ಜಾಗತೀಕರಣಕ್ಕೆ ಹದಿನೈದು - ನಿರೀಕ್ಷೆಗಳು ಮತ್ತು ಪ್ರತಿಫಲ

ಜಾಗತೀಕರಣಕ್ಕೆ ಹದಿನೈದು - ನಿರೀಕ್ಷೆಗಳು ಮತ್ತು ಪ್ರತಿಫಲ

ಬರಹ

ಬಹಳಷ್ಟು ನಿರೀಕ್ಷೆ, ಕುತೂಹಲ ಮತ್ತು ಆತಂಕವನ್ನು ಎಬ್ಬಿಸಿದ್ದ ಜಾಗತೀಕರಣದ ಪ್ರಕ್ರಿಯೆಗೆ ಈಗ ಹದಿನೈದು ವರ್ಷಗಳು. ಈ ಹದಿನೈದು ವರ್ಷಗಳ ಜಾಗತೀಕರಣ, ಉದಾರ ಆರ್ಥಿಕ ನೀತಿ, ಮುಕ್ತ ವ್ಯಾಪಾರ ನೀತಿ, ಜಗತ್ತಿನ ಆರ್ಥಿಕ, ರಾಜಕೀಯ ವಿದ್ಯಮಾನಗಳ ಏಕತ್ರ ಸಂಘಟನೆಯ ಆಶಯಗಳು ಎಷ್ಟರ ಮಟ್ಟಿಗೆ ಸಫಲವಾಗಿವೆ ಅಥವಾ ಸಫಲತೆಯ ಹಾದಿಯಲ್ಲಿವೆ, ಅವಕ್ಕೆ ಎಂಥ ವಿರೋಧ-ಪ್ರತಿರೋಧಗಳು ಎದುರಾಗಿವೆ, ಒಟ್ಟಾರೆಯಾಗಿ ಇದರ ಪರಿಣಾಮಗಳೇನು ಎಂಬುದರ ಬಗ್ಗೆ ಈಗ ಮಾಧ್ಯಮಗಳಲ್ಲಿ ಮಾತು, ಚರ್ಚೆ ಕೇಳಿಬರತೊಡಗಿವೆ.

ಫಿಲಿಫೈನ್ಸ್‌ನಲ್ಲಿ ಸುಮಾರು ಇಪ್ಪತ್ತು ವರ್ಷ ಕಾಲ ನಡೆದ ಸ್ವಾತಂತ್ರ್ಯದ ಮತ್ತು ಮಾನವ ಹಕ್ಕುಗಳ ರಕ್ಷಣೆಯ ಹೋರಾಟದ ನಾಯಕತ್ವ ವಹಿಸಿದ್ದ, ಗಾಂಧಿ ಮಾರ್ಗದಲ್ಲಿ ವಿಶ್ವಾಸವಿರುವ, ಸದ್ಯ ಹಲವಾರು ಪ್ರತಿಷ್ಠಿತ ಅಂತರ್ರಾಷ್ಟ್ರೀಯ ಸ್ಥಾನಮಾನಗಳ ಜೊತೆಗೆ ಫಿಲಿಫೈನ್ಸ್‌ನ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿರುವ ವಾಲ್ಡೇನ್ ಬೆಲೂ ಬರೆದ ಲೇಖನ ಜಾಗತೀಕರಣದ ಇದುವರೆಗಿನ ಪರಿಣಾಮಗಳ ಕುರಿತಂತೆ ಅನೇಕ ವಿಚಾರಗಳನ್ನು ನಮ್ಮೆದುರು ತೆರೆದಿಡುತ್ತದೆ.

ಜಾಗತಿಕ ಆರ್ಥ ವ್ಯವಸ್ಥೆ ಮತ್ತು ರಾಜಕೀಯ ಶಕ್ತಿಯ ಧ್ರುವೀಕರಣದಂಥ ಮಹತ್ವಾಕಾಂಕ್ಷಿ ನಿರೀಕ್ಷೆಗಳನ್ನು ಹುಟ್ಟಿಸಿದ್ದ ಜಾಗತೀಕರಣ ಬಹುತೇಕ ಟುಸ್ಸೆಂದಿದೆ ಎನ್ನುತ್ತಾರೆ ವಾಲ್ಡೇನ್. ರಾಷ್ಟ್ರ ಕೇಂದ್ರಿತ ಆಡಳಿತ ವ್ಯವಸ್ಥೆ ಇಂದಿಗೂ ಸುಭದ್ರವಾಗಿಯೇ ಉಳಿದಿದೆ ಮಾತ್ರವಲ್ಲ ರಾಷ್ಟ್ರೀಯ ಭಾವನೆಯನ್ನು ಜಾಗೃತಗೊಳಿಸಿಕೊಂಡಿರುವ ಹಲವಾರು ರಾಷ್ಟ್ರ ರಾಷ್ಟ್ರಗಳ ನಡುವೆ ಅನೇಕ ವಿಚಾರಗಳಲ್ಲಿ ಪೈಪೋಟಿಯೇ ಇದೆ ಎಂಬುದು ವಾಲ್ಡೇನ್ ಅಭಿಮತ. ಆರ್ಥಿಕವಾಗಿಯೂ ಜಾಗತೀಕರಣದ ಸೋಲನ್ನು ಐಎಂಎಫ್ ಮತ್ತು ಡಬ್ಲ್ಯೂಟಿಓನ ಆರ್ಥಿಕ ಹಿನ್ನೆಡೆಯಲ್ಲಿ ವಾಲ್ಡೇನ್ ಗುರುತಿಸುತ್ತಾರೆ. ಆದರೆ ಅಭಿವೃದ್ಧಿ ಹೊಂದದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಜಾಗತೀಕರಣದ ಪ್ರಕ್ರಿಯೆಯನ್ನು ಹೆಚ್ಚು ಹೆಚ್ಚು ಉತ್ಸಾಹದಿಂದ ಕ್ರಿಯಾಶೀಲಗೊಳಿಸಿದ್ದರಿಂದ ಬಡತನ, ಹೆಚ್ಚಿದ ಆರ್ಥಿಕ ಅಸಮಾನತೆ, ಅಭಿವೃದ್ಧಿ ನಿಂತು ಹೋದಂಥ ಸ್ಥಿತಿಯನ್ನು ತಲುಪಿದವು ಎನ್ನುತ್ತಾರೆ ವಾಲ್ಡೇನ್. ನಿಶ್ಚಯವಾಗಿಯೂ ಜಾಗತೀಕರಣ ಪ್ರಕ್ರಿಯೆಗೆ ವಿಶ್ವಾದ್ಯಂತ ಹಿನ್ನೆಡೆಯಾಗಿದೆ ಎಂದು ಹಲವಾರು ನಿದರ್ಶನಗಳ ಮೂಲಕ ಸಮರ್ಥಿಸುವ ವಾಲ್ಡೇನ್ ಇಂಥ ಹಿನ್ನೆಡೆಗೆ ಪ್ರಮುಖವಾಗಿ ಗುರುತಿಸುವ ಕಾರಣಗಳು ಆರು:

