ಜಿಲ್ಲಾಧಿಕಾರಿಗೆ ಗ್ರಾಮ ಪಂಚಾಯತ್‌ನ ಪಾಠ

ಜಿಲ್ಲಾಧಿಕಾರಿಗೆ ಗ್ರಾಮ ಪಂಚಾಯತ್‌ನ ಪಾಠ

ವೆಂಗೈವಾಸಲ್ ತಮಿಳ್ನಾಡಿನ ಒಂದು ಹಳ್ಳಿ. ಅಲ್ಲಿನ ಗ್ರಾಮಪಂಚಾಯತಿನ ಒಪ್ಪಿಗೆ ಪಡೆಯದೆ ಐದು ಎಕ್ರೆ ಜಮೀನನ್ನು ರಾಜಭವನದ ೭೧ ಉದ್ಯೋಗಿಗಳಿಗೆ ಜಿಲ್ಲಾಧಿಕಾರಿ ಒದಗಿಸಿದರು. ತನ್ನ ಅಸ್ತಿತ್ವವನ್ನೇ ನಿರ್ಲಕ್ಷಿಸಿದ ಜಿಲ್ಲಾಧಿಕಾರಿಯ ವಿರುದ್ಧ ವೆಂಗೈವಾಸಲ್ ಗ್ರಾಮಪಂಚಾಯತ್ ಧ್ವನಿಯೆತ್ತಿತು.

ಭಾರತದ ಸಂವಿಧಾನದ ೭೩ನೇ ತಿದ್ದುಪಡಿ (೧೯೯೩) ಅನುಸಾರ ಗ್ರಾಮಪಂಚಾಯತ್‌ಗಳು ಸ್ವಯಮಾಡಳಿತ ಸಂಸ್ಥೆಗಳಾಗಿ ಗುರುತಿಸಲ್ಪಟ್ಟಿರುವುದು ಅಲ್ಲಿನ ಜಿಲ್ಲಾಧಿಕಾರಿಗೆ ನುಂಗಲಾರದ ತುತ್ತಾಗಿತ್ತು. ದಬ್ಬಾಳಿಕೆಯಿಂದ ಮತ್ತು ಕಾನೂನಿಗೆ ವಿರುದ್ಧವಾಗಿ ತಾನು ಆಡಳಿತ ನಡೆಸುವ ದಿನಗಳು ಕೊನೆಗೊಂಡಿವೆ ಎಂಬುದು ಅಲ್ಲಿನ ಜಿಲ್ಲಾಧಿಕಾರಿಗೆ ಅರ್ಥವಾಗಿರಲಿಲ್ಲ! ಹಾಗಾಗಿ, ಆ ಜಿಲ್ಲಾಧಿಕಾರಿ ಗ್ರಾಮಪಂಚಾಯತ್‌ಗೆ ದರ್ಪದಿಂದ ಇತ್ತ ಆದೇಶ ಹೀಗಿತ್ತು: "ನನ್ನ ಕಚೇರಿಯಿಂದ ಪಟ್ಟಿ ಮಾಡಲಾದ ೭೧ ಜನರಿಗೆ ಜಮೀನು ವರ್ಗಾಯಿಸಬೇಕೆಂಬ ನನ್ನ ಸೂಚನೆಯ ಅನುಸಾರ ಸೂಕ್ತ ನಡಾವಳಿಯನ್ನು ಗ್ರಾಮ ಪಂಚಾಯತ್ ಅನುಮೋದಿಸತಕ್ಕದ್ದು.”

ಅದನ್ನು ಪಾಲಿಸಲು ಸಾಧ್ಯವೇ ಇಲ್ಲವೆಂದು ಗ್ರಾಮಪಂಚಾಯತ್ ದೃಡ ನಿಲುವು ತಳೆಯಿತು. ಆದರೆ, ತನ್ನ ಆದೇಶ ಜ್ಯಾರಿ ಮಾಡಲು ಮುಂದಾದರು ಜಿಲ್ಲಾಧಿಕಾರಿ! ಆಗ ಅನಿವಾರ್ಯವಾಗಿ ಗ್ರಾಮಪಂಚಾಯತ್ ಚೆನ್ನೈ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿತು. ಜಿಲ್ಲಾಧಿಕಾರಿಯಾಗಲೀ ಅಥವಾ ತಮಿಳ್ನಾಡು ಸರಕಾರವಾಗಲೀ ಅದನ್ನು ವಿರೋಧಿಸುವ ಅಫಿದವಿತ್ತನ್ನು ಹೈಕೋರ್ಟಿಗೆ ಸಲ್ಲಿಸಲಿಲ್ಲ. ಆದರೂ ಹೈಕೋರ್ಟಿನ ನ್ಯಾಯಾಧೀಶರು ಜಿಲ್ಲಾಧಿಕಾರಿ ಪರವಾಗಿ ತೀರ್ಪು ನೀಡಿದರು! ಆ ತೀರ್ಪಿನಲ್ಲಿ ಅವರ ಅಭಿಪ್ರಾಯ ಹೀಗಿತ್ತು, “ಗ್ರಾಮಪಂಚಾಯತ್‌ನ ಜೊತೆ ಜಿಲ್ಲಾಧಿಕಾರಿ ಮಾತುಕತೆ ನಡೆಸಬೇಕೇ ವಿನಃ ಗ್ರಾಮಪಂಚಾಯತ್‌ನ ಒಪ್ಪಿಗೆ ಪಡೆಯುವುದು ಅಗತ್ಯವಿಲ್ಲ.”

