ಜಲಾವೃತ ಕಲ್ಲಿದ್ದಲು ಗಣಿಯಲ್ಲೊಂದು ಪವಾಡ ಭಾಗ -1

ಜಲಾವೃತ ಕಲ್ಲಿದ್ದಲು ಗಣಿಯಲ್ಲೊಂದು ಪವಾಡ ಭಾಗ -1

     
             ಮಾರ್ಕ್ ಪೋಪೆರ್ನಾಕ್ ಮತ್ತು ಅವರ ಎಂಟು ಮಂದಿ ಸಹೊದ್ಯೋಗಿಗಳಿಗೆ ಬದುಕುವ ಯಾವ ಆಶಾಭಾವನೆಯು ಉಳಿದಿರಲಿಲ್ಲ. ತಮ್ಮ  ಬದುಕಿನ  ಕಟ್ಟಕಡೆಯ  ಕ್ಷಣಗಳನ್ನು ಹೀಗೆ  ಧಾರುಣವಾಗಿ ಕಳೆಯಬೇಕಾಯಿತಲ್ಲ(!)  ಎಂಬ ದುಃಖವುಂಟಾಗಿತ್ತು.  ಮುಂದೆ ತಮ್ಮನ್ನು ಕಳೆದುಕೊಳ್ಳಲಿರುವ ತಮ್ಮ ಪತ್ನಿ-ಮಕ್ಕಳಿಗೆ, ಕುಟುಂಬಸ್ಥರಿಗೆ ತಮ್ಮ ಕೊನೆಯ ಸಂದೇಶವನ್ನು ಚೀಟಿಯಲ್ಲಿ ಬರೆದು ಬುಟ್ಟಿಯೊಂದರಲ್ಲಿ ಇಟ್ಟರು.  ಗಾಳಿಯಿಲ್ಲದೆ  ಉಸಿರಾಡುವುದೇ  ಕಷ್ಟವಾಗುತ್ತಿತ್ತು, ದೇಹಸೋತು  ಪ್ರಜ್ಞೆ ತಪ್ಪುವಂತೆ ಆಗುತ್ತಿತ್ತು. ಅಕಸ್ಮಾತ್ ತಾವು ಸತ್ತು ಹೋದರೆ ತಮ್ಮ ಶವ ಕಾಣೆಯಾಗಬಾರದೆಂದು, ಒಬ್ಬರನ್ನೊಬ್ಬರು  ಹಗ್ಗದಿಂದ ಬಿಗಿದುಕೊಂಡರು. ಹೀಗೆ ಕಲ್ಲಿದ್ದಲು ಗಣಿಯೊಳಗೆ ಅವರನ್ನು  ಚಡಪಡಿಸುವಂತೆ ಮಾಡಿತ್ತು ಜೀವಜಲ ನೀರು.
 

ಕಲ್ಲಿದ್ದಲು ಗಣಿಯ  ನಕ್ಷೆ

 
 
ಅದು  ಜುಲೈ 24, 2002ನೇ ಇಸವಿಯ ಬುಧವಾರ,  ಅಮೇರಿಕಾ ಸಂಯುಕ್ತ ಸಂಸ್ಥಾನದ, ಪೆನ್ಸಿಲ್ವೇನಿಯಾ ರಾಜ್ಯದ ಸೊಮರ್ಸೆಟ್ ಕೌಂಟಿಯ ಲಿಂಕನ್ ಟೌನ್ ಶಿಪ್. ಅದು ಎರಡು ವರ್ಷದಿಂದ ಸಕ್ರಿಯವಾಗಿರುವ ಬ್ಲಾಕ್ ವೂಲ್ಫ್ ಕಲ್ಲಿದ್ದಲು ಕಂಪನಿಯ  ಕ್ಯೂಕ್ರೀಕ್ ಕಲ್ಲಿದ್ದಲು ಗಣಿ.
 
