಲೋ ಈಗರ ಸಮಾಧಾನ..!" ಎಂದು ಈ ಹಿಂಬಾಲಕರ ತಲೆಹರಟೆಗೆ ಪೂರ್ಣವಿರಾಮ ಹಾಕಿಸಿದರು.
*ನಾಡಿನ ಹೆಮ್ಮೆಯ ವಿಶ್ವವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾಲಯ ವರಕವಿ ಬೇಂದ್ರೆ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯ ಸ್ಮರಣಾರ್ಥ, ನಾಡು-ನುಡಿಯ ಗೌರವ ಸೂಚಕವಾಗಿ ‘ಗೌರವ ಡಾಕ್ಟರೇಟ್’ (ಡಿ.ಲಿಟ್) ನೀಡಲು ನಿರ್ಧರಿಸಿತು. ವಿಷಯ ಬೇಂದ್ರೆ ಮಾಸ್ತರ್ ಕಿವಿ ತಲುಪಿತು. "ತಡಾ ಆದ್ರೂ ಪರವಾಗಿಲ್ಲ. ಕೊಡಾಕ ವಿಚಾರ ಮಾಡ್ಯಾರ ಸಂತೋಷ. ನಾನು ಹುಟ್ಟಾ ‘ಡಾ’ (ಡಿ.ಆರ್.ಬೇಂದ್ರೆ) ಇದ್ದೇನಿ! ದತ್ತಾತ್ರೇಯ ರಾಮಚ್ಝಂದ್ರ ಬೇಂದ್ರೆ. ಇವರ್ಯಾಕ ಮತ್ತ ನನ್ನ ‘ಡಾ’ ಮಾಡ್ತಾರಂತ? ಎಂದು ಹಾಸ್ಯ ಪ್ರಜ್ನೆ ಮೆರೆದು, ಅಷ್ಟೇ ಗೌರವದಿಂದ ಪ್ರಶಸ್ತಿ ಸ್ವೀಕರಿಸಿದರು ಬೇಂದ್ರೆ.
*ಬೇಂದ್ರೆ ತಮ್ಮ ಮಗ ಪಾಂಡುರಂಗನಿಗೆ (ಸೌ.ಪದ್ಮಾವತಿ) ಕನ್ಯಾ ಗೊತ್ತು ಮಾಡಲು ಪುಣೆಗೆ ಕುಟುಂಬ ಸಮೇತ ತೆರಳಿದ್ದರು. ಮಾತುಕತೆಯ ಮಧ್ಯೆ ಸೌ.ಪದ್ಮಾವತಿ ಬಂದು ಸಂಪ್ರದಾಯದಂತೆ ಎಲ್ಲರಿಗೂ ನಮಸ್ಕರಿಸಿ ತಮಗಾಗಿ ನಿಗದಿ ಪಡಿಸಿದ ಜಾಗೆಯಲ್ಲಿ ಕುಳಿತುಕೊಂಡರು. ಅಂದಿನ ಸಂಪ್ರದಾಯದಂತೆ ಬೇಂದ್ರೆ ಅವರು ತಮ್ಮ ಭಾವಿ ಸೊಸೆಗೆ ‘ಒಂದು ಹಾಡು ಹಾಡಮ್ಮ’ ಎಂದರು. ಸೊಸೆ ಸುಶ್ರಾವ್ಯವಾಗಿ ಹಾಡಿ ಮುಗಿಸುತ್ತಿದ್ದಂತೆ ಬೇಂದ್ರ್ವೆತಮ್ಮ ಮಗನನ್ನು ಉದ್ದೇಶಿಸಿ ‘ಹೊಂ! ಇನ್ನು ನೀ ಹಾಡೋ. ಅಕ್ಕಿನೂ ಕೇಳಿ. ನೀ ಹೆಂಗ ಆಡ್ತಿ, ಹಾಡ್ತಿ ಅಂತ!’ ಅಲ್ಲಿದ್ದವರಿಗೆಲ್ಲ ವಿಚಿತ್ರ ಮುಜುಗರ.
ಪಾಂಡುರಂಗ ಬೇಂದ್ರೆ ಅಪ್ಪನ ಒತ್ತಾಯಕ್ಕೆ ಮಣಿದು ಹಾಡಿದರು..‘ವಂದೇ ಮಾತರಂ’ ಕವಿ ಅಪ್ಪ ಹಣೆ ಜಜ್ಜಿಕೊಂಡರು! ಸೌ. ಪದ್ಮಾವತಿ ಇಂದಿಗೂ ಈ ಮಾತನ್ನು ನೆನೆಯುತ್ತಾರೆ.
*‘ಬೆಂದ್ರ ಬೇಂದ್ರೆಯಾದಾನು’ ಅಂದು ಅಂದತ್ತ (ಅಂದು ಅತ್ತ) ಕವಿವರ್ಯ ಅನುಭವಿಸಿದ, ಜೀವನದಲ್ಲಿ ಮಾಗಿದ ಮೇಲೆ ಅದರ ಕಂಪು ಅವರ ಸಾಂಗತ್ಯದಲ್ಲಿ ಇದ್ದವರೇ ಬಲ್ಲರು. ಅವರೇ ಹೇಳಿದಂತೆ- "ನನಗ ದೇವ್ರು ದತ್ತು ಮಾಸ್ತರ್ ನಿನಗ ೧೦ ಮಕ್ಕಳನ್ನ ಹಡೀಲಿಕ್ಕೆ ಲೈಸೆನ್ಸ್ ಕೊಟ್ಟೇನಿ. ಅದಕ್ಕ ಹಡದೆ. ಈ ಮಾಸ್ತರಿಗೆ ಎಲ್ಲಿ ಆ ೧೦ ಮಕ್ಕಳನ್ನ ಸಾಕೋ ಕುವತ್ ಅದ ಅಂತ ೫ನ್ನ ಅವನ ಕ್ಯಾನ್ಸಲ್ ಮಾಡಿದ. ವಾಪಸ್ ತುಗೊಂಡು ತಾನ ಸಾಕೊಳ್ಳಿಕತ್ತಿದ. ಅಂತೂ ನನ್ನನ್ನ ಪಾರು ಮಾಡಿದ."