ಜಾಣರಲ್ಲಿ ಜಾಣ ಸೀಳು ಬಾಲದ ಕಾಜಾಣ ಹಕ್ಕಿ

ಜಾಣರಲ್ಲಿ ಜಾಣ ಸೀಳು ಬಾಲದ ಕಾಜಾಣ ಹಕ್ಕಿ

ವಾರವೂ ಒಂದು ಒಗಟಿನೊಂದಿಗೆ ಪ್ರಾರಂಭ ಮಾಡೋಣ.

ಸೀಳು ಬಾಲದ ಹಕ್ಕಿಯು ನಾನು,

ಕಪ್ಪು ಬಣ್ಣದ ದೇಹವು ನನದು,

ಗಂಡು ಹೆಣ್ಣುಗಳು ಒಂದೆ ಸಮಾನ,

ಮೂಗಿನ ಬಳಿಯಲಿ ಬಿಳಿ ಮುಗುತ್ತಿ,

ತೆರೆದ ಜಾಗದಲಿ, ಮರದ ತುದಿಯಲಿ,

ಕುಳಿತು ಅತ್ತ ಇತ್ತ ನೋಡುತ್ತ,

ಹಾರುವ ನೊಣಗಳ ಹಿಡಿಯುವೆ ನಾನು,

ಹೇಳಬಲ್ಲಿರಾ ನಾನ್ಯಾವ ಹಕ್ಕಿ ?

ಕೆಲವರಿಗಾದರೂ ಒಗಟಿನ ಉತ್ತರ ತಿಳಿದಿರಬೇಕಲ್ಲ. ಒಂದು ದಿನ ನಾವು ನಮ್ಮ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆವು. ಎಲ್ಲರೂ ಲೋಕಾಭಿರಾಮ ಮಾತಿನಲ್ಲಿ ಮುಳುಗಿದ್ದಾಗ ನನಗೊಂದು ಫೋನ್ ಕಾಲ್ ಬಂತು. ಮಾತನಾಡೋಣ ಅಂತ ಹೊರಗಡೆ ಬಂದೆ. ಅವರೇನೋ ವಿಷಯ ಹೇಳುತ್ತಿದ್ದರು, ನಾನು ಹೂಂ ಹೂಂ ಎಂದು ಹೂಂಗುಟ್ಟುತ್ತಿದ್ದೆ. ಮಾತನಾಡುತ್ತಲೇ ಹೊರಗಡೆ ದಾರಿದೀಪದ ಬಳಿಯಲ್ಲಿ ಯಾವುದೋ ಹಕ್ಕಿ ಬಂದು ಕುಳಿತದ್ದು‌ ಕಾಣಿಸಿತು. ಕತ್ತಲಾಗಿದ್ದರೂ ಇದ್ಯಾವ ಹಕ್ಕಿ ಎಚ್ಚರವಾಗಿದೆ ಎಂದು ಕುತೂಹಲ ಆಯ್ತು. ಹಕ್ಕಿಯ ಬಣ್ಣವೂ ಕತ್ತಲಿನಂತೆ ಕಪ್ಪು. ಆದರೂ ದೀಪದ ಬೆಳಕಿಗೆ ಸಣ್ಣಗೆ ಹೊಳೆಯುತ್ತಿತ್ತು. ಸಂಜೆ ದಾರಿ ದೀಪದ ಹತ್ತಿರ ಇದಕ್ಕೇನು ಕೆಲಸ ಅಂತ ಸಂಶಯ. ಫೋನ್ ಕಾಲ್ ಮುಗಿಸಿ ಅಲ್ಲೇ ನಿಂತೆ. ಕರೀ ಬಣ್ಣದ ಈ ಹಕ್ಕಿ ದಾರಿದೀಪದ ಬೆಳಕಿಗೆ ಆಕರ್ಷಿತವಾಗಿ ಬರುವ ಸಣ್ಣ ಕೀಟಗಳನ್ನು ಹಿಡಿದು ತಿನ್ನುತ್ತಿತ್ತು. ಹೀಗೇ ಸುಮಾರು ಒಂದು ಗಂಟೆಗಳ ಕಾಲ ಭೂರಿಭೋಜನ ನಡೆಸಿ ಮತ್ತೆಲ್ಲಿಗೋ ಹಾರಿ ಮಾಯ ಆಯ್ತು.