ಎಂದಿನಂತೆ  ಎರಡನೇ ಶಿಫ್ಟ್ ಗೆ  18 ಮಂದಿ ಗಣಿಕಾರ್ಮಿಕರ ತಂಡ ಆಗಮಿಸಿತು. ಎಂದಿನ ಹಾಗೆ ಮ್ಯಾನ್ ಟ್ರಿಪ್ ವಾಹನದಲ್ಲಿ ತಲಾ 9 ಮಂದಿಯಂತೆ ಎರಡು  ತಂಡವಾಗಿ ಗಣಿಯೊಳಗೆ  ಕೆಲಸಕ್ಕೆ ಹೋದರು.  2.50 km ಉದ್ದಕ್ಕೆ ಚಾಚಿಕೊಂಡಿದ್ದ  ಈ ಗಣಿ ಸಮೀಪವೇ 40 ವರ್ಷದಿಂದ ನಿಷ್ಕ್ರಿಯವಾಗಿದ್ದ ಸಾಕ್ಸ್ ಮ್ಯಾನ್ ಕಲ್ಲಿದ್ದಲು ಗಣಿಯಿತ್ತು. ಗಣಿ  ಪ್ರವೇಶ ದ್ವಾರದಿಂದ 900 mtr ದೂರಸಾಗಿದ ನಂತರ ಕವಲು ಒಡೆದ ದಾರಿಯಿತ್ತು. ರಾನ್ ಶೇಡ್ ಮತ್ತು ಎಂಟು  ಮಂದಿ ತಂಡ 500 mtr ದೂರದ ಕೆಳಭಾಗದತ್ತ ಹೋದರು. ಮಾರ್ಕ್ ಪೋಪೆರ್ನಾಕ್ ಮತ್ತು ತಂಡ 1st ಲೆಫ್ಟ್ ಎಂದು ಕರೆಯುವ ಪ್ರದೇಶದತ್ತ ಹೋದರು. ನಿಮಿಷಕ್ಕೆ 20 ಟನ್ ಸಾಮರ್ಥ್ಯದ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದಾಗ,  ರಾತ್ರಿ 8.45 ರ ಹೊತ್ತಿಗೆ ಮೇಲಿನಿಂದ  ನೀರು ಜಿನುಗಲು ಶುರುವಾಯಿತು. ಬೆನ್ನಹಿಂದೆಯೇ  ಪೋಪೆರ್ನಾಕ್  ತಂಡದ 20 mtr ಎದುರಿಗೆ ಕಂಡುಬಂದದ್ದು ಗಣಿಯೊಳಗೆ ನುಗ್ಗಿ ಬರುತ್ತಿದ್ದ ನೀರು.  ಏನಾಗುತ್ತಿದೆ? ಎಂದು ಅರಿವಾಗುವ  ಮೊದಲೇ ಅವರೆಲ್ಲರೂ ಬದಿಯಲ್ಲಿದ್ದ ಕಟ್ಟೆಯತ್ತ ಹಾರಿದರು. 40 ವರ್ಷದಿಂದ ಸ್ಥಗಿತಗೊಂಡಿದ್ದ  ಸಮೀಪದ ಸಾಕ್ಸ್ ಮ್ಯಾನ್ ಕಲ್ಲಿದ್ದಲು ಗಣಿಯಲ್ಲಿ ಬಿಲಿಯನ್ ಗಟ್ಟಲೆ  ಲೀಟರ್ ನೀರು ಸಂಗ್ರಹವಾಗಿತ್ತು. ಕ್ಯೂಕ್ರೀಕ್ ಗಣಿಗೆ ಹೋಲಿಸಿದರೆ, ಸಾಕ್ಸ್ ಮ್ಯಾನ್ ಗಣಿಪ್ರದೇಶ  ಎತ್ತರದಲ್ಲಿತ್ತು. ಆದರೆ ಅಲ್ಲಿಂದ ಹೀಗೆ ಅಣೆಕಟ್ಟಿನಿಂದ ಚಿಮ್ಮಿದಂತೆ ಅಪಾರ ಪ್ರಮಾಣದ ನೀರಿನ ಪ್ರವಾಹ ಬರಬಹುದೆಂದು ಯಾರು ಯೋಚಿಸಿರಲಿಲ್ಲ. ಏಕೆಂದರೆ ಅವರಿಗೆ ನೀಡಿದ ನಕ್ಷೆ ಪ್ರಕಾರ ಸಾಕ್ಸ್ ಮ್ಯಾನ್ ಗಣಿ, ಕೆಲಸದ ಸ್ಥಳದಿಂದ  91 mtr  ದೂರದಲ್ಲಿತ್ತು. ಆದರೆ ಇಂಜಿನೀಯರ್ ಗಳು ಮಾಡಿದ ತಪ್ಪಾದ ನಕ್ಷೆಯಿಂದಾಗಿ, ಹದಿನೆಂಟು ಜೀವಗಳು  ಅಪಾಯಕ್ಕೆ ಸಿಲುಕಿದ್ದವು.
 
