ಜಾಲಬಂಧ
ಆರ್ಯ ಕಣ್ಣು ತೆರೆದು ಸುತ್ತಾ ಮುತ್ತಾ ನೋಡಿದ. ಒಂದು ವಿಶಾಲವಾದ ಕೋಣೆಯ ಬೃಹದಾಕಾರ ರಾಜಹಾಸಿಗೆಯ ಮೇಲೆ ಮಲಗಿದ್ದ. ಕೋಣೆಯಲ್ಲಿ ಫಳಫಳ ಹೊಳೆಯುವಂತಹ ಸ್ವಚ್ಛ ವಾತಾವರಣ. ನೆಲದ ಕಾರ್ಪೆಟ್ ಮೇಲೆ ಕಾಲು ಇಳಿಸಿ, ಎದ್ದು ನಿಂತು, ಕಿಟಕಿಯ ಹೊರಗೆ ನೋಡಿದ. ಕಾಣಿಸಿದ್ದು ಒಂದು ಪುಟ್ಟ ರಸ್ತೆ, ಒಂದು ಬೀದಿ ದೀಪ, ಅದರಾಚೆಗೆ ಕಾಡು. ಬೆಳಗಿನ ಕಿರಣ ರೂಮಿನ ಒಳ ಹೊಮ್ಮಿತು. ಆರ್ಯ ಸ್ವಲ್ಪ ಹೊತ್ತು ಆ ಸುಂದರ ದೃಶ್ಯವನ್ನು ನೋಡುತ್ತಾ ನಿಂತ. ನಂತರ ರೂಮಿನ ಹೊರಗೆ ಬಂದು, ಮುಂದೆ ಇದ್ದ ಮಹಡಿಯನ್ನು ನೋಡಿದ. ಆ ಹತ್ತು ಮೆಟ್ಟಲಿನ ಮಹಡಿ, ಹತ್ತು ಜನರು ಒಟ್ಟಿಗೆ ಇಳಿಯುವುಷ್ಟು ಅಗಲವಾಗಿತ್ತು. ಆರ್ಯ ನಿರ್ಲಿಪ್ತವಾಗಿ ಇದನ್ನು ಗಮನಿಸಿ, ಒಂದೇ ಏಟಿಗೆ ಹತ್ತೂ ಮೆಟ್ಟಲಿನ ಮೇಲೆ ಜಿಗಿದು, ಮಹಡಿಯ ಕೊನೆಯಲ್ಲಿದ್ದ ಹಾಲಿಗೆ ಬಂದ. ನೆಗೆತದಿಂದ ಸ್ವಲ್ಪ ಆಯಾಸವಾಗಿದ್ದರಿಂದ, ಇಟಾಲಿಯನ್ ಶೈಲಿಯ ಅಡುಗೆ ಮನೆಗೆ ಹೋಗಿ, ಫ್ರಿಡ್ಜ್ ಬಾಗಿಲನ್ನು ತೆಗೆದ. ಫ್ರಿಡ್ಜಿನಲ್ಲಿದ್ದ ಒಂದು ದೊಡ್ಡ ಚಾಕಲೇಟ್ ಕೇಕ್ ಅನ್ನು ತೆಗೆದು ಡೈನಿಂಗ್ ಟೇಬಲ್ಲಿನ ಮೇಲೆ ಇಟ್ಟನು. ಹತ್ತು ಸೆಕೆಂಡಿನಲ್ಲಿ ಕೇಕ್ ಅನ್ನು ಗಬಗಬನೆ ತಿಂದು ಮುಗಿಸಿದ ನಂತರ, ಆರ್ಯ ತಟ್ಟೆಯನ್ನು ನೆಲದ ಮೇಲೆ ಎಸೆದ. ಪ್ಲೇಟು ಇನ್ನೇನು ನೆಲಕ್ಕೆ ಬೀಳುವ ಮುಂಚೆ, ಹಾಗೇ ಮಾಯವಾಯಿತು. ನಂತರ, ಆರ್ಯ ಹಾಲಿಗೆ ಬಂದು ಮೆತ್ತಗಿನ ಸೋಫಾದ ಮೇಲೆ ತುಸ್ ಎಂದು ಕುಳಿತ. ಕುಳಿತು ವಾತಾವರಣದ ನಿಚ್ಚಳ ಮೌನವನ್ನು ಗಮನಿಸಿದ.
ಐದು ನಿಮಿಷವಾಯಿತು. ಹತ್ತು ನಿಮಿಷವಾಯಿತು. ಆರ್ಯ ಹಾಗೆಯೇ ಕುಳಿತಿದ್ದ. ವಾತಾವರಣದ ನಿಶಬ್ಧದಿಂದ ಅವನಿಗೆ ಯಾಕೋ ಮುಜುಗರವಾಗಲು ಶುರುವಾಯಿತು. ಪಕ್ಕದ ಮೇಜಿನಲ್ಲಿದ್ದ ಒಂದು ಪುಟ್ಟ ಕಂಪ್ಯೂಟರ್ ನ ಕಡೆ ನೋಡಿದ. ಅದರ ಮೇಲೆ “ಟೆಕ್ನೀಶಿಯಂ” ಎಂದು ಸರಳ ಅಕ್ಷರಗಳಲ್ಲಿ ಮುದ್ರಿಸಲಾಗಿತ್ತು. ಕಂಪ್ಯೂಟರ್ ಗೆ ಒಂದು ಹೆಡ್ಸೆಟ್ ಸೇರಿಸಲಾಗಿತ್ತು. ಹೆಡ್ಸೆಟ್ ನ ಎರಡು ಕೊನೆಗಳು ಕಿವಿಗೆ ಕೂರುವಂತೆ ಹಾಕಿಕೊಂಡು, ಕಂಪ್ಯೂಟರ್ ಸ್ಕ್ರೀನನ್ನು ನೋಡಿದ. ಅದರಲ್ಲಿ, “ಪ್ರವೇಶಿಸುವುದಕ್ಕೆ ದಯವಿಟ್ಟು ಸೈನ್ ಇನ್ ಮಾಡಿ”, ಎಂದಷ್ಟೇ ಬರೆದಿತ್ತು. ಆರ್ಯ ವಾಕ್ಯದ ಕೆಳಗೆ ಇದ್ದ ಚೌಕಟ್ಟಿನಲ್ಲಿ, “arya2127@tmail.com”, ಎಂದು ಟೈಪ್ ಮಾಡಿದ. ಮುಂದಿನ ಸ್ಕ್ರೀನಿನಲ್ಲಿ “ನಿಮ್ಮ ಗಮ್ಯಸ್ಥಾನವನ್ನು ಆಯ್ಕೆ ಮಾಡಿ”, ಎಂದು ಬರೆದಿತ್ತು. ಆರ್ಯ ಲಂಡನ್ ಅನ್ನು ಆಯ್ಕೆ ಮಾಡಿದ. ಅವನು ಎಂಟರ್ ಕೀಯನ್ನು ಒತ್ತುತ್ತಿದ್ದಂತ್ತೆಯೇ, ಹೆಡ್ಸೆಟ್ ನಿಂದ ಫೋನಿನ ಡಯಲ್ ಟೋನಿನಂತೆ ಒಂದು ಸದ್ದು ಬರಲು ಶುರುವಾಯಿತು. ಎರಡು ಸೆಕೆಂಡಿನ ನಂತರ ಆರ್ಯನ ಲೋಕ ಕತ್ತಲಾಯಿತು.
