ಜಿಪುಣ
ಆತ ಸಣ್ಣ ಕಾರ್ಖಾನೆಯೊಂದರಲ್ಲಿ ಕೆಲಸದಲ್ಲಿದ್ದ. ಮಹಾ ಜಿಪುಣ. ಪೈಸೆಗೆ ಪೈಸೆ ಲೆಕ್ಕ ಹಾಕಿದ. ಆದರೆ ಕೆಲಸದ ಸಮಯದಲ್ಲಿ ಕಾಫಿ, ತಿಂಡಿಗೆಂದು ಹಣ ಖರ್ಚು ಮಾಡುತ್ತಿದ್ದ. ಒಮ್ಮೆ ಅವನ ಆಪ್ತ ಗೆಳೆಯ ಸಲಹೆ ಮಾಡಿದ- "ಕೆಲಸದ ವೇಳೆ ಹೊರಗಿನ ಕಾಫಿ, ತಿಂಡಿ ತಿನ್ನುವುದಕ್ಕಿಂತ ಮನೆಯಿಂದಲೇ ಬುತ್ತಿ ತಂದರೆ ಉಳಿತಾಯವಾಲ್ಲವೇ?". ಆತನಿಗೆ ಹೌದು ಎಂದೆನಿಸಿತು.
ಮರುದಿನ ಮಡದಿಯ ಬಳಿ ಉಸುರಿದ- "ನಾಳೆಯಿಂದ ಬುತ್ತಿ ಹಾಕಿಕೊಡು, ಹಾಗೇನೇ ಕಾಫಿಯನ್ನೂ ಮಾಡಿ ಕೊಡು. ಹೊರಗಿನ ಕಾಫಿ, ತಿಂಡಿ ತಿನ್ನುವುದು ಖರ್ಚಲ್ಲವೆ?" ಎಂದ.
ಯಾಕೋ ಅವನ ಹೆಂಡತಿ - "ಛಿ! ಛಿ! ನಿಮ್ಮಂಥ ಗಂಡಸರು ಒಂದು ಹೊತ್ತು ಹೊರಗೆ ತಿನ್ನುವುದೇ ಚೆಂದ" ಅಂದಳು. ಅವನ ಗಂಡಸುತನಕ್ಕೆ ಪೆಟ್ಟು ಬಿತ್ತು. ಆ ನಿರ್ಧಾರವನ್ನು ಕೈ ಬಿಟ್ಟ. ಎಂದಿನಂತೆ ಹೊರಗಿನ ಕಾಫಿ, ತಿಂಡಿಗಳಿಗೆ ಆದ್ಯತೆ ಕೊಟ್ಟ. ಕ್ರಮೇಣ ಎಲ್ಲವೂ ಹೊರಗಿನದೇ ಅಭ್ಯಾಸವಾದವು. ಹೆಂಡತಿಯನ್ನೂ ದೂರ ಮಾಡಲಾರಂಭಿಸಿದ. ಮನೆಗೆ ಬರುವುದೂ ವಿಳಂಬವಾಗ ತೊಡಗಿತು.
ಹೆಂಡತಿಗೇನೋ ಅನುಮಾನ ಕಾಡಿತು. ಗಂಡನನ್ನು ಕೇಳಿಯೇ ಬಿಟ್ಟಳು- "ಏನ್ರೀ, ನಿಮಗೆ ಮನೆ, ಹೆಂಡತಿ ಎಲ್ಲವೂ ಮರೆತು ಹೋಗುವ ಹಾಗಿದೆ?". ಮೀಸೆಯಡಿಯಿಂದ ನಕ್ಕು ಹೇಳಿದ - "ಹೌದು, ಹೊರಗಿನ ಎಲ್ಲವೂ ರುಚಿ ರುಚಿಯಾಗಿ ಇರುವಾಗ ಮನೆಯದೆಲ್ಲ ಯಾತಕ್ಕೆ?" ಅಂದ.
ಅವಳಿಗೆ ತನ್ನ ತಪ್ಪಿನ ಅರಿವಾಯಿತು.
ಮರುದಿನ ಆತ ಕೆಲಸಕ್ಕೆ ಹೊರಟ. ಆಕೆ ಕೂಡಲೇ ಬುತ್ತಿ ತಂದು ಆನ ಕೈಯಲ್ಲಿಟ್ಟು ಹೇಳಿದಳು - "ಹೊರಗಿನವುಗಳು ಆರೋಗ್ಯಕ್ಕೆ ಓಳ್ಳೆಯದಲ್ಲ".