ಜೀವನದ ಧ್ಯೇಯಗಳು (ಭಾಗ 2)

ಜೀವನದ ಧ್ಯೇಯಗಳು (ಭಾಗ 2)

ಶ್ರೀಮಂತವಾಗಿ ಬದುಕುವುದು:  ಬದುಕು ಶ್ರೀಮಂತವಾಗಬೇಕಾದರೆ ದೇಹ ಮತ್ತು ಮನಸ್ಸು ಶ್ರೀಮಂತವಾಗಬೇಕು. ದೇಹ ಶ್ರೀಮಂತ ಎಂದರೆ ಬಲಿಷ್ಠವಾಗಬೇಕು. ಅದಕ್ಕಾಗಿ ದೇಹದ ಪ್ರತಿ ಅಂಗಕ್ಕೆ ಕೆಲಸ ನೀಡಬೇಕು. ಪ್ರತಿ ಅಂಗಕ್ಕೆ ಚೆನ್ನಾಗಿ ಕೆಲಸ ನೀಡಬೇಕು ಆಗ ದೇಹ ಬಲಿಷ್ಠವಾಗುತ್ತದೆ. ನಮ್ಮ ಸುಂದರ ಬದುಕಿಗೆ ವಸ್ತುಗಳು ಅಗತ್ಯ. ಅವುಗಳನ್ನು ಸಂಗ್ರಹಿಸಬೇಕು. ಎಲ್ಲಿ ಸಂಗ್ರಹಿಸಬೇಕು? ಅದು ಬಹಳ ಮುಖ್ಯ. ಮನೆಯಲ್ಲಿ ಸಂಗ್ರಹಿಸುವುದಲ್ಲ. ಮನಸ್ಸಿನಲ್ಲಿ ಸಂಗ್ರಹಿಸಬೇಕು. ವಸ್ತುಗಳ ಜ್ಞಾನ, ವಿಶೇಷ ಗುಣಲಕ್ಷಣಗಳನ್ನು, ಸೌಂದರ್ಯ, ಮಾಧುರ್ಯಗಳನ್ನು, ಮನಸ್ಸಿನಲ್ಲಿ ಸಂಗ್ರಹಿಸಬೇಕು. ಆಗ ನಮ್ಮ ಮಾತಿನಲ್ಲಿ ಮಧುರತೆ ಇರುತ್ತದೆ. ಕೆಲಸದಲ್ಲಿ ಸೌಂದರ್ಯ ಇರುತ್ತದೆ. ನೋಡಿದ ವಸ್ತುಗಳಲ್ಲಿ ಸೌಂದರ್ಯ ಮಾಧುರ್ಯ ಮಾತ್ರ ಗುರುತಿಸುತ್ತದೆ. ಕೆಟ್ಟದರಲ್ಲಿ ಒಳ್ಳೆಯದನ್ನು ಗುರುತಿಸುತ್ತದೆ. ನಮಗೆ ವಯಸ್ಸಾದಂತೆ ಕಣ್ಣು, ಕಿವಿ ಸೇರಿದಂತೆ ಬಹುತೇಕ ಅಂಗಗಳು ದುರ್ಬಲವಾಗುತ್ತದೆ. ಅಂತಹ ಸಂದರ್ಭದಲ್ಲಿ ಕಣ್ಣು ಕಾಣದಿದ್ದರೂ ಸಹ, ಕಿವಿ ಕೇಳದಿದ್ದರೂ ಸಹ, ಮನಸ್ಸಿನ ಸೌಂದರ್ಯ, ಮಾಧುರ್ಯ ಕಾಣಿಸುತ್ತದೆ. ಈ ರೀತಿ ಬದುಕು ಶ್ರೀಮಂತ ಬದುಕು. ಚಿನ್ನ, ಬೆಳ್ಳಿ, ರತ್ನ, ಹಣ ಸಂಗ್ರಹಿಸುವುದಲ್ಲ‌. ಸ್ವರ್ಗ ನರಕ ಮಾಡುವುದು, ನಮ್ಮ ಮನಸೇ ಹೊರತು ವಸ್ತುಗಳಲ್ಲ...!!

ಶಾಂತವಾಗಿ ಬದುಕುವುದು: ಶಾಂತವಾಗಿ ಬದುಕುವುದೇ ಶ್ರೇಷ್ಠ ಜೀವನ. ಪರಮ ಶಾಂತಿಗೆ ಕೈವಲ್ಯ ಅಥವಾ ಮುಕ್ತಿ ಎನ್ನುವರು. ಪತಂಜಲಿ ಮಹರ್ಷಿ ಹೇಳಿದ್ದು ಚಿತ್ತ ವೃತ್ತಿ ನಿರೋಧವೇ ಯೋಗ. ಶಾಂತಿ ಅನುಭವಕ್ಕೆ ಬರಬೇಕಾದರೆ, ಮನಸ್ಸು ಸ್ವಚ್ಛವಾಗಿರಬೇಕು. ಅದರಲ್ಲಿ ರಾಗ ದ್ವೇಷ ಯಾವುದು ಇರಬಾರದು. ಉದಾಹರಣೆಗೆ ನಿದ್ರೆ ಮಾಡುವುದು ಶಾಂತಿಗೆ ಉದಾಹರಣೆ. ಮನಸ್ಸಿನಲ್ಲಿ ಯಾವುದೇ ಅತಿಯಾದ ಪ್ರೇಮ ಅಥವಾ ದ್ವೇಷ ಇದ್ದರೆ ನಿದ್ರೆ ಬರುವುದಿಲ್ಲ. ನಿದ್ರೆ ಬರಬೇಕಾದರೆ ಮನಸ್ಸು ಖಾಲಿಯಾಗಿ ಸ್ವಚ್ಛವಾಗಿರಬೇಕು. ಆಗ ನಿದ್ರೆ ಬರುತ್ತದೆ. ನಿದ್ರೆಯಲ್ಲಿ ನಮ್ಮ ದೇಹ, ಮನಸ್ಸು, ಬುದ್ಧಿ, ಅಂತಸ್ತು, ಬಟ್ಟೆ, ಹಣ, ಒಡವೆ, ಮನೆ, ರಾಗ, ದ್ವೇಷ, ಕಾಮ ಮತ್ತು ಕ್ರೋಧ ಯಾವುದು ನಮ್ಮ ಅರವಿಗೆ ಬರುವುದಿಲ್ಲ. ನಮಗೆ ನಿದ್ರೆಯಲ್ಲಿ ಅದು ಗೊತ್ತಾಗೋದಿಲ್ಲ. ಆ ಸ್ಥಿತಿ ನಾವು ಎಚ್ಚರವಾಗಿರುವಾಗ ಆ ಶಾಂತಿಯ ಅನುಭವ ಆಗಬೇಕಾದರೆ, ಮನಸ್ಸು ಸ್ವಚ್ಛವಾಗಿ ಖಾಲಿಯಾಗಿರಬೇಕು. ಆಗ ನಿದ್ರೆಯಲ್ಲಾದ ಶಾಂತಿಯ ಅನುಭವವಾಗುತ್ತದೆ. ಹೀಗೆ ಬದುಕಬೇಕು.

(ಮುಗಿಯಿತು)

-ಎಂ.ಪಿ. ಜ್ಞಾನೇಶ್, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