ಜೀತದಾಳು
ಕವನ
ಸುಂದರ ಜಗ ಕಾಣಲು ಬಂದೆ ಸಂತಸದಲಿ ಹಾರುಹಕ್ಕಿಯಾಗಿ
ಸಿಲುಕಿದೆ, ಹಣದ ಬಲೆಯಲಿ ಸೇರಿದೆ ಪಂಜರ, ಜೀತದಾಳಾಗಿ ॥
ಎಳೆ ಎಳೆಯ ಅಂಗಗಳಲ್ಲಿ ಹೊಳೆಹೊಳೆವ ಕಣ್ಣುಗಳಲ್ಲಿ ಬಂದೆ
ಕೇಳುತ್ತ - ಬೇಡುತ್ತಿರುವೆಯಾ? ‘ಸ್ವಾತಂತ್ರ್ಯ’ವ ನೀಡುವವರಾರು? ॥
ಅನಕ್ಷರತೆಯ ತಾಯಿ ತಂದೆಗಳ ಅಂಧತೆಗೆ ಮಣಿದೆಯಾ?
ಹಣರಕ್ಕಸರ ಕೈಗೆ ಸಿಲುಕಿದೆಯಾ? ನರಕದಲ್ಲಿ ನರಳುವೆಯಾ? ॥
ಅನ್ನಬಟ್ಟೆಗಾಗಿ ಜೀತದಾಳಾದೆಯಾ? ವಿಧಿಯಾಟವೊ? ನಿನ್ನೀ ದೌರ್ಬಲ್ಯವೊ
ಹಾಕುವರು ಹಳಸು ಹೊಲಸು, ತೊಡಿಸುವರು ಹರುಕು ಮುರುಕು ॥
ದಿನದಿನದ ಶ್ರಮವು ನಿನ್ನೀ ಒಂದೊಂದು ಬೆವರಹನಿಗಳು
ಒಡೆಯರು ಕುಡಿಯುವ ಮತ್ತಿನ ಸೋಮರಸಗಳಾದವೋ? ॥
ತೇಯುತ್ತಿರುವೆ ದೇಹವ ಗಂಧದ ಕೊರಡು ಕೊರಡಾಗಿ
ಪಡೆಯುವರೊಡೆಯರು ಪರಿಮಳವ ಅಟ್ಟಹಾಸದಲಿ ಮೆರೆಯುತ ॥
ಹಣವಂತರ ನಾಯಿಬೆಕ್ಕು ಸ್ವಾತಂತ್ರ್ಯಗೊಂಡಿರುವವು ಸಂತಸದಲಿ
ಜೀತದಾಳದ ನಿಮಗೇಕೆ? ಮನೆ ಹೊಸ್ತಿಲ ಒಳಪ್ರವೇಶ ನಿಷಿದ್ಧ ? ॥
-ಜಂಬರಗಟ್ಟಿ ಮಂಜಪ್ಪ
ಚಿತ್ರ ಕೃಪೆ: ಇಂಟರ್ನೇಟ್ ತಾಣ
ಚಿತ್ರ್