೧. ಜಗತ್ತಿನಾದ್ಯಂತ ಉತ್ಪಾದನೆ ಮತ್ತು ವಿತರಣೆಯ ಸೌಕರ್ಯ ಹೊಂದಿರುವ ಜಾಗತೀಕರಣದ ಅಧ್ವರ್ಯುಗಳಾಗಬಹುದಾದ ವಾಣಿಜ್ಯ ಸಂಸ್ಥೆಗಳು ಕೈ ಬೆರಳ ಎಣಿಕೆಯಷ್ಟೇ ಇರುವುದು. ಇದರಿಂದಾಗಿ ವಿಶ್ವಾದ್ಯಂತ ತನ್ನ ಉತ್ಪಾದನೆ, ಮಾರಾಟ ಅಥವಾ ಸೇವಾ ವಲಯ ಹೊಂದಿರದೇ ಇದ್ದ ಉಳಿದೆಲ್ಲ ಕಾರ್ಪೋರೇಟ್ ಸಂಸ್ಥೆಗಳಿಗೆ ಜಗತೀಕರಣದ ಪ್ರಕ್ರಿಯೆಯಲ್ಲಿ ಪೂರ್ಣಪ್ರಮಾಣದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

೨. ಜಾಗತೀಕರಣದ ಪ್ರಕ್ರಿಯೆಯಲ್ಲಿ ಎದುರಾಗುವ ಜಾಗತಿಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ, ನಿಭಾಯಿಸುವಲ್ಲಿ ಮತ್ತು ಪರಿಹರಿಸಿಕೊಳ್ಳುವಲ್ಲಿ ಮುಂದುವರಿದ ಮುಂಚೂಣಿ ರಾಷ್ಟ್ರಗಳು ಒಂದಾಗಿ ದುಡಿಯದೆ ಒಬ್ಬರು ಇನ್ನೊಬ್ಬರತ್ತ ನೋಡುತ್ತ ಕುಳಿತಿದ್ದು. ಈ ಸಮಸ್ಯೆಗಳು ಹಲವು ವಿಧವಾಗಿದ್ದವು. ಪರಿಸರವಾದಿಗಳಿಂದ, ವಿಚಾರವಾದಿಗಳಿಂದ, ದೇಶೀಯ ಉತ್ಪನ್ನಗಳ ತಯಾರಕ ಮತ್ತು ವಿತರಕರಿಂದ, ರೈತರಿಂದ, ಸಂರಕ್ಷಿತ ಕೈಗಾರಿಕೆಗಳಿಂದ ಹೀಗೆ ಹಲವು ಹತ್ತು ಕಡೆಗಳಿಂದ ಬಗೆಬಗೆಯ ಪ್ರತಿರೋಧಗಳಲ್ಲದೆ ಕೆಲವು ದೇಶಗಳಲ್ಲಿ ಸರಿಯಾದ ಮೂಲಭೂತ ಸವಲತ್ತುಗಳಿಲ್ಲದೆ ಉಂಟಾದ ತೊಡಕುಗಳೂ ಇದ್ದವು ಎಂಬುದು ಗಮನಾರ್ಹ. ತಮ್ಮ ದೇಶದ ಉತ್ಪನ್ನಗಳಿಗೆ ಇಲ್ಲಿ ಹೊಸದಾಗಿ ಮಾರುಕಟ್ಟೆ ನಿರ್ಮಿಸಿಕೊಳ್ಳುವ ಕೈಂಕರ್ಯವೇನೂ ಸರಳವಿರಲಿಲ್ಲ. ಅಮೆರಿಕದಂಥ ದೇಶದ ಬಳಿ ಇದಕ್ಕೆ ಅಗತ್ಯವಾದ ಸುಲಭ ಮತ್ತು ಸರಳವಾದ ಕಾರ್ಯಸೂತ್ರಗಳು ತಯಾರಾಗಿಯೇ ಇದ್ದರೂ ಅವನ್ನೆಲ್ಲ ಇಡೀ ವಿಶ್ವಕ್ಕೆ ಏಕರೂಪಿಯಾಗಿ ಅನ್ವಯಿಸುವುದಾಗಲೀ ಆಚರಣೆಗೆ ತರುವುದಾಗಲೀ ಅಷ್ಟು ಸುಲಭವಾಗಿರಲಿಲ್ಲ. ಅಲ್ಲದೆ ಅಂಥ ಪ್ರಯತ್ನಕ್ಕೆ ಅಷ್ಟೇ ಪ್ರಮಾಣದ ಪ್ರತಿರೋಧ ವಿಶ್ವದ ಕೆಲವೆಡೆಯಲ್ಲಾದರೂ ಎದುರಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

೩. ಅಮೆರಿಕದಂಥ ದೇಶಗಳ ದ್ವಂದ್ವನೀತಿ ಮತ್ತು ವಿರೋಧಾಭಾಸದ ನಡವಳಿಕೆ. ಸಬ್ಸಿಡಿ ಕಡಿತ ಮತ್ತು ಹಿಂತೆಗೆತದಂಥ ವಿಚಾರದಲ್ಲಿ ಈ ದೇಶಗಳು ತಮಗೊಂದು ಇತರರಿಗೊಂದು ನೀತಿಗೆ ಶರಣಾಗಿದ್ದು ಎಲ್ಲರಿಗೂ ಗೊತ್ತು.

೪. ಉತ್ಪಾದಕತೆಯ ಜಾಗತೀಕರಣಕ್ಕಿಂತ ಹಣದ ವಹಿವಾಟಿನ ಜಾಗತೀಕರಣ ಹೆಚ್ಚು ವೇಗ ಪಡೆದುಕೊಂಡುದು ಮತ್ತು ಇದು ಅನೇಕ ದೇಶಗಳ ಆರ್ಥಿಕ ಹಿನ್ನೆಡೆ, ಕುಸಿತಕ್ಕೆ ಕಾರಣವಾಗಿದ್ದು. ಇವತ್ತು ಅತ್ಯಂತ ಕ್ಷಿಪ್ರಗತಿಯ ಪ್ರಗತಿಯನ್ನು ದಾಖಲಿಸಿದ್ದು ಕೈಗಾರಿಕಾ ಉತ್ಪನ್ನವೂ ಅಲ್ಲ, ಕೃಷಿ ಕ್ಷೇತ್ರವೂ ಅಲ್ಲ. ಅದು ಸೇವಾವಲಯ! ಅಂದರೆ ಬಡ ಮತ್ತು ಹಿಂದುಳಿದ ರಾಷ್ಟ್ರಗಳಲ್ಲಿ ಕೈಗಾರಿಕಾ ಉತ್ಪಾದಕತೆಯ ಕುಸಿತ ಮತ್ತು ಕೃಷಿಕ್ಷೇತ್ರದ ಅವನತಿ ಒಂದೆಡೆಯಾದರೆ ಇನ್ನೊಂದೆಡೆ ದೂರ ಸಂಪರ್ಕ, ಬ್ಯಾಂಕಿಂಗ್, ಇನ್ಸೂರೆನ್ಸ್, ಕಂಪ್ಯೂಟರ್ ತಂತ್ರಜ್ಞಾನ ಮುಂತಾದ ವಲಯಗಳು ಅದ್ಭುತವಾದ ಅಭಿವೃದ್ಧಿಯನ್ನು ಸಾಧಿಸಿ ಆರ್ಥಿಕ ಮಾನದಂಡಗಳಲ್ಲಿ ಪ್ರಗತಿಯನ್ನು ದಾಖಲಿಸಿದ್ದು ನಿಜವಾದರೂ ಆಹಾರೋತ್ಪನ್ನ ಮತ್ತು ಕೈಗಾರಿಕೋತ್ಪನ್ನಗಳ ಇಳಿಮುಖದ ಬಾಧೆಯಿಂದ ಸಾಮಾನ್ಯ ಜನತೆಯನ್ನು ಪೊರೆಯದಾಯಿತು. ಇದು ನಗರ ಪ್ರದೇಶದಲ್ಲಿ ರಸ್ತೆ, ದೂರಸಂಪರ್ಕದಂಥ ಕೆಲವು ಸೌಕರ್ಯಗಳ ಸುಧಾರಣೆಗೆ, ಸ್ವಲ್ಪ ಮಟ್ಟಿನ ಉದ್ಯೋಗಾವಕಾಶಗಳ ಹುಟ್ಟಿಗೆ ಕಾರಣವಾಗಿಯೂ ಬಹುಸಂಖ್ಯಾತ ಗ್ರಾಮೀಣ ಜನರ ಸಂಕಷ್ಟಗಳನ್ನು ಹೆಚ್ಚಿಸಿತೇ ಹೊರತು ನಿವಾರಿಸಲಿಲ್ಲ.

