ಜೀವನ ಯಾನ

ಜೀವನ ಯಾನ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಸುಬ್ರಹ್ಮಣ್ಯ ಸಿ. ಕುಂದೂರು
ಪ್ರಕಾಶಕರು
ಕ್ರಿಯೇಟಿವ್ ಪುಸ್ತಕ ಮನೆ, ಕುಕ್ಕುಂದೂರು, ಕಾರ್ಕಳ
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ : ೨೦೨೪

ಪ್ರತಿಭಾವಂತ ಲೇಖಕರಾದ ಡಾ ಸುಬ್ರಹ್ಮಣ್ಯ ಸಿ ಕುಂದೂರು ಇವರ ‘ಜೀವನ ಯಾನ' ಎನ್ನುವ ಕಾದಂಬರಿ ಇತ್ತೀಚೆಗೆ ಪುಸ್ತಕ ಮನೆ ಪ್ರಕಾಶನದಿಂದ ಬಿಡುಗಡೆಯಾಗಿದೆ. ಈ ತಮ್ಮ ಕಾದಂಬರಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಲೇಖಕರು ತಮ್ಮ ಮಾತಿನಲ್ಲಿ ಹಂಚಿಕೊಂಡಿದ್ದಾರೆ..

“ಕಳೆದ ದಶಕಗಳಿಂದ ಮಲೆನಾಡಿನ ಸಾಂಸ್ಕೃತಿಕ ಪರಿಸರದಲ್ಲಿ ಮಾನವರ ವಲಸೆಯ ಅಭಿವ್ಯಕ್ತಿಯು ಸಾಮಾನ್ಯವಾಗಿ ಗೋಚರವಾಗುತ್ತಿದೆ. ದುಡಿಯುವ ನೆಲೆಯಲ್ಲಿ ನಡೆಯುವ ಮಾನವಕೇಂದ್ರಿತ ಪಲ್ಲಟಗಳು ಸಾಂಸ್ಕೃತಿಕ ಪಟುತ್ವವನ್ನು ಮೀರುವ ಮತ್ತು ಸಮಗೊಳಿಸುವ ಕಾರ್ಯವನ್ನು ಮಾಡುತ್ತವೆ. ಮಲೆನಾಡು ಅಂದಕೂಡಲೇ ದಟ್ಟವಾದ ಕಾಡು, ಏರುತಗ್ಗಿನ ನೆಲ, ಕಾಫಿ, ಅಡಕೆ, ಕಾಳುಮೆಣಸಿನ ತೋಟಗಳ ಜೊತೆಗೆ ಅಲ್ಲಲ್ಲಿ ಮೈಹಾಸಿಕೊಂಡಿರುವ ಗದ್ದೆಗಳ ಬಯಲು ಕೃಷಿಗೆ ಜೀವ ತುಂಬಿದಂತೆ ಕಾಣಿಸುತ್ತದೆ.

ಈ ಕೃಷಿಕೇಂದ್ರಿತ ಬದುಕು ಕಳೆದ ಎರಡು ದಶಕಗಳಿಂದ ಈಚೆಗೆ ದುಡಿಮೆ ನೆಲೆಯಿಂದ ಯಾಂತ್ರಿಕತೆಗೆ ಪಲ್ಲಟವಾಗುವ ಜೊತೆಗೆ ಮಾನವರ ವಲಸೆಗೆ ಆಗುಮಾಡಿಕೊಟ್ಟಿತ್ತು. ದುಡಿಮೆಯ ಅಭಿವ್ಯಕ್ತಿಯಿಂದ ಮಲೆನಾಡಿನ ಪರಿಸರಕ್ಕೆ ಆಗಮಿಸಿದ ಬಯಲುನಾಡಿನ ಜನ, ಜನಸಂಸ್ಕೃತಿಯು ಇಲ್ಲಿನ ತೋಟದ ದುಡಿಮೆಯನ್ನು ಅಪ್ಪಿಕೊಂಡ ಬಗೆ, ಬದುಕು ನಡೆಸಿದ ಪರಿ ವಿಭಿನ್ನವಾದ್ದು, ಏರುನೆಲದ ಕಾಫಿತೋಟದ ಏಳಿಗೆಗೆ ತಮ್ಮ ಶ್ರಮವನ್ನು ವ್ಯಯಿಸಿ ದುಡಿದ ಜನರು ಆರ್ಥಿಕತೆಯನ್ನು ಸೃಷ್ಟಿಸಿಕೊಂಡರು ಹಾಗೂ ಈ ನೆಲೆಯಲ್ಲಿ ಸಾಂಸ್ಕೃತಿಕ ಸಂಕರ, ಸಂಘರ್ಷಕ್ಕೆ ತಮ್ಮನ್ನು ಆಗುಮಾಡಿಕೊಂಡರು. ಈ ರೀತಿಯ ಸಾಂಸ್ಕೃತಿಕ ಚಲನೆಯನ್ನು ಗುರುತಿಸುವ ಮತ್ತು ಗಂಡು, ಹೆಣ್ಣಿನ ಚಲನಶೀಲತೆಯನ್ನು ಶೋಧನೆಗೆ ಒಡ್ಡುವ ದೆಸೆಯಿಂದ ಜೀವನ ಯಾನ ಎಂಬ ಕಾದಂಬರಿಯನ್ನು ಕಟ್ಟುವ ಕಡೆಗೆ ಯೋಚಿಸಿದ್ದೇನೆ. ಅದು ನಿಮ್ಮ ಓದಿಗೂ ದಕ್ಕುವುದು ಎಂಬ ಆಶಯ ನನ್ನದು.

