ಜಾತಿ ವ್ಯವಸ್ಥೆ ಎಲ್ಲಿದೆ? ಇಲ್ಲಿದೆ, ಇಲ್ಲಿದೆ!

ಜಾತಿ ವ್ಯವಸ್ಥೆ ಎಲ್ಲಿದೆ? ಇಲ್ಲಿದೆ, ಇಲ್ಲಿದೆ!

ಬರಹ

ಜಾತಿ ವ್ಯವಸ್ಥೆ ಎಲ್ಲಿದೆ? ಇಲ್ಲಿದೆ, ಇಲ್ಲಿದೆ!

ಭಾರತದ ಜಾತಿ ವ್ಯವಸ್ಥೆ ಕುರಿತಂತೆ ಪ್ರೊ|| ಎಸ್.ಎನ್.ಬಾಲಗಂಗಾಧರ ರಾವ್(ಅವರ ಅಭಿಮಾನಿಗಳ ಬಾಯಲ್ಲಿ ಬಾಲು) ಎನ್ನುವವರು ನಡೆಸಿರುವ ಸಂಶೋಧನೆ ಬಹಳ ಜನಕ್ಕೆ ತಿಳಿದಿರಲಾರದು. ಈ ಸಂಶೋಧನೆ ಅಂತಾರಾಷ್ಟ್ರೀಯ ಮಟ್ಟದ ಕೆಲವು ವಲಯಗಳಲ್ಲಿ, ವೇದಿಕೆಗಳಲ್ಲಿ ಮಾತ್ರ ಚರ್ಚೆಯಾಗುತ್ತಿರುವುದೂ ಇದಕ್ಕೆ ಕಾರಣವಾಗಿರುವುದು. ಭಾರತದ ’ಜಾತಿ ವ್ಯವಸ್ಥೆ’ ಎಂಬ ಕಲ್ಪನೆಯೇ ಪಾಶ್ಚಿಮಾತ್ಯ ಅಧ್ಯಯನಕಾರರು, ನಿರ್ದಿಷ್ಟವಾಗಿ ಕ್ರಿಶ್ಚಿಯನ್ ಮಿಷನರಿ ದೃಷ್ಟಿಕೋನ ಸೃಷ್ಟಿಸಿದ ಒಂದು ಕಲ್ಪನೆ ಎಂಬುದು ಇವರ ಮುಖ್ಯ ಸಂಶೋಧನೆ. ಹಿಂದೂ ಧರ್ಮವನ್ನು ಏಕ ದೇವ, ಏಕ ಪ್ರವಾದಿ, ಏಕ ಧರ್ಮಗ್ರಂಥ ಆಧಾರದ ಕ್ರಿಶ್ಚಿಯನ್ ಧರ್ಮದ ಮಾದರಿಯಲ್ಲಿ ಏಕರೂಪಿಯಾಗಿ ಗ್ರಹಿಸಿದ್ದರಿಂದಾಗಿ, ಜಾತಿಯನ್ನು ಹಿಂದೂ ಧರ್ಮದ ಒಂದು ’ವ್ಯವಸ್ಥೆ’ಯನ್ನಾಗಿ ಬಿಂಬಿಸಲಾಗಿದೆ ಎಂಬುದು ಇವರ ವಾದ. ಹೀಗಾಗಿ, ಭಾರತದಲ್ಲಿ ಜಾತಿ ಇದೆ ಮತ್ತು ಜಾತಿ ತಾರತಮ್ಯವೂ ಇದೆ; ಆದರೆ ಜಾತಿ ವ್ಯವಸ್ಥೆ ಎಂಬುದಿಲ್ಲ. ಏಕೆಂದರೆ, ಜಾತಿ ವ್ಯವಸ್ಥೆಯನ್ನು ಒಂದು ಅನನ್ಯ ಸಾಮಾಜಿಕ ವ್ಯವಸ್ಥೆಯಾಗಿ ಗುರುತಿಸಲು ಇಡೀ ಭಾರತಕ್ಕೆ ಅನ್ವಯವಾಗುವ ಸಾಮಾನ್ಯ ಚಿಹ್ನೆಯಿಲ್ಲ ಎಂಬುದು ಇವರು ಇದಕ್ಕೆ ನೀಡುವ ವಿವರಣೆ. ಇವರ ಈ ವಿವರಣೆಯಲ್ಲಿ ಅನೇಕ ತೊಂದರೆಗಳಿವೆ ಎಂಬುದು ನಿಜವಾದರೂ, ಇದು ಭಾರತೀಯ ಸಮಾಜದ ಇತಿಹಾಸದ ಬಗ್ಗೆ ಮರುನೋಟವೊಂದನ್ನು ಬೀರುವ ಪ್ರಯತ್ನ ಎಂಬ ದೃಷ್ಟಿಯಿಂದ ಗಮನಾರ್ಹವೇ.