೫. ಆರ್ಥಿಕ ಪ್ರಗತಿಯ ವಿಚಾರದಲ್ಲಿ ಜಾಗತೀಕರಣದ ಮೇಲಿದ್ದ ಭ್ರಮಾಧೀನ ನಿರೀಕ್ಷೆ. ಹೆಚ್ಚುತ್ತ ಹೋದ ಜಾಗತಿಕ ಮಧ್ಯಮವರ್ಗದ ಗಾತ್ರ, ಪರಿಸರದ ಮೇಲಾದ ಪ್ರತಿಕೂಲ ಪರಿಣಾಮಗಳು, ಹೆಚ್ಚುತ್ತಿರುವ ಜಾಗತಿಕ ತಾಪಮಾನ, ತೈಲದ ಕೊರತೆ ಮುಂತಾದ ಎಲ್ಲವನ್ನೂ ಆರ್ಥಿಕ ಪ್ರಗತಿಯ ಮೂಲಕ ಪರಿಹರಿಸ ಬಹುದೆಂಬ ಹುಸಿ ಲೆಕ್ಕಾಚಾರಗಳಿಗೇ ಇವತ್ತಿಗೂ ವಿಶ್ವಬ್ಯಾಂಕ್ ನಂಥ ಅಂತರ್ರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಜೋತುಬಿದ್ದಿರುವುದು.

೬. ಜಗತ್ತಿನಾದ್ಯಂತ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮೂಲನಿವಾಸಿಗಳು ಮತ್ತು ಮಧ್ಯಮ ವರ್ಗದವರಿಂದ ಎದುರಾದ ಪ್ರತಿಭಟನೆ, ವಿರೋಧ ಮತ್ತು ಚಳುವಳಿ. ಇಲ್ಲಿ ವಾಲ್ಡೇನ್ ವಿಶ್ವಾದ್ಯಂತ ಜಾಗತೀಕರಣ ಪ್ರಕ್ರಿಯೆಯಲ್ಲಿ ನಡೆದ ಸಂಘಟನೆ, ಸಭೆ, ಚರ್ಚೆಗಳ ಎದುರು ನಡೆದ ಪ್ರತಿಭಟನೆಯನ್ನೂ, ಒಂದರ ಹಿಂದೆ ಒಂದರಂತೆ ವಿಫಲವಾದ ಅಂಥ ಶೃಂಗ ಸಭೆಗಳನ್ನೂ ನೆನೆಯುತ್ತಾರೆ. ವಿಶೇಷತಃ ಥೈಲ್ಯಾಂಡ್, ಲ್ಯಾಟಿನ್ ಅಮೆರಿಕಾ, ಬೊಲಿವಿಯಾಗಳಲ್ಲಿ ನಡೆದುದರ ಉದಾಹರಣೆ ನೀಡುತ್ತಾರೆ.

ಜಾಗತೀಕರಣದ ಪ್ರತಿಕೂಲ ಪರಿಣಾಮಗಳಿಂದ ಜಗತ್ತಿನ ಚಿಕ್ಕಪುಟ್ಟ ದೇಶಗಳೂ ಜಾಣರಂತೆ ಮುಕ್ತರಾಗುತ್ತಿರುವಾಗ ಭಾರತದಂಥ ದೇಶಕ್ಕೆ ಅದು ಏಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ವಾಲ್ಡೇನರ ಪ್ರಬಂಧದಲ್ಲಿ ಸೂಕ್ತ ಉತ್ತರ ಇರುವುದರಿಂದ ಅದನ್ನು ಬಿಟ್ಟು ಬೇರೆ ವಿಚಾರಗಳಿಗೆ ಬರುತ್ತೇನೆ.

ವಾಲ್ಡೇನ್ ತರದವರು ಜಾಗತೀಕರಣ ಹಿನ್ನಡೆ ಕಂಡಿದೆ ಎಂದರೂ ಸಾಮಾನ್ಯ ಮನುಷ್ಯನೊಬ್ಬನ ಬದುಕಿಗೆ ಸಂಬಂಧಿಸಿದಂತೆ ಅದು ಮಾಡಬಹುದಾಗಿದ್ದ ಕೇಡುಗಳನ್ನೆಲ್ಲ ನಮ್ಮ ದೈನಂದಿನಗಳಲ್ಲಿ ಈಗಾಗಲೇ ಮಾಡಿದೆ ಎನಿಸುತ್ತದೆ. ಸದ್ಯ ನಮ್ಮ ಪತ್ರಿಕೆಗಳಲ್ಲಿ ಕಂಡು ಬರುತ್ತಿರುವ ಲೇಖನಗಳು ವಿಶೇಷವಾಗಿ ಈ ಅಂಶವನ್ನು ಗಮನಿಸಿಯೇ ಇಲ್ಲದಿರುವುದರಿಂದ ಅದನ್ನು ಇಲ್ಲಿ ಚರ್ಚಿಸುವುದು ನನ್ನ ಉದ್ದೇಶ.