****
ಪುರಾತನ ಕಾಲದ ಟೆಲಿಫೋನ್ ಬೂತನ್ನು ಹೋಲುವ, “ಟ್ಯೂಬ್” ಎಂದು ಕರೆಸಿಕೊಳ್ಳುವ ಒಂದು ಮನುಷ್ಯ ಪಂಜರದಲ್ಲಿ ಆರ್ಯ ನಿಂತಿದ್ದ. ಟ್ಯೂಬಿನ ಬಾಗಿಲನ್ನು ತೆಗೆಯಲು ಕೈ ಮುಂದೆ ಹಾಕಿದ. ಬಾಗಿಲು ಉಶ್ ಎಂದು ಸದ್ದು ಮಾಡುತ್ತಾ ತಾನಾಗಿಯೇ ತೆರೆಯಿತು. ಮುಂದೆ ಇದ್ದ ಲಂಡನ್ ನ ಟ್ರಫಾಲ್ಗರ್ ಸ್ಕ್ವೇರ್ ನಲ್ಲಿ ತುಂಬಾ ಜನ ಸೇರಿದ್ದರು. ಕೆಲವರು ಅಲ್ಲಿನ ಕೆಫೆಗಳಲ್ಲಿ ಕೂತು ಹರಟೆ ಹೊಡೆಯುತ್ತಿದ್ದರು. ಕೆಲವರು ಫೌಂಟನ್ ನ ಬಳಿಯಿದ್ದ ಜಾದೂಗಾರನ ಪ್ರದರ್ಶನವನ್ನು ನೋಡುತ್ತಿದ್ದರು. ಮತ್ತೆ ಕೆಲವರು ಅಲ್ಲಿನ ಪಾರಿವಾಳಗಳಿಗೆ ಧಾನ್ಯಗಳನ್ನು ಹಾಕುತ್ತಿದ್ದರು. ಹಳೆಯ ಕಟ್ಟಡಗಳಿದ್ದ ಒಂದು ಚಿಕ್ಕ ಬೀದಿಯ ಕಡೆ ಆರ್ಯ ನೇರವಾಗಿ ನಡೆದ. ಆ ಬೀದಿಯಲ್ಲಿ ಒಂದು ಟಿವಿ ಅಂಗಡಿಯಿತ್ತು. ಪ್ರದರ್ಶನಕ್ಕಾಗಿ ಇಟ್ಟ ಟಿವಿಗಳನ್ನು ಹದಿನೈದರಿಂದ ಇಪ್ಪತ್ತು ಮಂದಿ, ಅಂಗಡಿಯ ಹೊರಗೆ ನಿಂತು, ನಿರ್ಲಿಪ್ತವಾಗಿ ನೋಡುತ್ತಿದ್ದರು. ಆರ್ಯ ಅವರ ಜೊತೆ ನಿಂತು ಟಿವಿಯನ್ನು ನೋಡ ತೊಡಗಿದ. ಟಿವಿಯಲ್ಲಿ ಟಾಮ್ ಅಂಡ್ ಜೆರಿ ಶೋ ಬರುತ್ತಿತ್ತು. ಟಾಮ್ ನ ತಲೆಯ ಮೇಲೆ ಒಂದು ಇಸ್ತ್ರಿ ಪೆಟ್ಟಿಗೆ ಬಿದ್ದಿತು. ಸೇರಿದ ಜನರೆಲ್ಲಾ ಒಂದೇ ಸಮಯಕ್ಕೆ “ಹ” ಎಂದು, ಕಾಳಿಂಗ ಸರ್ಪ ಬುಸ್ ಎನ್ನುವಂತೆ, ನಕ್ಕರು. ಆರ್ಯ ಸ್ವಲ್ಪ ತಡವಾಗಿ ನಕ್ಕಿದ. ಎಲ್ಲರೂ ಆರ್ಯನ ಕಡೆ ತಿರುಗಿದರು. ಅವನು ಏನೂ ಮಾತಾಡಲಿಲ್ಲ.
ಇದ್ದಕ್ಕಿದ್ದಂತೆ ಆ ಬೀದಿಯ ಎಡಭಾಗದಲ್ಲಿ ಯಾರೋ ಓಡಿ ಬರುತ್ತಿದ್ದ ಸದ್ದು ಕೇಳಿಸಿತು. ಟಿವಿ ನೋಡುತ್ತಿದ್ದ ಮಂದಿಯೆಲ್ಲಾ ಒಂದೇ ಸಮಯಕ್ಕೆ ಎಡಗಡೆಗೆ ನೋಡಿದರು. ಸುಮಾರು ಹದಿನಾರು ಹದಿನೇಳು ವರ್ಷದ ಬಾಲಕನನ್ನು, ಉದ್ದ ಟೋಪಿ ಮತ್ತು ನೀಲಿ ಯುನಿಫಾರ್ಮ್ ಧರಿಸಿದ್ದ ಐದಾರು ಲಂಡನ್ ಪೊಲೀಸ್ ಸಿಬ್ಬಂದಿ ಅಟ್ಟಿಸಿಕೊಂಡು ಬರುತ್ತಿದ್ದರು. ಆ ಹುಡುಗ, ಮುಂದೆ ಇದ್ದ ಜನ ಸಮೂಹವನ್ನು ನೋಡಿ, ತಟ್ಟನೆ ಎಡಗಡೆ ಇದ್ದ ಒಂದು ಗಲ್ಲಿಯ ಒಳ ಹೊಕ್ಕಿದ. “ಬಾಬಿ” ಎಂದು ಕರೆಸಿಕೊಳ್ಳುವ ಪೋಲಿಸ್ ಕಾನ್ಸ್ಟೇಬಲ್ ಗಳು ಅವನ ಹಿಂದೆಯೇ ಗಲ್ಲಿಯನ್ನು ಪ್ರವೇಶಿಸಿದರು. ಬೀದಿಯಲ್ಲಿ ಮೌನ ಆವರಿಸಿತು. ಆರ್ಯ ಮತ್ತು ಅವನ ಸುತ್ತ ಇದ್ದ ಜನ ಗಲ್ಲಿಯ ದಿಕ್ಕಿನಲ್ಲೇ ನೋಡುತ್ತಾ ನಿಂತರು. ಐದು ನಿಮಿಷದ ನಂತರ ಪೊಲೀಸರು ಗಲ್ಲಿಯಿಂದ ಬೀದಿಗೆ ಹಿಂತಿರುಗಿದರು. ಹುಡುಗ ಅವರ ಜೊತೆ ಇರಲಿಲ್ಲ. ನಿರಾಶೆಯಿಂದ ತಲೆಯಾಡಿಸುತ್ತಿದ್ದ ಪೊಲೀಸರು ಬೀದಿಯ ಇನ್ನೊಂದು ಕೊನೆಗೆ ನಡೆಯುತ್ತ ಹೋದರು. ಅವರಲ್ಲಿ ಒಬ್ಬ ಬಾಬಿ ಹಿಂದೆ ತಿರುಗಿ, ಟಿವಿ ಗುಂಪನ್ನು ನೋಡಿದ. ಅವನು ನೋಡಿದಾಕ್ಷಣ ಟಿವಿ ಮಂದಿಯೆಲ್ಲಾ ಸರಕ್ಕನೆ ಕತ್ತನ್ನು ತಿರುಗಿಸಿ ಮತ್ತೆ ಟಿವಿ ನೋಡಲು ಮುಂದಾದರು. ಇಷ್ಟಕ್ಕೆ ಸಮಾದಾನ ಪಟ್ಟಿಕೊಳ್ಳದ ಬಾಬಿ, ಸೀಟಿ ಊದುತ್ತಾ ಗುಂಪಿನ ಕಡೆ ಓಡಿಕೊಂಡು ಬಂದನು. ಸೀಟಿಯ ಸದ್ದು ಕೇಳುತ್ತಿದ್ದಂತೆಯೇ ಗುಂಪಲ್ಲಿದ್ದ ಜನರೆಲ್ಲಾ, ಜೀವಭಯದಿಂದ ಓಡುವ ಜಿಂಕೆಗಳಂತೆ, ಆವೇಶದಿಂದ ಬೀದಿಯ ಇನ್ನೊಂದು ಕೊನೆಗೆ ಓಡಲು ಆರಂಭಿಸಿದರು. ಇದರಿಂದ ಸಮಾದಾನಗೊಂಡ ಬಾಬಿ, ಹಿಂದೆ ತಿರುಗಿಕೊಂಡು ಪೊಲೀಸರ ಗುಂಪಿನತ್ತ ವಾಪಸ್ಸು ನಡೆದ. ಭಯದಿಂದ ಓಡುತ್ತಿದ್ದ ಜನರ ಪೈಕಿ ಸ್ವಲ್ಪ ಹಿಂದುಳಿದ ಆರ್ಯ, ಬೀದಿಯ ಕೊನೆಯಲ್ಲೇ ನಿಂತನು. ನಿಂತು ಖಾಲಿ ಬೀದಿಯನ್ನೇ ಸ್ವಲ್ಪ ಹೊತ್ತು ನೋಡಿದ. ಮರುಕ್ಷಣ ತನ್ನ ಟಿವಿ ಸ್ನೇಹಿತರು ಚೆದರಗೊಂಡು ನಡೆಯುತ್ತಿದ್ದ ಮಾರುಕಟ್ಟೆಯ ಕಡೆ ನೋಡಿದ. ನಂತರ ವಾಪಸ್ಸು ಬೀದಿಯ ಕಡೆ ನಡೆದ.
ಆರ್ಯ ಟಿವಿ ಅಂಗಡಿಯ ಬಳಿ ಬಂದಾಗ ಟಿವಿಗಳೆಲ್ಲಾ ಆಫ್ ಆಗಿದ್ದವು. ಹುಡುಗ ಓಡಿ ಹೋಗಿದ್ದ ಗಲ್ಲಿಯ ಕಡೆ ನಡೆದ. ಮೆಲ್ಲನೆ ಗಲ್ಲಿಯ ಕಡೆ ಇಣುಕಿ ನೋಡಿದ. ನಿಲ್ಲಿಸಲಾಗಿದ್ದ ಒಂದು ಫಿಯಟ್ ಕಾರ್ ಬಿಟ್ಟರೆ ಆ ಗಲ್ಲಿಯಲ್ಲಿ ಬೇರೇನೂ ಇರಲಿಲ್ಲ. ನಿಧಾನಕ್ಕೆ ಹಾಗೆಯೇ ಮುಂದೆ ನಡೆದುಕೊಂಡು ಹೊರಟ. ಪಿಚ್ ಪಿಚ್ - ಬಲಗಡೆಗೆ ಏನೋ ಸದ್ದಾಯಿತು. ತಕ್ಷಣ ತಿರುಗಿ ನೋಡಿದ. ಕಸದ ತೊಟ್ಟಿಯಲ್ಲಿ ಒಂದು ಇಲಿ ಬಟ್ಟೆಯನ್ನು ಕಚ್ಚುತ್ತಿತ್ತು. ಆರ್ಯ ಸಮಾದಾನದಿಂದ ನಿಟ್ಟುಸಿರು ಬಿಟ್ಟ. ಅದೇ ಕ್ಷಣಕ್ಕೆ ಹಿಂದೆಯಿಂದ ಅವನನ್ನು ಎರಡು ಶಕ್ತಿಯುತ ಕೈಗಳು ಹಿಡಿದುಕೊಂಡು ಹಿಂದಕ್ಕೆ ಎಳೆದವು. ಆರ್ಯ ಹಿಂದಕ್ಕೆ ಎಡವಿ, ತೆಗೆದಿದ್ದ ಕಾರಿನ ಬಾಗಿಲ ಒಳಗೆ ಮುಗ್ಗರಿಸಿ ಬಿದ್ದ. ಕಾರ್ ಬಾಗಿಲು ಮುಚ್ಚಿತು. ಮುಂದಿನ ಸೀಟಿನಿಂದ ಕುತೂಹಲದಿಂದ ನೋಡುತ್ತಿದ್ದ ಹಸಿರು ಕಣ್ಣಿನ ಹುಡುಗನ ಕಡೆ ನೋಡಿದ. ಹುಡುಗ ಕೇಕೆ ಹಾಕಿಕೊಂಡು, “ಸಿಕ್ಕಿದ ! ಒಬ್ಬ ಸಿಕ್ಕಿದ !”, ಎಂದು ಚೀರಿದ. ಆರ್ಯ ನೆಟ್ಟಗೆ ಕುಳಿತುಕೊಂಡು, ಸ್ವಲ್ಪ ಗೊಂದಲದಿಂದ ಹುಡುಗನನ್ನು ನೋಡ ತೊಡಗಿದ.
