ಜಲಸಮಾಧಿಗೆ ಕಾದಿರುವ ಮುನ್ರೋ ದ್ವೀಪಗ್ರಾಮ
ಸಮುದ್ರವೇ ನಮ್ಮೂರಿಗೆ ನುಗ್ಗಿ ಬಂದರೆ ಏನಾದೀತು? ೨೦೦೪ರ ಸುನಾಮಿಯಲ್ಲಿ ಹದಿನೆಂಟು ಮೀಟರ್ ಎತ್ತರದ ಭಯಾನಕ ನೀರಿನ ಅಲೆಗಳು ಭೂಪ್ರದೇಶಕ್ಕೆ ನುಗ್ಗಿ ಕ್ಷಣಾರ್ಧದಲ್ಲಿ ಹಳ್ಳಿಹಳ್ಳಿಗಳನ್ನೇ ಇಲ್ಲವಾಗಿಸಿದ್ದು ನೆನಪಿದೆಯೇ?
ಈಗ ಕೇರಳದ ಮುಂಡ್ರೊತುರುತು ಎಂಬ ಗ್ರಾಮದಲ್ಲಿ ಅದೇ ಆತಂಕ. ಅಲ್ಲಿನ ಮಕ್ಕಳು ಈಜುತ್ತಲೇ ಶಾಲೆಗೆ ಹೋಗುತ್ತಾರೆ. ಈಜುವಾಗ ತಮ್ಮ ಶಾಲೆಯ ಬ್ಯಾಗ್ ಮತ್ತು ಬುತ್ತಿಯನ್ನು ಪ್ಲಾಸ್ಟಿಕಿನಲ್ಲಿ ಸುತ್ತಿ, ತಲೆಯಲ್ಲಿಟ್ಟು ಕೊಳ್ಳುತ್ತಾರೆ - ನೀರಿನಲ್ಲಿ ನೆನೆಯಬಾರದೆಂದು. ಜೊತೆಗೆ, ಎರಡನೇ ಸೆಟ್ ಶಾಲಾ ಸಮವಸ್ತ್ರವನ್ನೂ ಒಯ್ಯುತ್ತಾರೆ – ತರಗತಿ ಪ್ರವೇಶಿಸುವ ಮುನ್ನ, ಒಣ ಸಮವಸ್ತ್ರ ಹಾಕಿಕೊಳ್ಳುತ್ತಾರೆ. ದಿನದಿನವೂ ಶಾಲೆ ಸೇರಲು ಶಿಕ್ಷಕರದ್ದೂ ಹರಸಾಹಸ – ಸಣ್ಣ ದೋಣಿಗಳಲ್ಲಿ ಪ್ರಯಾಣ. ಶಾಲೆ ಬಿಟ್ಟೊಡನೆ ವಿದ್ಯಾರ್ಥಿಗಳೆಲ್ಲರೂ ನೇರವಾಗಿ ಮನೆಯತ್ತ ಧಾವಿಸುತ್ತಾರೆ – ಭರತದ ಅಲೆಗಳಿಂದ ಬಚಾವಾಗಲಿಕ್ಕಾಗಿ.
ಮುಂಡ್ರೊತುರುತು ಗ್ರಾಮವನ್ನು ಪುಟ್ಟದಾಗಿ ಕರೆಯುವುದು ಮುನ್ರೋ ಎಂದು. ಕೇರಳದ ಕೊಲ್ಲಂ ಜಿಲ್ಲೆಯ ಈ ಜಲಾವೃತ ಗ್ರಾಮ, ಅಷ್ಟಮುಡಿ ಸರೋವರ ಮತ್ತು ಕಲ್ಲಡ ನದಿ ಸೇರುವ ಜಾಗದಲ್ಲಿದೆ. ಇದರ ವಿಸ್ತೀರ್ಣ ಕೇವಲ ೧೩.೪ ಚದರ ಕಿಮೀ. ಎಂಟು ಪುಟ್ಟ ದ್ವೀಪಗಳ ಈ ಗ್ರಾಮದ ಜನಸಂಖ್ಯೆ ೧೩,೫೦೦. ಭೀಕರ ಸಾಗರದಲೆಗಳ ನಿರಂತರ ಹೊಡೆತದಿಂದಾಗಿ ಈ ಗ್ರಾಮಗಳು ನೀರಿನಲ್ಲಿ ಮುಳುಗುತ್ತಿವೆ. ಇನ್ನೇನು, ಸದ್ಯದಲ್ಲೇ ಇವು ನಕ್ಷೆಯಿಂದ ಕಣ್ಮರೆಯಾಗಲಿವೆ. ಹಾಗಾಗಿ, ಈಗಾಗಲೇ ಅಲ್ಲಿನ ೪೩೦ ಕುಟುಂಬಗಳು ತಮ್ಮ ಮನೆ ತೊರೆದು, ಬೇರೆಡೆ ನೆಲೆಸಿವೆ.
