ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)
ಸಂಪದ ತಂಡ ಹೊಸತೇನನ್ನಾದರೂ ಯೋಚಿಸಿದರೆ ಅದನ್ನು ಸಾಧ್ಯವಾಗಿಸುವುದಕ್ಕೆ ವಿಶ್ವವೇ ನಮ್ಮ ಪರವಾಗಿ ಸಂಚು ಹೂಡುತ್ತದೆ ಎನಿಸುತ್ತದೆ. ಕನ್ನಡ ವಿಜ್ಞಾನ ಸಾಹಿತ್ಯ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಜಿ.ಟಿ.ನಾರಾಯಣರಾವ್ ಅವರದ್ದೊಂದು ಪಾಡ್ಕ್ಯಾಸ್ಟ್ ಮಾಡಬೇಕು ಎಂಬ ಯೋಜನೆ ಬಹಳ ಹಳೆಯದು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ನಡುವೆ ಹರಿಪ್ರಸಾದ್ ನಾಡಿಗರು ಪಾಡ್ಕ್ಯಾಸ್ಟ್ ಜತೆ ವಿಡಿಯೋ ಕೂಡಾ ಹಾಕಬಹುದು ಎನ್ನುತ್ತಿದ್ದರು. ಇದಕ್ಕೆ ಅಗತ್ಯವಿರುವ ಕ್ಯಾಮೆರಾ, ಧ್ವನಿಗ್ರಹಣ, ಆಮೇಲೆ ಸಂಕಲನವನ್ನೆಲ್ಲಾ ಯಾರು ಮಾಡುವುದು ಎಂಬುದು ನಮ್ಮೆದುರು ಇದ್ದ ದೊಡ್ಡ ಪ್ರಶ್ನೆಯಾಗಿತ್ತು.
ಗೆಳೆಯ ಅಭಯಸಿಂಹ ವೃತ್ತಿಯ ಕಾರಣಕ್ಕೆ ಬೆಂಗಳೂರಿಗೆ ವಾಸ್ತವ್ಯವನ್ನು ಬದಲಾಯಿಸಿದ್ದೇ ನನ್ನೆದುರು ಇದ್ದ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆತಿಬಿಟ್ಟಿತು. ಅದರ ಪರಿಣಾಮವಾಗಿ ಈ ವಿಡಿಯೋ ಹಾಗೂ ಪಾಡ್ಕ್ಯಾಸ್ಟ್ ನಿಮ್ಮ ಮುಂದಿದೆ.
ಜಿ.ಟಿ.ಎನ್. ನನಗೆ ಪುಸ್ತಕಗಳ ಮೂಲಕ ಬಾಲ್ಯದಲ್ಲೇ ಪರಿಚಿತರು. ನಿಮ್ಮಲ್ಲನೇಕರಿಗೂ ಅವರು ಹೀಗೆ ಪರಿಚಿತರಾಗಿರಬಹುದು. ಹತ್ತು ಹನ್ನೆರಡು ವರ್ಷಗಳಿಂದ ಅವರನ್ನು ವೈಯಕ್ತಿಕವಾಗಿ ಪರಿಚಯಿಸಿಕೊಳ್ಳಲೂ ಸಾಧ್ಯವಾಯಿತು. `ನುಡಿದಂತೆ ನಡೆಯುವುದು' ಎಂಬುದಕ್ಕೆ ಸಾಕ್ಷಿಯಾಗುವಂಥ ಬದುಕು ಜಿ.ಟಿ.ಎನ್. ಅವರದ್ದು. ವೈಜ್ಞಾನಿಕ ಮನೋಧರ್ಮ ಎಂಬುದು ಕೇವಲ ಅವರ ಬರೆವಣಿಗೆಗೆ ಸೀಮಿತವಾಗಿರುವ ವಿಷಯವಲ್ಲ. ಅದು ಅವರ ಬದುಕೂ ಕೂಡಾ.
