ಜಿಯೋಕ್ಯಾಷಿಂಗ್:ಅಂತರ್ಜಾಲದ ಮೂಲಕ ಟ್ರೆಷರ್ ಹಂಟ್

ಜಿಯೋಕ್ಯಾಷಿಂಗ್:ಅಂತರ್ಜಾಲದ ಮೂಲಕ ಟ್ರೆಷರ್ ಹಂಟ್

ಜಿಯೋಕ್ಯಾಷಿಂಗ್:ಅಂತರ್ಜಾಲದ ಮೂಲಕ ಟ್ರೆಷರ್ ಹಂಟ್


ಅಂತರ್ಜಾಲಿಗರು ಹೊರಜಗತ್ತಿನಿಂದ ದೂರವುಳಿಯದೆ ಆಡಬಹುದಾದ ಆಟವೇ "ಜಿಯೋಕ್ಯಾಶಿಂಗ್". ಇದರಲ್ಲಿ ಉತ್ಸಾಹಿಗಳು ಸಣ್ಣ ಉಡುಗೊರೆಗೊರೆಯನ್ನು ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ತುಂಬಿ,ಅವಿತಿಡುತ್ತಾರೆ.ಇದರ ಜತೆಗೆ ಈ ಸ್ಥಳದ,ಅಕ್ಷಾಂಶ-ರೇಖಾಂಶಗಳ ಮಾಹಿತಿಯೂ ಇರುತ್ತದೆ.ಈ ಸ್ಥಾನದ ಮಾಹಿತಿಯನ್ನು ಆನ್‌ಲೈನಿನ ನಿಗದಿತ ತಾಣದಲ್ಲೂ ದಾಖಲಿಸುತ್ತಾರೆ.ಜಿಪಿಎಸ್ ಸಾಧನದ ಮೂಲಕ ಈ ಸ್ಥಾನದ ಮಾಹಿತಿಯನ್ನವರು ಕಂಡುಕೊಳ್ಳುತ್ತಾರೆ.ಇಲ್ಲಿ ಅವಿತಿರಿಸುವ ಡಬ್ಬವೇ ಜಿಯೋಕ್ಯಾಷ್.ಆಟದಲ್ಲಿ ಭಾಗವಹಿಸಲಿಚ್ಛಿಸುವವರು,ಅಂತರ್ಜಾಲದಲ್ಲಿ ನೋಂದಾಯಿಸಿಕೊಂಡು,ತಾವಿರುವ ಜಾಗದ ಸಮೀಪವಿರುವ ಜಿಯೋಕ್ಯಾಷ್‌ಗಳ ಸ್ಥಾನವನ್ನರಿತುಕೊಂಡು,ಅವುಗಳನ್ನು ಹುಡುಕಬಹುದು.ಈ ಹುಡುಕಾಟಕ್ಕೆ ಅವರ ಸ್ಮಾರ್ಟ್‌ಪೋನುಗಳ ಜಿಪಿಎಸ್ ಸೌಲಭ್ಯ ಸಹಾಯ ಮಾಡುತ್ತದೆ ಎನ್ನುವುದು ಸ್ಪಷ್ಟ.ಅವನ್ನು ಪತ್ತೆ ಮಾಡಿದರೆ,ಅದನ್ನು ಡಬ್ಬದಲ್ಲಿರುವ ಕಾಗದದಲ್ಲಿ ಬರೆದಿಡುವ ಜತೆಗೆ,ಅನ್‌ಲೈನಿನಲ್ಲೂ ದಾಖಲಿಸಬೇಕು.ಉಡುಗೊರೆಯನ್ನು ತೆಗೆದುಕೊಳ್ಳುವುದೂ ಬಿಡುವುದು ಆಟಗಾರರಿಗೆ ಬಿಟ್ಟಿದ್ದು.ಬೇರೆ ಉಡುಗೊರೆಯನ್ನು ಇಡಲೂ ಬಹುದು.ಮಂಗಳೂರಿನ "ಉದಯವಾಣಿ" ಓದುಗ ಲಕ್ಷ್ಮೀನಾರಾಯಣ ಕಾಮತ್ ಅಮ್ಮೆಂಬಳ ಅವರು "ಜಿಯೋಕ್ಯಾಷಿಂಗ್" ಉತ್ಸಾಹಿ.ಓದುಗರು geocaching.com ಅಂತರ್ಜಾಲತಾಣವನ್ನು ನೋಡಿ,ಇದರಲ್ಲಿ ಭಾಗವಹಿಸಲು ಕೋರಿದ್ದಾರೆ.