ಸಮುದ್ರ  ಮಟ್ಟದಿಂದ 1800  ಅಡಿಗಳಿಗಿಂತ  ಹೆಚ್ಚು ಎತ್ತರದಲ್ಲಿದ  ಗಣಿಯೊಳಗೆ  ನುಗ್ಗಿದ  ನೀರು  ಕೆಳಭಾಗದತ್ತ ಪ್ರವಹಿಸತೊಡಗಿತು. ಈ ಘಟನೆ  ಗಣಿಯ ಅತ್ಯಂತ  ಕೆಳಭಾಗದಲ್ಲಿ  ಕೆಲಸ  ಮಾಡುತ್ತಿದ್ದ ರಾನ್ ಶೇಡ್ ಮತ್ತು  ತಂಡಕ್ಕೆ ಗೊತ್ತಿರಲಿಲ್ಲ. ಕೂಡಲೇ 1st ಲೆಫ್ಟ್ ತಂಡ ಫೋನ್ ಮೂಲಕ ಅವರಿಗೆ ವಿಷಯ ತಿಳಿಸಿತ್ತು. ಅವರು ವಾಹನದಲ್ಲಿ ಪ್ರವೇಶ ದ್ವಾರದತ್ತ  ಹಿಂತಿರುಗಿ ಹೊರಟರು. ಆದರೆ ಕವಲೊಡೆದ ಭಾಗದಲ್ಲಿ ಅದಾಗಲೇ ನೀರು ಬರಹತ್ತಿತ್ತು.  ಜೀವಂತ ಜಲಸಮಾಧಿಯಾಗಲು  ಹೆಚ್ಚು ಸಮಯ ಉಳಿದಿರಲಿಲ್ಲ. ತತ್ ಕ್ಷಣ  ಅವರು ಗಣಿಯೊಳಗೆ ಗಾಳಿ ಸರಬರಾಜು ಮಾಡುತ್ತಿದ್ದ ವೆಂಟಿಲೇಟರ್ ಮುಖಾಂತರ ಹೊರಹೋಗಲು ಹವಣಿಸಿದರು.  ಟಾರ್ಚ್ ಲೈಟ್ ಬೆಳಕಿನಲ್ಲೇ  ಹಲವಾರು ಮೀಟರ್ಗಳ ದೂರದಷ್ಟು ವೆಂಟಿಲೇಟರ್ ಮುಖಾಂತರ ಸಾಗಿ ಕೊನೆಗೆ  9.45ರ ಹೊತ್ತಿಗೆ ಹೊರಹೋಗುವ ದಾರಿ ಕಂಡುಕೊಂಡರು. ಇತ್ತಕಡೆ 1st ಲೆಫ್ಟ್ ನಲ್ಲಿ ಸಮಯ ಕಳೆದಂತೆ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಹಠಾತ್ ಆಗಿ ಬಂದ ನೀರನ್ನು ಕಂಡು ಒಂದು ಬದಿಗೆ ಹಾರಿ ಜೀವ ಉಳಿಸಿಕೊಂಡಿದ್ದ ಪೋಪೆರ್ನಾಕ್  ತಮ್ಮ ತಂಡದಿಂದ ಬೇರ್ಪಟ್ಟಿದ್ದರು. ನೀರಿನ ಹರಿವಿನ ರಭಸಕ್ಕೆ ಹಾಗು ಕತ್ತಲೆಗೆ  ಅವರಿಗೆ ತಮ್ಮ ತಂಡದ ಸದಸ್ಯರಾರು ಕಾಣಿಸಲಿಲ್ಲ. ಏಕಾಂಗಿಯಾಗಿ ಉಳಿದುಕೊಂಡಿದ್ದ ಅವರಿಗೆ ಸ್ವಲ್ಪ ಹೊತ್ತಿನಲ್ಲಿ ಆಶಾಕಿರಣ ಗೋಚರಿಸಿತು. ಗಣಿ ಅಗೆಯುವ ಯಂತ್ರವೊಂದನ್ನು ತೆಗೆದುಕೊಂಡು ಸಹಾಯಕ್ಕಾಗಿ ಉಳಿದವರು ಅವರೆಡೆಗೆ ಧಾವಿಸಿದ್ದರು. ಅಗಲವಾಗಿ ಹರಿಯುತ್ತಿದ್ದ ನೀರಿನ ಆಚೆ ಬದಿಗೆ ಅವರು ಹಾರಬೇಕಿತ್ತು. ಮನಸಲ್ಲೇ ದೂರವನ್ನು ಅಂದಾಜಿಸಿ ಹಾರಿದರು, ಅವರನ್ನು ಉಳಿದವರು ಎಳೆದುಕೊಂಡರು. ಇಲ್ಲಿಗೆ ಒಂದು ವಿಘ್ನ ಮುಗಿದಿತ್ತು, ಆದರೆ ಸಾವು ಬೆನ್ನ ಹಿಂದೆಯೇ ಇತ್ತು.
 