ದೇಹಪೂರ್ತಿ ಕಪ್ಪು ಬಣ್ಣ ಸುಮಾರು ಮೈನಾ ಹಕ್ಕಿಯ ಗಾತ್ರ, ಚಂದದ ಉದ್ದನೆಯ ಬಾಲ ತುದಿಯಲ್ಲಿ ಸೀಳಾಗಿ V ಆಕಾರದಂತೆ ವಿರುದ್ಧ ದಿಕ್ಕಿಗೆ ಚಾಚಿಕೊಂಡಿರುತ್ತವೆ. ಹಗಲು ಹೊತ್ತಿನಲ್ಲಿ ಯಾವುದಾದರೂ ಮರದ ಕೊಂಬೆಯ ತುದಿಯಲ್ಲಿ, ವಿದ್ಯುತ್ ಕಂಬ ಅಥವಾ ತಂತಿಯ ಮೇಲೆ ಕುಳಿತುಕೊಂಡು ಸುತ್ತಮುತ್ತಲೂ ನೋಡುತ್ತಿರುತ್ತದೆ. ಯಾವುದಾದರೂ ಕೀಟಗಳು ಕಂಡರೆ ಹಾರಿ ಅದನ್ನು ಹಿಡಿದು ತಿನ್ನುತ್ತವೆ. ಕೆಲವೊಮ್ಮೆ ನೆಲದಮೇಲೆ ಕುಳಿತುಕೊಂಡು, ಗೆದ್ದಲು ಹುಳು ಅಥವಾ ಮಿಡತೆಗಳನ್ನು ಹಿಡಿದು ತಿನ್ನುತ್ತಿರುತ್ತದೆ. ಸಂಜೆ ಹೊತ್ತು ಬೆಳಕು ಅಥವಾ ಬೆಂಕಿ ಇರುವಲ್ಲಿ ಅದಕ್ಕೆ ಆಕರ್ಷಿತವಾಗಿ ಬರುವ ಕೀಟಗಳನ್ನು ಹಿಡಿಯಲೆಂದು ಅಲ್ಲಿಗೆ ಬರುತ್ತದೆ. ಹೊಲವನ್ನು ಉಳುಮೆ ಮಾಡುವ ಸಂದರ್ಭದಲ್ಲಿ ನೆಲದಿಂದ ಹೊರಗೆ ಬರುವ ನೂರಾರು ಕೀಟಗಳನ್ನು ಹಿಡಿಯಲೆಂದು ಅಲ್ಲಿಗೆ ದಾಳಿ ಮಾಡಿ ಹೊಟ್ಟೆ ತುಂಬಾ ತಿನ್ನುತ್ತದೆಯಂತೆ.  ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿ ಇದರ ಸಂತಾನೋತ್ಪತ್ತಿ ಕಾಲ. ಮರದ ಗೊಂಬೆಗಳ ನಡುವೆ ಹುಲ್ಲುಕಡ್ಡಿಗಳನ್ನು ಬಳಸಿ ಪುಟಾಣಿ ಬಟ್ಟಲಿನ ಆಕಾರದ ಗೂಡನ್ನು ಮಾಡಿ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿಮಾಡುತ್ತದೆ. ಸುಮಾರು 15 ದಿನಗಳಲ್ಲಿ ಮೊಟ್ಟೆಯಿಂದ ಮರಿ ಹೊರಗೆ ಬರುತ್ತದೆ ಗಂಡು ಮತ್ತು ಹೆಣ್ಣು ಹಕ್ಕಿಗಳೆರಡು ಕಾವು ಕೊಡುವ ಮತ್ತು ಮರಿಗಳಿಗೆ ಆಹಾರ ತಿನ್ನಿಸುವ ಕೆಲಸವನ್ನು ಸಮಾನವಾಗಿ ಹಂಚಿಕೊಳ್ಳುತ್ತವೆ. ಇವುಗಳು ಗೂಡು ಮಾಡುವ ಜಾಗದಲ್ಲಿ ಬೇರೆ ಬೇಟೆಗಾರ ಹಕ್ಕಿಗಳು, ಕಾಗೆಗಳು ಬಂದರೆ ಅವುಗಳನ್ನು ಬೆದರಿಸಿ ಜೋರು ಮಾಡಿ ಅಲ್ಲಿಂದ ದೂರ ಓಡಿಸುತ್ತದೆ. ಕೆಲವೊಮ್ಮೆ ಬೇಟೆಗಾರ ಹಕ್ಕಿಗಳ ಕೂಗನ್ನು ಅನುಕರಿಸುತ್ತದೆ. ಈ ಕಾರಣಕ್ಕಾಗಿ ಬುಲ್ ಬುಲ್ ನಂತಹ ಇತರ ಸಣ್ಣ ಹಕ್ಕಿಗಳು ಸುರಕ್ಷತೆಯ ದೃಷ್ಟಿಯಿಂದ ಈ ಹಕ್ಕಿಗಳ ಗೂಡಿನ ಆಸುಪಾಸಿನಲ್ಲಿ ತಮ್ಮ ಗೂಡನ್ನು ಕಟ್ಟಿಕೊಳ್ಳುತ್ತವೆ. ಭಾರತದಾದ್ಯಂತ ಕಾಣಸಿಗುವ ಈ ಜಾಣ ಹಕ್ಕಿಯನ್ನು ಕನ್ನಡದಲ್ಲಿ ಕಾಜಾಣ ಎಂದು ಕರೆಯುತ್ತಾರೆ. ಬಯಲು ಸೀಮೆಯಲ್ಲಂತೂ ಈ ಹಕ್ಕಿ ಸರ್ವೇಸಾಮಾನ್ಯ. ನಿಮ್ಮ ಆಸುಪಾಸಿನಲ್ಲೂ ಈ ಹಕ್ಕಿ ಇರಬಹುದು.

ಕನ್ನಡದ ಹೆಸರು: ಕಾಜಾಣ

ಇಂಗ್ಲಿಷ್ ಹೆಸರು: Black Drongo

ವೈಜ್ಞಾನಿಕ ಹೆಸರು: Dicrurus macrocercus 

ಚಿತ್ರ-ಬರಹ : ಅರವಿಂದ ಕುಡ್ಲ, ಬಂಟ್ವಾಳ