-------------------------


ವಿಡಿಯೋ ಚಾಟಿಂಗೇ ನನ್ನ ಉತ್ತರ:ಫೇಸ್‌ಬುಕ್

ಕಳೆದವಾರ ಗೂಗಲ್ ಪ್ಲಸ್ ಸಾಮಾಜಿಕ ಜಾಲತಾಣವನ್ನು ಆರಂಭಿಸಿ,ಫೇಸ್‌ಬುಕ್‌ಗೆ ಸವಾಲೊಡ್ಡಲು ಮತ್ತೊಂದು ಪ್ರಯತ್ನ ಆರಂಭಿಸಿದ ಗೂಗಲ್ ಸುದ್ದಿಯಲ್ಲಿದೆ.ಗೂಗಲ್ ಪ್ಲಸ್‌ನ ಸವಾಲಿನ ಬೆನ್ನ ಹಿಂದೆಯೇ ಫೇಸ್‌ಬುಕ್ ತನ್ನ ಬಳಕೆದಾರರಿಗೆ ವಿಡಿಯೋಚಾಟಿಂಗ್ ಸೇವೆ ಒದಗಿಸಲಾರಂಭಿದೆ.ಇದನ್ನು ಸ್ಕೈಪ್ ಎನ್ನುವ ಅಂತರ್ಜಾಲ ಆಧಾರಿತ ದೂರಸಂಪರ್ಕ ಸವಲತ್ತು ನೀಡುತ್ತಿರುವ ಜನಪ್ರಿಯ ಕಂಪೆನಿಯ ಸಹಭಾಗಿತ್ವದಲ್ಲಿ ನೀಡುತ್ತಿದೆ. ಹೀಗಾಗಿ,ಸ್ಕೈಪ್ ಬಳಕೆದಾರರು, ಫೇಸ್‌ಬುಕ್ ಸದಸ್ಯರಾಗಿಲ್ಲವಾದರೆ,ಈಗ ಹೊಸತಾಗಿ ಸೇರುವ ಸಾಧ್ಯತೆಯೂ ಇದೆ.ಫೇಸ್‌ಬುಕ್ ತನ್ನ ಬಳಕೆದಾರರನ್ನು ತನ್ನ ತಾಣದಲ್ಲಿ ಹೆಚ್ಚು ಹೊತ್ತು ನಿಲ್ಲುವಂತೆ ಮಾಡುವ, ಆಟ,ಮನರಂಜನೆ ಸೇವೆಗಳನ್ನು ಒದಗಿಸಿ,ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳಲೂ ಶಕ್ತವಾಗುತ್ತಿದೆ.ವಿಡಿಯೋಚಾಟಿಂಗ್ ಈ ಅವಧಿಯನ್ನು ಹೆಚ್ಚಿಸುವ ಸಾಧ್ಯತೆ ಉಜ್ವಲವಾಗಿದೆ.ಗೂಗಲ್ ಪ್ಲಸ್‌ನಲ್ಲಿಯೂ ವಿಡಿಯೊಚಾಟಿಂಗ್ ಸೌಕರ್ಯವಿದೆ.ಮಾತ್ರವಲ್ಲ,ಅದು ಫೇಸ್‌ಬುಕ್‌ನ ವಿಡಿಯೋಚಾಟ್‌ಗಿಂತ ಹೆಚ್ಚು ಅನುಕೂಲಕರವೂ ಹೌದು-ಹೇಗೆನ್ನುತ್ತೀರಾ?ಅಲ್ಲಿ ಹತ್ತುಮಂದಿ ಏಕಕಾಲದಲ್ಲಿ ಜತೆ ಸೇರಿ ವಿಡಿಯೋಚಾಟಿಂಗ್ ಮಾಡಬಹುದು.ಗೆಳೆಯರ ಬಳಗದ ಸಂವಾದಕ್ಕದು ಹೇಳಿ ಮಾಡಿಸಿದಂತಿದೆ.ಗೂಗಲ್ ಪ್ಲಸ್ ಅದಕ್ಕೆ ಹ್ಯಾಂಗೌಟ್ ಎಂಬ ಹೆಸರನ್ನೂ ನೀಡಿದೆ.