 
ಗಣಿಯೊಳಗೆ ಸಂಭವಿಸಿದ ಅವಘಡ ಗಣಿಯ ಸುರಕ್ಷಾ ವಿಭಾಗಕ್ಕೆ ಗೊತ್ತಾಯಿತು. ಅವರು ತಕ್ಷಣ ಸಮೀಪದ ಸುರಕ್ಷಾದಳಕ್ಕೆ ವಿಷಯ ತಿಳಿಸಿದರು. ರಕ್ಷಣಾ ತಂಡ  ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಗಣಿ ಕಾರ್ಮಿಕರ ಕುಟುಂಬಗಳಿಗೆ ವಿಷಯ  ತಿಳಿದು ಅವರು ಸ್ಥಳಕ್ಕೆ ಧಾವಿಸಿದ್ದರು. ಗಣಿಯ ಪ್ರವೇಶ ದ್ವಾರದ ತನಕ ತಲುಪಿದ್ದ ನೀರನ್ನು ಪಂಪ್ ಮೂಲಕ ಎತ್ತಿ ಹೊರಬಿಡಲಾರಂಭಿಸಿದರು. ರಕ್ಷಣಾ ತಂಡಕ್ಕೆ ಒಳಗೆ ಸಿಲುಕಿದ ಗಣಿ ಕಾರ್ಮಿಕರ ಸ್ಥಿತಿ ಏನಾಗಿದೆ? ಎನ್ನುವುದರ ಬಗ್ಗೆ ಸುಳಿವಿರಲಿಲ್ಲ, ಮತ್ತು ಸಂಪರ್ಕಿಸಲು ಯಾವುದೇ ಮಾರ್ಗವು ಇರಲಿಲ್ಲ. ಗಣಿ ಎಂಜಿನಿಯೆರ್ ಗಳು, ಜಿ.ಪಿ.ಎಸ್ ಹಾಗು ನಕ್ಷೆಗಳನ್ನು ಬಳಸಿಕೊಂಡು ಒಂದು ಸ್ಥಳವನ್ನು ಗುರುತು ಮಾಡಿದರು, ಇಲ್ಲಿಂದ 75 ಮೀಟರ್ ಕೆಳಭಾಗಕ್ಕೆ ಕೊರೆಯಬೇಕಿತ್ತು. ಅಕಸ್ಮಾತ್  ಗಣಿ  ಕಾರ್ಮಿಕರೇನಾದರೂ  ಬದುಕಿದ್ದರೆ, ಅವರು  ಗಣಿಯೊಳಗೆ ಇದ್ದ  ಅತಿ ಎತ್ತರದ ಈ ಜಾಗದಲ್ಲಿ ಸಿಲುಕಿರಬಹುದೆಂದು ಊಹಿಸಿದರು. ಅದು ಕೂಡ ಕೇವಲ ಊಹೆ ಅಷ್ಟೇ, ಏಕೆಂದರೆ ಸರೋವರದಂತಿದ್ದ ಪ್ರದೇಶದಿಂದ ನುಗ್ಗಿದ ನೀರಿನಲ್ಲಿ, ಈ ಕಾರ್ಮಿಕರು ಉಳಿದಿರುವುದು ಖಚಿತವಾಗಿರಲಿಲ್ಲ. ರಾತ್ರಿ ಎರಡು ಗಂಟೆ ಹೊತ್ತಿಗೆ 15 ಸೆಂಟಿಮೀಟರ್ ಅಗಲದ ಬಾವಿಯನ್ನು ಬೋರವೆಲ್ ಯಂತ್ರ ಕೊರೆಯಲಾರಂಭಿಸಿತು. ಕೇವಲ 6 mtr ಅಗಲವಿದ್ದ ಸುರಂಗದ ಸಮಾನಾಂತರವಾಗಿ ಮೇಲೆ  ಹಾಕಿದ ಗುರುತಿನ  ಸ್ಥಳ ತಪ್ಪಾಗಿದ್ದರೆ, ಇಡೀ ಪರಿಶ್ರಮ ವ್ಯರ್ಥವಾಗುತಿತ್ತು.
 