ಎಷ್ಟೋ ವಿಷಯಗಳ ಬಗ್ಗೆ ಯೋಚಿಸುವಾಗ, ಹಿತವಾದ ಭಾಷೆಯಲ್ಲಿ ಮಾತನಾಡುವಾಗ ಅಥವಾ ಬರೆಯುವಾಗ ನನ್ನಂಥ ಸುಶಿಕ್ಷಿತ ಮಂದಿ ಬಿಸಿಲಲ್ಲಿ ಬೆವರಿಳಿಸಿ ದುಡಿಯುತ್ತ, ಕ್ಷಣಕ್ಷಣವೂ ಅಪಮಾನ, ಅಸಹ್ಯ, ಹೀಯಾಳಿಕೆಗಳನ್ನು ಎದುರಿಸುತ್ತ ದುಡಿಯುವ ಅಶಕ್ತ ಮಂದಿಯನ್ನು, ವಯಸ್ಸಾದವರನ್ನು, ಭಿಕ್ಷುಕರನ್ನು ಕುರಿತು ಯೋಚಿಸಲಿಕ್ಕೂ ಹೋಗುವುದಿಲ್ಲ. ಅಷ್ಟರಮಟ್ಟಿಗೆ ಹೊಟ್ಟೆ ತುಂಬಿದವರ ಸಮಸ್ಯೆಗಳೇ ಬೇರೆ ಮತ್ತು ಅವೇ ನಮಗೆ ಮಾತನಾಡಲು, ಬರೆಯಲು ಸಾಕಷ್ಟು ಇವೆ.

ಒಂದೆಡೆ ನಮ್ಮ ರಸ್ತೆಗಳೆಲ್ಲ ಅಗಲವಾಗುತ್ತಿವೆ. ಕಾರಿಡಾರ್, ಮೆಟ್ರೋ, ಚತುಷ್ಪಥಗಳು ತೆರೆದುಕೊಳ್ಳುತ್ತಿವೆ. ಮೊಬೈಲ್ ಫೋನುಗಳಂತೂ ಎಷ್ಟು ಹೆಚ್ಚಿವೆ ಎಂದರೆ ಈಗ ಹಳೆಯ ಸೆಟ್ಟುಗಳನ್ನೆಲ್ಲ ಏನು ಮಾಡಬೇಕೆಂಬುದೇ ನಮ್ಮ ಸಮಸ್ಯೆಯಾಗಿದೆ.

ಇವತ್ತು ನಮಗೆ ಶಾಸ್ತ್ರೀಯ ಸಂಗೀತ, ನಮ್ಮದೇ ಆದ ಲಘು ಸಂಗೀತ ಸಾಲದೆನ್ನಿಸುತ್ತದೆ. ಫಾಸ್ಟ್ ಬೀಟ್ ಸಂಗೀತ ನಮ್ಮನ್ನು ತಣಿಸುತ್ತದೆ. ಮತ್ತದು, ಅದೇ, ಸಂಗೀತ ಈಗ ಕೇವಲ "ಕೇಳುವ" ಕಲೆಯಾಗಿ ಉಳಿದೇ ಇಲ್ಲ. ಎಂಟೀವಿ ನಮಗೆ ಗಾನದ ಹೊಸ ಪಾಠಗಳನ್ನು ಕಲಿಸಿದೆ. ರೆಪ್ಪೆಯಾಡಿಸುವಷ್ಟರಲ್ಲಿ ಮರೆಯಾಗುವ ಅರೆಬೆತ್ತಲೆ ನೃತ್ಯಗಾತಿಯ ದೇಹದ ಯಾವ ಭಾಗದ ಮೇಲೆ ಯಾವ ಬಣ್ಣದ ಬೆಳಕು ಯಾವ ಕ್ಷಣದಲ್ಲಿ ಮೂಡಿ ಮರೆಯಾಯಿತೋ, ಅವಳ ಚಿತ್ರ ಅದೆಷ್ಟು ಬಾರಿ ಜೂಮ್ ಆಯಿತೋ, ಕಣ್ಣು ಕಂಡಿದ್ದೇನೋ, ಚಲಿಸಿದ್ದು ಬೆಳಕೋ, ಕ್ಯಾಮೆರಾವೋ, ನೃತ್ಯಗಾತಿಯೋ....ಗೊತ್ತಾಗದಿದ್ದರೇ ಅದು ಸಂಗೀತ! ಮನಸ್ಸು ಗ್ರಹಿಸುವ ಮೊದಲೇ ಬೇರೆಲ್ಲೋ ಬೆಳಕು, ಬೇರೆಲ್ಲೋ ನೋಟ, ಯಾರದೋ ನೃತ್ಯ. ಗತಿ ತಪ್ಪಿದ ಲಯದ ಗಾನ. ಹೃದಯದ ಬಡಿತವನ್ನೆ ತಪ್ಪಿಸುವ ಸಂಗೀತಕ್ಕೆ ಹೃದಯ ಮಿಡಿಯುವುದೆ? ಇದು ಪಾಶ್ಚಾತ್ಯ ಸಂಗೀತವೇನಲ್ಲ ಮತ್ತೆ! ಇದು ಪ್ಯೂರ್‍ ಇಂಡಿಯನ್ ಮ್ಯೂಸಿಕ್! ಬಾಲಿವುಡ್ಡಿನ ಹಾಡುಗಳು ಹಿಡಿದ ಹಾದಿಯಲ್ಲೇ ತಮಿಳು ತೆಲುಗು ಹಾಡುಗಳು ಭರ್ಜರಿಯಾಗಿ ಸದ್ದು ಗದ್ದಲ ಎಬ್ಬಿಸುತ್ತಿರುವಾಗ ಕನ್ನಡ ಹಿಂದೆ ಬೀಳುವುದುಂಟೆ?