ಫೇಸ್‌ಬುಕ್‌ನ ವಿಡಿಯೋಚಾಟಿಂಗ್‌ನಲ್ಲಿ ಸದ್ಯಕ್ಕಂತೂ ಈರ್ವರೇ ಮಾತನಾಡಲು ಬರುತ್ತದೆ.ಸ್ಕೈಪ್ ಕಂಪೆನಿಗೆ ಈ ಪಾಲುದಾರಿಕೆಯಿಂದ ಲಾಭವಿದೆಯೇ?ಹೌದು,ಫೇಸ್‌ಬುಕ್‌ನ ಎಪ್ಪತ್ತೈದು ಕೋಟಿಯ ಬಳಕೆದಾರರ ಪೈಕಿ,ಎಷ್ಟೋ ಜನ ಸದ್ಯ ಸ್ಕೈಪ್‌ನ್ನು ಬಳಸದವರಿರಬಹುದು.ಇವರು ಮಾಮೂಲಿ ಫೋನ್‌ಲೈನುಗಳಿಗೆ ಕರೆ ಮಾಡಿದಾಗ,ಅದಕ್ಕೆ ಶುಲ್ಕ ಪಾವತಿಸ ಬೇಕಾಗಬಹುದು-ಅದು ಅಗ್ಗವೇನೋ ಹೌದು,ಆದರೆ ಸ್ಕೈಪ್ ಆದಾಯ ಹೆಚ್ಚಳ ಆಗದಿರದು.ಅಂದ ಹಾಗೆ ಮೈಕ್ರೋಸಾಫ್ಟ್ ಸ್ಕೈಪನ್ನಿ ಖರೀದಿಸುವುದರಲ್ಲಿದೆ.ಫೇಸ್‌ಬುಕ್‌ನಲ್ಲೂ ಮೈಕ್ರೋಸಾಫ್ಟ್ ಪಾಲುದಾರಿಕೆ ಹೊಂದಿದೆ.ಮೈಕ್ರೋಸಾಫ್ಟ್ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿಯಾದ ನೋಕಿಯಾದ ಜತೆಯೂ ಹೊಸತಾಗಿ ಒಪ್ಪಂದ ಮಾಡಿ ತನ್ನ ಆಪರೇಟಿಂಗ್ ವ್ಯವಸ್ಥೆಯನ್ನು ನೋಕಿಯಾ ಫೋನ್ ಸೆಟ್ಟುಗಳಲ್ಲಿ ಬಳಸಲು ಉಪಾಯ ಮಾಡಿದೆ.ಇವೆಲ್ಲವೂ ಈ ಕಂಪೆನಿಗಳ ಪರಸ್ಪರ ಸಹಕಾರ,ಸಹಭಾಗಿತ್ವಕ್ಕೆ ಕಾರಣವಾಗಲಿದೆ.ಗೂಗಲ್ ಈ ಅತಿರಥ-ಮಹಾರಥರುಗಳ ಒಗ್ಗಟ್ಟಿನ ಬಲದ ಮುಂದೆ ಸ್ಪರ್ಧಿಸಿ ಏಗುವಷ್ಟು ಪ್ರಬಲವಾಗಿದೆಯೇ ಎನ್ನುವುದು ಕುತೂಹಲದ ವಿಷಯ.ಗೂಗಲ್ ಪ್ಲಸ್ ಅನ್ನು ಫೇಸ್‌ಬುಕ್‌ಗೆ ಹೋಲಿಸಿದಾಗ ತುಂಬಾ ವಿಭಿನ್ನವಾಗಿಲ್ಲ,ಅದು ಸಾಧ್ಯವೂ ಅಲ್ಲವೆನ್ನಿ.ವಿಡಿಯೋ ಚಾಟಿಂಗ್ ಗೂಗಲ್ ಪ್ಲಸ್‌ನ ಪ್ಲಸ್ ಪಾಯಿಂಟ್ ಆಗಬಹುದಿತ್ತು-ಆದರೀಗ ಅದಕ್ಕೂ ಹೆಚ್ಚಿನ ಕಲ್ಲುಬಿದ್ದಿದೆ. ದಿನಗಳೆದಂತೆ ಫೇಸ್‍ಬುಕ್-ಸ್ಕೈಪ್ ಸಹಭಾಗಿತ್ವ ಚಾಟ್ ಸೇವೆ ಹೆಚ್ಚು ಸಮೃದ್ಧವಾಗಲಿದೆ.