ಬಾಲಗಂಗಾಧರರು ಮೂಲತಃ ಕರ್ನಾಟಕದವರು, ಕನ್ನಡಿಗರು. ೬೦-೭೦ರ ದಶಕದಲ್ಲಿ ಭಾರತದಲ್ಲಿದ್ದಾಗ ಇವರು ತೀವ್ರವಾದಿ ಕಮ್ಯುನಿಸ್ಟರಾಗಿದ್ದರಂತೆ. ಈಗ ಇವರು ಬೆಲ್ಜಿಯಂನಲ್ಲಿ ನೆಲೆಸಿದ್ದು, ಅಲ್ಲಿನ ಘೆಂಟ್ ವಿಶ್ವವಿದ್ಯಾಲಯದಲ್ಲಿ ತಮ್ಮ ಈ ಸಂಶೋಧನೆ ಕೈಗೊಂಡಿದ್ದಾರೆ ಮತ್ತು ಈ ಸಂಶೋಧನೆಯ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಬೇಕೆಂಬ ದೃಷ್ಟಿಯಿಂದ ಅನೇಕ ಅಂತಾರಾಷ್ಟ್ರೀಯ ಯೋಜನೆಗಳನ್ನೂ, ಕಾರ್ಯಕ್ರಮಗಳನ್ನೂ ಇವರು ರೂಪಿಸಿದ್ದಾರೆ. ಇಂತಹ ಒಂದು ಯೋಜನೆಯ ಅಡಿಯಲ್ಲಿ ನಮ್ಮ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರವೊಂದನ್ನು ಸ್ಥಾಪಿಸಿ, ಅವರೇ ಅದರ ಪ್ರಧಾನ ಪೋಷಕರೂ ಆಗಿದ್ದಾರೆ. ಇದಕ್ಕೆ ಈ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ|| ಜೆ.ಎಸ್.ಸದಾನಂದ ಸ್ಥಳೀಯ ಪೋಷಕರಾಗಿದ್ದರೆ, ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ|| ರಾಜಾರಾಮ ಹೆಗಡೆ ನಿರ್ದೇಶಕರಾಗಿದ್ದಾರೆ. ಇವರಿಬ್ಬರೂ ನಾನು ಬಹುವಾಗಿ ಗೌರವಿಸುವ ವಿದ್ವಾಂಸರೂ ಮತ್ತು ನನ್ನ ಆಪ್ತ ಗೆಳೆಯರೂ ಆಗಿರುವುದರಿಂದ, ಬಾಲಗಂಗಾಧರರ ವಿಚಾರಗಳ ಕುರಿತಂತೆ ಕಳೆದ ಎರಡು-ಮೂರು ವರ್ಷಗಳಲ್ಲಿ ನಮ್ಮ ನಡುವೆ ಅನೇಕ ಚರ್ಚೆಗಳಾಗಿವೆ. ಪತ್ರಿಕೆಗಳ ಮೂಲಕವೂ ಸಾಕಷ್ಟು ವಾದ-ವಿವಾದಗಳು ನಡೆದಿವೆ.

ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಾಮಾಜಿಕ ನ್ಯಾಯ ರಾಜಕಾರಣ ವಿಕ್ಷಿಪ್ತಗೊಳ್ಳುತ್ತಿರುವ ರೀತಿ-ನೀತಿಗಳ ಹಿನ್ನೆಲೆಯಲಿ, ಜಾತಿ ವ್ಯವಸ್ಥೆ ಕುರಿತ ಈವರೆಗಿನ ಸಂಕಥನದ ಬಗ್ಗೆ ನನ್ನಲ್ಲಿ ಕೆಲವು ಸಂದೇಹಗಳು ಹುಟ್ಟಿವೆ, ನಿಜ. ಆದರೆ, ಜಾತಿ ವ್ಯವಸ್ಥೆ ಎಂಬುದೇ ಇಲ್ಲ;ಅದು ಯಾರೋ ನಮ್ಮ ಮೇಲೆ ಹೇರಿದ ಕಲ್ಪನೆ ಎಂಬ ಸಾರಾ ಸಗಟು ತೀರ್ಮಾನ (ಇದನ್ನು ಈ ಗೆಳೆಯರು ತಮ್ಮ ಪ್ರಮೇಯದ ಊಹಾ ಪ್ರತಿಜ್ಞೆ - hypothesis - ಅಷ್ಟೆ ಎಂದು ಹೇಳುವರಾದರೂ, ತಮ್ಮ ಲೇಖನಗಳಲ್ಲಿ ಇದನ್ನು ತೀರ್ಮಾನದ ರೂಪದಲ್ಲೇ ’ಸಾಧಿಸಿ’ ತೋರಿಸುತ್ತಾರೆ!) ನನಗೆ ಒಂದು ಜಾಣ ಬೌದ್ಧಿಕ ವಾದದಂತೆ ಮಾತ್ರ ಕಾಣುತ್ತದೆ. ಮುಖ್ಯವಾಗಿ ಕ್ರಿಶ್ಚಿಯನ್ ಅಥವಾ ಯಾವುದೇ ಸೆಮೆಟಿಕ್ (ಮರಳುಗಾಡಿನ) ಧರ್ಮ ಏಕರೂಪಿಯಾಗಿದೆಯೆಂದು ಭಾವಿಸುವ ಮತ್ತು ಹಿಂದೂ ಧರ್ಮವನ್ನು ಏಕರೂಪಿ ಧರ್ಮವನ್ನಾಗಿ ಮಾಡುವ ಪ್ರಯತ್ನಗಳು ನಮ್ಮ ಇತಿಹಾಸದಲ್ಲಿ ನಿರಂತರವಾಗಿ - ಈಗಲೂ - ನಡೆದಿರುವ ಹಿನ್ನೆಲೆಯಲ್ಲಿ; ಇವರ ವಾದಕ್ಕೆ, ಇವರು ಬಹುವಾಗಿ ಎತ್ತಿ ಹಿಡಿಯುವ ’ವೈಜ್ಞಾನಿಕ’ ಆಧಾರಗಳೇನೂ ಇದ್ದಂತೆ ತೋರುವುದಿಲ್ಲ. ಇನ್ನೂ ಮುಖ್ಯವಾಗಿ, ಈ ಸಂಶೋಧನೆಯ ಕಾರಣ ಮತ್ತು ಉದ್ದೇಶವಾದರೂ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗದಾಗಿದೆ!

ಜಾತಿ ವ್ಯವಸ್ಥೆ ಎಂಬುದು ಒಂದು ಆರೋಪಿತ ಕಲ್ಪನೆಯಾಗಿರುವುದರಿಂದ, ಇದರಿಂದ ಪ್ರಭಾವಿತರಾಗಿರುವ ಭಾರತೀಯರಿಗೆ ತಮ್ಮದೇ ಆದ ನಿಜ ಅನುಭವವೆಂಬುದು ದಕ್ಕದಾಗಿದೆ ಎಂಬ ದೊಡ್ಡ ಮಾತುಗಳನ್ನು ಈ ಗೆಳೆಯರು ಆಡುವರಾದರೂ, ಇವರ ಸಂಶೋಧನೆಯ ರೀತಿ-ನೀತಿಗಳ ಬಗ್ಗೆಯೇ ಕರ್ನಾಟಕದ ವಿದ್ವದ್ವಲಯಗಳಲ್ಲಿ ಅನೇಕ ಅನೇಕ ಸಂದೇಹಗಳೂ, ಅಸಮಾಧಾನಗಳೂ ವ್ಯಕ್ತವಾಗಿವೆ. ಇದರಿಂದಾಗಿ ಇವರ ವಾದಗಳಿಗೆ ಸೂಕ್ತ ಉತ್ತರಗಳು ವಿದ್ವದ್ವಲಯದಲ್ಲಿ ವ್ಯವಸ್ಥಿತವಾಗಿ ಮಂಡಿತವಾಗಿಲ್ಲ. ಇವರ ವಾದ ಇವರೇ ಸೃಷ್ಟಿಸಿಕೊಂಡಿರುವ ಗೊಂದಲಗಳಿಂದಾಗಿ ಮೂಡಿರುವುದರಿಂದ, ಉತ್ತರಕ್ಕೆ ಅವು ಅರ್ಹವಲ್ಲ ಎಂಬುದು ಕೆಲವರ ಅಭಿಪ್ರಾಯವಾದರೆ; ಇವರ ಇಡೀ ಗುಂಪೇ ತಲೆ ಪ್ರತಿಷ್ಠೆಯದೂ, ಇವರ ನಾಯಕ ಬಾಲಗಂಗಾಧರರು ವಿಪರೀತ ದುರಹಂಕಾರಿಯೂ ಆಗಿರುವುದರಿಂದ ಇವರೊಂದಿಗೆ ವಾದ ಸಾಧ್ಯವಿಲ್ಲ ಎಂಬುದು ಇನ್ನು ಕೆಲವರ ಅಭಿಪ್ರಾಯ. ಹಿಂದೆ ನಡೆದ ಇಂತಹ ಚರ್ಚೆಗಳಲ್ಲಿ ಬಾಲಗಂಗಾಧರರು ತಮಗೆ ಅನಾನುಕೂಲವೆನಿಸಿದ ಸಂದರ್ಭ ಸೃಷ್ಟಿಯಾದಾಗಲೆಲ್ಲ ಎದುರಾಳಿಗಳ ಮೇಲೆ ಒರಟೊರಟಾಗಿ ಹರಿ ಹಾಯ್ದು, ಕೊನೆಗೆ ’ಹೊರಗೆ ಹಾಕಿ ಅವರನ್ನು’ ಎಂದು ತಮ್ಮ ಶಿಷ್ಯರಿಗೆ ಆದೇಶಿಸಿದ್ದೂ ಉಂಟು ಎಂದು ಡಾ|| ಯು.ಆರ್.ಅನಂತಮೂರ್ತಿ ಮತ್ತು ಡಾ||ರಾಜೇಂದ್ರ ಚೆನ್ನಿಯವರೂ ಸೇರಿದಂತೆ ಹಲವರು ನನ್ನ ಬಳಿ ಹೇಳಿದ್ದರು. ಆದರೆ ಸದಾನಂದ ಮತ್ತು ಹೆಗಡೆಯವರ ಉದಾರವಾದಿ ವರ್ತನೆಗಳ ಹಿನ್ನೆಲೆಯಲ್ಲಿ ನಾನದನ್ನು ಪೂರ್ಣವಾಗಿ ನಂಬದಾಗಿದ್ದೆ.

ಹೀಗಾಗಿ, ಇದೇ ಜನವರಿ ೧೮ ಹಾಗೂ ೧೯ರಂದು ಕುವೆಂಪು ವಿಶ್ವವಿದ್ಯಾಲಯದ ಪಿ.ವೆಂಕಟರಾಮಯ್ಯ ಸಭಾ ಭವನದಲ್ಲಿ ಈ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಭಾರತದ ರಾಜಕೀಯ ಚಿಂತಕರನ್ನು ಕುರಿತಂತೆ ಏರ್ಪಡಿಸಿದ್ದ ವಿಚಾರ ಸಂಕಿರಣಕ್ಕೆ ಆಹ್ವಾನ ಬಂದಾಗ, ನಾನು ಹೋಗಬೇಕೋ ಬೇಡವೋ ಎಂಬ ಗೊಂದಲಕ್ಕೆ ಬಿದ್ದೆ. ಘೆಂಟ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಏರ್ಪಾಡಾಗಿದ್ದ ಈ ಸಮ್ಮೇಳನಕ್ಕೆ ಬಾಲಗಂಗಾಧರರೂ ಬರುವವರಿದ್ದರಿಂದಾಗಿ, ಅವರನ್ನೂ ಮುಖತಃ ನೋಡಿದಂತಾಯಿತು ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳು ಹೇಗಿರುತ್ತವೆ ಹಾಗೂ ಯಾವ ಮಟ್ಟದ ಚರ್ಚೆ ನಡೆಯುತ್ತವೆ ಎಂಬುದು ತಿಳಿದಂತೆಯೂ ಆಯಿತು ಎಂದು ನಾನು ಒಂದು ದಿನದ ಮಟ್ಟಿಗೆ - ೧೯ರಂದು - ವಿಚಾರ ಸಂಕಿರಣಕ್ಕೆ ಹೋದೆ. ಅಂದು ಗಾಂಧಿ, ತಿಲಕ್, ಲೋಹಿಯಾ, ಗೋಲ್ವಾಲ್ಕರ್ ಮತ್ತು ಧರ್ಮಪಾಲ್‌ರ ಬಗ್ಗೆ ಒಟ್ಟು ಎಂಟು ಜನ ಉಪನ್ಯಾಸಗಳನ್ನು ನೀಡಿದರು! ಒಂದಿಷ್ಟು ಚರ್ಚೆಯೂ ನಡೆಯಿತು. ಬಾಲಗಂಗಾಧರರು ತಮಗೆ ಬಿಜೆಪಿ - ಆರ್.ಎಸ್.ಎಸ್. ಬಗ್ಗೆ ಏನೂ ಗೊತ್ತಿಲ್ಲವೆಂದು ಹೇಳುತ್ತಲೇ, ಗೋಲ್ವಾಲ್ಕರರ ವಿಚಾರಗಳ ಬಗ್ಗೆ ಪ್ರಶ್ನೆ ಎತ್ತಿದ ಇತಿಹಾಸದ ಪ್ರಾಧ್ಯಾಪಕರೊಬ್ಬರ ಮೇಲೆ, ಅವರು ಪ್ರಶ್ನೆ ಎತ್ತಿರುವ ರೀತಿ ಸರಿಯಿಲ್ಲವೆಂದು ಅವಮಾನಕರ ರೀತಿಯಲ್ಲಿ ಹರಿಹಾಯ್ದು ಅವರ ಬಾಯಿ ಮುಚ್ಚಿಸಿದ್ದೂ ನಡೆಯಿತು!

