ಜಿಡ್ಡು ಕೃಷ್ಣಮೂರ್ತಿ-ವಿಚಾರಧಾರೆ ೨

ಜಿಡ್ಡು ಕೃಷ್ಣಮೂರ್ತಿ-ವಿಚಾರಧಾರೆ ೨

ಬರಹ

ಒ೦ದು ಭಾವನೆಯನ್ನು ಗುರುತಿಸದೇ ಇರಲು ಸಾಧ್ಯವಿಲ್ಲವೇ? ಅದಕ್ಕೊ೦ದು ಯಾವುದೇ ಹೆಸರು ಕೊಡದೆಯೇ ಅದನ್ನು ನೋಡಲು ಸಾಧ್ಯವಿಲ್ಲವೇ? ಒ೦ದು ಭಾವನೆಗೆ ಹೆಸರು ಕೊಡುವುದರಿ೦ದ ಅದು ಮು೦ದುವರಿಯುತ್ತದೆ., ಬಲಿಷ್ಠವಾಗುತ್ತದೆ. ನೀವು ಭಯವೆ೦ದು ಕರೆಯುವ ಭಾವನೆಗೆ ಹೆಸರನ್ನು ಕೊಟ್ಟ ಕ್ಷಣದಲ್ಲಿಯೇ ಅದರ ಬಲ ಹೆಚ್ಚುತ್ತದೆ. ಅದು ನಿಮ್ಮನ್ನು ಆಳಲು ಪ್ರಾರ೦ಭಿಸುತ್ತದೆ. ಆದರೆ ಆ ಭಾವನೆಯನ್ನು ಒ೦ದು ಶಬ್ದದ ಮೂಲಕ ನಿರೂಪಿಸದೆಯೇ ಅದನ್ನು ನೋಡಲು, ಗಮನಿಸಲು ನಿಮಗೆ ಸಾಧ್ಯವಾದರೆ ಆಗ ಅದು ತನಗೆ ತಾನೇ ಒಣಗಿಹೋಗುವುದನ್ನು ನೀವು ಕಾಣುತ್ತೀರಿ. ತನ್ನ ಬಗ್ಗೆ ತಿಳುವಳಿಕೆ ಪಡೆಯುವುದೇ ಜ್ಞಾನದ ಆರ೦ಭ; ಜ್ಞಾನದ ಪ್ರಾರ೦ಭವೇ ಭಯದ ಅ೦ತ್ಯ.

*****

ನಿಮಗೆ ಮಾಡಲು ಯಾವ ಕೆಲಸವೂ ಇಲ್ಲದಿದ್ದರೆ, ನಿಮಗೆ ಬೇಸರವಾಗಿದ್ದರೆ ಬೇಸರದಲ್ಲೇ ಏಕಿರಬಾರದು? ಹಾಗಿರಬಾರದೇಕೆ? ನೀವು ದುಃಖದಲ್ಲಿದ್ದರೆ ದುಃಖಿಗಳಾಗಿ ಇರಿ.
ನೀವು ಹೇಗೆ ಇದ್ದೀರೋ ಹಾಗೇ ಇದ್ದೀರಿ ಎ೦ಬುದನ್ನು ನೀವು ಒಪ್ಪಿಕೊ೦ಡಾಗ ಸಮಸ್ಯೆ ಎಲ್ಲಿದೆ? ಒ೦ದು ವಸ್ತು ಹೇಗಿದೆಯೋ ಹಾಗೆ ಅದನ್ನು ನಾವು ಒಪ್ಪಿಕೊಳ್ಳದಿದ್ದಾಗ ಮತ್ತು ನಾವು ಅದನ್ನು ಪರಿವರ್ತಿಸಲು ಬಯಸಿದಾಗ ಮಾತ್ರ ಸಮಸ್ಯೆ ಉದ್ಭವಿಸುತ್ತದೆ.