----------------------------------


ಫೇಸ್‌ಬುಕ್ ಹಿಂದಿಕ್ಕಲು ಗೂಗಲ್ ಪ್ಲಸ್ ಏನು ಮಾಡಬಹುದು?

ಅಂದಹಾಗೆ ಗೂಗಲ್ ಪ್ಲಸ್ ಸಂಗೀತದ ಮೂಲಕವೇ ಜನಾಕರ್ಷಣೆ ಹೆಚ್ಚಿಸಿಕೊಳ್ಳಬಹುದು ಎಂಬ ಸಲಹೆಗಳು ಬರುತ್ತಿವೆ.ಗೂಗಲ್ ಪ್ಲಸ್‌ನ ಹ್ಯಾಂಗೌಟ್ ಸಂವಾದದಲ್ಲಿ ಸಂಗೀತದ ಆಲ್ಬಮುಗಳನ್ನು ಜತೆಗೇ ಅಲಿಸುವ ಸವಲತ್ತನ್ನು ನೀಡಲು ಹೆಚ್ಚು ಕಷ್ಟವಿಲ್ಲ.ಹೇಗೂ ಯುಟ್ಯೂಬಿನ ಅಪಾರ ಸಂಗೀತ ಮುದ್ರಿಕೆಗಳ ದೊಡ್ಡ ಸಂಗ್ರಹ ಗೂಗಲ್‌ನಲ್ಲಿದೆ.ಹ್ಯಾಂಗೌಟ್‌ನ್ನು ಬಳಸುವವರು,ಜತೆಗೂಡಿ ಸಂಗೀತ ರಚಿಸಿ,ಯುಟ್ಯೂಬಿಗೆ ಅಪ್ಲೋಡ್ ಮಾಡುವ ಸೌಕರ್ಯ ನೀಡಲೂ ಬಹುದು.ಗೂಗಲ್‌ನ ಆಂಡ್ರಾಯಿಡ್ ಅಪ್ಲಿಕೇಶನ್‌ಗಳ ಮೂಲಕ ಗೂಗಲ್ ಪ್ಲಸ್‌ನ್ನು ಸ್ಮಾರ್ಟ್‌ಪೋನುಗಳಲ್ಲಿ ಹೆಚ್ಚು ಜನಪ್ರಿಯವಾಗಿಸಿ,ಫೇಸ್‌ಬುಕ್‌ಗೆ ದೊಡ್ಡ ಸವಾಲೆಸೆಯಬಹುದು.ಇಲ್ಲಂತೂ ಫೇಸ್‌ಬುಕ್ ಹಿನ್ನಡೆಯಲ್ಲಿದೆ.ಗೂಗಲ್ ಮ್ಯೂಸಿಕ್ ಬೀಟಾ ಎನ್ನುವ ಸೇವೆಯನ್ನು ಅಭಿವೃದ್ಧಿ ಪಡಿಸುತ್ತಿರುವ ಗೂಗಲ್,ಅದನ್ನು ಗೂಗಲ್ ಪ್ಲಸ್‌ನಲ್ಲಿ ನವೀನ ಸೇವೆಗಳನ್ನು ಶುರು ಮಾಡಲು ಬಳಸುವ ಸಾಧ್ಯತೆಗಳ ಕಡೆಗೂ ಗಮನ ಹರಿಸಬಹುದು.