ಇದಾವುದರಲ್ಲೂ ಅಂತಾರಾಷ್ಟ್ರೀಯ ಎನ್ನುವುದು ಏನೂ ಇರಲಿಲ್ಲ. ಎಲ್ಲ ನಮ್ಮ ವಿಚಾರ ಸಂಕಿರಣಗಳಂತೆಯೇ ಸಾಮಾನ್ಯ, ಅತಿ ಸಾಮಾನ್ಯ. ಆದರೆ ಈ ವಿಚಾರ ಸಂಕಿರಣದ ಕೊನೆಯಲ್ಲಿ ಬಾಲಗಂಗಾಧರರೊಂದಿಗೆ ಆಕಸ್ಮಿಕವೆಂಬಂತೆ ನಡೆದ ನನ್ನ ಸಂಕ್ಷಿಪ್ತ ಮುಖಾಮುಖಿ ಅವರ ಈ ಇಡೀ ಚಟುವಟಿಕೆಗಳ ಮೇಲೆ ವಿಶೇಷ ಬೆಳಕು ಚೆಲ್ಲುವಂತಿತ್ತು! ಎಷ್ಟರ ಮಟ್ಟಿಗೆ ಎಂದರೆ, ಈ ಹಿಂದೆ ನನ್ನ ಕೆಲವು ಗೆಳೆಯರು ಇವರ ಬಗ್ಗೆ ಹೇಳಿದ್ದಾಗ ಯಾವುದನ್ನು ನಾನು ನಂಬದಾಗಿದ್ದೆನೋ ಅದೇ, ಹಾಗೇ ನಡೆದು ಹೋಯಿತು. ೧೯ರಂದು ವಿಚಾರ ಸಂಕಿರಣ ಮುಕ್ತಾಯವಾದ ಮೇಲೆ ಎಲ್ಲರೂ ಸಭಾ ಭವನದ ಹೊರಕ್ಕೆ ಬಂದಾಗ, ಅಕಸ್ಮತ್ತಾಗಿ ಅವರು ಬಹು ಹತ್ತಿರದಲ್ಲಿ ನನಗೆ ಎದುರಾದಾಗ ನಾನು ಬಹು ಗೌರವದಿಂದಲೇ ನಮಸ್ಕರಿಸಿ ನನ್ನ ಹೆಸರು ಹೇಳಿದೆ. ಅವರೂ ವಿಶ್ವಾಸದಿಂದ ಕೈ ನೀಡಿ ಪ್ರತಿಸ್ಪಂದಿಸಿದಾಗ, ಜಾತಿ ಪದ್ಧತಿ ಬಗೆಗಿನ ಅವರ ಸಂಶೋಧನೆಗಳನ್ನು ಕುರಿತ ನನ್ನ ಸಂದೇಹಗಳನ್ನು ಅವರ ಮುಂದಿಡಬಹುದಲ್ಲವೇ ಎಂಬ ಯೋಚನೆಯೂ ಬಂತು. ಅಂದಿನ ಮಧ್ಯಾಹ್ನದ ಊಟದ ವೇಳೆಯಲ್ಲಿ ತೀರ್ಥಹಳ್ಳಿಯ ಗೆಳೆಯ ಶ್ರೀಧರ್ ಅವರು, ನಿಮ್ಮ ಲೇಖನಗಳ ಕೇಂದ್ರ ಪ್ರಶ್ನೆಯನ್ನು ಈಗ ಅವರನ್ನೇ ಕೇಳಿ, ಒಳ್ಳೆಯ ಚರ್ಚೆಯಾಗಬಹುದು ಎಂದು ಒತ್ತಾಯಪೂರ್ವಕವಾಗಿ ನನಗೆ ಸೂಚಿಸಿದ್ದರು. ಆದರೆ ಈ ಸೂಚನೆಯನ್ನು ಆಗ ದೊಡ್ಡ ಮನುಷ್ಯರ ವೈಯುಕ್ತಿಕ ಸಹವಾಸ ಬೇಡವೆಂದು ತಿರಸ್ಕರಿಸಿದ್ದೆನಾದರೂ, ಈಗ ಅವರ ವಿಶ್ವಾಸದ ಪ್ರತಿಸ್ಪಂದನದ ಸಂದರ್ಭದಲ್ಲಿ ಅದನ್ನು ಕೇಳಿಯೇ ಬಿಡುವ ಉಮೇದು ಉಂಟಾಯಿತು.