“ಸರಿಯಾಗಿ ಕೇಳಿಸಿಕೋ ! ಹೆಚ್ಚು ಸಮಯವಿಲ್ಲ”, ಹುಡುಗ ಗಂಭೀರ ಧ್ವನಿಯಲ್ಲಿ ಹೇಳಿದ. “ಏನು? ಏನಾಗುತ್ತಿದೆ?”, ಆರ್ಯ ಮಂಕು ಮಂಕಾಗಿ ಕೇಳಿದ. ಹುಡುಗ ಕಾರಿನ ಮುಂದಿನ ಸೀಟಿನಿಂದ ಹಿಂದಿನ ಸೀಟಿಗೆ ನುಸುಳಿಕೊಂಡು ಬಂದು, ಆರ್ಯನ ಪಕ್ಕ ಕುಳಿತು, ಅವನನ್ನೇ ಎರಡು ಕ್ಷಣ ಮೌನವಾಗಿ ನೋಡಿದ. ನಂತರ ಟಪ್ ಟಪ್ ಎಂದು ಎರಡು ಬಾರಿ ಆರ್ಯನಿಗೆ ಕಪಾಳಕ್ಕೆ ಹೊಡೆದು, ಅವನ ಶರ್ಟ್ ಪಟ್ಟಿಯನ್ನು ಹಿಡಿದು, ತನ್ನೆಡೆಗೆ ಎಳೆದುಕೊಂಡ. ಯುವಕನಿಂದ ಇಂತಹ ಶಕ್ತಿ ಮತ್ತು ಶೌರ್ಯವನ್ನು ಕಂಡು ಬೆರಗಾದ ಆರ್ಯ ಪಿಳಿಪಿಳಿ ಕಣ್ಣು ಮಿಟುಕಿಸಿದ. ಶರ್ಟ್ ಪಟ್ಟಿಯನ್ನು ಹಾಗೇ ಹಿಡಿದು ಹುಡುಗ ಸ್ವಲ್ಪ ಕೋಪದಿಂದ ಕೇಳಿದ, “ಯಾರು ನೀನು ?”. ಆರ್ಯ ಗಾಬರಿಯಿಂದ, “ಅ… ಅ… ಆರ್ಯ”, ಎಂದು ತಡವರಿಸಿದ. ಅದಕ್ಕೆ ಹುಡುಗ, “ಹೆಸರಲ್ಲ ಕೇಳಿದ್ದು. ನಿನ್ನ ಹಿನ್ನೆಲೆ ಏನು?”. ಆರ್ಯ ಸ್ವಲ್ಪ ಯೋಚಿಸಿ, “ಇವತ್ತು ಬೆಳಗೆ ಎದ್ದು, ಕೇಕ್ ತಿಂದು, ಈಗ ಇಲ್ಲಿ… “. “ನಿಲ್ಲಿಸು!”, ಹುಡುಗ ಕೂಗಿದ. “ನಿನ್ನೆ ರಾತ್ರಿ ಏನ್ ಮಾಡ್ದಿ?”. ಆರ್ಯ ಮತ್ತೆ ಯೋಚಿಸಿ, “ರಾತ್ರಿ ಇನ್ನೂ ಆಗಿಲ್ವಲ್ಲ. ಈಗ ಇನ್ನೂ ಮಧ್ಯಾನ”. ಹುಡುಗ ಆರ್ಯನ ಕತ್ತು ಪಟ್ಟಿಯನ್ನು ಬಿಟ್ಟು, ನಿರಾಶೆಯಿಂದ ಕೆಳಗೆ ನೋಡಿದ. ನಂತರ, “ಛೆ ! ಒಬ್ನೂ ಇಲ್ಲ”, ಎಂದು ಹೇಳಿ, ಏನೋ ಬೈದುಕೊಂಡು, ಆರ್ಯನ ಕಡೆ ನೋಡಿದ, “ನಾನು ಹೇಳೋದನ್ನ ಸರಿಯಾಗಿ ಕೇಳು. ಇದೆಲ್ಲಾ ಕೇವಲ ಕನಸು ! ನಾವೆಲ್ಲರೂ ಅಸಲಿ ಲೋಕದಲ್ಲಿ ಮಲಗಿ ಇದನ್ನೆಲ್ಲಾ ಕನಸು ಕಾಣುತ್ತಿದ್ದೇವೆ !”. ಆರ್ಯ ಎರಡು ಬಾರಿ ಪಿಳಿಪಿಳಿ ಕಣ್ಣು ಮಿಟುಕಿಸಿ “ಹ”, ಎಂದು ನಕ್ಕಿದ. ಹುಡುಗ ತಲೆ ಚಚ್ಚಿಕೊಂಡು, “ನಿನ್ನನ್ನಾ... “, ಎಂದು ಹೆದರಿಸುವ ರೀತಿ ಮುಂದೆ ಬಗ್ಗಿದ. ಇದಕ್ಕೆ ಆರ್ಯ ಹೆದರಿಕೊಂಡು, “ಬೇಡ… ಹೊಡಿ ಬೇಡ, ಪ್ಲೀಸ್”, ಎಂದು ಸಣ್ಣ ಮಗುವಿನ ಹಾಗೆ ಬೇಡಿದ. “ಹಾಗಾದ್ರೆ ನಾ ಹೇಳೋದನ್ನೆಲ್ಲಾ ಸರಿಯಾಗಿ ಕೇಳು”, ಎಂದು ಹೇಳಿ ಹುಡುಗ ನಿರರ್ಗಳವಾಗಿ ಮಾತನಾಡಲು ಆರಂಭಿಸಿದ.
****
“ಹತ್ತು ವರ್ಷದ ಹಿಂದೆ, ಅಂದ್ರೆ 2147ನಲ್ಲಿ, ಟೆಕ್ನೀಶಿಯಮ್ ಅನ್ನೋ ಇಂಟರ್ನೆಟ್ ಕಂಪನಿ “ಜಾಲ” ಎಂಬ ತಂತ್ರಜ್ಞಾನವನ್ನು ಲೋಕಕ್ಕೆ ಪರಿಚಯಿಸಿತು. ಮನೋವಿಜ್ಞಾನ ಮತ್ತು ವಿಜ್ಞಾನದ ಸಮ್ಮಿಶ್ರಣವಾದ ಈ ಜಾಲ, ಸಾಕಷ್ಟು ಕುತೂಹಲ ಹುಟ್ಟಿಸಿತು. ಈ ತಂತ್ರಜ್ಞಾನದ ಪ್ರಕ್ರಿಯೆ ಹೀಗೆ ಇತ್ತು: ಜಾಲ ಪ್ರಾಜೆಕ್ಟ್ ನಲ್ಲಿ ಪಾಲುಗೊಳ್ಳುವ ಮನುಷ್ಯ ತನ್ನ ಕೈಗೆ ಮೊದಲು ಒಂದು ವೈಫೈ ಚಿಪ್ ಅನ್ನು, ಶಸ್ತ್ರಚಿಕಿತ್ಸೆಯ ಮೂಲಕ, ಹಾಕಿಸಿಕೊಳ್ಳುತ್ತಾನೆ. ನಂತರ ಒಂದು ನಿಗದಿತ ಸ್ಥಳಕ್ಕೆ ಹೋಗಿ, ಭ್ರಮೆ ಹುಟ್ಟಿಸುವ ಒಂದು ಮಾದಕ ವಸ್ತುವನ್ನು ಸೇವಿಸಿ, ಟೆಕ್ನೀಶಿಯಮ್ ನ ಲ್ಯಾಬಿನಲ್ಲಿ ಮಲಗುತ್ತಾನೆ. ನಂತರ ಅವನ ಲೋಕ ಕನಸಿನ ಲೋಕ ! ಕನಸಿನಲ್ಲಿ ನಿನ್ನನ್ನ ಹಿಡಿಯುವವ ಯಾರು? ಏನು ಬೇಕಾದರೂ ಮಾಡಬಹುದು, ಎಲ್ಲಿಗೆ ಬೇಕಾದರೂ ಹೋಗಬಹುದು !”. ಆರ್ಯ ಇದನ್ನೆಲ್ಲಾ ಏನೂ ಪ್ರತಿಕ್ರಿಯೆ ಇಲ್ಲದೆ ಕೇಳುತ್ತಾ ಕುಳಿತ್ತಿದ್ದ. ಹುಡುಗ ಮುಂದುವರೆದ, “ಆದರೆ ಒಂದು ಷರತ್ತೇನೆಂದರೆ ನೀನು ಕಾಣುವುದು ನಿನ್ನ ಕನಸಿನ ಲೋಕವಲ್ಲ; ನೀನು “ನೆಲೆಸುವುದು” ಟೆಕ್ನೀಶಿಯಮ್ ಸೃಷ್ಟಿಸಿರುವ ಆದರ್ಶ ರಾಜ್ಯ ಅಥವಾ “ಟೆಕ್ನೋಪಿಯಾ”ದಲ್ಲಿ. ಜಾಲದಲ್ಲಿ ಪಾಲುಗೊಳ್ಳುವವರೆಲ್ಲರೂ ಟೆಕ್ನೋಪಿಯಾದಲ್ಲೇ ಕನಸು ಕಾಣುವಂತೆ ಅವರ ವೈಫೈ ಚಿಪ್ ಮಾಡಿಸುತ್ತದೆ”.