ನನ್ನ ಅಕ್ಷರ ಕಟ್ಟುವಿಕೆಯ ಹಿಂದಿರುವ ಪ್ರೇರಕಶಕ್ತಿ ಪೂಜ್ಯ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ. ಉನ್ನತ ಶಿಕ್ಷಣ ಪಡೆದ ನನಗೆ ಉದ್ಯೋಗ ನೀಡಿ, ಅನ್ನ, ಆಶ್ರಯವನ್ನು ಕೊಟ್ಟು ಆಶೀರ್ವದಿಸುವ ಜೊತೆಗೆ ಬಡತನದ ಬೇಗೆಯನ್ನು ದೂರವಾಗಿಸಿ, ಲೋಕದಲ್ಲಿ ಉನ್ನತ ಪದವಿಯನ್ನು ಕಾಣುವಂತೆ ಸ್ಥಾನಮಾನವನ್ನು ಒದಗಿಸಿದವರು ಶ್ರೀಗಳು. ನೋವಾದಾಗ, ಸಂತಸವಾದಾಗ, ಸಂಕಟಗಳು ಎದುರಾದಾಗ ಬೆನ್ನ ಹಿಂದೆ ನಿಂತು ಕಾಪಾಡಿದ್ದನ್ನು ಮರೆಯುವಂತಿಲ್ಲ. ಬಡತನದ ಸಂವೇದನೆಯನ್ನು ಹತ್ತಿರದಿಂದ ಬಲ್ಲ ಕಾಯಕಪ್ರಜ್ಞೆಯ ಪೂಜ್ಯರು ಈ ಕೃತಿಯನ್ನು ಓದಿ. ತಿದ್ದಿ, ತೀಡಿ ಕಥನವನ್ನು ಗಟ್ಟಿಗೊಳಿಸಿದ್ದರಲ್ಲದೆ ಈ ಕಾದಂಬರಿಗೆ ಜೀವನಯಾನ ಎಂಬ ಹೆಸರನ್ನು ಸೂಚಿಸುವ ಮೂಲಕ ಈ ಕೃತಿಗೆ ಆಶೀರ್ವಾದದ ನುಡಿಯನ್ನು ಬರೆದು ಹಾರೈಸಿದ್ದಾರೆ ಶ್ರೀಗಳು ಅವರ ಪ್ರೀತಿಗೆ ಶಿರಬಾಗಿ ನಮಸ್ಕರಿಸುವೆ.

ಕಾದಂಬರಿಯಲ್ಲಿ ಅಕ್ಷರವೊಂದು ಜೀವಂತಿಕೆಯನ್ನು ಪಡೆಯುವುದಕ್ಕೆ ನನ್ನಲ್ಲಿ ಕಥನಪ್ರಜ್ಞೆಯನ್ನು ಮತ್ತು ಕನ್ನಡದ ಸಾಹಿತ್ಯಪ್ರಜ್ಞೆಯನ್ನು ಹುಟ್ಟು ಹಾಕಿದ ಕನ್ನಡ ಖ್ಯಾತ ಕತೆಗಾರರಾದ ಡಾ. ಅಮರೇಶ ನುಗಡೋಣಿ ಅವರು ಈ ಕಾದಂಬರಿಗೆ ಬೆನ್ನುಡಿಯನ್ನು ಬರೆದಿದ್ದಾರೆ. ಅವರಿಗೆ, ಬರೆಹವೊಂದಕ್ಕೆ ಶಿಸ್ತು ಮತ್ತು ಜೀವನಪ್ರೀತಿ ಆಗತ್ಯವೆಂದು ಕಾಣಿಸಿದ ಡಾ. ಧನಂಜಯ ಕುಂಬ್ಳೆ ಅವರಿಗೆ ಮಾರ್ಗದರ್ಶನ ಮಾಡುವ ಜೊತೆಗೆ ಕಾದಂಬರಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ ಶ್ರೀ ಸುಬ್ಬ ಕಾರಡ್ಕ ಅವರಿಗೆ, ನಾನು ಗೆದ್ದಾಗ ಸಂಭ್ರಮಿಸಿ ಸೋತಾಗ ಕೈ ಹಿಡಿದು ನಡೆಸಿದ ಡಾ. ಪ್ರಭಾತ್ ಬಲ್ನಾಡುಪೇಟೆ ಅವರಿಗೂ ಮನತುಂಬಿ ವಂದಿಸುತ್ತೇನೆ.