ಹೀಗಾಗಿ, ನಾನು ಬಾಲಗಂಗಾಧರರಿಗೆ ನನ್ನ ( ’ಸಂವಾದ’ ಮಾಸಿಕದಲ್ಲಿ ಪ್ರಕಟವಾಗಿದ್ದ) ಲೇಖನದಲ್ಲಿದ್ದ ನನ್ನ ಮುಖ್ಯ ಪ್ರಶ್ನೆಯನ್ನು ಯಾರೋ - ಬಹುಶಃ ಕಣ್ಣನ್ ಎಂಬುವವರು - ಅಂತರ್ಜಾಲಕ್ಕೆ ಹಾಕಿದುದನ್ನೂ, ಅದಕ್ಕೆ ಅವರು ಪ್ರಶ್ನೆಯೇ ಅರ್ಥವಾಗಿಲ್ಲ ಎಂದು ಉತ್ತರಿಸಿದುದನ್ನೂ ಸಂಕ್ಷಿಪ್ತವಾಗಿ ನೆನಪಿಸಿದೆ. ಅದು ಕೂಡಲೇ ಅವರ ನೆನಪಿಗೂ ಬಂದು, ಸಾಕಷ್ಟು ಉತ್ಸಾಹದಿಂದಲೇ ನನ್ನನ್ನು ಒಂದು ಪಕ್ಕಕ್ಕೆ ಕರೆದು ಕುರ್ಚಿಯೊಂದನ್ನು ಎಳೆದು ಕೂತು, ಈಗ ನಿಮ್ಮ ಪ್ರಶ್ನೆಯನ್ನು ನನಗೆ ವಿವರಿಸಿ ಎಂದರು. ಸರಳ ಕನ್ನಡದಲ್ಲಿದ್ದ ಎರಡು ವಾಕ್ಯಗಳ ನನ್ನ ಪ್ರಶ್ನೆಯನ್ನು ಇಂಗ್ಲಿಷಿಗೆ ಅನುವಾದಿಸಿ ಅವರಿಗೆ ತಲುಪಿಸಲು ಅವರ ಅನುಯಾಯಿಗಳೋ, ಅಭಿಮಾನಿಗಳೋ ಪಟ್ಟಿರುವ ಕಷ್ಟದ ಬಗ್ಗೆ; ಆದರೂ ಅದು ಅವರಿಗೆ ಅರ್ಥವಾಗದಂತಿರುವುದರ ಬಗ್ಗೆ ನನ್ನ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ, ನನ್ನ ಪ್ರಶ್ನೆಯನ್ನು ಮತ್ತೆ ಅವರ ಮುಂದಿಟ್ಟೆ. ಅಲ್ಲಿಂದ ಮುಂದೆ ಕನ್ನಡದಲ್ಲೇ ನಮ್ಮಿಬ್ಬರ ನಡುವೆ ಸಂಭಾಷಣೆ ಹೀಗಿದೆ:

ನಾನು: ನನ್ನ ಪ್ರಶ್ನೆ ಇಷ್ಟೆ. ನೀವು ಜಾತಿ ಇದೆ ಎನ್ನುವುದನ್ನು ಒಪ್ಪುತ್ತೀರಿ. ಜಾತಿ ತಾರತಮ್ಯವಿದೆ ಎನ್ನುವುದನ್ನೂ ಒಪ್ಪುತ್ತೀರಿ. ಆದರೆ ಈ ತಾರತಮ್ಯ ಯಾವುದರಿಂದ ಸೃಷ್ಟಿಯಾಗುತ್ತಿದೆ? ಅದಕ್ಕೊಂದು ಕಾರಣ ಮತ್ತು ಆ ಕಾರಣ ಕಾರ್ಯರೂಪಕ್ಕೆ ಬರಲು ಒಂದು mechanism ಇರಲೇ ಬೇಕಲ್ಲವೆ?

ಬಾಲ ಗಂಗಾಧರ: ಹಾಂ! ಅದನ್ನೇ ನಾವು ನಮ್ಮ ಸಂಶೋಧನೆಯ ಮೂಲಕ ಹುಡುಕುತ್ತಿರುವುದು.

ನಾ: ಈಗಾಗಲೇ ಇಲ್ಲ ಎಂದು ನೀವೇ ಹೇಳುತ್ತಿರುವುದನ್ನು ಹುಡುಕುತ್ತಿದ್ದೇವೆ ಎಂದರೆ ಏನರ್ಥ?

ಬಾ: Caste ಅನ್ನುವುದು ಒಂದು System ರೂಪದಲ್ಲಿ ಇಲ್ಲ ಎಂದು ನಾವು ಹೇಳುತ್ತಿರುವುದು.

ನಾ: ನೀವು ಭಾರತದ ಜಾತಿ ಪದ್ಧತಿ ಎಂಬುದನ್ನು caste system ಎಂದು ಇಂಗ್ಲಿಷ್‌ಗೆ ಅನುವಾದಿಸಿಕೊಂಡು, system ಎಂಬುದಕ್ಕೆ ಇಂಗ್ಲಿಷ್ ಸಂದರ್ಭದಲ್ಲಿ ಇರುವ ಅರ್ಥವನ್ನು ಅದಕ್ಕೆ ಆರೋಪಿಸಿಕೊಂಡಿದ್ದೀರಿ. ಹಾಗಾಗಿ, ಅದೆಲ್ಲ ಜಾತಿಗೆ ಸಂಬಂಧಿಸಿದಂತೆ ಇಲ್ಲ ಎನ್ನುತ್ತಿದ್ದೀರಿ ಎಂದು ಕಾಣುತ್ತದೆ. ಅದರಿಂದ ಏನು ಪ್ರಯೋಜನ ? ವಾಸ್ತವವಾಗಿ ಇಲ್ಲಿರುವುದು ಜಾತಿ ಪದ್ಧತಿ ಅಲ್ವಾ? ಅದನ್ನಾದರೂ ಒಪ್ಪಿಕೊಳ್ಳುತ್ತೀರಾ?

ಬಾ: ಓ! ಹಾಗಾದರೆ ಪದ್ಧತಿ ಎಂದರೇನು?

ನಾ: ಪದ್ಧತಿ ಅಂದರೆ, ಪದ-ಹತಿ. ಹೆಜ್ಜೆಗಳನ್ನಿಟ್ಟು ಆದ ದಾರಿ. ನನ್ನ ತಂದೆ ಆಚರಿಸಿದ್ದನ್ನು ನಾನು ಆಚರಿಸುವುದು. ಅದನ್ನು ನನ್ನ ಮಗ ಆಚರಿಸುವುದು. ಹಿಂದಿನ ತಲೆಮಾರು ಆಚರಿಸಿದ್ದನ್ನು ಮುಂದಿನ ತಲೆಮಾರು ಆಚರಿಸುವುದು.

ಬಾ: ಜಾತಿ ಪದ್ಧತಿಗೆ ಇದು ಅನ್ವಯಿಸುವುದಿಲ್ಲವಲ್ಲ? ಜಾತಿ ಪದ್ಧತಿಗೆ ಆಚರಣೆಯ ಸಾಮಾನ್ಯ ನಿಯಮಾವಳಿ ಎಂಬುದೆಲ್ಲಿದೆ ತೋರಿಸಿ.

