ಜಾಣ ರೈತ ಮತ್ತು ರಾಜ
ನೂರಾರು ವರುಷಗಳ ಮುಂಚೆ ಒಬ್ಬ ಧನವಂತ ಮತ್ತು ಶಕ್ತಿವಂತ ರಾಜನಿದ್ದ. ಅವನಿಗೆ ಬೇಟೆಯೆಂದರೆ ಅಚ್ಚುಮೆಚ್ಚು. ಅದೊಂದು ದಿನ ಅವನು ಕುದುರೆಯ ಮೇಲೆ ಬೇಟೆಗೆ ಹೋಗುತ್ತಿದ್ದಾಗ ಕಟ್ಟಿಗೆ ಒಡೆಯುತ್ತಿದ್ದ ಒಬ್ಬ ಬಡ ರೈತನನ್ನು ಕಂಡ.
ತನ್ನ ಕುದುರೆಯನ್ನು ನಿಲ್ಲಿಸಿದ ರಾಜ ಆ ರೈತನನ್ನು ಕರೆದು ಕೇಳಿದ, "ಪ್ರತಿದಿನ ನೀನು ಎಷ್ಟು ಹಣ ಗಳಿಸುತ್ತಿ?” ರಾಜನನ್ನು ಗುರುತಿಸಿ ವಂದಿಸಿದ ರೈತ, “ನಾಲ್ಕು ನಾಣ್ಯಗಳು, ಮಹಾರಾಜಾ" ಎಂದುತ್ತರಿಸಿದ. (ಒಂದು ನಾಣ್ಯ=೨೫ ರೂ.ಎಂದಿರಲಿ)
"ಸರಿ, ನೀನು ಗಳಿಸಿದ ಹಣವನ್ನು ಏನು ಮಾಡುತ್ತಿ?” ಎಂದು ಪ್ರಶ್ನಿಸಿದ ರಾಜ. “ಮೊದಲನೆಯ ನಾಣ್ಯವನ್ನು ತಿನ್ನುತ್ತೇನೆ, ಎರಡನೆಯ ನಾಣ್ಯವನ್ನು ಬಡ್ಡಿಯಾಗಿ ಕೊಡುತ್ತೇನೆ, ಮೂರನೆಯ ನಾಣ್ಯವನ್ನು ವಾಪಾಸು ಕೊಡುತ್ತೇನೆ ಮತ್ತು ನಾಲ್ಕನೆಯ ನಾಣ್ಯವನ್ನು ಎಸೆಯುತ್ತೇನೆ” ಎಂದು ಉತ್ತರ ನೀಡಿದ ರೈತ.
ರೈತನ ಉತ್ತರ ಕೇಳಿ ರಾಜನಿಗೆ ಗೊಂದಲವಾಯಿತು. ಅದನ್ನು ಅರ್ಥ ಮಾಡಿಕೊಳ್ಳಲಾಗದೆ, ಕೊನೆಗೆ ರೈತನನ್ನೇ ಅದರ ಅರ್ಥ ವಿವರಿಸಬೇಕೆಂದು ಕೇಳಿದ ರಾಜ. ರೈತ ಹೀಗೆಂದು ವಿವರಿಸಿದ, “ಮಹಾರಾಜಾ, ಮೊದಲನೆಯ ನಾಣ್ಯವನ್ನು ನನ್ನ ಆಹಾರಕ್ಕಾಗಿ ಖರ್ಚು ಮಾಡ್ತೇನೆ. ಎರಡನೆಯ ನಾಣ್ಯವನ್ನು ನನ್ನ ಮಕ್ಕಳ ಆಹಾರಕ್ಕಾಗಿ ವೆಚ್ಚ ಮಾಡ್ತೇನೆ. ಅದು ಬಡ್ಡಿ ಕೊಟ್ಟಂತೆ ಯಾಕೆಂದರೆ ನನಗೆ ಕೆಲಸ ಮಾಡಲಿಕ್ಕಾಗದಷ್ಟು ವಯಸ್ಸಾದಾಗ ಅವರು ನನ್ನನ್ನು ಸಲಹುತ್ತಾರೆ. ಮೂರನೆಯ ನಾಣ್ಯವನ್ನು ನನ್ನ ತಂದೆ ನನಗೆ ತೋರಿದ ಕರುಣೆ ಮತ್ತು ನೀಡಿದ ಸಹಾಯಕ್ಕೆ ಪ್ರತಿಯಾಗಿ ಅವರಿಗಾಗಿ ಖರ್ಚು ಮಾಡ್ತೇನೆ. ಕೊನೆಯ ನಾಣ್ಯವನ್ನು ನನ್ನ ಪತ್ನಿಗೆ ಅವಳ ವೆಚ್ಚಕ್ಕಾಗಿ ಕೊಡ್ತೇನೆ; ಅದು ನಾನು ಕಷ್ಟ ಪಟ್ಟು ಗಳಿಸಿದ ಹಣವನ್ನು ಎಸೆದಂತೆ ಎಂಬುದು ನನ್ನ ಯೋಚನೆ."