ಮುಂಡ್ರೊತುರುತು ೧೩ ವಾರ್ಡುಗಳ ಒಂದು ಗ್ರಾಮ ಪಂಚಾಯತ್. ಕಲ್ಲಡ ನದಿ ವರುಷವರುಷವೂ ನೀರಿನೊಂದಿಗೆ ಹೊತ್ತು ತಂದ ಮಣ್ಣು ಮತ್ತು ಕೆಸರಿನಿಂದಾಗಿದೆ ಇದರ ಅಡಿಪಾಯ. ಹಲವು ಶತಮಾನಗಳ ಅವಧಿಯ ಈ ಪ್ರಕ್ರಿಯೆಯಿಂದಾಗಿ ರೂಪುಗೊಂಡಿದೆ ಮುಂಡ್ರೊತುರುತು. ಈ ಫಲವತ್ತಾದ ಮಣ್ಣಿನಲ್ಲಿ ಹುಲುಸಾಗಿ ಬೆಳೆದ ಮ್ಯಾನ್-ಗ್ರೂವ್ ಸಸ್ಯಗಳು ತಮ್ಮ ಆಳವಾದ ಬೇರಿನಲ್ಲಿ ಮಣ್ಣನ್ನು ಭದ್ರವಾಗಿ ಹಿಡಿದಿಟ್ಟು, ಅದು ಕೊಚ್ಚಿ ಹೋಗದಂತೆ ತಡೆದವು. ಹೀಗೆ ನಿರ್ಮಿತವಾದ ವಿಶಾಲ ಪ್ರದೇಶ ಕೃಷಿಗೆ ಹೇಳಿ ಮಾಡಿಸಿದಂತಿತ್ತು. ಇದು ಕೇರಳದ ಹಲವು ಪ್ರದೇಶಗಳ ರೈತರನ್ನು ಕೈಬೀಸಿ ಕರೆಯಿತು. ಕ್ರಮೇಣ, ಹಲವು ಕುಟುಂಬಗಳು ಇಲ್ಲಿ ನೆಲೆಸಿದವು. ಅವರು ಬೆಳೆಸಿದ್ದು ಭತ್ತ ಮತ್ತು ತೆಂಗಿನ ಸಸಿಗಳನ್ನು. ತೆಂಗು ಫಸಲು ನೀಡುತ್ತಿದ್ದಂತೆಯೇ ಅದರ ನಾರು ಕೈಗೆ ಬಂತು. ಈ ನಾರನ್ನು ನೀರಿನಲ್ಲಿ ನೆನೆಸಿ, ಹಗ್ಗ ಹೊಸೆದು, ಅಲ್ಲಿನ ಮಹಿಳೆಯರಿಂದ ಆದಾಯ ಗಳಿಕೆ.
ಕಲ್ಲಡ ನದಿಗೆ ೧೯೮೬ರಲ್ಲಿ ತೆನ್ಮಲ ಅಣೆಕಟ್ಟು ನಿರ್ಮಿಸಿದಾಗಿನಿಂದ ಮುಂಡ್ರೊತುರುತು ನೀರಿನಲ್ಲಿ ಮುಳುಗಲು ಆರಂಭ. ಅಲ್ಲಿನ ಮಣ್ಣಿನ ನಾಜೂಕಿನ ಸಮತೋಲನಕ್ಕೆ ಜಲಾಶಯದ ನೀರು ಧಕ್ಕೆ ತಂದಿತು ಎನ್ನುತ್ತಾರೆ. ಮುಂದಿನ ಹದಿನೈದು ವರುಷಗಳ ಅವಧಿಯಲ್ಲಿ, ನೆಲಮಟ್ಟವೇ ಒಂದು ಮೀಟರಿನಷ್ಟು ಕುಸಿದಿದೆ! ಅಲ್ಲಿನ ೧೩ ವಾರ್ಡುಗಳಲ್ಲಿ ೧೦ ವಾರ್ಡುಗಳು ಭಾಗಶಃ ನೀರಿನಲ್ಲಿ ಮುಳುಗಿವೆ.