 

ಸುರಂಗದ ಮಾದರಿ ಚಿತ್ರ 

 
 
 
ಬೋರೆವೆಲ್ ಗಳಿಗೆ ಬಿದ್ದು 40-50 ಅಡಿಗಳಲ್ಲಿ ಸಿಲುಕಿ, ಹೊರಬರಲಾಗದೆ ಸಾವನ್ನಪ್ಪಿದ್ದ ಅನೇಕ ಪುಟಾಣಿ ಮಕ್ಕಳ ಕಥೆಯನ್ನು ನೀವುಗಳು ಓದಿರುತ್ತೀರಿ. ಅಂತಹದರಲ್ಲಿ ಇಲ್ಲಿ 250 ಅಡಿಗಿಂತ ಹೆಚ್ಚಿನ ಆಳದಲ್ಲಿ, ಯಾವುದೋ ಸ್ಥಳವೊಂದರಲ್ಲಿ ಸಿಲುಕಿದ್ದ ಕಾರ್ಮಿಕರು ಹೊರಬರಬೇಕಾದರೆ ಪವಾಡವೊಂದು ಜರುಗಬೇಕಿತ್ತು. ಹಲವು ತಾಸುಗಳಿಂದ ಒಳಗೆ ಸಿಲುಕಿರುವ ಕಾರ್ಮಿಕರಿಗೆ ಆಮ್ಲಜನಕದ ಕೊರತೆಯಿಂದ ಉಸಿರುಕಟ್ಟಿ ಕಣ್ಣುಕತ್ತಲೆ ಆಗುತಿತ್ತು. ಅಷ್ಟರಲ್ಲಿ ಮೇಲಿನಿಂದ ಏನೋ ಸದ್ದು ಕೇಳಿಸಲಾರಂಭಿಸಿತು. ಬರುಬರುತ್ತ ಶಬ್ದ ಜೋರಾದಂತೆ, ನಮ್ಮ ರಕ್ಷಣೆಗೆ ಪ್ರಯತ್ನ ನಡೆಯುತ್ತಿದೆ ಎಂದು ಖಚಿತವಾಯಿತು. ಮುಂಜಾನೆ ಐದು ಗಂಟೆ ಹೊತ್ತಿಗೆ, 75 ಮೀಟರ್ ಕೆಳಕ್ಕೆ ಬಾವಿ  ಕೊರೆದ ನಂತರ ಯಂತ್ರಕ್ಕೆ ಏನೋ ತಾಕಿದಂತಾಗಿ ಶಬ್ದ ಬರುತಿತ್ತು. ಮೇಲೆ  ಎಲ್ಲ ಯಂತ್ರವನ್ನು ನಿಲ್ಲಿಸಿ ಕಿವಿಗೊಟ್ಟು ಕೇಳಿದರು. ಅವರ ಖುಷಿಗೆ ಪಾರವೇ ಇರಲಿಲ್ಲ. ಕೆಳಗೆ ಸಿಲುಕಿದವರು 'ನಾವಿನ್ನು ಬದುಕಿದ್ದೇವೆ '  ಎಂದು ಸೂಚಿಸಲು ಯಂತ್ರದ ಕೆಳಭಾಗಕ್ಕೆಬಡಿಯುತ್ತಿದ್ದರು. ಬೋರವೆಲ್ ಯಂತ್ರದ ಕಂಪ್ರೆಸರ್ ನ ಗಾಳಿ ಅವರಿಗೆ ದೊರಕಿ ಉಸಿರಾಟ ಸರಾಗವಾಯಿತು. ಬದುಕಿ ಬರುವ ಆಶಾಭಾವನೆ ಮೂಡಿತು.
 
ಆದರೆ ಈ ಖುಷಿ  ತಾತ್ಕಾಲಿಕವಾಗಿತ್ತು, ಏಕೆಂದರೆ.......................
                                                                                                                                                                                                                                                                               (ಮುಂದುವರೆಯುವುದು)
 
                                                                                                                                                                                                                                                                             -Tharanatha Sona
 
ಮಾಹಿತಿ ಮತ್ತು ಚಿತ್ರಗಳು : ಅಂತರ್ಜಾಲ ಮತ್ತು ಜಿಯೋಗ್ರಾಫಿಕ್ ಚಾನೆಲ್