ಹಾಲಿವುಡ್ ಹಾಕಿಕೊಡುತ್ತದೆ ನಮಗೆ ಸಿನಿಮಾ ಮಾಡಬೇಕಾದ ಮಾದರಿ ಸೂತ್ರಗಳನ್ನು. ಬಾಲಿವುಡ್ ಈ ಎಂಜಲನ್ನು ಚಪ್ಪರಿಸಿ ಕೃತಾರ್ಥವಾಗುತ್ತದೆ. ಇಲ್ಲಿಂದ ನಮ್ಮ ಸಿನಿಮಾದ ಕ್ವಾಲಿಟಿಯ ಮಾನದಂಡಗಳು ರೂಪುಗೊಳ್ಳುತ್ತವೆ. ಕನ್ನಡ ಸಿನಿಮಾಗಳ ಕ್ವಾಲಿಟಿಯ ಬಗ್ಗೆ ಮಾತನಾಡುವಾಗ ನಮ್ಮಲ್ಲಿ ಅನೇಕರು ಕೊಡುವ ಉದಾಹರಣೆಗಳನ್ನು ಗಮನಿಸಿದರೆ ಇದು ಅರಿವಾಗುತ್ತದೆ. ವೈಭವೋಪೇತ ಅರಮನೆಗಳಂಥ ಮನೆಗಳು, ಎಕರೆಗಟ್ಟಲೆ ಏರಿಯಾದಲ್ಲಿ ಗ್ರೂಪ್ ಡ್ಯಾನ್ಸ್, ಪ್ರಥಮ ಮುಖಾಮುಖಿಗಷ್ಟೇ ಬೇಕಾಗುವ ಆದರೆ ಯಾವುದೇ ಪಾರ್ಕು, ರೆಸಾರ್ಟ್‌ಗಳನ್ನೂ ಮೀರಿಸಬಲ್ಲ ಕಾಲೇಜಿನ ಕ್ಯಾಂಪಸ್ಸು, ಡುಯೆಟ್ ಹಾಡಲಿಕ್ಕೆ ಸಿಂಗಾಪೂರ್, ಕೆನಡಾ, ಪ್ಯಾರಿಸ್ ಇಲ್ಲವೆ ರೋಮ್! ಕಣ್ಣು ತಂಪಾಗಿಸುವ ಇಂಥ ದೃಶ್ಯಗಳು ಇಷ್ಟ ಎಲ್ಲರಿಗೆ. ಬಡವರ ಗೋಳು, ಕೊಳಚೆ, ಸಿಂಬಳ, ರೋಗ, ಸೂಳೆಗಾರಿಕೆ, ಭಿಕ್ಷಾಟನೆ, ಇಲ್ಲಿನ ಮಧ್ಯಮ ವರ್ಗದ ಜನರ ಸಂಘರ್ಷಗಳ ಬದುಕು, ಇಲ್ಲಿನ ಬೀದಿ, ಪಾರ್ಕು, ಜಲಪಾತಗಳು ಅಸಹ್ಯ, ಬಿಡಿ. ಸಿನಿಮಾ ಇರುವುದೇ ಎಂಜಾಯ್ ಮಾಡಲು, ಅದರಲ್ಲೂ ಗೋಳು ತೋರಿಸಬೇಕಾ ಎನ್ನುವ ಸರಳ ಪ್ರಶ್ನೆಯನ್ನು ಕೇಳುವ ಮೊದಲು; ನಮಗೂ ಅಸಹ್ಯ ಎನಿಸುತ್ತಿದೆಯೆ ನಮ್ಮ ವಾಸ್ತವದ ಬದುಕು?

ಮನುಷ್ಯ ಸಂಬಂಧಗಳು, ಭಾವನೆಗಳು, ಮಾನವೀಯ ಮೌಲ್ಯಗಳಿಗೆ ತುಡಿಯುವ ಸಂವೇದನೆಗಳು ಒಂದೆಡೆ ಇರುತ್ತ ಹಣದ, ಐಷಾರಾಮದ ಕನಸಿನ ಹಪಹಪಿಕೆಗಳು ಇನ್ನೊಂದೆಡೆ ನಮ್ಮ ಹಗಲು ರಾತ್ರಿಗಳನ್ನು ಸೆಳೆಯುತ್ತಿರಬೇಕಾದರೆ ಸಂತುಲಿತ ನಡೆಯ ಬದುಕೊಂದನ್ನು ನಿಭಾಯಿಸುವುದು ನಮಗೆ ಕಷ್ಟವೆನಿಸುತ್ತಿದೆಯೆ?

ಇವತ್ತು ನಮಗೆ ಎಳನೀರಿಗಿಂತ ಕೋಕಾಕೋಲ ಇಷ್ಟ. ಇಡ್ಲಿ, ದೋಸೆಗಿಂತ ಪಿಜ್ಜಾ, ಬರ್ಗರ್ ಇಷ್ಟ. ಕಾಲ್ ಸೆಂಟರುಗಳಲ್ಲಿ, ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಹಗಲು ರಾತ್ರಿಯೆಂದಿಲ್ಲದೆ ದುಡಿಯುತ್ತಿರುವ ನಮ್ಮ ಯುವಕರಿಗೆ ಅಡುಗೆ ಮಾಡುವುದು, ಮಕ್ಕಳನ್ನು ಹೆರುವುದಿರಲಿ, ತಿನ್ನುವುದಕ್ಕೂ ಪುರುಸೊತ್ತಿಲ್ಲ! ಇವರಿಗಾಗಿಯೇ ಚಂದವಾಗಿ ಪ್ಯಾಕ್ ಮಾಡಿದ ಪೊಟ್ಟಣಗಳಲ್ಲಿ ಅಡುಗೆಗೆ, ಬಗೆಬಗೆಯ ಖಾದ್ಯಗಳಿಗೆ ಹೆಸರುವಾಸಿಯಾದ ದಕ್ಷಿಣಭಾರತದ ತಿಂಡಿಗಳನ್ನೇ ಅಮೆರಿಕಾದಂಥ ದೇಶಗಳು ಒದಗಿಸಲು ಸಿದ್ಧವಿರುವಾಗ ಇನ್ನೇನು ಬೇಕು? ಏನಿದ್ದರೂ ಇವರು ರಾತ್ರಿಯೆಲ್ಲ ದುಡಿಯುತ್ತಿರುವುದು ಅವರ ದೈನಂದಿನಗಳಿಗಾಗಿಯೇ ಅಲ್ಲವೆ?

ಇವತ್ತು ನಮ್ಮ ಎಸ್ಸೆಮ್ಮೆಸ್ಸುಗಳಲ್ಲಿ ಬಳಕೆಯಾಗುವ ಶಾರ್ಟ್ ಹ್ಯಾಂಡ್ ಇಂಗ್ಲೀಷು ಅಮೆರಿಕಾದ ಬಳುವಳಿ. ಆ ಮೊಬೈಲ್ ಸೆಟ್ಟುಗಳೂ ನಮ್ಮ ದೇಶದ ಹವಾಮಾನಕ್ಕೆಂದೇ ವಿಶಿಷ್ಟವಾಗಿ ತಯಾರಿಸಿದ ದ್ವಿತೀಯ ದರ್ಜೆಯವು. HBO ನಂಥ ಚಾನೆಲ್‌ಗಳು ನಮ್ಮ ದೇಶದ ವೀಕ್ಷಕರಿಗೆ ಉಣಬಡಿಸುತ್ತಿರುವ ಎಪಿಸೋಡುಗಳು ಕೂಡಾ ಅಮೆರಿಕನ್ನರು ಎಷ್ಟೋ ಹಿಂದೆ ನೋಡಿಬಿಟ್ಟ ಹಳಸಲು!

ಇನ್ನು ವಿದೇಶೀ ಡಿಗ್ರಿಗಳ ವ್ಯಾಮೋಹದ ಬಗ್ಗೆ ಹೇಳಬೇಕಾದುದೇನೂ ಇಲ್ಲ.