----------------------------------------------------------


ಕಾಣಲಾಗದವರಿಗೆ ಕನ್ನಡಕ

ದೃಷ್ಟಿದೋಷದಿಂದ ತಮ್ಮ ಮುಂದಿನ ಅಡೆತಡೆಗಳನ್ನು ಸ್ಪಷ್ಟವಾಗಿ ನೋಡಲಾಗದವರಿದೆ ಸಹಾಯ ಮಾಡುವ ಕನ್ನಡಕ ಬಂದಿದೆ.ಇದರಲ್ಲಿ ಕನ್ನಡಕಕ್ಕೆ ಕ್ಯಾಮರಾಗಳನ್ನು ಮತ್ತು ಮೈಕ್ರೋಕಂಪ್ಯೂಟರನ್ನು ಅಳವಡಿಸಲಾಗಿದೆ.ಕನ್ನಡಕದ ಒಳಭಾಗದಲ್ಲಿ ನೂರಾರು ಎಲ್ ಇ ಡಿ ದೀಪಗಳಿವೆ.ಅಡೆತಡೆಗಳಿದ್ದರೆ,ದೀಪಗಳು ಪ್ರಖರವಾಗಿ ಬೆಳಗುವಂತೆ ಕಂಪ್ಯೂಟರ್ ಮಾಡುವುದರಿಂದ,ವ್ಯಕ್ತಿಗೆ ಸೂಚನೆ ಸಿಗುತ್ತದೆ. ಆತ ಪಕ್ಕಕ್ಕೆ ಸರಿದು ಮುಂದೆ ಸಾಗುವ ಮೂಲಕ ಅಡೆತಡೆಯನ್ನು ನಿವಾರಿಸಿಕೊಳ್ಳಬಹುದು.


--------------------------------------------


ಸ್ಮಾರ್ಟ್‌ಫೋನ್:ಮಾತು,ಕಡ್ಡಿ ಬರವಣಿಗೆ


ಸ್ಪರ್ಶಸಂವೇದಿ ಸ್ಮಾರ್ಟ್‌ಪೋನುಗಳಲ್ಲಿ ಮಾತಿನ ಮೂಲಕ ಪದಪುಂಜವನ್ನುಚ್ಛರಿಸಿ,ಅದನ್ನು ಗೂಗಲ್ ಶೋಧ ಸೇವೆ ಮೂಲಕ ಹುಡುಕುವ ಸವಲತ್ತನ್ನು ಗೂಗಲ್ ನೀಡುತ್ತಿದೆ.ಸ್ಮಾರ್ಟ್‌ಪೋನುಗಳಲ್ಲಿ ಈ ರೀತಿಯ ಶೋಧ ಸಹಜ ಕೂಡಾ-ಹೇಗೋ ಧ್ವನಿಗ್ರಹಣಕ್ಕೆ ಅಗತ್ಯವಾದ ಮೈಕ್ ಹ್ಯಾಂಡ್‌ಸೆಟ್ಟಿನಲ್ಲಿರುತ್ತದೆ.ಬಾಯಿಯನ್ನು ಮೈಕ್ ಬಳಿ ಹಿಡಿದು ಪದವನ್ನುಚ್ಛರಿಸುವುದೂ ತೊಂದರೆಯಲ್ಲ.ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲೂ ಈ ಸೌಲಭ್ಯವನ್ನು ನೀಡಲು ಶುರು ಮಾಡಿದ್ದರೂ,ಮೈಕ್ ದೂರದಲ್ಲಿರುವುದು ಮತ್ತದು ಸಾಕಷ್ಟು ಶಕ್ತಿಶಾಲಿಯಾಗಿಲ್ಲದಿರುವುದು ಸಮಸ್ಯೆಯೊಡ್ಡಿದೆ.ಇನ್ನು ಸ್ಮಾರ್ಟ್‌ಪೋನುಗಳಲ್ಲಿ ಸಂದೇಶ ಬರೆಯಲು ಕಡ್ಡಿ(ಸ್ಟೈಲಸ್) ನೀಡುವ ಎಚ್ ಟಿ ಸಿ ಸ್ಮಾರ್ಟ್‌ಫೋನ್,ಸಣ್ಣ ತಂತ್ರಾಂಶದ ಜತೆ ಬಳಸಿದಾಗ ಬರವಣಿಗೆಯನ್ನು ದಾಖಲಿಸಿಕೊಳ್ಳಲು ಸಮರ್ಥವಾಗುತ್ತವೆ.ಚಿತ್ರ ರಚನೆಗಂತೂ ಇವು ಬಹು ಅನುಕೂಲಕರವಾಗಿವೆ.ಚಿತ್ರ ರಚಿಸಿದಾಗ ಕಡ್ಡಿಯ ಒತ್ತಡ ಮತ್ತು ವೇಗಕ್ಕನುಗುಣವಾಗಿ,ಚಿತ್ರ ಮೂಡಿಸಲು ಸೂಕ್ಷ್ಮಸಂವೇದಿ ತೆರೆಗಳು ಬೇಕು.