ನಾ: ನೀವು ಯಾವ ಮಟ್ಟದ ಸಾಮಾನ್ಯ ನಿಯಮಾವಳಿ ಬಗ್ಗೆ ಮಾತಾಡುತ್ತೀದ್ದೀರೋ ತಿಳಿಯದು. System ಎಂಬ ನಿಮ್ಮ ಕಲ್ಪನೆಗನುಸಾರವಾದ ಸಾಮಾನ್ಯ ನಿಯಮಾವಳಿ ಇಲ್ಲದಿರಬಹುದು. ಆದರೆ ಜಾತಿ ಪದ್ಧತಿ, ಇತಿಹಾಸದಲ್ಲಿ ಕಾಲ-ದೇಶ-ರಾಜಕಾರಣಕ್ಕೆ ಅನುಸಾರವಾಗಿ ಹಲವು ರೂಪಗಳನ್ನು ಪಡೆದು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಕೆಲಸ ಮಾಡುತ್ತಿದೆ. ಭಾರತದಾದ್ಯಂತ ಜಾತಿ ಪದ್ಧತಿಗೆ ಒಂದೇ ನಿಯಮಾವಳಿ ಇದೆ ಎಂದು ಯಾರೂ ಹೇಳುತ್ತಿಲ್ಲ.

ಬಾ: ಹಾಗಾದರೆ ಅದನ್ನು ಪದ್ಧತಿ ಅಂತಲಾದರೂ ಹೇಗೇ ಕರೀತೀರಿ?

ನಾ: ನಿಮ್ಮಲ್ಲಿ ಭಾರತ ಎನ್ನುವುದು ಒಂದು ಸ್ಥಿರ ಕಲ್ಪನೆ ಆದಾಗ ಇಂತಹ ಪ್ರಶ್ನೆಗಳು ಹುಟ್ಟುತ್ತವೆ. ಜಾತಿ ಅನ್ನುವುದು ಒಂದು ನಿರಂತರ ಆಚರಣೆಯಾಗಿ ಇಲ್ಲಿಯವರೆಗೆ ಮುಂದುವರೆದು ಬಂದಿದೆ ಎನ್ನುವ ಅರ್ಥದಲ್ಲಿ ಅದು ಪದ್ಧತಿ. ಅದು ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ ರೂಪಾಂತರವಾಗಿರಬಹುದು.

ಬಾ: ಹಾಗಾದರೆ, ಒಂದೇ ಪ್ರದೇಶದಲ್ಲಿ ಹಲವು ಜಾತಿಗಳು ಒಂದೇ ರೀತಿಯ ಆಚರಣೆಗಳನ್ನು ಮಾಡುತ್ತಾರಲ್ಲ? ಅದನ್ನು ಹೇಗೆ ವಿವರಿಸ್ತೀರಾ? ಉತ್ತರ ಕರ್ನಾಟಕ್ಕೆ ಹೋಗಿ. ಅಲ್ಲಿ ಎಲ್ಲ ಜಾತಿಯವರೂ ಗಣಪತಿ ಪೂಜೆ ಮಾಡ್ತಾರೆ! ನಿಮಗಿದು ಗೊತ್ತ?

ನಾ: ಮಾಡಬಹುದೇನೋ. ಅದರೆ ಅದಕ್ಕೂ ಜಾತಿ ಪದ್ಧತಿಯ ಆಚರಣೆಗೂ ಏನು ಸಂಬಂಧ?

ಬಾ: ಹಾಗಾದರೆ ಜಾತಿ ಎಂದರೆ ನಿಮ್ಮ ಪ್ರಕಾರ ಏನು?

ನಾ: ಹುಟ್ಟಿನಿಂದ ಕಸುಬು ಮತ್ತು ಸಾಮಾಜಿಕ ಸ್ಥಾನಮಾನಗಳ ನಿರ್ಧಾರ. ಅಂತಹ ಪದ್ಧತಿಯಿಂದ ಆದ ಸಾಮಾಜಿಕ ಅನಾಹುತಗಳು, ಸಮಾಜದ ಅಸಹಜ, ಅನ್ಯಾಯದ ವಿಭಾಗೀಕರಣ... ಕೆಲವರ ಕೈಯಲ್ಲೇ ಕೆಲವು ಅಧಿಕಾರಗಳು.... ಒಂದು ರೀತಿಯ heirarchy....

ಬಾ: ಯಾವ heirarchyರೀ? ಎಲ್ಲಿದೆ ಅದು ತೋರಿಸಿ ಮೊದಲು...

ನಾ: ಅದೆಲ್ಲ ಇಲ್ಲ ಅಂತ ನೀವು ತೀರ್ಮಾನಿಸಿಕೊಂಡು, ನೋಡೋಕ್ಕೇ ತಯಾರಿಲ್ಲದಿದ್ದರೆ ನಾವು ತೋರಿಸೋದಾದ್ರೂ ಹ್ಯಾಗೆ? ಜಾತಿಪದ್ಧತಿನೇ heirarchy... ಓದು-ಬರಹ-ಅಧ್ಯಯನ ಇಂತಹವರಿಗಷ್ಟೇ ಮೀಸಲು... ಮತ್ತೊಂದು ಮತ್ತೊಬ್ಬರಿಗೆ ಮೀಸಲು..... ಬೇರೆಯವರು ಅದನ್ನು ಮಾಡುವಂತಿಲ್ಲ ಅನ್ನೋ ವಿಧಿ-ನಿಷೇಧಗಳು... ಇದರ ಪರಿಣಾಮ ಏನಾಯ್ತು? ಕೆಲವರು ಶ್ರೇಷ್ಠರು ಅನ್ನಿಸಿಕೊಂಡ್ರು... ಇನ್ನು ಕೆಲವರು ಕೀಳು ಅನ್ನಿಸಿಕೊಂಡ್ರು... ಇದರಿಂದ ಅನೇಕ ತಾರತಮ್ಯಗಳು ಶುರುವಾದ್ವು.... ಹಾಗಾಗಿ ಇದೊಂದು ನಿಮ್ಮ ಅರ್ಥದಲ್ಲಲ್ಲದಿದ್ರೂ, ಸಾಮಾನ್ಯ ಅರ್ಥದಲ್ಲಿ ಒಂದು ವ್ಯವಸ್ಥೆಯಾಗಿಯೇ ಕೆಲಸ ಮಾಡಿದೆ ಅನ್ಸುತ್ತೆ.