“ಮೈಮರೆಸುವ ಈ ಹೊಸ ವಿಧಾನವನ್ನು ಅನುಭವಿಸಲು ಜನರೆಲ್ಲಾ ಮುಗಿಬಿದ್ದು ಜಾಲ ಪ್ರಾಜೆಕ್ಟ್ ನಲ್ಲಿ ಪಾಲುಗೊಂಡರು. ವೈಫೈ ಚಿಪ್ ಹಾಕುವ ಸರ್ಜರಿ ಫ್ರೀ; ಆದರೆ ನಿಮ್ಮ ದೇಹಗಳನ್ನು ಡ್ರಿಪ್ಸ್ ಮೂಲಕ ಜೀವಂತವಾಗಿಡುವ ಖರ್ಚು ನಿಮ್ಮದು, ಎಂದು ಟೆಕ್ನೀಶಿಯಮ್ ಘೋಷಿಸಿದಾಗಲಂತೂ ಅನೇಕ ಮಂದಿ ಮನೆ ಮಠಗಳನ್ನು ಮಾರಿ, ಜೀವಮಾನ ಪೂರ್ತಿ ಈ ಪ್ರಾಜೆಕ್ಟ್ ನಲ್ಲಿ ಪಾಲುಗೊಳ್ಳಲು ಮುಂದಾದರು. ಮತ್ತೆ, ಯಾಕಾಗಬಾರದು? ಜಾಲ ತಂತ್ರಜ್ಞಾನದ ಪ್ರಕಾರ, ಮನೆ ಮಂದಿಯೆಲ್ಲಾ ಟೆಕ್ನೋಪಿಯಾದಲ್ಲೇ ಭೇಟಿಯಾಗಬಹುದು, ನಲಿದಾಡಿ ಕುಣಿದಾಡಬಹುದು. ಸೃಷ್ಟಿಸಿದ ಕನಸಿನಲ್ಲಿ ನೋವಿರುತ್ತದಾ? ರೋಗವಿರುತ್ತದಾ? ಮನಸ್ತಾಪ ಕಲಹಗಳಿರುತ್ತವಾ? ಹತ್ತು ವರ್ಷಗಳ ಕಾಲಾವಧಿಯಲ್ಲಿ, ವಿಶ್ವದಲ್ಲಿನ ಕನಿಷ್ಠ ಎಪ್ಪತ್ತೈದು ಪ್ರತಿಶತ್ತಿನ ಜನ ಜಾಲದಲ್ಲಿ ಸೇರಿಕೊಂಡರು”.
“ಆದರೆ ಯಾರೂ ಊಹಿಸಲಾಗದ ಒಂದು ನಿಗೂಢ ಸಮಸ್ಯೆ ಈ ಪ್ರಾಜೆಕ್ಟ್ ನಲ್ಲಿ ಇತ್ತು. ಜಾಲವನ್ನು ಸೇರಿಕೊಂಡವರು, ವರುಷಾನುಗಟ್ಟಲೆ ಅಸಲಿ ಲೋಕಕ್ಕೆ ವಾಪಸ್ಸು ಬರಲೇ ಇಲ್ಲ. ವಿಶ್ವದಲ್ಲಿ ಉಳಿದ ಜನರೆಲ್ಲಾ ತಬ್ಬಿಬ್ಬಾದರು. ಜಾಲವನ್ನು ಸೇರಿಕೊಂಡ ಜನರಿಗೆ ಮಾಯಾ ಲೋಕವೇ ಇಷ್ಟವಾಗಿ ಅಲ್ಲೇ ಉಳಿದುಬಿಟ್ಟರೋ ಅಥವಾ ಹೊರದಾರಿ ಇಲ್ಲದೆ ಅಲ್ಲೇ ಸಿಕ್ಕಿಹಾಕಿಕೊಂಡರೋ? ಈ ಪ್ರಶ್ನೆಗೆ ಟೆಕ್ನೀಶಿಯಮ್ ಉತ್ತರ ನೀಡಲಿಲ್ಲ. ಪುರಾವೆ ಇಲ್ಲದೆ, ಯಾರೂ ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಸಾಧ್ಯತೆಯೂ ಇರಲಿಲ್ಲ. ಹಾಗಾದರೆ ಜಾಲದ ರಹಸ್ಯವನ್ನು ಹೇಗೆ ತಿಳಿದುಕೊಳ್ಳುವುದು?”
“ಇದನ್ನು ತಿಳಿಯುವುದಕ್ಕಾಗೇ “ಲಜಾ” ಎಂಬ ಭೂಗತ ಸಂಸ್ಥೆ ರಚನೆಯಾಯಿತು. ಮನೋವಿಜ್ಞಾನಿಗಳು, ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳಿಂದ ಕೂಡಿದ ಈ ಸಂಸ್ಥೆ, ಜಾಲದಿಂದ ಹೊರಬರುವ ರಹಸ್ಯವನ್ನು ಪರಿಶೋಧಿಸಿತು. ಇತ್ತೀಚಿಗೆ ಸಂಸ್ಥೆಯನ್ನು ಸೇರಿಕೊಂಡ ಬಾಬಾ ಪಾಂಪಾಂ, ಹಿಮಾಲಯದ ತಪ್ಪಲಿನಿಂದ ಬಂದ ಒಬ್ಬ ಸನ್ಯಾಸಿ, ಒಂದು ಸೂಚನೆಯನ್ನು ನೀಡಿದರು. “ಬಾಬನ ಊಹೆ” ಎಂದೇ ಪ್ರಸಿದ್ಧವಾದ ಈ ಸೂಚನೆಯ ಪ್ರಕಾರ, ಯಾರು ತನ್ನ ಮನಸ್ಸನ್ನು ಸರ್ವಚಿಂತನೆಗಳಿಂದ ದೂರ ಮಾಡಿ, ಶಾಂತಚಿತ್ತನಾಗುತ್ತಾನೋ ಅವನು ಜಾಲದಿಂದ, ನಿದ್ದೆಯಿಂದ ಎಚ್ಚರವಾಗುವಂತೆ, ಎದ್ದು ಬರಬಹುದು. ಲಾಜ ಸಂಸ್ಥೆಯ ಮುಖಂಡರೆಲ್ಲಾ, ಸಾಕಷ್ಟು ಸದ್ದು ಮಾಡಿದ ಈ ಊಹೆ ಸರಿಯೋ ಇಲ್ಲವೋ ನೋಡಲೇಬೇಕು, ಎಂದು ನಿರ್ಧರಿಸಿ ಒಂದು ಪ್ಲಾನ್ ಮಾಡಿದರು: ಧ್ಯಾನ ವಿದ್ಯೆಯಲ್ಲಿ ನಿಪುಣರಾದ ನೂರು ಮಂದಿ ಸಂಸ್ಥೆಯ ಸದಸ್ಯರು ಜಾಲವನ್ನು ಮೊದಲು ಪ್ರವೇಶಿಸುತ್ತಾರೆ. ಪ್ರವೇಶಿಸಿದ ನಂತರ ಧ್ಯಾನಕ್ಕೆ ಕುಳಿತು, ಮನಸ್ಸನ್ನು ನಿಗ್ರಹಿಸಿ ಜಾಲದಿಂದ ಹೊರಬರಲು ಯತ್ನಿಸುತ್ತಾರೆ. ಹೊರಬರಲು ಸಾಧ್ಯವಾದರೆ, ಜಾಲದಲ್ಲಿ ಸಿಕ್ಕಿಹಾಕಿಕೊಂಡವರಿಗೆಲ್ಲಾ ಅಲ್ಲಿಂದ ಹೊರಬರುವ ರಹಸ್ಯವನ್ನು ಈ ಸದಸ್ಯರು ಹೇಳಿಕೊಡಬಹುದು, ಎಂದು ಸಂಸ್ಥೆಯ ದಿಗ್ಗಜರು ನಿರ್ಣಯಿಸಿದರು”.