ಈ ಕಾದಂಬರಿಯು ಹೊತ್ತಿಗೆಯ ರೂಪ ಪಡೆಯಲು ಕಾರಣರಾದ ಕ್ರಿಯೇಟಿವ್ ಪುಸ್ತಕ ಮನೆ, ಕಾರ್ಕಳ ಇದರ ಮುಖ್ಯಸ್ಥರಾದ ಗೆಳೆಯ ಶ್ರೀ ಅಶ್ವತ್ ಎಸ್.ಎಲ್ ಅವರು ಅಭಿಮಾನದಿಂದ ಈ ಕೃತಿಯನ್ನು ಆಯ್ಕೆ ಮಾಡಿ, ಪ್ರೀತಿ ತೋರಿದ್ದಾರೆ ಮತ್ತು ಕಳೆದ ನನ್ನ ಪದವಿಯ ದಿನದಲ್ಲಿ ಆಳ್ವಾಸ್‌ನಲ್ಲಿದ್ದಾಗ ಮಾರ್ಗದರ್ಶನ ಮಾಡಿ ಬೆಳೆಸಿದನ್ನು ನಾನು ಮರೆಯುವಂತಿಲ್ಲ. ನನ್ನ ಮೊದಲ ಕಾದಂಬರಿಯ ಪ್ರಕಾಶನಕ್ಕೆ ಸಹಾಯ ಮಾಡಿದ ಶ್ರೀ ಅನುಬೆಳ್ಳೆ ಈ ಕಾದಂಬರಿಯ ಆಗುವಿಕೆಯ ನೆಲೆಯಲ್ಲಿ ಶ್ರಮಿಸಿದ್ದಾರೆ ಅವರನ್ನು ನೆನಪು ಮಾಡುವೆ.

ಅನೇಕ ಪಾತ್ರಗಳು ಕಾದಂಬರಿಯಲ್ಲಿ ನಡೆಯುವುದಕ್ಕೆ ಲೋಕಜ್ಞಾನದ ಜೊತೆಗೆ ಸುಜನರ ಗೆಳೆತನವೂ ಇದೆ. ನನ್ನ ಸಾಹಿತ್ಯ ಬರೆಹಕ್ಕೆ ಅಡಿಪಾಯ ಹಾಕಿಕೊಟ್ಟ ಶ್ರೀ ಪ್ರಕಾಶ ಕುಂದೂರು ಅವರಿಗೆ, ವಿಚಾರವೊಂದನ್ನು ವಿವೇಚನೆಗೆ ಒಡ್ಡುವ ಗೆಳೆಯ ನಾ. ಸುರೇಶ್ ಅವರಿಗೆ. ಕಾದಂಬರಿಯ ಕುರಿತು ಮೆಚ್ಚುಗೆಯ ಮಾತುಗಳಾಡಿದ ಬಿ ಸುಜ್ಞಾನಮೂರ್ತಿ, ಸಾಹಿತ್ಯ ಚರ್ಚೆಯಲ್ಲಿ ಭಾಗಿಗಳಾಗಿ ನನ್ನ ವಿವೇಚನೆಯನ್ನು ರೂಪಿಸುವ ಗೆಳೆಯರಾದ ಶಿವಣ್ಣ ಬೆಂಗಳೂರು, ನಟೇಶ ಹೊಳೆಮಕ್ಕಿ, ಚೇತನ ಕೆ. ಆರ್, ಬಿಜಿಎಸ್ ಮಂಗಳೂರಿನ ಉಪನ್ಯಾಸಕ ಮಿತ್ರರು, ಶ್ರೀ ಗಣೇಶ ಗೌಡ, ಶ್ರೀ ಸುಭಾಷ್ ಗೌಡ ಎಚ್. ಜೆ, ಮಾತೃಹೃದಯಿ ಪುಷ್ಪವತಿ ಕಂಜತ್‌ ಬೈಲ್ ಇವರೆಲ್ಲರಿಗೂ ನನ್ನ ಬೊಗಸೆ ತುಂಬಿದ ಕೃತಜ್ಞತೆಗಳು."