ಈ ದೇಶದ ವೈವಿಧ್ಯಮಯ ಸಂಸ್ಕೃತಿ, ಭಾಷೆಗಳು, ಬಹುಧರ್ಮೀಯರ ಆಚರಣೆಗಳು, ಎಲ್ಲವೂ ಒಂದು ಸೌಹಾರ್ದಮಯವಾದ ಶಾಂತ ವಾತಾವರಣದಲ್ಲಿ ನಡೆದರೆ ಮಾತ್ರ ದೇಶ ಸುಭದ್ರವಾಗಿರುವುದು, ಅಭಿವೃದ್ಧಿಯಾಗುವುದು, ಆರೋಗ್ಯವಂತ ಜನಾಂಗವನ್ನು ಹೊಂದುವುದು ಸಾಧ್ಯ. ವೈವಿಧ್ಯತೆ ಒಂದು ವಿಧದಲ್ಲಿ ಸಂಸ್ಕೃತಿಯ ಹಿರಿಮೆಗೆ, ವಿರಾಟ್ ಸ್ವರೂಪದ ಬೆಳವಣಿಗೆಗೆ ಕಾರಣವಾಗಬಹುದಾದಂತೆಯೇ ಅದರ ವಿಪರ್ಯಾಸವೆಂದರೆ ಇದೇ ವೈವಿಧ್ಯತೆಯನ್ನು ಬಹಳ ಸುಲಭವಾಗಿ ವಿಚ್ಛಿದ್ರಕಾರಿಯಾಗಿ ಬಳಸಿಕೊಳ್ಳಲೂ ಸಾಧ್ಯವಿರುವುದು!

ಭಾಷೆ ಭಾಷೆಗಳ ನಡುವೆ, ಧರ್ಮ ಧರ್ಮಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ, ರೀತಿ-ನೀತಿ-ರಿವಾಜುಗಳ ನಡುವೆ ಕಂದಕ, ದ್ವೇಷ, ಸಂಶಯ, ವಿವಾದ ಸೃಷ್ಟಿಸುವುದು ಸುಲಭ. ಇಂಥಲ್ಲಿ ಪ್ರಗತಿ ಹೇಗೆ ಸಾಧ್ಯ? ಮಂಡಲ್, ಬಾಬ್ರಿ ಮಸೀದಿ, ಗೋಧ್ರಾ, ಕಾವೇರಿ, ಬಾಬಾ ಬುಡನ್, ಈದ್ಗಾ, ರಾಷ್ಟ್ರ ಧ್ವಜ, ಗಾಂಧಿ, ಸಾವರ್ಕರ್, ಬೆನ್ನಿಹಿನ್, ಕ್ರಿಮಿನಲ್ ಸಚಿವರು, ಕಂಚಿ ಪೀಠ, ಭಿನ್ನಮತ, ಸಂಪುಟ ವಿಸ್ತರಣೆಯಂಥ ವಿದ್ಯಮಾನಗಳೇ ನಮ್ಮ ಚುನಾಯಿತ ಸರಕಾರದ ಅಜೆಂಡಾಗಳಾಗಿರುವಾಗ ಐದು ವರ್ಷವೆಂಬುದು ಇದರಲ್ಲೆ ಕಳೆದು ಹೋಗುವಾಗ ಇನ್ನೇನು ಅಭಿವೃದ್ಧಿ, ಪ್ರಗತಿ ಸಾಧ್ಯ ಇಲ್ಲಿ? ಇದೆಲ್ಲ ಇಲ್ಲಿ ಹೊಕ್ಕು, ನೆಲೆಯೂರಿ, ವ್ಯಾಪಾರ ಬೆಳೆಸಿ, ಬಲಗೊಂಡು ನಮ್ಮ ನೆಲದ ಕೃಷಿ, ಕೈಗಾರಿಕೆ, ಸಾರಿಗೆ ಮತ್ತು ಸಂಪರ್ಕ, ಶಿಕ್ಷಣ, ಕಲೆ ಮತ್ತು ಸಂಸ್ಕೃತಿ ಎಲ್ಲವನ್ನೂ ಹಂತ ಹಂತವಾಗಿ ಕುಲಗೆಡಿಸಲು ಹೇಳಿ ಮಾಡಿಸಿದಂಥ ವಾತಾವರಣವನ್ನು ನಿರ್ಮಿಸುತ್ತದೆ. ನಮಗೆ ನಮ್ಮದೇ ಚರಿತ್ರೆ ಇದನ್ನು ಹಲವು ಬಾರಿ ಕಾಣಿಸಿದೆ. ಆದರೆ ನಾವು ಇತಿಹಾಸವನ್ನು, ಭೂತಕಾಲವನ್ನು ನಮ್ಮ ವರ್ತಮಾನ, ಭವಿಷ್ಯತ್ತುಗಳನ್ನು ಸಂಬದ್ಧಗೊಳಿಸಿಕೊಳ್ಳಲು ಬಳಸಿಕೊಳ್ಳುವುದಿಲ್ಲ. ವಿವಾದಗಳನ್ನು ಹುಟ್ಟುಹಾಕಲು ಬೇಕಾದ ಬೀಜಗಳಿಗಾಗಿಯಷ್ಟೇ ಕೆದಕುತ್ತೇವೆ.

ಸಹಜವಾಗಿಯೇ ಅಮೆರಿಕಾದಂಥ ಹೊರಗಿನವರಿಗೆ ಇದೆಲ್ಲ ಸಂತೃಪ್ತಿ ಮೂಡಿಸಿದೆ. ಯಾಕೆಂದರೆ ಅವರಿಗೆ ವ್ಯಾಪಾರ ಮುಖ್ಯ. ಹಾಗಾಗಿಯೇ ಅದಕ್ಕೆ ಯುದ್ಧದ ಅನಿವಾರ್ಯತೆ ಕೂಡ ಇದೆ. ಅಮೆರಿಕಾದ ರಾಷ್ಟ್ರೀಯ ಆದಾಯದ ಬಹುದೊಡ್ಡ ಮೂಲ ಶಸ್ತ್ರಾಸ್ತ್ರ ಮಾರಾಟದಿಂದಲೇ ಬರುತ್ತಿದೆ. ಯುದ್ಧಗಳೇ ನಡೆಯದಿದ್ದರೆ ಈ ಮಹಾನ್ ದೈತ್ಯ ನಿತ್ರಾಣಗೊಂಡು ಕುಸಿಯುತ್ತಾನೆ. ಇಲ್ಲೊಂದು ವಿಪರ್ಯಾಸವಿದೆ. ಇಡೀ ವಿಶ್ವದ ಆರ್ಥಿಕತೆ, ಅದರಲ್ಲೂ ಏಷ್ಯಾದ ಆರ್ಥಿಕತೆ ಅಮೆರಿಕಾದ ಆರ್ಥಿಕತೆಯ ಮೇಲೆಯೇ ನೇರವಾಗಿ ಅವಲಂಬಿತವಾಗಿರುವುದು! ನಮಗೂ ಸೇರಿದಂತೆ ಇವರೆಲ್ಲರಿಗೂ ಇರುವ ದೊಡ್ಡ ಮತ್ತು ಮುಖ್ಯ ಗ್ರಾಹಕ ಅಮೆರಿಕಾವೇ. ಹಾಗಾಗಿ ನಮಗಾಗಿಯಾದರೂ ಅದು ಚೆನ್ನಾಗಿರಬೇಕು! ಅದಕ್ಕಾಗಿ ಸದಾ ಯಾರಾದರೂ ಯುದ್ಧ ಮಾಡುತ್ತಲೇ ಇರಬೇಕಾಗುತ್ತದೆ. ಯಾರೂ ಎಲ್ಲೂ ಯುದ್ಧ ಮಾಡದಿದ್ದರೆ ಅಮೆರಿಕಾವೇ ಒಂದನ್ನು ಪ್ರಾಯೋಜಿಸುತ್ತದೆ ಎಂಬುದು ಈಗಂತೂ ಎಲ್ಲರಿಗೂ ತಿಳಿದ ಸಂಗತಿಯೇ. ಹಾಗಾಗಿಯೇ ಮುಂದಿನ ಸದ್ದಾಮೀಕರಣ ಯಾವ ದೇಶದಲ್ಲಾಗುವುದೋ ಎಂಬ ಅವ್ಯಕ್ತ ಭಯ ಎಲ್ಲರನ್ನೂ ಕಾಡುತ್ತಿದೆ.