ಆರ್ಯ ಮಧ್ಯದಲ್ಲಿ ಹುಡುಗನ ಮಾತಿಗೆ ಅಡ್ಡ ಬಂದ, “ಆ ನೂರು ಜನ ಸದಸ್ಯರಲ್ಲಿ ನೀನೂ ಒಬ್ಬನ?”. ಹುಡುಗ ಮೌನವಾಗಿ ಆರ್ಯನ ಮುಖವನ್ನೇ ನೋಡಿದ. ಅವನ ಮುಖದಲ್ಲಿ ವಿವರಿಸಲಾಗದ ಒಂದು ಹೊಸ ಭಾವ ಕಂಡುಬಂತು.
ಹುಡುಗ ಉತ್ತರಿಸಿದ, “ಹೌದು. ಜಾಲವನ್ನು ಒಳಹೊಕ್ಕಿದ ನಾನು ಮತ್ತು ಇನ್ನಿತರ ಸದಸ್ಯರು, ಮನ ನಿಯಂತ್ರಣದ ಮೂಲಕ, ಹೊರಬಂದೆವು. ಹೊರಬಂದ ತಕ್ಷಣ, ಮಾಯಾಲೋಕದಲ್ಲೇ ಕಳೆದುಹೋದ ಜನರನ್ನು ಎಚ್ಚರಿಸಲು, ವಾಪಸ್ಸು ಜಾಲವನ್ನು ಪ್ರವೇಶಿಸಿದೆವು”.
ಎನನ್ನೋ ದೀರ್ಘವಾಗಿ ಯೋಚಿಸುತ್ತಿದ್ದ ಆರ್ಯ, “ಈ ಮಾಯಾಲೋಕದಿಂದ ಹೊರಬರಲಾಗದೆ ಅನೇಕ ಜನರು ಭ್ರಮಿಸುತ್ತಲೇ ಕಳೆದುಹೋಗಿದ್ದಾರೆ ಎಂದು ಹೊರಗಿನವರಿಗೆ ಗೊತ್ತಾದರೆ, ಕಂಪನಿ ಕತಂ”, ಎಂದು ತರ್ಕಿಸಿದ.
ಹುಡುಗ ತಲೆ ಆಡಿಸಿದ, “ಹೌದು. ಸಾಕಷ್ಟು ಜನ ಜಾಲದಿಂದ ತಪ್ಪಿಸಿಕೊಂಡು ಸಾಕ್ಷಿಗಳಾಗಲು ಒಪ್ಪಿಕೊಂಡರೆ, ಕಂಪನಿಯ ಮೇಲೆ ನಾನಾ ತರಹದ ಮಾನವ ಹಕ್ಕುಗಳ ಕೇಸುಗಳು ಬಂದು ಬೀಳುತ್ತವೆ. ನಾನು ಜಾಲದಿಂದ ಹೊರಬರುವುದನ್ನು ಒಬ್ಬ ಟೆಕ್ನೀಶಿಯಮ್ ನೌಕರ ನೋಡಿಕೊಂಡಿದ್ದ. ಅಸಲಿ ಲೋಕದಲ್ಲಿ ಕಂಪನಿಯವರು ನನಗೆ ಏನೂ ಮಾಡಲಾಗುವುದಿಲ್ಲ. ಅದಕ್ಕಾಗೆ, ನಾನು ಜಾಲವನ್ನು ಮರು ಪ್ರವೇಶಿಸಿದಾಗ ಈ ಮಾಯಾ ಪೊಲೀಸರು, ನನ್ನ ದೇಹವಲ್ಲದಿದ್ದರೂ, ಮನಸ್ಸನ್ನು ಮುಗಿಸಿ ಕೋಮ ಸ್ಥಿತಿಗೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ”.
ಆರ್ಯ ಹುಡುಗನ ಪ್ರವಚನವನ್ನು ಅರಗಿಸಿಕೊಳ್ಳುತ್ತಾ ಸುಮ್ಮನೆ ಕುಳಿತ. ಅವನ ಕಣ್ಣಲ್ಲಿ ಕೋಪ-ದುಃಖಗಳ ಸಂಯೋಗ ಭಾವ ಕಂಡು ಬಂತು. ಗಂಭೀರ ಧ್ವನಿಯಲ್ಲಿ ಹುಡುಗನನ್ನು ಕೇಳಿದ, “ಇಲ್ಲಿಂದ ಹೊರ ಹೋಗುವ ವಿಧಾನ ಏನು?”.
ಹುಡುಗ ನೇರವಾಗಿ ಆರ್ಯನ ಕಣ್ಣನ್ನು ನೋಡಿದ, “ಮೊದಲು ನಿನ್ನ ಮಾಯಾಲೋಕದ ಮನೆಗೆ ವಾಪಸ್ಸು ತೆರಳು. ನಂತರ ಧ್ಯಾನಕ್ಕೆ ಕುಳಿತು, ಎಷ್ಟೇ ಸೆಳೆತಕ್ಕೆ ಒಳಗಾದರೂ ಟೆಕ್ನೀಶಿಯಮ್ ನ ಕಂಪ್ಯೂಟರ್ ಅನ್ನು ಮುಟ್ಟದೆ, ನಿನ್ನ ಮನಸ್ಸನ್ನು ಎಲ್ಲಾ ಚಿಂತನೆಗಳಿಂದ ಮುಕ್ತಪಡಿಸು”, ಎಂದು ನಿಗೂಢವಾಗಿ ಹೇಳಿದ.