ಇದಾದ ಬಳಿಕ ವೆಂಗೈವಾಸಲ್ ಗ್ರಾಮಪಂಚಾಯತ್ ಸುಮ್ಮನೆ ಕೂರಲಿಲ್ಲ. ಹೈಕೋರ್ಟಿನ ನ್ಯಾಯಾಧೀಶರ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸಿತು. ಇದನ್ನು ಸ್ವೀಕರಿಸಿದ ಹೈಕೋರ್ಟಿನ ದ್ವಿಸದಸ್ಯ ಪೀಠವು ಏಕ ನ್ಯಾಯಾಧೀಶರ ತೀರ್ಪನ್ನು ತಳ್ಳಿ ಹಾಕಿತು!

ಈ ವಿಚಾರದಲ್ಲಿ ಹೈಕೋರ್ಟಿನ ದ್ವಿಸದಸ್ಯ ಪೀಠದ ಮಾನ್ಯ ನ್ಯಾಯಾಧೀಶರು, "ಪ್ರತಿಯೊಂದು ಗ್ರಾಮದಲ್ಲಿಯೂ ತಳಮಟ್ಟದಿಂದಲೇ ಜನರು ಆಡಳಿತದ ಸೂತ್ರ ಕೈಗೆತ್ತಿಕೊಳ್ಳಬೇಕು” ಎಂಬ ಗಾಂಧೀಜಿಯವರ ಮಾತನ್ನು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದರು. “ಜಿಲ್ಲಾಧಿಕಾರಿಯ ಆದೇಶವನ್ನು ಯಾವ ಕಾಯಿದೆಯ ಯಾವ ಪರಿಚ್ಛೇದದ ಅನುಸಾರ ನೀಡಲಾಗಿದೆ ಎಂದು ಈ ದಾವೆಯಲ್ಲಿ ವಿವರಿಸಲು ಸರಕಾರಿ ವಕೀಲರಿಗೆ ಸಾಧ್ಯವಾಗಿಲ್ಲ” ಎಂಬುದನ್ನು ಹೈಕೋರ್ಟಿನ ಪೀಠ ಬೊಟ್ಟು ಮಾಡಿ ತೋರಿಸಿತು. ಅಂತಿಮವಾಗಿ, ದ್ವಿಸದಸ್ಯ ಪೀಠ ಹೀಗೆಂದು ತೀರ್ಪು ಘೋಷಿಸಿತು: “ಗ್ರಾಮಪಂಚಾಯತ್‌ನ ಅನುಮತಿ ಪಡೆಯದೆ, ಗ್ರಾಮದ ಜಮೀನನ್ನು ಯಾರಿಗೋ ಪರಭಾರೆ ಮಾಡಿ, ಆ ಮೂಲಕ ಗ್ರಾಮಪಂಚಾಯತನ್ನು ಅಲಕ್ಷಿಸುವುದು ಸರಿಯಲ್ಲ.”

ಇಂತಹದೇ ಇನ್ನೊಂದು ಪ್ರಕರಣ ಕರ್ನಾಟಕದ ಗದಗಿನ ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಿಸಿದ್ದು. ೧೯೬೦ರಲ್ಲಿ ಆರಂಭವಾದ ಸಾರ್ವಜನಿಕ ಪಡಿತರ ವ್ಯವಸ್ಥೆಯ ಉದ್ದೇಶ ಏನು? ಬಡವರಿಗೆ ಆಹಾರಧಾನ್ಯ ಒದಗಿಸುವುದು ಮತ್ತು ಮಾರುಕಟ್ಟೆಯಲ್ಲಿ ಆಹಾರಧಾನ್ಯಗಳ ಬೆಲೆಯನ್ನು ನಿಯಂತ್ರಿಸುವುದು. ಆರಂಭದಿಂದಲೇ ಈ ವ್ಯವಸ್ಥೆ ಅವ್ಯವಹಾರಗಳ ಆಗರ. ಪಡಿತರ ವ್ಯವಸ್ಥೆಯ ಫಲಾನುಭವಿಗಳ ಆಶಯಗಳೇನು? ತಿಂಗಳಿನ ಎಲ್ಲ ದಿನಗಳಲ್ಲಿಯೂ ಪಡಿತರ ಸಿಗಬೇಕು - ಸರಿಯಾದ ಪರಿಮಾಣದಲ್ಲಿ ಮತ್ತು ಯೋಗ್ಯ ಗುಣಮಟ್ಟದಲ್ಲಿ. ಕಾಳಸಂತೆಯಲ್ಲಿ ಪಡಿತರ ಮಾರಾಟ ಮಾಡುವವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ಆದರೆ ದೇಶದ ಹಲವೆಡೆಗಳಲ್ಲಿ ಕಳೆದ ೬೦ ವರುಷಗಳಲ್ಲಿ ಇವು ಆಶಯಗಳಾಗಿಯೇ ಉಳಿದಿವೆ.