ರೈತ ನೀಡಿದ ವಿವರಣೆ ಕೇಳಿ ರಾಜ ಮೆಚ್ಚುಗೆಯಿಂದ ತಲೆಯಾಡಿಸಿದ. ನಂತರ ರಾಜ ಕೇಳಿದ, "ಈಗಷ್ಟೇ ನೀನು ನನಗೆ ನೀಡಿದ ವಿವರಣೆಯನ್ನು ನನ್ನ ಮುಖವನ್ನು ಒಂದು ನೂರು ಸಲ ನೋಡುವ ವರೆಗೆ ಬೇರೆ ಯಾರಿಗೂ ಹೇಳೋದಿಲ್ಲ ಎಂದು ನನಗೆ ಭಾಷೆ ಕೊಡುತ್ತೀಯಾ?” ಈಗ ರೈತನಿಗೆ ಗೊಂದಲವಾಯಿತು. ಆದರೂ ರೈತ ರಾಜನಿಗೆ ಹಾಗೆಯೇ ಭಾಷೆ ಕೊಟ್ಟ. ಅನಂತರ ರಾಜ ಕುದುರೆಯೇರಿ ಹೊರಟು ಹೋದ. ರೈತನು ತನ್ನ ಕೆಲಸ ಮುಂದುವರಿಸಿದ.
ರಾಜ ತನ್ನ ಆಸ್ಥಾನಕ್ಕೆ ಹಿಂತಿರುಗಿದ. ಎಲ್ಲ ಮಂತ್ರಿಗಳನ್ನು ವಿದ್ವಾಂಸರನ್ನೂ ಕರೆಯಿಸಿ, ಹೀಗೆಂದು ಘೋಷಿಸಿದ: "ಈಗ ನಾನು ನಿಮಗೊಂದು ಸಮಸ್ಯೆ ಹೇಳುತ್ತೇನೆ. ನೀವೆಲ್ಲರೂ ಚೆನ್ನಾಗಿ ಯೋಚಿಸಿ ನನಗೆ ಅದರೆ ಉತ್ತರ ತಿಳಿಸಬೇಕು. ಒಬ್ಬ ರೈತ ದಿನಕ್ಕೆ ನಾಲ್ಕು ನಾಣ್ಯ ಗಳಿಸುತ್ತಾನೆ. ಮೊದಲನೆಯ ನಾಣ್ಯ ತಿನ್ನುತ್ತಾನೆ. ಎರಡನೆಯ ನಾಣ್ಯ ಬಡ್ಡಿಯಾಗಿ ಕೊಡ್ತಾನೆ. ಮೂರನೆಯ ನಾಣ್ಯ ವಾಪಾಸು ಕೊಡ್ತಾನೆ ಮತ್ತು ನಾಲ್ಕನೆಯ ನಾಣ್ಯ ಎಸೆಯುತ್ತಾನೆ.”
ಇದನ್ನು ಕೇಳಿದಾಗ ಆಸ್ಥಾನದಲ್ಲಿ ಮೌನ ನೆಲೆಸಿತು. ಒಂದು ನಿಮಿಷದ ನಂತರ ರಾಜ ಕೇಳಿದ, "ಈಗ ಹೇಳಿ. ಈ ಸಮಸ್ಯೆಯ ಉತ್ತರವೇನು?” ಅಲ್ಲಿದ್ದ ಯಾರೊಬ್ಬರಿಗೂ ಉತ್ತರಿಸಲಾಗಲಿಲ್ಲ. ಅವರಲ್ಲೊಬ್ಬ ಕುಯುಕ್ತಿಯ ಮಂತ್ರಿ, ಸ್ವಲ್ಪ ಹೊತ್ತಿನಲ್ಲಿಯೇ ಹಿಂತಿರುಗುತ್ತೇನೆಂದು ಹೇಳಿ ಆಸ್ಥಾನದಿಂದ ಹೊರ ಬಂದ.
ಅವತ್ತು ರಾಜ ಒಬ್ಬ ರೈತನ ಜೊತೆ ಮಾತನಾಡುತ್ತಿದ್ದುದನ್ನು ಆ ಮಂತ್ರಿ ಕಂಡಿದ್ದ. ಆತ ಕುದುರೆಯ ಮೇಲೆ ವೇಗವಾಗಿ ಸವಾರಿ ಮಾಡಿ ಆ ರೈತನ ಬಳಿಗೆ ಬಂದ. ರಾಜ ಹೇಳಿದ ಸಮಸ್ಯೆಗೆ ಉತ್ತರವೇನೆಂದು ಮಂತ್ರಿ ಕೇಳಿದ. ರೈತ ಉತ್ತರ ಹೇಳಲು ನಿರಾಕರಿಸಿ ಕಾರಣ ತಿಳಿಸಿದ, “ರಾಜನ ಮುಖವನ್ನು ಒಂದು ನೂರು ಸಲ ನೋಡುವ ವರೆಗೆ ಇದರ ಉತ್ತರ ಬೇರೆ ಯಾರಿಗೂ ಹೇಳೋದಿಲ್ಲವೆಂದು ರಾಜನಿಗೆ ನಾನು ಭಾಷೆ ಕೊಟ್ಟಿದ್ದೇನೆ.”
