ಜೀವನದ ಪರೀಕ್ಷೆ

ಜೀವನದ ಪರೀಕ್ಷೆ

 

ನಮಗೆ ಜೀವನದಲ್ಲಿ ಅದೆಷ್ಟೋ ಪರೀಕ್ಷೆಗಳು ಎದುರಾಗುತ್ತವೆ.  ಇವುಗಳನ್ನು ಎದುರಿಸಲು ಎಷ್ಟೋ ತರಹದ ಪ್ರಯತ್ನ ಮಾಡುತ್ತೇವೆ. ಕೆಲವಲ್ಲಿ ಜಯವಾದರೆ, ಮತ್ತೆ ಕೆಲವಲ್ಲಿ ಸೋಲು ಅನುಭವಿಸುತ್ತೇವೆ.  ಈ ಸೋಲನ್ನು ನಾವು ನಮಗಾದ ಶಿಕ್ಷೆಯೆಂದು ಗೋಳಾಡುತ್ತೇವೆ.  ಆದರೆ, ನಾವು ಇದನ್ನು ಬೇರೆ ರೀತಿಯಲ್ಲೂ ನೋಡ ಬಹುದು.  ಪ್ರತಿನಿತ್ಯ ಮಾಡುವ ದೈಹಿಕ ಅಭ್ಯಾಸದಿಂದ ನಮ್ಮ ದೇಹ  ಸದೃಡವಾದದ್ದು ಮುಖ್ಯವೇ ಹೊರತು, ಆಟದಲ್ಲಿ ಸೋತದ್ದು ಮುಖ್ಯವಲ್ಲ.  ಹಾಗೆಯೇ, ಸೋಲು ಗೆಲುವುಗಳು ನಮ್ಮ ಮನಸ್ಸಿಗೆ ಒಂದು ಸಂಸ್ಕಾರವಾಗಬೇಕು.  ನಮ್ಮ ಮನಸ್ಸು ಜಡ್ಡು ಕಟ್ಟಿದ್ದೆ ಇಲ್ಲಿ ಆಗುವ ಪರಿಣಾಮ. ಇದನ್ನು ಅರ್ಥ ಮಾಡಿಕೊಂಡರೆ ಸೋಲು ನಮಗೆ ಗೆಲುವಿನ ಮೆಟ್ಟಿಲಾಗುತ್ತದೆ.  ಒಂದು ಮೊಗ್ಗು ಬಿರಿದರೆ, ಅರಳಿದರೆ ಅದುಮುಂದೆ ಹೀಚಾಗಿ, ಕಾಯಾಗಿ, ಹಣ್ಣಾಗುವ ಸೂಚನೆ.  ಪ್ರಮಾದವಶಾತ್  ಗಾಳಿಗೆ ಬಿದ್ದುಹೋದರೆ ಇನ್ನೊಂದು ಮೊಗ್ಗು ಬಿರಿಯಲೇ ಬೇಕು. ಸ್ವಲ್ಪ ಕಾಯಬೇಕು ಅಷ್ಟೇ.  ಹೀಗೆ ನಮ್ಮ ಮನಸ್ಸು ಸೋಲಿಗೆ ಅಂಜದೆ, ಇನ್ನೊಮ್ಮೆ ಗೆಲುವಿನ ಪ್ರಯತ್ನ ಮಾಡಿದಾಗ, ಮನದೊಳಗೆ ಹುಟ್ಟಿದ ಮೊಗ್ಗು ಅರಳಿ, ಮಾಗಿ ಸಫಲತೆಯ ದಾರಿ ಕಾಣಲು ಸಾಧ್ಯವಾಗುತ್ತದೆ.  ಆಗಲೇ ಪ್ರತಿ ಅವಕಾಶವು ಸವಾಲಾಗುತ್ತದೆ, ಪ್ರತಿ ಸವಾಲು ಅವಕಾಶವಾಗುತ್ತದೆ.