ಈ ಹಿನ್ನೆಲೆಯಲ್ಲಿ, ಗದಗಿನ ಗ್ರಾಮಪಂಚಾಯತ್‌ಗಳು ಪಡಿತರ ವ್ಯವಸ್ಥೆಯ ಅವ್ಯವಹಾರಗಳನ್ನು ತೊಲಗಿಸಲು ಪಣತೊಟ್ಟವು. ಪಂಚಾಯತ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಶಾಸಕರು ಒಟ್ಟು ಸೇರಿ ಚರ್ಚಿಸಿದರು. ಪಡಿತರ ಮತ್ತು ಸೀಮೆ ಎಣ್ಣೆ ಗ್ರಾಮಪಂಚಾಯತ್‌ನ ಮೇಲುಸ್ತುವಾರಿಯಲ್ಲಿ ವಿತರಣೆ ಆಗಬೇಕೆಂಬುದು ಅವರ ನಿರ್ಧಾರ. ಈ ನಿಟ್ಟಿನಲ್ಲಿ, ಪಡಿತರ ವ್ಯವಸ್ಥೆಯ ಸೋರಿಕೆ ತಡೆಗಟ್ಟಲಿಕ್ಕಾಗಿ, ಪಡಿತರ ಅಂಗಡಿಗಳಿಗೆ ಎರಡು ಬೀಗಗಳನ್ನು ಹಾಕಲು ಅವರು ನಿರ್ಧರಿಸಿದರು - ಒಂದು ಬೀಗ ಮಾಲೀಕನದು, ಇನ್ನೊಂದು ಪಂಚಾಯತಿನದು.

ಆ ವರೆಗೆ ಸೋರಿಕೆ ಆಗುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದ ಜಿಲ್ಲಾಧಿಕಾರಿ ಈಗ ಎಚ್ಚೆತ್ತರು. ಗ್ರಾಮಪಂಚಾಯತ್‌ಗಳು ಹೀಗೆಲ್ಲ ಮಾಡಲು ಸಾಧ್ಯವಿಲ್ಲವೆಂದರು! ಸರಕಾರಕ್ಕೆ ಇದನ್ನು ವಿರೋಧಿಸಿ ಪತ್ರ ಬರೆದರು. ಗ್ರಾಮಪಂಚಾಯತ್‌ಗಳು ಇದನ್ನು ಒಪ್ಪಲು ತಯಾರಿರಲಿಲ್ಲ. ಕಾಯಿದೆಯ ವಿಧಿಗಳೇನು? ಗ್ರಾಮಪಂಚಾಯತ್‌ಗಳ ಅಧಿಕಾರ ವ್ಯಾಪ್ತಿ ಏನು? ಇವು ಜಿಲ್ಲಾಧಿಕಾರಿಗೆ ತಿಳಿದಿರಬೇಕು ಎಂಬುದು ಪಂಚಾಯತ್‌ಗಳ ನಿಲುವು. ಜಿಲ್ಲಾಧಿಕಾರಿಯು ಕಾಯಿದೆಯನ್ನು ಪಾಲಿಸುವಂತೆ ಮಾಡಲು ಅವು ಸಜ್ಜಾದವು.

ಈ ಎರಡು ಪ್ರಕರಣಗಳಲ್ಲಿ ಗಮನಿಸಬೇಕಾದ ಸಂಗತಿ:
(ಅ) ಅಧಿಕಾರಷಾಹಿಯ ದಬ್ಬಾಳಿಕೆಯ ವಿರುದ್ಧ ಗ್ರಾಮಪಂಚಾಯತ್  ಧ್ವನಿ ಎತ್ತಿದ್ದು ಮತ್ತು
(ಆ) ಬ್ರಿಟಿಷ್ ಆಡಳಿತದ ಗುಂಗಿನಲ್ಲೆ ಇರುವ ಅಧಿಕಾರಿಗಳು ಪ್ರಜಾಪ್ರಭುತ್ವದ ವಿಧಿವಿಧಾನಗಳನ್ನು ಪಾಲಿಸುವಂತೆ ಮಾಡಿದ್ದು.

ಇವು, ಗ್ರಾಮೀಣ ಭಾರತ ಎಚ್ಚೆತ್ತುಕೊಳ್ಳುತ್ತಿದೆ ಎಂಬುದನ್ನು ಸೂಚಿಸುವ ಬೆಳವಣಿಗೆಗಳು, ಅಲ್ಲವೇ?