--------------------------------------------


ತುಷಾರ:ವಾರ್ಷಿಕ  ಚಂದಾ ಗೆಲ್ಲಿ!

ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ನಿವೃತ್ತ ಬ್ಯಾಂಕ್ ಅಧಿಕಾರಿ ಎ ಎಸ್ ಕಲ್ಲೂರಾಯ,ಅಂಬಲಪಾಡಿ.


*ಫೇಸ್‌ಬುಕ್ ಅಥವಾ ಗೂಗಲ್‌ಪ್ಲಸ್ ತಾಣದಲ್ಲಿ "ಉದಯವಾಣಿ"ಯ ಬಗ್ಗೆ ವಿಶೇಷವನ್ನೇನಾದರೂ ತಮ್ಮ ಬಳಗದ ಜತೆ ಹಂಚಿಕೊಳ್ಳಿ.ಇದರ ಮಾಹಿತಿ ನೀಡಿ.ಅತ್ಯುತ್ತಮವಾದದ್ದಕ್ಕೆ ಬಹುಮಾನ.


(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS39 ನಮೂದಿಸಿ.)


ಕಳೆದ ವಾರದ ಬಹುಮಾನಿತ ಉತ್ತರ:


*ಆನ್‌ಲೈನ್ ಮೌಲ್ಯಮಾಪನ ಅಳವಡಿಸಿ,ಸುದ್ದಿಯಲ್ಲಿರುವ ವಿಶ್ವವಿದ್ಯಾಲಯ ಬೆಂಗಳೂರು ವಿ.ವಿ.


*ಹೊಸ ವ್ಯವಸ್ಥೆಯಲ್ಲಿ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ,ಅದನ್ನು ಮೌಲ್ಯಮಾಪಕರಿಗೆ,ಅಂತರ್ಜಾಲ ಮೂಲಕ ಕಳುಹಿಸಲಾಗುತ್ತದೆ.ಅಂಕಗಳನ್ನು ನೀಡುವಾಗ,ಪ್ರಶ್ನೆಗೆ ನೀಡಿದ ಅಂಕವು ನಿಗದಿತ ಅಂಕವನ್ನು ಮೀರದಂತೆ ಪರೀಕ್ಷಿಸುವ ವ್ಯವಸ್ಥೆಯಿದೆ.ಅಂಕಗಳನ್ನು ಕಂಪ್ಯೂಟರೇ ಕೂಡಿಸಿ ಉತ್ತರಪತ್ರಿಕೆಯಲ್ಲಿ ದಾಖಲಿಸುತ್ತದೆ.ವಿಶ್ವೇಶ್ವರಯ್ಯ ತಾಂತ್ರಿಕ ವಿವಿ(ವಿಟಿಯು) ಕೂಡಾ ಇದೇ ರೀತಿ ಮೌಲ್ಯಮಾಪನ ಮಾಡಿಸುತ್ತಿದೆ.ಸರಿಯುತ್ತರ ಕಳುಹಿಸಿ,ಬಹುಮಾನ ಪಡೆದವರು ಪ್ರಶಾಂತ್. ಅಭಿನಂದನೆಗಳು.


UDAYAVANI UNICODE
UDAYAVANI
*ಅಶೋಕ್‌ಕುಮಾರ್ ಎ