ಬಾ: ಸುಮ್ಮನೆ ಮಾತಾಡಬೇಡಿ.....ಇದಕ್ಕೆಲ್ಲಿದೆ ಸಾಬೀತು? ಏನು ಮಾಹಿತಿ, ಸಂಶೋಧನೆ ಇದೆ ನಿಮ್ಮತ್ರ ಈ ಬಗ್ಗೆ? ಕೇಳಿ ಇಲ್ಲಿ, ಲೆಕ್ಕ ಯಾರಿಗೆ ಬೇಕಿತ್ತು? ವೈಶ್ಯರಿಗಲ್ವ? ಅವರು ವಿದ್ಯೆ ಕಲೀದೆ ಲೆಕ್ಕ ಬಂತಾ ಅವರಿಗೆ?

ನಾ: ನೋಡಿ, ಈ ಲೆಕ್ಕ-ಪಕ್ಕಕ್ಕೆ ಸಂಬಂಧಿಸಿದ ವಿದ್ಯೆ ಬಗ್ಗೆ ಅಲ್ಲ ನಾನು ಮಾತನಾಡ್ತಿರೋದು. ಧಾರ್ಮಿಕ ಅಧ್ಯಯನ, ಧಾರ್ಮಿಕ ಕಾನೂನು, ನಿಯಮಗಳ ರಚನೆಯ ವಿಷಯ ನಾನು ಮಾತನಾಡ್ತಿರೋದು. ಅಲ್ಲೇ ತಾನೇ ಯಜಮಾನಿಕೆ, ಅಧಿಕಾರ, ಶ್ರೇಷ್ಠತೆಗಳ ಪ್ರಶ್ನೆಗಳು ಹುಟ್ಟೋದು?

ಬಾ: ಏನೂ ಅಧ್ಯಯನ ಮಾಡದೆ ಸುಮ್ಮನೆ ಮಾತನಾಡಬೇಡಿ. ಧರ್ಮಪಾಲರ ’ದಿ ಬ್ಯೂಟಿಫುಲ್ ಟ್ರೀ’ ಓದಿ. ೧೮-೧೯ನೇ ಶತಮಾನದಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿದ್ದ ಶಾಲೆಗಳಲ್ಲಿ ಎಷ್ಟು ಜನ ಬ್ರಾಹ್ಮಣರಿದ್ದರು, ಎಷ್ಟು ಜನ ಇತರ ಜಾತಿಯವರಿದ್ದರು ಅನ್ನೋದು ಅದರಲ್ಲಿ ಇದೆ. ಅದನ್ನು ಓದಿಕೊಂಡು ಮಾತಾಡಿ.

ನಾ: ನಾನೂ ಅದನ್ನು ಓದಿದ್ದೇನೆ. ಆದರೆ ನಾನು ಮಾತನಾಡ್ತಿರೋದು ಹೊಸ ಕಾಲದ ಶಾಲೆಗಳಲ್ಲಿನ General education ಬಗ್ಗೆ ಅಲ್ಲ. ಆ ತರದ education ಎಲ್ಲರಿಗೂ ಸಾಧ್ಯವಾಗಿದ್ದಕ್ಕೇ ನಾನು ಇವೊತ್ತು ನಿಮ್ಮತ್ರ ಹೀಗೆ ಮಾತಾಡೋಕೆ ಸಾಧ್ಯವಾಗಿರೋದು...

ಬಾ: ಆಯ್ತು ಸ್ವಾಮೀ, ಎಲ್ಲ ತಿಳ್ಕೊಂಡಿದ್ದೀರಲ್ಲ... ನೀವಿನ್ನು ಎದ್ದು ಹೋಗಬಹುದು ಇಲ್ಲಿಂದ.... ನಾನೇನೂ ನಿಮ್ಮನ್ನ ಕರೀಲಿಲ್ಲ ನನ್ನತ್ರ ಬಂದು ಮಾತಾಡೀ ಅಂತ... ಅಥವಾ ನನ್ನ ವಿಚಾರಗಳನ್ನ ಒಪ್ಪಿಕೊಳ್ಳೀಂತ ನಿಮ್ಮತ್ರ ಬಂದು ಬೇಡಿಕೊಳ್ಳಲಿಲ್ವಲ್ಲ... ಏಳಿ ಸ್ವಾಮಿ... ಏಳಿ ಸಾಕು...

ನಾ: ಅಲ್ಲಾ ಸ್ವಾಮೀ, ಸಮಾಜಕ್ಕೆ ಸಂಬಂಧಿಸಿದಂತೆ ನಾವು ಮಾಡಿರೋ ಹೊಸ ಸಂಶೋಧನೆ ನೋಡಿ ಅಂತ ನೀವು ಎಲ್ಲ ಕಡೆ ಪ್ರಚಾರ ಮಾಡಬಹುದು, ಕೇಂದ್ರಗಳನ್ನ ಸ್ಥಾಪಿಸಬಹುದು, ವಿಚಾರ ಸಂಕಿರಣ-ಸಮ್ಮೇಳನಗಳನ್ನ ಏರ್ಪಡಿಸಬಹುದು... ಸಾರ್ವಜನಿಕರ ಹಣ ಖರ್ಚು ಮಾಡಬಹುದು... ಆದರೆ ಸಮಾಜ ಅದಕ್ಕೆ ಪ್ರತಿಕ್ರಿಯಿಸಬಾರದು, ಪ್ರಶ್ನೆ ಕೇಳಬಾರದು, ಅಲ್ವಾ?