೨೦೦೪ರ ಸುನಾಮಿ ಅಲ್ಲಿಯ ಪರಿಸ್ಥಿತಿಯನ್ನು ಹದಗೆಡಿಸಿತು. ಯಾಕೆಂದರೆ, ಸುನಾಮಿಯಿಂದಾಗಿ ಬಹುಪಾಲು ಮ್ಯಾನ್-ಗ್ರೂವ್ ಸಸ್ಯಗಳ ನಾಶ. ಅದಕ್ಕಿಂತ ಮುಂಚೆ, ವರುಷದಲ್ಲಿ ಎರಡು ತಿಂಗಳು ಮಾತ್ರ ಸಮುದ್ರದಲೆಗಳು ಅಪ್ಪಳಿಸುತ್ತಿದ್ದರೆ, ಈಗ ಇದು ಪ್ರತಿದಿನದ ಸಮಸ್ಯೆ.
ಸುನಾಮಿ ಅಲೆಗಳ ರಭಸಕ್ಕೆ ದ್ವೀಪದ ತೀರದ ಮಣ್ಣು ಮತ್ತು ಮರಳು ಸಮುದ್ರದಾಳಕ್ಕೆ ಕೊಚ್ಚಿ ಹೋಯಿತು. ತೀರದಲ್ಲಿ ಸಮುದ್ರದ ನೀರಿನ ಆಳ ಹೆಚ್ಚಿದಂತೆ, ಸಮುದ್ರದ ಅಲೆಗಳ ರಭಸ ಹೆಚ್ಚಿತು. ಈ ದ್ವೀಪ ಸಮುದ್ರದಾಳಕ್ಕೆ ಕುಸಿಯುತ್ತಿರಲು, ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ಏರುತ್ತಿರುವ ಸಮುದ್ರದ ನೀರಿನ ಮಟ್ಟವೂ ಕಾರಣ ಎನ್ನುತ್ತಾರೆ ಕೆಲವು ಪರಿಸರ ಪರಿಣತರು.
ಈಗ ಮುಂಡ್ರೊತುರುತು ಗ್ರಾಮದ ಕುಟುಂಬಗಳ ಬದುಕೇ ನರಕ. ಕುಸಿಯುತ್ತಿರುವ ಮನೆಗಳು. ಪ್ರವಾಹದ ನೀರಿನಲ್ಲಿ ಮನೆಯೊಳಕ್ಕೆ ಬರುವ ಹಾವುಗಳು, ಶತಪದಿಗಳು ಮತ್ತು ಕೊಂಬಚ್ಚೇಳುಗಳು. ಎತ್ತರದಲ್ಲಿಟ್ಟರೂ ಅಲೆಗಳ ಹೊಡೆತಕ್ಕೆ ಒದ್ದೆಯಾಗುವ ಮನೆಯ ವಸ್ತುಗಳು. ನಡುರಾತ್ರಿಯಲ್ಲಿ ಏರುತ್ತಾ ಬರುವ ಸಮುದ್ರದ ಅಲೆಗಳಿಂದಾಗಿ ಒದ್ದೆಯಾಗುವ ಹಾಸಿಗೆ ಹಾಗೂ ಪಾತ್ರೆಗಳು. ಸಮುದ್ರದ ತೆರೆಗಳ ರಭಸದಿಂದಾಗಿ ದುರ್ಬಲವಾಗಿ, ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿರುವ ಮನೆಗಳು. ಮುರಿದು ಬಿದ್ದಿರುವ ಕಕ್ಕಸುಗಳು; ಅದರಿಂದಾಗಿ ಎಲ್ಲೆಂದರಲ್ಲಿ ತೇಲುತ್ತಿರುವ ಮಾನವಮಲ. ಅಂತೂ ಅಲ್ಲಿ ಜೀವನವೇ ಸಮಸ್ಯೆಗಳ ಆಗರ. ಸತ್ತವರನ್ನು ಸಮಾಧಿ ಮಾಡಲಿಕ್ಕೂ ಪರದಾಡಬೇಕಾದ ದಾರುಣ ಪರಿಸ್ಥಿತಿ! ಯಾಕೆಂದರೆ, ಅಲ್ಲಿನ ಬಹುಪಾಲು ಪ್ರದೇಶ ನೀರಿನಲ್ಲಿ ಮುಳುಗಿದೆ.