ಆ ಮಂತ್ರಿ ತನ್ನ ಚೀಲದಿಂದ ಚಿನ್ನದ ನಾಣ್ಯಗಳನ್ನು ಹೊರ ತೆಗೆದ. ನಿಧಾನವಾಗಿ ಒಂದೊಂದೇ ನಾಣ್ಯವನ್ನು ತೆಗೆದು ಅದರಲ್ಲಿ ಠಂಕಿಸಲಾಗಿದ್ದ ರಾಜನ ಮುಖವನ್ನು ರೈತನಿಗೆ ತೋರಿಸಿದ. ಹಾಗೆ ಒಂದು ನೂರು ನಾಣ್ಯಗಳನ್ನು ನೋಡಿದ ನಂತರ ರೈತ ಹೇಳಿದ, “ನಾನೀಗ ರಾಜನ ಮುಖವನ್ನು ಒಂದು ನೂರು ಸಲ ನೋಡಿರುವ ಕಾರಣ ಸಮಸ್ಯೆಗೆ ಉತ್ತರ ಹೇಳಬಲ್ಲೆ.”
ಅನಂತರ ರೈತ ಸಮಸ್ಯೆಯ ವಿವರಣೆಯನ್ನು ಮಂತ್ರಿಗೆ ತಿಳಿಸಿದ. ಮಂತ್ರಿಗೆ ಮಹದಾನಂದವಾಯಿತು. ಆತ ರೈತನಿಗೆ ಆ ಒಂದು ನೂರು ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿ, ಅಲ್ಲಿಂದ ಆಸ್ಥಾನಕ್ಕೆ ದೌಡಾಯಿಸಿದ.
ರಾಜನ ಎದುರು ನಿಂತು ತಲೆಬಾಗಿದ ಆ ಮಂತ್ರಿ ಒಂದೇ ಉಸಿರಿನಲ್ಲಿ ಸಮಸ್ಯೆಯ ಉತ್ತರವನ್ನು ಹೇಳಿದ. ಅದನ್ನು ಕೇಳಿ ರಾಜನಿಗೆ ಅಸಮಾಧಾನವಾಯಿತು ಮತ್ತು ಕೋಪವೂ ಬಂತು. “ಈ ಉತ್ತರ ಒಬ್ಬನೇ ಒಬ್ಬನಿಗೆ ತಿಳಿದಿದೆ - ಈ ಸಮಸ್ಯೆ ಹೇಳಿದ ರೈತನಿಗೆ ಮಾತ್ರ. ಬೇರೆ ಯಾರಿಗೂ ಇದನ್ನು ಹೇಳೋದಿಲ್ಲವೆಂದು ಅವನು ಭಾಷೆ ಕೊಟ್ಟಿದ್ದಾನೆ” ಎಂದು ಯೋಚಿಸಿದ ರಾಜ.
ಆದ್ದರಿಂದ ರಾಜ ಆ ರೈತನನ್ನು ಆಸ್ಥಾನಕ್ಕೆ ಕರೆಯಿಸಿದ. ರಾಜನೆದುರು ಬಂದು ನಿಂತ ಬಡ ರೈತ, ಹೆದರಿಕೆಯಿಂದ ತಲೆಬಾಗಿದ. “ನೀನು ಹೇಳಿದ ಸಮಸ್ಯೆಯ ಉತ್ತರವನ್ನು ಯಾರಿಗೂ ತಿಳಿಸುವುದಿಲ್ಲ ಎಂದು ನೀನು ನನಗೆ ಭಾಷೆ ಕೊಟ್ಟಿದ್ದೆ, ಅಲ್ಲವೇ?" ಎಂದು ಕಠಿಣ ಧ್ವನಿಯಲ್ಲಿ ಕೇಳಿದ ರಾಜ. "ಹೌದು, ಮಹಾರಾಜಾ. ಆದರೆ ನಿಮ್ಮ ಮಂತ್ರಿ ನಿಮ್ಮ ಮುಖವನ್ನು ನನಗೆ ಒಂದು ನೂರು ಸಲ ತೋರಿಸಿದರು" ಎಂದು ಉತ್ತರಿಸಿದ ರೈತ. ಅನಂತರ, ತನ್ನ ಜೇಬಿನಿಂದ ಒಂದು ನೂರು ಚಿನ್ನದ ನಾಣ್ಯಗಳನ್ನು ತೆಗೆದು ರಾಜನಿಗೆ ತೋರಿಸಿದ ರೈತ.
ಮಹಾರಾಜ ಮೂಕವಿಸ್ಮಿತನಾದ. ಬಡರೈತನ ಜಾಣತನವನ್ನು ಮೆಚ್ಚಿಕೊಂಡು, ಅವನಿಗೆ ಇನ್ನಷ್ಟು ಇನಾಮ್ ಕೊಟ್ಟು ಕಳಿಸಿದ.