ಆರ್ಯ ಸ್ವಲ್ಪ ಗೊಂದಲದಿಂದ, “ಅಷ್ಟೇನಾ?”, ಎಂದು ಕೇಳಿದ.
ಹುಡುಗ ಉತ್ತರಿಸದೆ ಇದ್ದಕ್ಕಿದ್ದಂತೆ ಕಾರಿನ ಕಿಡಕಿಗೆ ಕಿವಿಯನ್ನು ಕೊಟ್ಟನು. ದೂರದಲ್ಲಿ ಒಂದಿಷ್ಟು ಬೂಟುಗಳ ಸದ್ದು ಕೇಳಿಬಂತು. ಹುಡುಗ ತಕ್ಷಣ ಎಚ್ಚೆತ್ತುಕೊಂಡು, “ಬೇಗ ! ಕೆಳಗೆ ಕೂತುಕೋ”, ಎಂದು ಕಾರಿನ ಸೀಟಿನ ಕೆಳಗೆ ಕುಳಿತುಕೊಂಡು, ಆರ್ಯನನ್ನೂ ಕೆಳಗೆ ಎಳೆದುಕೊಂಡ.
ಬೂಟಿನ ಸದ್ದು ಮಸುಕಾದಾಗ ಹುಡುಗ ಆತಂಕದಿಂದ, “ಬೇಗ ಹೊರಡು. ಈಗ ಟೆಕ್ನೋಪಿಯಾದ ಪೊಲೀಸರು ನನ್ನನ್ನು ಬೇಟೆಯಾಡಲು ಕಾಯುತ್ತಿದ್ದಾರೆ. ಓಡಿ ಹೋಗಿ ಟ್ಯೂಬಿನ ಮೂಲಕ ಮನೆ ಸೇರಿಕೋ. ಆಯ್ತಾ?”.
“ನೀನು?”, ಆರ್ಯ ಕೇಳಿದ.
ಹುಡುಗ ತಲೆ ಆಡಿಸುತ್ತಾ, “ಇಲ್ಲ. ನನ್ನ ಕೆಲಸ ಇನ್ನೂ ಮುಗಿದಿಲ್ಲ. ಎಷ್ಟಾಗತ್ತೋ ಅಷ್ಟು ಜನರನ್ನು ನಾನು ಈ ಸೆರೆಮನೆಯಿಂದ ಪಾರುಮಾಡಬೇಕು. ಹಾ! ನೀನೂ ಅಷ್ಟೇ. ಈಗ ದಾರಿಯಲ್ಲಿ ಹೋಗುವಾಗ ಒಬ್ಬರಿಗಾದರೂ ಈ ಲೋಕದಿಂದ ತಪ್ಪಿಸಿಕೊಳ್ಳುವ ರಹಸ್ಯವನ್ನು ತಿಳಿಸು. ಮರೆಯಬೇಡ! ನಿನಗೆ ಜಯವಾಗಲಿ”, ಎಂದನು.
ಆರ್ಯ ಎರಡು ಕ್ಷಣ ಹುಡುಗನನ್ನೇ ನೋಡುತ್ತಾ ಕುಳಿತನು. ನಂತರ ಕಾರಿನಿಂದ ಇಳಿದು, ಟ್ರಫಾಲ್ಗರ್ ಸ್ಕ್ವೇರ್ ನ ಕಡೆ ಓಡಿದ.
ಎಲ್ಲೋ ದೂರದಲ್ಲಿ ಪೋಲಿಸ್ ಕಾರುಗಳ ಸದ್ದು ಕೇಳಿಬಂತು. ಆರ್ಯ ಸುಮ್ಮನೆ ತಲೆ ಬಗ್ಗಿಸಿಕೊಂಡು ಒಂದೇ ಸಮನೆ ಓಡಿದ. ವಾಪಸ್ಸು ಟ್ರಫಾಲ್ಗರ್ ಸ್ಕ್ವೇರ್ ಗೆ ಬಂದ ನಂತರ ಒಂದು ಕೆಫೆಯ ಖುರ್ಚಿಯಲ್ಲಿ ಕುಳಿತು ಸುತ್ತಲಿನ ವಾತಾವರಣವನ್ನು ಗಮನಿಸಿದ. ಫೌಂಟನ್ ನ ಹತ್ತಿರ ಈಗ ಎರಡು ಪೋಲಿಸ್ ವ್ಯಾನುಗಳು ನಿಂತಿದ್ದವು. ಹತ್ತು ಹದಿನೈದು ಜನ ಪೊಲೀಸರು ಸೇರಿಕೊಂಡು ಅಲ್ಲಿದ್ದ ಜನರಿಗೆಲ್ಲಾ ಜಾಗ ಖಾಲಿ ಮಾಡಲು ಆದೇಶಿಸುತ್ತಿದ್ದರು. ಮೇಲೆ ಒಂದು ಗಗನನೌಕೆ ಶೋಧಕ ದೀಪವನ್ನು ಹಾಕಿಕೊಂಡು ಫೌಂಟನ್ ಚದರದ ಸುತ್ತಾ ಹಾರಾಡುತ್ತಿತ್ತು . “ಒಬ್ಬ ಯುವಕನನ್ನು ಹಿಡಿಯಲು ಇಷ್ಟೊಂದು ಪ್ರಯತ್ನವಾ?”, ಆರ್ಯ ಯೋಚಿಸಿದ.
“ಎಕ್ಸ್ಕ್ಯೂಸ್ ಮಿ ಸರ್! ನೀವು ನಿದ್ರಿಸುತ್ತಿದ್ದೀರ? ಐದು ನಿಮಿಷದಿಂದ ಹೇಳುತ್ತಿದ್ದೇನೆ - ನೀವು ನನ್ನ ಟೇಬಲ್ ಅಲ್ಲಿ ಕುಳಿತ್ತಿದ್ದೀರ!”. ಫೌಂಟನ್ ಚದರವನ್ನು ಗಮನಿಸುವುದರಲ್ಲಿ ಮೈಮರೆತಿದ್ದ ಆರ್ಯ ಮುಂದೆ ನೋಡಿದ. ಸುಮಾರು ಹದಿನೆಂಟು ವರ್ಷದ, ಕೆಂಚು ಕೂದಲ, ನೀಲಿ ಕಣ್ಣಿನ ಹುಡುಗಿ ಆರ್ಯನನ್ನು ಮುನಿಸಿಕೊಂಡು ನೋಡುತ್ತಿದ್ದಳು.
“ನಿಜ ಹೇಳಬೇಕೆಂದರೆ ನೀನು ನಿದ್ರಿಸುತ್ತಿರುವುದು. ಇದೆಲ್ಲಾ ಕನಸಿನ ಲೋಕ”.
“ಏನು?”