ಈ ದ್ವೀಪದಲ್ಲಿ ಸದಾಕಾಲ ನೆರೆ ಇರುವ ಕಾರಣ, ಇಲ್ಲಿನ ಆರ್ಥಿಕ ಸ್ಥಿತಿ ಬಿಗಡಾಯಿಸಿದೆ. ತೆಂಗಿನ ನಾರಿನ ಹಗ್ಗ ಮಾಡುವ ಘಟಕಗಳೆಲ್ಲ ಮುಚ್ಚಿವೆ. ಸವಳು ನೀರಿನಿಂದಾಗಿ ಹೊಲಗಳಲ್ಲಿ ಯಾವುದೇ ಬೆಳೆ ಬೆಳೆಸುವಂತಿಲ್ಲ. ಸರಕಾರದ ಉದ್ಯೋಗ ಖಾತರಿ ಯೋಜನೆ ಇಲ್ಲಿನ ನಿವಾಸಿಗಳ ಏಕೈಕ ಆದಾಯ ಮೂಲ. ಸುತ್ತಮುತ್ತಲಿನ ಪ್ರದೇಶಗಳಿಂದ ಇಲ್ಲಿನ ನಿವಾಸಿಗಳನ್ನು ಮದುವೆಯಾಗಲು ಯಾರೂ ತಯಾರಿಲ್ಲ. ಯಾಕೆಂದರೆ, ಬೇರೆಲ್ಲ ಸಮಸ್ಯೆಗಳ ಜೊತೆಗೆ, ಇಲ್ಲಿ ಶುದ್ಧ ನೀರು ಸಿಗುತ್ತಿಲ್ಲ; ಒಂದೆರಡು ಬಕೆಟ್ ನೀರಿಗಾಗಿ ಹಲವು ಕಿಲೋಮೀಟರ್ ನಡೆಯ ಬೇಕಾಗಿದೆ. ಈ ಎಲ್ಲ ಅನಾಹುತಗಳಿಂದಾಗಿ ನಿವಾಸಿಗಳ ಆರೋಗ್ಯ ಹದಗೆಟ್ಟಿದೆ; ಹಲವರು ಜ್ವರ ಮತ್ತು ಭೇದಿಯಿಂದ ಬಳಲುತ್ತಿದ್ದಾರೆ. ಇನ್ನೂರಕ್ಕಿಂತ ಜಾಸ್ತಿ ಜನರಿಗೆ ಕ್ಯಾನ್ಸರ್ ತಗಲಿದೆ. ನೆರೆನೀರಿನಿಂದಾಗಿ ಬಸ್ ಸೇವೆ ನಿಂತು ಹೋಗಿದೆ. ಹಾಗಾಗಿ ಆಸ್ಪತ್ರೆಗೆ ಹೋಗಬೇಕೆಂದರೆ ಪ್ರಯಾಸ ಪಡಬೇಕಾಗಿದೆ.
ತಿರುವನಂತಪುರದ ರಾಷ್ಟ್ರೀಯ ಭುವಿಜ್ನಾನ ಅಧ್ಯಯನ ಸಂಸ್ಥೆ, ಕೇರಳ ವಿಜ್ನಾನ ತಂತ್ರಜ್ನಾನ ಮತ್ತು ಪರಿಸರ ಮಂಡಲಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ – ಇವು ಮುಂಡ್ರೊತುರುತು ಗ್ರಾಮದ ಸಮಸ್ಯೆಯನ್ನು ಅಧ್ಯಯನ ಮಾಡಿವೆ. ಇಲ್ಲಿನ ಸಮುದ್ರದ ಅಲೆಗಳ ಎತ್ತರ ೨.೫ರಿಂದ ೩ ಮೀ. ಇಂತಹ ಪ್ರಬಲ ಅಲೆಗಳಿಂದಾಗಿ ತೀರಗಳು ಕೊಚ್ಚಿ ಹೋಗುತ್ತಿವೆ ಮತ್ತು ದ್ವೀಪದಲ್ಲಿ ನೆರೆ ಏರುತ್ತಿದೆ.
ಈ ಕಾರಣಗಳಿಂದಾಗಿ, ಮುಂಡ್ರೊತುರುತು ದ್ವೀಪಗ್ರಾಮದ ನಿವಾಸಿಗಳ ಬದುಕು ಪ್ರತಿದಿನವೂ ಅಪಾಯದೊಂದಿಗೆ ಮುಖಾಮುಖಿ. ಸಮುದ್ರದಲೆಗಳ ನಿರಂತರ ಹೊಡೆತದಿಂದ ದ್ವೀಪವನ್ನು ಉಳಿಸಬೇಕಾದರೆ ಸರಕಾರ ತುರ್ತಾಗಿ ತಡೆಗೋಡೆ ನಿರ್ಮಿಸಬೇಕು. ಜೊತೆಗೆ, ದ್ವೀಪದ ಎಲ್ಲ ನಿವಾಸಿಗಳನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಪ್ರಕೃತಿಯ ತಾಕತ್ತಿನ ಎದುರು ಹುಲು ಮಾನವ ಹುಲ್ಲುಕಡ್ಡಿ ಎಂಬುದನ್ನು ದಿನದಿನವೂ ಸಾಬೀತು ಮಾಡುತ್ತಿದೆ ಜಲಸಮಾಧಿಗೆ ಕಾದಿರುವ ಮುಂಡ್ರೊತುರುತು ದ್ವೀಪಗ್ರಾಮ.