ಮಡಿಕೇರಿಯ ಜಿ.ಟಿ.ನಾರಾಯಣರಾವ್ ಹುಟ್ಟಿದ್ದು 1926ರ ಜನವರಿ 30ರಂದು. ತಂದೆ ಗುಡ್ಡೆಹಿತ್ಲು ತಿಮ್ಮಪ್ಪಯ್ಯ. ತಾಯಿ ವೆಂಕಟಲಕ್ಷ್ಮಿ. ಮದ್ರಾಸು ವಿಶ್ವವಿದ್ಯಾಲಯದಿಂದ 1947ರಲ್ಲಿ ಗಣಿತ ಎಂ.ಎ ಪದವಿ ಪಡೆದರು. ಮಂಗಳೂರು, ಮಡಿಕೇರಿ, ಬೆಂಗಳೂರುಗಳಲ್ಲಿ 1947ರಿಂದ 1969ರವರೆಗೆ ಕಾಲೇಜು ಉಪನ್ಯಾಸಕರಾಗಿದ್ದರು. 1969ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆಹ್ವಾನ ಮನ್ನಿಸಿ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿ ಸೇವೆ ಸಲ್ಲಿಸಿ 1986ರಲ್ಲಿ ನಿವೃತ್ತರಾದರು. ತರುವಾಯ ಪೂರ್ಣಕಾಲ ವಿಜ್ಞಾನ ವಾಙ್ಮಯ ರಚನೆಯಲ್ಲಿ ಮಗ್ನರಾಗಿದ್ದಾರೆ. ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕ್ಕೆ ಸಂಬಂಧಿಸಿದಂತೆಯೂ ಆಳವಾದ ಜ್ಞಾನ ಹೊಂದಿರುವ ಜಿ.ಟಿ.ಎನ್. ಸಂಗೀತದ ಬಗ್ಗೆ ಕನ್ನಡ ಹಾಗೂ ಇಂಗ್ಲಿಷ್ಗಳೆರಡರಲ್ಲೂ ಅನೇಕ ಲೇಖನಗಳನ್ನು ಬರೆದಿದ್ದಾರೆ. `ಶ್ರುತಗಾನ' ಕೃತಿ ಇಂಥ ಲೇಖನಗಳಿಗೇ ಮೀಸಲಾಗಿದೆ. ಈಗ ಅದರ ವಿಸ್ತೃತ ಆವೃತ್ತಿ ಸಂಗೀತ ರಸನಿಮಿಷಗಳು ಪ್ರಕಟಣೆಗೆ ಸಿದ್ಧವಾಗಿದೆ.
ಅವರ ಪ್ರಮುಖ ಕೃತಿಗಳು ಈ ಕೆಳಗಿನಂತಿವೆ. ಐನ್ಸ್ಟೈನ್ ಬಾಳಿದರಿಲ್ಲಿ (ವೈಜ್ಞಾನಿಕ ಜೀವನಚರಿತ್ರೆ), ಕುವೆಂಪು ದರ್ಶನ ಸಂದರ್ಶನ (ಕುವೆಂಪು ಕುರಿತು), ಕೃಷ್ಣವಿವರಗಳು (Black Holes), ಕೊಪರ್ನಿಕಸ್ ಕ್ರಾಂತಿ (ಖಗೋಳ ವಿಜ್ಞಾನೇತಿಹಾಸ), ಜಾತಕ ಮತ್ತು ಭವಿಷ್ಯ (ನಾಳೆಯನ್ನು ಇಂದು ಅರಿಯಬಹುದೇ?), ಧೂಮಕೇತು (ಅದೃಶ್ಯಲೋಕದ ಅನಾದಿ ಕಾಲದ ಅಪೂರ್ವ ಅತಿಥಿ), ನಕ್ಷತ್ರ ವೀಕ್ಷಣೆ (ಬಾನಿಗೆ ಹಿಡಿದ ನುಡಿ ಚಿತ್ರ ದರ್ಪಣ), ನವಕರ್ನಾಟಕ ಕನ್ನಡ ವಿಜ್ಞಾನ ಪದವಿವರಣ ಕೋಶ (ಪ್ರಧಾನ ಸಂಪಾದನೆ), ವೈಜ್ಞಾನಿಕ ಮನೋಧರ್ಮ, ಸಂಗೀತ ರಸನಿಮಿಷಗಳು (ಕಲಾವಿದರ ಜೊತೆಗಿನ ಒಡನಾಟದ ಅನುಭವ ಕಥನ), ಸಪ್ತಸಾಗರದಾಚೆಯೆಲ್ಲೋ..(ಚಂದ್ರಶೇಖರ್ ದರ್ಶನ, ಸಂವಾದ), ಸುಬ್ರಹ್ಮಣ್ಯನ್ ಚಂದ್ರಶೇಖರ್ (ವೈಜ್ಞಾನಿಕ ಜೀವನ ಚರಿತ್ರೆ), Scientific Temper, With the Great Minds (Ramanujan, Raman, Chandrasekhar, Muralidhara Rao and Suresh)