ಆರ್ಯ ಉತ್ತರಿಸುವಷ್ಟರಲ್ಲಿ ಒಂದು ಡರ್ಟ್ ಮೋಟಾರ್ ಬೈಕಿನ ಕಿವಿ ಅಬ್ಬರಿಸುವ ಸದ್ದು ಇಡೀ ಚದರವನ್ನು ಬೆರೆಗುಗೊಳಿಸಿತು. ಆರ್ಯ ಸದ್ದಿನ ದಿಕ್ಕಿನ್ನಲ್ಲಿ ನೋಡಿದ. ಹಸಿರು ಕಣ್ಣಿನ ಹುಡುಗ ಮೋಟಾರ್ ಬೈಕನ್ನು ರೇಸ್ ಮಾಡುವಂತೆ ಓಡಿಸಿಕೊಂಡು ನೇರವಾಗಿ ಫೌಂಟನ್ ನ ಹತ್ತಿರ ಬರುತ್ತಿದ್ದ. ಆರ್ಯ ಕೂತಿದ್ದ ಕೆಫೆಯ ಪಕ್ಕದಲ್ಲಿ ಬೈಕ್ ಬಂದಾಗ, ಹುಡುಗ ಕೆಫೆ ಯ ಕಡೆ ತಿರುಗಿ, ಆರ್ಯನ ಕಡೆ ನೋಡಿ ನಕ್ಕಿದ. ಅವನ ಹಸಿರು ಕಣ್ಣುಗಳು ಸ್ಫಟಿಕದಂತೆ ಹೊಳೆಯುತ್ತಿದ್ದವು. ಬೈಕು ಇನ್ನೇನು ಪೋಲಿಸ್ ವ್ಯಾನಿಗೆ ಡಿಕ್ಕಿ ಹೊಡೆಯುತ್ತದೇನೋ ಎಂಬುವಷ್ಟರಲ್ಲಿ, ಹುಡುಗ ಬ್ರೇಕ್ ಹಾಕಿ, ಎಡಗಡೆಗೆ ಬೈಕನ್ನು ತಿರುಗಿಸಿದ. ಪೋಲಿಸರೆಲ್ಲಾ ವಾಕಿ ಟಾಕಿಗಳಲ್ಲಿ, “ಅಪರಾಧಿ ಬೈಕಿನಲ್ಲಿ ಪಶ್ಚಿಮ ದಿಕ್ಕಿನಲ್ಲಿ ಹೊರಟಿದ್ದಾನೆ, ಓವರ್ !”, ಎಂದು ಹೇಳುತ್ತಾ ವ್ಯಾನುಗಳಲ್ಲಿ ಕುಳಿತುಕೊಂಡರು. ಅವರು ಬೈಕನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಂತೆಯೇ ಆರ್ಯ ಎದ್ದು ನಿಂತು, ಮುಂದೆ ಕುಳಿತ್ತಿದ್ದ ಹುಡುಗಿಯ ಕಡೆ ನೋಡಿದ.
ಅವಳು, “ಏನಾಗ್ತಾಯ್ದೆ ?”, ಗಾಬರಿಯಿಂದ ಕೇಳಿದಳು. ಆರ್ಯ ಬಗ್ಗಿಕೊಂಡು, ಅವಳನ್ನೇ ದಿಟ್ಟಿಸಿ ನೋಡಿ, ಹತ್ತು ನಿಮಿಷ ಮಾತನಾಡಿದ. ಹುಡುಗಿ ದಂಗಾಗಿ ಎಲ್ಲವನ್ನೂ ಕೇಳಿಸಿಕೊಂಡಳು. ಕೊನೆಯಲ್ಲಿ, “ಈ ವಿಷಯವನ್ನು ಮತ್ತೊಬ್ಬರಿಗಾದರೂ ತಿಳಿಸು. ಮರಿಬೇಡ !”, ಎಂದು ಹೇಳಿ ಟ್ಯೂಬಿನ ಕಡೆ ಓಡಿದನು. ಆರ್ಯ ಟ್ಯೂಬಿನ ಬಳಿ ಬಂದಾಕ್ಷಣ, ಅದರ ಬಾಗಿಲು ಉಶ್ ಎಂದು ಸದ್ದು ಮಾಡುತ್ತಾ ತೆರೆಯಿತು. ಆರ್ಯ ಒಮ್ಮೆ ಹಿಂದೆ ತಿರುಗಿ ನೋಡಿದ.
****
ಅಸಲಿ ಲೋಕದಲ್ಲಿದ್ದ ಒಂದು ಗುಪ್ತ ಪ್ರಯೋಗಾಲಯದಲ್ಲಿ ಸೆಕ್ಯೂರಿಟಿ ಗಾರ್ಡ್ ಪೀಟರ್, ಪಾರ್ಲೆ ಜಿ ಬಿಸ್ಕತ್ ತಿನ್ನುತ್ತಾ, ಮುಂದೆ ಇದ್ದ ಕಂಪ್ಯೂಟರ್ ಸ್ಕ್ರೀನನ್ನು ನಿರ್ಲಕ್ಷ್ಯದಿಂದ ನೋಡುತ್ತಿದ್ದ. ಟಿ ಅಕ್ಷರ ಮುದ್ರಿಸಲಾಗಿದ್ದ ಮಾನಿಟರ್ ನ ಮೇಲೆ ಸಂಖ್ಯೆ ಏನೂ ಬದಲಾಗಿರಲಿಲ್ಲ: 7,114,235,117 ಎಂದು ತೋರಿಸುತ್ತಿತ್ತು. ಈಗ ತಾನೆ ಊಟ ಮುಗಿಸಿದ ಪೀಟರ್, ತೂಕಡಿಸಲು ಶುರು ಮಾಡಿದ. ಬೀಪ್ ! ಮುಂದೆ ಇದ್ದ ಕಂಪ್ಯೂಟರ್ ಸದ್ದು ಮಾಡಿತು. ಆಕಳಿಸಿಕೊಂಡು ಮಾನಿಟರ್ ನೋಡಿದ. ಅದರ ಮೇಲಿದ್ದ ಸಂಖ್ಯೆ: 7,114,235,116. ಪೀಟರ್ ಕಣ್ಣುಜ್ಜಿಕೊಂಡು ಮತ್ತೆ ನೋಡಿದ. ಸಂಖ್ಯೆ ಬದಲಾಗಲಿಲ್ಲ. ಯಾರೋ ನಿದ್ರೆಯಲ್ಲೇ ತೀರಿಹೋದರೇನೋ ಎಂದುಕೊಂಡು ಮತ್ತೆ ಹಿಂದೆ ವರಗಿಕೊಂಡ. ಬೀಪ್ ! ಕಂಪ್ಯೂಟರ್ ಮತ್ತೆ ಸದ್ದು ಮಾಡಿತು. ಪೀಟರ್ ಸಂಖ್ಯೆಯನ್ನು ನೋಡಿದ: 7,114,235,114. ನೆಟ್ಟಗೆ ಕುಳಿತುಕೊಂಡು ಯೋಚಿಸಿದ, “ಇದೇನು ವಿಚಿತ್ರ? ಯಾವತ್ತೂ ಇಷ್ಟು ಬೇಗ ಕಡಿಮೆಯಾಗಿರಲಿಲ್ಲವಲ್ಲ….”. ಅವನು ನೋಡು ನೋಡುತ್ತಿದ್ದಂತ್ತೆಯೇ ಸಂಖ್ಯೆ ಕುಸಿಯಲಾರಂಭಿಸಿತು:
7,114,235,109
7,114,235,101
7,114,235,080….
Comments
ಉ: ಜಾಲಬಂಧ
ಕುತೂಹಲಕಾರಿಯಾಗಿದೆ.