ಆದರೆ ತಾಲಿಬಾನ್, ಇರಾಕ್ ನಂತರ ಅಮೆರಿಕದ ಆರ್ಥಿಕತೆ ಕೂಡ ಸೊರಗಿದೆ ಎಂಬುದು ಸತ್ಯ. ಸಾಧ್ಯವಾದ ಮಟ್ಟಿಗೆ ಬೇರೆ ದೇಶಗಳೇ ಹೊಡೆದಾಡಿಕೊಳ್ಳುತ್ತ ಇದ್ದರೆ ಇದು ಶಾಂತಿಸ್ಥಾಪಕನ ಸೋಗಿನಲ್ಲಿ ಜಗದ ಏಕೈಕ ಶಿಸ್ತುಪಾಲಕನಂತೆ ಉರಿವ ಬೆಂಕಿಗೆ ತುಪ್ಪ ಸುರಿಯುತ್ತ ಇರುತ್ತಿತ್ತು. ಆದರೆ ಹಾಗಾಗುತ್ತಿಲ್ಲ. ಅದಕ್ಕೆ ಸರಿಯಾಗಿ ಅನೇಕ ರಾಷ್ಟ್ರಗಳು ಜಾಗತಿಕ ಸಾಲದಿಂದ ಅವಧಿಗೂ ಮೊದಲೇ ಮುಕ್ತವಾಗುತ್ತಿರುವುದೂ ಅಮೆರಿಕಕ್ಕೆ ಚಿಂತೆಯುಂಟು ಮಾಡಿದೆ.

ಸಾಲದ ಕುಣಿಕೆ ಒಂದಿದ್ದರೆ ಅಲ್ಲಿ ಐಎಂಎಫ್ ಹೇಳಿದಂತೆ ಸರಕಾರ ತನ್ನ ಆರ್ಥಿಕ ನೀತಿ, ವ್ಯಾಪಾರ ನೀತಿ, ರಾಷ್ಟ್ರೀಯ ಸಂಪನ್ಮೂಲಗಳ ಮುಕ್ತ ಬಳಕೆಗೆ ಅನುಮತಿ, ಖಾಸಗೀಕರಣ, ಸಹಾಯಧನ ಕಡಿತ ಎಲ್ಲವನ್ನೂ ರೂಪಿಸ ಬೇಕಾಗುತ್ತದೆ/ಮಾಡಬೇಕಾಗುತ್ತದೆ. ಸದ್ಯ ಭಾರತದಲ್ಲಾಗುತ್ತಿರುವುದು ಇದೇ. ಒಳ ಜಗಳಗಳು, ಪಾಕಿಸ್ತಾನದ ಜೊತೆ ವೈಮನಸ್ಯ, ಸದಾ ಏರುತ್ತಿರುವ ಮಿಲಿಟರಿ ವೆಚ್ಚ, ಎಂದೂ ತೀರದ ಜಾಗತಿಕ ಸಾಲ. ಇನ್ನೇನು ಬೇಕು?

ತನ್ನ ವ್ಯಾಪಾರ ಕ್ಷೇತ್ರದ ವಿಸ್ತರಣೆಗೆ ಅದು ಅನುಸರಿಸುವ ಮಾರ್ಗ ಕೂಡ ತುಂಬ ಜಾಣತನದ್ದು. ತನ್ನ ದೇಶದ ಉತ್ಪನ್ನಗಳಿಗೆ ಬೇಡಿಕೆ ಹುಟ್ಟಿಸಲು ಅದು ಇಲ್ಲಿನ ಜನರ ಆಹಾರ ಕ್ರಮ, ಬಟ್ಟೆ ಬರೆ, ಫ್ಯಾಶನ್, ಅಭಿರುಚಿ, ಭಾಷೆ, ಕಲೆ, ಸಂಸ್ಕೃತಿ, ಆಚರಣೆಗಳು ಎಲ್ಲವನ್ನೂ ಗಮನಿಸಿ ಅವುಗಳನ್ನು ಭ್ರಷ್ಟಗೊಳಿಸಿ, ತದನಂತರ ಅಮೆರಿಕನ್ ಮಾನದಂಡಗಳಲ್ಲಿ ಭ್ರಷ್ಟಗೊಂಡ ನಮ್ಮದನ್ನೇ ನಮಗೆ ತಿನ್ನಿಸುತ್ತದೆ, ಕಲಿಸುತ್ತದೆ, ಕೇಳಿಸುತ್ತದೆ, ಉಡಿಸುತ್ತದೆ, ನೋಡಲು ನೀಡುತ್ತದೆ ಮತ್ತು ಬಳಸಲು ಬಿಡುತ್ತದೆ.

ಹಾಗಾಗಿ ನಮಗೆ ಹಾಲಿವುಡ್ ಸಿನಿಮಾವೇ ನಿಜವಾದ ಸಿನಿಮಾ, ಎಂಟೀವಿ ಸಂಗೀತವೇ ನಿಜವಾದ ಸಂಗೀತ, ಬ್ರೆಡ್ಡು ಪಿಜ್ಜಾ, ಬರ್ಗರ್‌ಗಳೇ ಪೌಷ್ಟಿಕ ಆಹಾರ, ನಾಲ್ಕು ಸಿದ್ಧ ಮಾದರಿಯ ಉತ್ತರಗಳಲ್ಲಿ ಒಂದಕ್ಕೆ ಟಿಕ್ ಹಾಕುವುದೇ ಶಿಕ್ಷಣ, ಅವರ ಧರ್ಮವೇ ಜಗತ್ತಿನ ಧರ್ಮ ಎನ್ನುವಂತಾದರೆ ಮಾತ್ರ ಅವರ ಉತ್ಪಾದನೆಗಳಿಗೆ ಇಲ್ಲಿ ಮಾರ್ಕೆಟ್ ಸೃಷ್ಟಿಯಾದಂತೆ. ಇದು ಜಾಗತೀಕರಣದ ಅನಿವಾರ್ಯತೆ ಕೂಡ. ಇದು ಸಾಧ್ಯವಾಗದಿದ್ದರೆ ಡಬ್ಲ್ಯೂಟಿಓ ಮುಗ್ಗರಿಸುತ್ತದೆ. ಗ್ಯಾಟ್ ಸಫಲವಾಗುವುದಿಲ್ಲ.

ನಮ್ಮ ದೇಶದಲ್ಲಿ ಜಾಗತೀಕರಣಕ್ಕೆ ಉಜ್ವಲ ಭವಿಷ್ಯವಿದೆ ಅನಿಸುವುದಿಲ್ಲವೆ?