ಬಾ: ರೀ ಪ್ರಶ್ನೆ ಕೇಳೋ ಮೊದಲು ಸಂಶೋಧನೆ ಅಂದ್ರೇನು ತಿಳ್ಕೊಳ್ರೀ... ಅದಕ್ಕೂ ಮೊದಲು ಅದಕ್ಕೊಂದು scientific way ಅಂತಾ ಇದೇಂತ ತಿಳ್ಕೋಳ್ರೀ... Science ಅಂದ್ರೆ ಏನೂಂತ ಗೊತ್ತೇನ್ರಿ ನಿಮಗೆ?

ನಾ: ಸ್ವಾಮಿ ಅದನ್ನೆಲ್ಲ ನನಗೆ ಹೇಳಬೇಡಿ. ನಾನು ವಿಜ್ಞಾನದ ವಿದ್ಯಾರ್ಥಿನೇ... I hold a Masters degree in Mathematics.

ಬಾ: ಏ ಹೋಗ್ರೀ ಬಹಳ ಜನ ನೋಡಿದ್ದೀನಿ ಈ ತರ ಮೂರು ಕಾಸಿನ ಡಿಗ್ರೀಗಳನ್ನು ತಗೊಂಡವರನ್ನ...

ನಾ: ಅಯ್ಯೋ ಹೋಗ್ರೀ ನಾನೂ ನೋಡಿದ್ದೀನೀ ನಿಮ್ಮ ಥರ ತರಕಲಾಂಡಿ ಸಂಶೋಧನೆ ಮಾಡಿರೋ ಬಹಳ ಜನರನ್ನ... ಅದೇನೋ ನಿನ್ನೆ ಅಂಬೇಡ್ಕರ್ ಬಗ್ಗೆ ಮಾತಾಡ್ತಾ, ಮೀಸಲಾತಿ ಅದಕ್ಷತೆಯನ್ನ ಸೃಷ್ಟಿಸಿದೆ ಅನ್ನೋ ನಿಮ್ಮ ಸಂಶೋಧನೆಗೆ ಆಧಾರವಾಗಿ; ಎಲ್ಲ ಒಳ್ಳೆಯ ವಿಚಾರಗಳೂ ಸಮಾಜದಲ್ಲಿ ಒಳ್ಳೆಯ ಪರಿಣಾಮಗಳನ್ನೇನೂ ಉಂಟುಮಾಡೋದಿಲ್ಲ; ಹಾಗೇ ಎಲ್ಲ ಕೆಟ್ಟ ವಿಚಾರಗಳೂ ಕೆಟ್ಟ ಪರಿಣಾಮಗಳನ್ನೇನೂ ಉಂಟು ಮಾಡೋದಿಲ್ಲ ಅನ್ನೋ ಪ್ರಮೇಯವನ್ನ ಮಂಡಿಸಿದಿರಂತಲ್ಲ... ಇಂತಹ ಇನ್ನಷ್ಟು ಅದ್ಭುತ ಸಂಶೋಧನೆಗಳನ್ನು ಮಾಡಿ ಪ್ರಚಾರ ಮಾಡಿಬಿಟ್ಟರೆ ಜಗತ್ತು ಬಹು ಬೇಗ ಉದ್ಧಾರವಾಗಿ ಬಿಡುತ್ತೆ ಬಿಡಿ...

ಬಾ: ಯಾರ್ರೀ ನಿಮ್ಮನ್ನ ಇಲ್ಲಿಗೆ ಕರೆದಿದ್ದು? ನಡೀರಿ ಇಲ್ಲಿಂದ...

ನಾ: ರೀ ಸ್ವಾಮೀ, I have come here on an Invitation from your Centre... Have some manners...

ಬಾ: ಆಯ್ತು, ಮೊದಲು ಆಚೆಗೆ ನಡೀರಿ ಇಲ್ಲಿಂದ...

ನಾ: ಏನು ಮಾತಾಡ್ತಿದ್ದೀರಿ ನೀವು? ಕುವೆಂಪು ಯೂನಿವರ್ಸಿಟಿ ಕ್ಯಾಂಪಸ್ ನಿಮ್ಮ ತಾತನ ಮನೆ ಆಸ್ತಿ ಅಲ್ಲ, ಹೀಗೆಲ್ಲ order ಮಾಡೋಕೆ.... ನಿಮ್ಮನ್ನು ನೋಡಿ ನನಗೆ ಜಾತಿ ಪದ್ಧತಿ ಅಲ್ಲ, ಜಾತಿ ವ್ಯವಸ್ಥೆ ಅನ್ನೋದೇ ಇದೆ; ಅದು ನಾವು ತಿಳಿದುಕೊಂಡಿದ್ದಕ್ಕಿಂತ dirty and dangerous ಆಗಿದೆ ಅನ್ನೋದು confirm ಆಗ್ತಾ ಇದೆ...

ಬಾ (ಹೊರಟ ನನ್ನತ್ತ ಕೈ ತೋರಿಸಿ ಕಿರುಚುತ್ತಾ): Send him out! ಹೊರಗೆ ಹಾಕ್ರೀ ಅವನನ್ನ...

ನಾ (ಎಲ್ಲರೂ ಗಾಬರಿಯಿಂದ ಸುಮ್ಮನೆ ನೋಡುತ್ತಿದ್ದಂತೆ, ಕಾರು ಹತ್ತುತ್ತಾ): ಏ ಹೋಗಯ್ಯಾ ........ ಕುವೆಂಪು ಯೂನಿವರ್ಸಿಟೀನ ಪೂರ್ತಿ ಕೊಂಡುಕೊಂಡ ಮೇಲೆ ಹೀಗೆ order ಮಾಡು... ಆಗ ಯಾರಾದರೂ ನಿನ್ನ ಮಾತು ಕೇಳಬಹುದು....

* * *

ಇವರ ಸಂಶೋಧನೆಗಳ ಬಗ್ಗೆ ಸದ್ಯಕ್ಕೆ, ಇನ್ನು ಯಾವ ವ್ಯಾಖ್ಯಾನವೂ ಬೇಡವೆಂದು ಕಾಣುತ್ತದೆ!