ಈಗ ಅನಂತಮೂರ್ತಿಯವರ ಭಾಷಣಕ್ಕೆ ಬರುತ್ತೇನೆ. ಹೊಟ್ಟೆಗೆ ಆಹಾರ, ಮಕ್ಕಳಿಗೆ ವಿದ್ಯಾಭ್ಯಾಸ ಇವು ಯಾವುದೇ ಅಭಿವೃದ್ಧಿಯ ಪ್ರಥಮ ಕಾಳಜಿಯಾಗಿರಬೇಕು ಎನ್ನುತ್ತಾರವರು. ಗಾಂಧಿ ಕೂಡ ದೇಶದ ಕಟ್ಟ ಕಡೆಯ ದರಿದ್ರನನ್ನೂ ತಲುಪದ ಅಭಿವೃದ್ಧಿ ಅಭಿವೃದ್ಧಿಯೇ ಅಲ್ಲ ಎನ್ನುತ್ತಿದ್ದುದನ್ನು ನೆನಪಿಸುತ್ತಾರೆ. ಕನಿಷ್ಠ ಅವಶ್ಯಕತೆಗಳೊಂದಿಗೆ ಸುಖವಾಗಿರಬಲ್ಲ ಮನುಷ್ಯ ನಮ್ಮ ವ್ಯಾಖ್ಯಾನದಲ್ಲಿ ಬಡವನಲ್ಲ ಎನ್ನುವ ಅನಂತಮೂರ್ತಿಯವರು ಬಡತನದ ಪಾಶ್ಚಾತ್ಯ ವ್ಯಾಖ್ಯಾನ ನಮಗೆ ಬೇಡ ಎಂದು ಸ್ಪಷ್ಟೋಕ್ತಿಗಳಲ್ಲಿ ಹೇಳುತ್ತಾರೆ.

ಅವರು ಕಾರಂತರ ಕಾದಂಬರಿಗಳಲ್ಲಿ ಚಿತ್ರಿತವಾಗಿರುವ ನಮ್ಮ ಹಳ್ಳಿಗಳ ಜನಜೀವನದ ಚಿತ್ರಗಳನ್ನು ನೆನಪಿಸುತ್ತಾರೆ. ಮರಳಿ ಮಣ್ಣಿಗೆ ಕಾದಂಬರಿಯ ಪಾರೋತಿ, ಸರಸೋತಮ್ಮ ಇಬ್ಬರೂ ರಾಮ ಐತಾಳರ ನೆರವಿಲ್ಲದೆಯೂ ಬಿಸಿಲೆನ್ನದೆ ಮಳೆಯೆನ್ನದೆ ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದುದು, ಉಪ್ಪಿನಕಾಯಿಗೆ ಮಾವಿನ ಮಿಡಿ ಬೇಕೆಂದು, ಉರುವಲಿಗೆ ಕಟ್ಟಿಗೆ ಬೇಕೆಂದು ಇನ್ನಿಲ್ಲದ ಬವಣೆಗಳನ್ನು ಪಡುತ್ತಿದ್ದುದು ಎಲ್ಲವನ್ನು ನೆನೆಯುತ್ತ, ಅದೆಲ್ಲದರ ನಡುವೆಯೂ ಸುಖವಾಗಿಯೇ ಇದ್ದೇವೆಂದು ತಿಳಿದಿದ್ದ, ಸಂತೃಪ್ತಿಯಿಂದಿದ್ದ ಒಂದು ಬದುಕಿನ ಚಿತ್ರ ಅಲ್ಲಿ ನಮಗೆ ಸಿಗುತ್ತದೆನ್ನುತ್ತಾರೆ. ಈ ಸುಖ ಕಾರು, ಬಂಗಲೆ, ಐಷಾರಾಮಗಳಲ್ಲಿ ಸಿಗುವಂಥದ್ದಲ್ಲ.

ಆ ಕಾಲದ ಮನುಷ್ಯರಲ್ಲೂ ಈ ಮಧ್ಯಮ ವರ್ಗದ ಆಶೆ, ಹಪಹಪಿಕೆಗಳನ್ನು ಅವರು ನಿರಾಕರಿಸುವುದಿಲ್ಲ. ಬಣ್ಣದ ಚಾಪೆ, ಬೆಳ್ಳಿಕಟ್ಟಿನ ನಶ್ಯದ ಡಬ್ಬಿಗಳಲ್ಲಿ ರಾಮ ಐತಾಳರು ಸಿರಿತನದ ಪ್ರದರ್ಶನವನ್ನು ಕಣುವುದು, ಶೀನಪ್ಪನ ಹಂಚಿನ ಮನೆಯನ್ನು ನೋಡಿ ತನಗೂ ಅಂಥ ಮನೆಕಟ್ಟಿಸುವ ಹಂಬಲವಾಗುವುದು ಇತ್ಯಾದಿಗಳನ್ನೂ ಅವರು ನೆನಪಿಸಿದರೇ. ಆದರೆ ಇವತ್ತು ಇದೆಲ್ಲದರ ಸ್ವರೂಪವೇ ಬದಲಾಗಿರುವುದು ಅವರ ಕಳಕಳಿಗೆ ಕಾರಣವಾಗಿತ್ತು.

ವಿಜ್ಞಾನಿಯಾಗಲು ಬಯಸದ, ಬದಲಿಗೆ ಸುಲಭದ ಕಾಲ್‌ಸೆಂಟರ್ ಉದ್ಯೋಗದ ಆಮಿಷಕ್ಕೆ ಬಿದ್ದ ಯುವಕರು, ಎಲ್ಲ ವರ್ಗದವರೂ ಕಲಿಯುತ್ತಿದ್ದ ಕಾಮನ್‌ಸ್ಕೂಲುಗಳು ಮಾಯವಾಗಿ ಬಾಲ್ಯದಲ್ಲೇ ತಮ್ಮ ತರಗತಿ, ಆಟದ ಮೈದಾನಗಳಲ್ಲಿ ಬಹು ಸಂಸ್ಕೃತಿಯ ಪರಿಚಯ ಪಡೆಯುವುದರಿಂದ ವಂಚಿತರಾಗಿರುವ ನಮ್ಮ ಮಕ್ಕಳು, ಮುಂತಾಗಿ ಪರಂಪರೆಯ ಪ್ರಜ್ಞೆಯಿಂದ ಕ್ರಮೇಣ ಹೀಗೆ ದೂರವಾಗಿ ಆ ಕೊಂಡಿಗಳು ಕಳಚಿಕೊಳ್ಳುವುದನ್ನು ಅವರು ಗಮನಿಸುತ್ತ ಇದೆಲ್ಲ ಅಮೆರಿಕದ ಟ್ರೂಮನ್ ಪಾಲಿಸಿಯ, ತೃತೀಯ ಜಗತ್ತಿನ ಅಭಿವೃದ್ಧಿ ಮಂತ್ರದ ಫಲ ಎನ್ನುತ್ತಾರೆ.